ಸಿಬ್ಬಂದಿಗೆಲ್ಲಾ ಹಣ ಕೊಟ್ಟರಷ್ಟೇ ಕೆಲಸ, ಇಲ್ಲದಿದ್ದರೇ ಕಡತ ವಾಪಸ್‌; ಲಂಚದ ‘ಗೃಹ’ವಾಯಿತು ವಿಧಾನಸೌಧ

ಬೆಂಗಳೂರು; ‘ಕೇಳಿದ ಹಣವನ್ನು ನೀವು ಕೊಡದಿದ್ದರೇ ಯಾವುದಾದರೊಂದು ಕಾರಣ ಹೇಳಿ ಡಿಜಿ ಆಫೀಸ್‌ಗೆ ಕಡತ ವಾಪಸ್‌ ಕಳಿಸುತ್ತಾರೆ. ಕೆಲಸವಾಗಬೇಕೆಂದರೆ ಸಂಬಂಧಿಸಿದ ಎಲ್ಲಾ ಸಿಬ್ಬಂದಿಗಳಿಗೂ ಹಣ ಕೊಡಬೇಕು,’

 

ಇದು ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಗೃಹ ಇಲಾಖೆಯ ಕಥೆ. ಇದೇ ಮಹಡಿಯಲ್ಲಿ ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಯ ಕಚೇರಿಯೂ ಇದೆ. ಇಲಾಖೆಯನ್ನು ಮುನ್ನಡೆಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ಈ ಉನ್ನತ ಅಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳು ಲಂಚದ ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣವನ್ನು ಬಯಲಿಗೆಳೆದಿದ್ದು ಬೇರಾರೂ ಅಲ್ಲ. ಬದಲಿಗೆ ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಎಂದರೆ ನಿಜಕ್ಕೂ ಅಚ್ಚರಿಯಾದೀತು.

 

ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ರಿಂದಲೇ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿಯಲ್ಲಿ ಬಂಧಿತನಾಗಿರುವ ಗೃಹ ರಕ್ಷಕ ದಳದ ಸಿಬ್ಬಂದಿ, ಲಂಚಕೋರರು ವಿಧಾನಸೌಧದಲ್ಲಿಯೂ ಬೇರು ಬಿಟ್ಟಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿದ್ದಾನೆ. ಆದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತ್ರ ಇದುವರೆಗೂ ಈ ಪ್ರಕರಣದ ಬಗ್ಗೆ ತುಟಿ ಬಿಚ್ಚಿಲ್ಲ!

 

ನಿವೃತ್ತ ಪೊಲೀಸ್‌ ಅಧಿಕಾರಿಗಳ ಪಿಂಚಣಿ, ಚಿಕಿತ್ಸಾ ವೆಚ್ಚದ ಮರುಪಾವತಿ, ಪೊಲೀಸ್‌ ಅಧಿಕಾರಿ, ನೌಕರರ ಮುಂಬಡ್ತಿ, ಶಿಸ್ತು ಕ್ರಮ, ನಿಯೋಜನೆ, ಹೀಗೆ ಹತ್ತಾರು ವಿಷಯಗಳ ಸಂಬಂಧಿತ ಕಡತಗಳು ಚಲನೆಯಾಗಬೇಕಾದರೇ ಸಚಿವಾಲಯದಲ್ಲಿರುವ ಒಳಾಡಳಿತ ಇಲಾಖೆಯ ಅಧಿಕಾರಿಗಳಿಗೆ ಲಂಚದ ಹಣವನ್ನು ಪೀಕಬೇಕು. ಇಲ್ಲದಿದ್ದರೇ ಒಂದೋ ಕಡತಗಳು ಇದ್ದಲ್ಲೇ ಧೂಳು ಹಿಡಿಯುತ್ತವೆ, ಅಥವಾ ಏನಾದರೊಂದು ಕೊಕ್ಕೆ ಹಾಕಿ ಕಡತಗಳನ್ನು ಪುನಃ ಡಿಜಿ ಐಜಿಪಿ ಕಚೇರಿಗೆ ಕಳಿಸುತ್ತಾರೆ ಎಂಬುದಕ್ಕೆ ಲೋಕಾಯುಕ್ತ ಪೊಲೀಸರ ದಾಳಿಗೆ ಒಳಗಾಗಿರುವ ಗೃಹ ರಕ್ಷಕ ದಳದ ಸಿಬ್ಬಂದಿ ಪ್ರಕರಣವೇ ಉತ್ತಮ ನಿದರ್ಶನ.

 

ಗೃಹ ರಕ್ಷಕ ದಳ ಸಿಬ್ಬಂದಿ ಪ್ರಕರಣದ ಹಿನ್ನಲೆ

 

ಈ ಹಿಂದೆ ಪೊಲೀಸ್‌ ಇಲಾಖೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ ಎನ್‌ ಗಣೇಶ್‌ ಅವರು ಲಿವರ್‌ ಸಂಬಂಧಿತ ಅನಾರೋಗ್ಯಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ 2017ರ ಆಗಸ್ಟ್‌ 18ರಿಂದ ಸೆ.4ರವರೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಆರೋಗ್ಯ ಭಾಗ್ಯ ಯೋಜನೆಗೆ ಒಳಪಡುವುದಿಲ್ಲ ಎಂದು ತಿಳಿದ ನಂತರ ವೈದ್ಯಕೀಯ ಚಿಕಿತ್ಸೆಗೆ ತಗುಲಿದ ಒಟ್ಟು 6,24,000 ರು.ಗಳನ್ನು ತಮ್ಮ ಸ್ವಂತ ಹಣದಿಂದ ಭರಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

 

ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಚಿಕಿತ್ಸೆಗೆ ಭರಿಸಿದ್ದ ವೆಚ್ಚವನ್ನು ಮರು ಪಾವತಿಸುವಂತೆ ಮೇಲಾಧಿಕಾರಿಗಳ ಮೂಲಕ ಡಿಜಿ ಮತ್ತು ಐಜಿಪಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. 6.24 ಲಕ್ಷ ರು ಪೈಕಿ 2.76 ಲಕ್ಷ ರು.ಗಳನ್ನು ಚಿಕಿತ್ಸಾ ವೆಚ್ಚವನ್ನಾಗಿ ಮಂಜೂರು ಮಾಡಬಹುದು ಎಂದು ಶಿಫಾರಸ್ಸು ಮಾಡಿದ್ದ ಮೇಲಾಧಿಕಾರಿಗಳು ಕಡತವನ್ನು ವಿಧಾನಸೌಧದಲ್ಲಿರುವ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಪೊಲೀಸ್‌ ಸೇವೆಗಳು-1) ಕಚೇರಿಗೆ ಸಲ್ಲಿಸಿದ್ದರು ಎಂದು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

 

ಆದರೆ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕಚೇರಿಯು ಚಿಕಿತ್ಸೆಯ ವೆಚ್ಚದ ಮರುಪಾವತಿಯ ಆದೇಶ ಮಾಡಿಲ್ಲ. ಅನಾರೋಗ್ಯದಲ್ಲಿದ್ದರೂ ಪಿ ಎಸ್‌ ಗಣೇಶ್‌ ಅವರು ಒಳಾಡಳಿತ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿ ಸತೀಶ್‌ ಎಂಬುವರನ್ನು ಸಂಪರ್ಕಿಸಿದ್ದರು.

 

ಅದಕ್ಕೆ ಸತೀಶ್‌ ಎಂಬಾತ ‘ ನಿಮ್ಮಕೆಲಸ ಆಗಲು ಒಳಾಡಳಿತ ಇಲಾಖೆಯಲ್ಲಿ ಕೆಲಸ ಮಾಡುವ ಗೀತಾ ಎನ್ನುವವರಿಗೆ ಹಾಗೂ ಸಂಬಂಧಿತ ಅಲ್ಲಿನ ಇತರೆ ಸಿಬ್ಬಂದಿಗಳಿಗೆ ಸೇರಿದಂತೆ 20,000 ರು.ಗಳನ್ನು ನೀಡಬೇಕು, ಇಲ್ಲವಾದರೆ ಬಾಕಿ ಬಿಲ್ ಮರುಪಾವತಿ ಆದೇಶ ಆಗುವುದಿಲ್ಲ,’ ಎಂದು ಲಂಚದ ಹಣವನ್ನು ಕೇಳಿದ್ದರು ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

 

ಇದಕ್ಕೆ ಆಕ್ಷೇಪ ಎತ್ತಿದ್ದ ಪಿ ಎಸ್‌ ಗಣೇಶ್‌ ಅವರು ‘ಎಲ್ಲಾ ಸರಿಯಾಗಿರುವ ದಾಖಲೆಗಳಿಗೆ ಲಂಚದ ಹಣವನ್ನು ಏಕೆ ಕೊಡಬೇಕೆಂದಾಗ, ಆತ ‘ನೀವು ಕೇಳಿದ ಹಣವನ್ನು ಕೊಡದಿದ್ದರೇ ಒಳಾಡಳಿತ ಇಲಾಖೆಯವರು ಯಾವುದಾದರೊಂದು ಕಾರಣ ಹೇಳಿ ಡಿಜಿ ಆಫೀಸ್‌ಗೆ ಕಡತವನ್ನು ವಾಪಸ್‌ ಕಳಿಸುತ್ತಾರೆ. ಈಗಾಗಲೇ ಈ ಕಡತವು 5 ವರ್ಷ ಆಗಿದೆ. ಇನ್ನಷ್ಟು ವಿಳಂಬವಾಗುತ್ತದೆ,’ ಎಂದು ಗಣೇಶ್‌ ಅವರು ಲೋಕಾಯುಕ್ತ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವಿವರಿಸಿದ್ದಾರೆ.

 

ಅದೇ ರೀತಿ 2022ರ ನವಂಬರ್‌ 21ರಂದು ಸುಮಾರು 15.50 ಸಮಯದಲ್ಲಿ ಸತೀಶ್‌ ಎಂಬಾತನೇ ತನ್ನ ಮೊಬೈಲ್‌ನಿಂದ ಪಿ ಎಸ್‌ ಗಣೇಶ್‌ ಮೊಬೈಲ್‌ಗೆ ಕರೆ ಮಾಡಿ ಈ ಹಿಂದೆ ಹೇಳಿದ್ದ ದುಡ್ಡು ಕೊಡದಿದ್ದರೆ ನಿಮ್ಮ ಮೆಡಿಕಲ್‌ ಬಿಲ್‌ ಪಾಸ್‌ ಆಗುವುದಿಲ್ಲವೆಂದು ಹೇಳಿ ಸರ್ಕಾರಿ ಕೆಲಸ ಮಾಡಿಕೊಡಲು ಒಳಾಡಳಿತ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಗೀತಾ ಹಾಗೂ ಸಂಬಂಧಿತ ಇತರರ ಪರವಾಗಿ 20,000 ರು. ಲಂಚದ ಹಣವನ್ನು ನೀಡಬೇಕು ಎಂದು ಒತ್ತಾಯಪಡಿಸಿದ್ದರು, ‘ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

the fil favicon

SUPPORT THE FILE

Latest News

Related Posts