ರಾಷ್ಟ್ರೋತ್ಥಾನಕ್ಕೆ 6 ಎಕರೆ ಜಮೀನು; ತಕರಾರು ತೆಗೆದ ಹತ್ತೇ ದಿನದಲ್ಲಿ ಸಮ್ಮತಿ ನೀಡಿದ ಆರ್ಥಿಕ ಇಲಾಖೆ

ಬೆಂಗಳೂರು; ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ 6 ಎಕರೆ ಜಮೀನು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಆರಂಭದಲ್ಲಿ ತಕರಾರು ವ್ಯಕ್ತಪಡಿಸಿದ್ದ ಆರ್ಥಿಕ ಇಲಾಖೆಯು ಕೆಲವೇ ದಿನಗಳಲ್ಲಿ ಸಹಮತಿ ವ್ಯಕ್ತಪಡಿಸಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

 

ನಗರಸಭೆ ನಿರಾಕ್ಷೇಪಣೆ ಪತ್ರವನ್ನು ನೀಡದಿದ್ದರೂ ಕರ್ನಾಟಕ ಭೂ ಮಂಜೂರಾತಿ ನಿಯಮಗಳನ್ನು ಸಡಿಲಿಸಲು ಸಕಾರಣಗಳಿಲ್ಲದಿದ್ದರೂ ರಾಷ್ಟ್ರೊತ್ಥಾನ ಪರಿಷತ್‌ಗಾಗಿಯೇ ನಿಯಮಗಳನ್ನು ಸಡಿಲಿಸಿರುವ ಬೆನ್ನಲ್ಲೇ ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯವನ್ನೇ ಬದಲಿಸಿತ್ತು ಎಂಬುದು ಮುನ್ನೆಲೆಗೆ ಬಂದಿದೆ.

 

ರಾಷ್ಟ್ರೋತ್ಥಾನ ಪರಿಷತ್‌ಗೆ ಜಮೀನು ಮಂಜೂರು ಮಾಡಲು ಕಾನೂನು ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಲಿಸಿರಲಿಲ್ಲ. ಆದರೆ ಆರ್ಥಿಕ ಇಲಾಖೆಯು 2022ರ ನವೆಂಬರ್‌ 7ರಂದು ನೀಡಿದ್ದ ಅಭಿಪ್ರಾಯವನ್ನು ನವೆಂಬರ್‌ 17ರ ಹೊತ್ತಿಗೆ ಬದಲಿಸಿರುವುದರ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಡವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

 

ಆರ್ಥಿಕ ಇಲಾಖೆಯ ಮೊದಲ ಅಭಿಪ್ರಾಯವಿದು

 

‘ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಪ್ರಸ್ತಾವನೆಗೆ ಸಂಬಂಧಿಸಿದಂತೆ ಕಾನೂನು ಇಲಾಖೆಯು ನೀಡಿರುವ ಅಭಿಪ್ರಾಯದ ಹಿನ್ನಲೆಯಲ್ಲಿ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲವೆಂದು,’ (ಟಿಪ್ಪಣಿ ಸಂಖ್ಯೆ; ಆಇ 896 ವೆಚ್ಚ-7/2022 ದಿನಾಂಕ 07.11.2022) ಆಡಳಿತ ಇಲಾಖೆಗೆ ತಿಳಿಸಿತ್ತು ಎಂದು ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಮಾಹಿತಿ ಒದಗಿಸಿದ್ದಾರೆ.

 

ಎರಡನೇ ಅಭಿಪ್ರಾಯದಲ್ಲಿ ಸಮ್ಮತಿ

 

ಈ ಅಭಿಪ್ರಾಯ ನೀಡಿದ ಕೇವಲ 10 ದಿನದೊಳಗೇ ಆರ್ಥಿಕ ಇಲಾಖೆಯು ಬದಲಿಸಿತ್ತು. ‘ ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲೂಕು ಕಸಬಾ ಹೋಬಳಿ ಹಿರೇಮಗಳೂರು ಗ್ರಾಮದ ಸರ್ವೆ ನಂಬರ್‌ 544ರಲ್ಲಿ 6.00 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್‌ಗೆ 30 ವರ್ಷಗಳ ಗುತ್ತಿಗೆ ನೀಡುವ ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಸಹಮತಿ ನೀಡಿದೆ,’ ಎಂದು 2022ರ ನವೆಂಬರ್‌ 17ರಂದು ಆಡಳಿತ ಇಲಾಖೆಗೆ ತಿಳಿಸಿತ್ತು ಎಂಬುದು ಗೊತ್ತಾಗಿದೆ.

 

ಪ್ರಸ್ತಾವನೆಗೆ ಕಾನೂನು ಇಲಾಖೆಯು ಒಪ್ಪಿರುವುದಿಲ್ಲ. ಆದರೆ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಆರ್ಥಿಕ ಇಲಾಖೆಯು ಸಹಮತಿಸಿರುತ್ತದೆ. ಸುತ್ತಮುತ್ತಲ ಗ್ರಾಮಗಳ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರನಿಯಮ 27ರ ಅನ್ವಯ ನಿಯಮ 22ಎ(2)ನ್ನು ಸಡಿಲಿಸಿ 6 ಎಕರೆ ಜಮೀನನ್ನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಸೂಕ್ತ ನಿರ್ಣಯಕ್ಕಾಗಿ ಮಂಡಿಸಲು ಕಂದಾಯ ಇಲಾಖೆಯು ನಿರ್ಧರಿಸಿದೆ. ಇದನ್ನು ಸಚಿವ ಆರ್‌ ಅಶೋಕ್‌ ಅವರು ಅನುಮೋದಿಸಿದ್ದಾರೆ ಎಂಬ ಅಂಶವನ್ನು ಸಚಿವ ಸಂಪುಟ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

ಬೆಂಗಳೂರು ನಗರ ಜಿಲ್ಲೆಯ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ, ಯಲಹಂಕ, ಮೈಸೂರು, ಕಲ್ಬುರ್ಗಿ ಸೇರಿದಂತೆ ರಾಜ್ಯದ ವಿವಿಧೆಡೆ ಗೋಮಾಳ ಜಮೀನುಗಳನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಾರುಕಟ್ಟೆ ಬೆಲೆಯ ಶೇ.25ರಷ್ಟು ದರದಲ್ಲಿ ಈಗಾಗಲೇ ಮಂಜೂರು ಮಾಡಿದೆ. ಇದರಿಂದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿನಷ್ಟು ನಷ್ಟವಾಗಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts