ಮೋದಿ ಶ್ಲಾಘನೆಗೊಳಗಾಗಿದ್ದ ಕಾಮೇಗೌಡರಿಗೆ ನೆರವು ನೀಡದ ಸರ್ಕಾರ, ಅವರ ಮಗನಿಗೂ ನೌಕರಿ ಕೊಡಲಿಲ್ಲ

ಬೆಂಗಳೂರು; ಕ್ರಿಮಿನಲ್ ಹಿನ್ನೆಲೆ ಹೊಂದಿ ಹತ್ಯೆಗೀಡಾಗಿರುವ ಆರೋಪಿಗಳ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಲಕ್ಷಾಂತರ ರು ನೆರವು ಮತ್ತು ಅನುಕಂಪದ ಅಡಿಯಲ್ಲಿ ನೌಕರಿ ನೀಡಿರುವ ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮನ್‌ ಕಿ ಬಾತ್‌ನಲ್ಲಿ ಶ್ಲಾಘನೆಗೊಳಗಾಗಿದ್ದ ಮಂಡ್ಯ ಜಿಲ್ಲೆಯ ರೈತ ಮತ್ತು ಜಲ ಕ್ರಾಂತಿ ರೂವಾರಿ ಕಾಮೇಗೌಡ ಅವರ ಪುತ್ರನಿಗೆ ನೌಕರಿಯನ್ನೇ ನೀಡಿರಲಿಲ್ಲ.

 

ಅಲ್ಲದೇ ಅವರ ಕುಟುಂಬ ಸದಸ್ಯರ ವಾರ್ಷಿಕ ಆದಾಯ ಸೇರಿದಂತೆ ಮತ್ತಿತರೆ ವಿವರಗಳನ್ನೊಳಗೊಂಡ ವರದಿಯು ಕಳೆದ 2 ವರ್ಷದಿಂದಲೂ ಸರ್ಕಾರಕ್ಕೆ ಸಲ್ಲಿಕೆಯಾಗಿರಲಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ. ನಿಧನರಾದ ಕಾಮೇಗೌಡ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಸಚಿವರೆಲ್ಲರೂ ಶ್ರದ್ಧಾಂಜಲಿ ಅರ್ಪಿಸುತ್ತಿರುವ ಹೊತ್ತಿನಲ್ಲೇ ಅವರ ಮಗನಿಗೆ ನೌಕರಿ ನೀಡದೇ ಇರುವ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್‌ ನಾಗರತ್ನ ಅವರು ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿಗೆ 2022ರ ಮಾರ್ಚ್‌ 18ರಂದು ಅನಧಿಕೃತ ಟಿಪ್ಪಣಿ ಹೊರಡಿಸಿದ್ದರು. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಾಮೇಗೌಡ ಅವರ ಒಬ್ಬ ಮಗನಿಗೆ ಶಿಕ್ಷಣದ ಅರ್ಹತೆಗೆ ಅನುಗುಣವಾಗಿ ಸರ್ಕಾರಿ ನೌಕರಿಯನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು 2020ರ ಜುಲೈ 2ರಂದು ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಟಿಪ್ಪಣಿ ಹಾಕಿದ್ದರು. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕಾಮೇಗೌಡ ಅವರ ಕುಟುಂಬದ ಸದಸ್ಯರ ವಿವರ ಮತ್ತು ಮಕ್ಕಳ ಶೈಕ್ಷಣಿಕ ಅರ್ಹತೆ, ಮಕ್ಕಳ ವಯಸ್ಸಿನ ಕುರಿತು ಮಾಹಿತಿ ಕೋರಿದ್ದರು.

 

ಕಾಮೇಗೌಡ ಅವರ ಒಬ್ಬ ಮಗನಾದ ಡಿ ಕೆ ಕೃಷ್ಣ ಅವರ ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಕುರಿತಂತೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅಲ್ಲದೆ ಮತ್ತೊಬ್ಬ ಮಗನಾದ ಡಿ ಕೆ ಬಲರಾಮ ಅವರು (41) ಮೊದಲನೆ ಪಿಯುಸಿ ವ್ಯಾಸಂಗ ಮಾಡಿದ್ದರು. ಆದರೆ ಸರ್ಕಾರವು ಡಿ ಕೆ ಬಲರಾಮ ಅವರಿಗೆ ಸರ್ಕಾರಿ ನೌಕರಿ ನೀಡಲು ಕಾನೂನಿನ ತೊಡಕನ್ನು ಮುಂದಿರಿಸಿ ನಿರಾಕರಿಸಿದ್ದರು.

 

ಕರ್ನಾಟಕ ಸಿವಿಲ್‌ ಸೇವಾ (ದಿನಾಂಕ 18/12/2008ರ ಅಧಿಸೂಚನೆ ಸಂಖ್ಯೆ;ಡಿಪಿಎಆರ್‌ 42 ಎಸ್‌ಆರ್‌ಆರ್‌ 2008) (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 6ಕ್ಕೆ ತಿದ್ದುಪಡಿ ಮಾಡಿ ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 40 ವರ್ಷಗಳು ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷಗಳು ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷಗಳ ಗರಿಷ್ಟ ವಯೋಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಡಿಪಿಎಆರ್‌ ಅಭಿಪ್ರಾಯ ನೀಡಿತ್ತು.

 

ಅಲ್ಲದೇ ‘ ಕಾಮೇಗೌಡರ ಮಗನಾದ ಡಿ ಕೆ ಬಲರಾಮ್‌ ಅವರು ಪ್ರಸ್ತುತ 40 ವರ್ಷಗಳ ವಯೋಮಿತಿಯನ್ನು ತಲುಪಿರುವುದರಿಂದ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 6ರಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಮೀರಿರುವುದರಿಂದ ಸರ್ಕಾರಿ ಸೇವೆಗೆ ನೇಮಕಾತಿ ಮಾಡುವುದಕ್ಕೆ ನಿಯಮಗಳಲ್ಲಿ ಅವಕಾಶಗಳಿರುವುದಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸೇವಾ ನಿಯಮಗಳ ವಿಭಾಗವು ತಿಳಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಕಾಮೇಗೌಡರ ಮಗನಾದ ಡಿ ಕೆ ಬಲರಾಮ ಅವರಿಗೆ 41 ವರ್ಷ ವಯೋಮಾನದವರಾಗಿರುವುದರಿಂದ ಸರ್ಕಾರಿ ಸೇವೆಗೆ ನೇಮಕಾತಿ ಮಾಡಲು ನಿಯಮಾವಳಿಗಳಲ್ಲಿ ಅವಕಾಶವಿರುವುದಿಲ್ಲ,’ ಎಂಬ ಅಂಶವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿತ್ತು ಎಂಬುದು ಅನಧಿಕೃತ ಟಿಪ್ಪಣಿಯಿಂದ ಗೊತ್ತಾಗಿದೆ.

 

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರು ತಮ್ಮ ಜಮೀನು ಮತ್ತು ಸಮೀಪದ ಜಾಗದಲ್ಲಿ 16 ಸಣ್ಣ ಕೆರೆ ಕಟ್ಟೆಗಳನ್ನು ಕಟ್ಟಿಸುವ ಮೂಲಕ ಜಲಕ್ರಾಂತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ ನಂತರ ಅವರ ಮತ್ತು ಅವರ ಕುಟುಂಬದ ವಾರ್ಷಿಕ ಆದಾಯ, ಮತ್ತಿತರೆ ವಿವರಗಳ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ವರದಿ ಕೇಳಿ ಮಂಡ್ಯ ಜಿಲ್ಲಾಧಿಕಾರಿಗೆ 2020 ಮತ್ತು 2021ರಲ್ಲಿ ಒಟ್ಟು 5 ಅರೆ ಸರ್ಕಾರಿ ಪತ್ರಗಳನ್ನು ಬರೆದಿತ್ತು.

 

 

ಪತ್ರ ಬರೆದು 2 ವರ್ಷವಾದರೂ ಮಂಡ್ಯ ಜಿಲ್ಲಾಧಿಕಾರಿ ಈ ಸಂಬಂಧ ಯಾವುದೇ ವರದಿಯನ್ನು ಸಲ್ಲಿಸಿರಲಿಲ್ಲ. ಹೀಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು 2021 ಡಿಸೆಂಬರ್‌ನಲ್ಲಿ 6ನೇ ಅರೆ ಸರ್ಕಾರಿ ಪತ್ರವನ್ನು ಮಂಡ್ಯ ಜಿಲ್ಲಾಧಿಕಾರಿ ಅಶ್ವತಿ ಅವರಿಗೆ ಬರೆದಿದ್ದರು.

 

 

ಕಾಮೇಗೌಡರ ಅವರು ಕೈಗೊಂಡಿರುವ ಪರಿಸರ ಪೂರಕ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಅವರ ಮತ್ತು ಅವರ ಕುಟುಂಬ ಸದಸ್ಯರ ವಾರ್ಷಿಕ ಆದಾಯ, ಮತ್ತಿತರೆ ವಿವರಗಳನ್ನೊಳಗೊಂಡ ವರದಿಯನ್ನು ಸರ್ಕಾರಕ್ಕೆ ಕಳಿಸಿಕೊಡಬೇಕು ಎಂದು 2020ರ ಆಗಸ್ಟ್‌ 3, ಸೆ.21, ನವೆಂಬರ್‌ 21, 2021ರ ಜನವರಿ 5 ಮತ್ತು ಮಾರ್ಚ್ 20ರಂದು ಅರೆ ಸರ್ಕಾರಿ ಪತ್ರಗಳ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಕೋರಿದ್ದರು.

 

 

ಆದರೆ 2021ರ ಡಿಸೆಂಬರ್‌ ಅಂತ್ಯದವರೆಗೂ ಮಂಡ್ಯ ಜಿಲ್ಲಾಧಿಕಾರಿ ಅವರು ಸರ್ಕಾರಕ್ಕೆ ವರದಿಯನ್ನೇ ಸಲ್ಲಿಸಿರಲಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ. ಹೀಗಾಗಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಮಂಡ್ಯ ಜಿಲ್ಲಾಧಿಕಾರಿಗೆ ಮತ್ತೊಮ್ಮೆ ಪತ್ರ ಬರೆದಿದ್ದರು.

 

 

‘ಪ್ರಧಾನಮಂತ್ರಿಯವರ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಉಲ್ಲೇಖಿಸಲ್ಪಟ್ಟ ವ್ಯಕ್ತಿಯ ಬಗ್ಗೆ ಸರ್ಕಾರದ ಹಂತದಲ್ಲಿ ಮುಂದಿನ ಪರಿಶೀಲನೆಯ ಸಲುವಾಗಿ ಅವಶ್ಯವಿರುವ ವರದಿಯನ್ನು ನೀಡಲು ಒಂದು ವರ್ಷಕ್ಕೂ ಹೆಚ್ಚಿನ ಅವಧಿಗೆ ಸ್ಪಂದಿಸದಿರುವುದು ವಿಷಾದಕರ,’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದರು.

 

 

ಅಲ್ಲದೆ ‘ಈಗಲಾದರೂ ಸರ್ಕಾರದಿಂದ ಕೋರಿರುವ ವರದಿಯನ್ನು ಒಂದು ವಾರದೊಳಗೆ ನೀಡಲು ನಿಮ್ಮ ವೈಯಕ್ತಿಕ ಗಮನವನ್ನು ಹರಿಸುವಂತೆ ತಿಳಿಯಲಿಚ್ಛಿಸುತ್ತೇನೆ. ಇಲ್ಲವಾದಲ್ಲಿ ವರದಿಯು ಸ್ವೀಕೃತವಾಗದ ಮಾಹಿತಿಯನ್ನು ಮುಖ್ಯಮಂತ್ರಿಯವರ ಅವಗಾಹನೆಗೆ ಸಲ್ಲಿಸುವುದು ಅನಿವಾರ್ಯವಾಗಿರುತ್ತದೆ,’ ಎಂದೂ ಪತ್ರದಲ್ಲಿ ಎಚ್ಚರಿಸಿದ್ದರು. ಈ ಕುರಿತು ‘ದಿ ಫೈಲ್‌’ 2022ರ ಜನವರಿ 7ರಂದೇ ವರದಿ ಪ್ರಕಟಿಸಿತ್ತು.

ಪ್ರಧಾನಿಯ ಶ್ಲಾಘನೆಗೊಳಗಾದರೂ ಕಾಮೇಗೌಡರ ಕುರಿತಾದ ವರದಿ ವರ್ಷ ಕಳೆದರೂ ಸಲ್ಲಿಕೆಯಾಗಿಲ್ಲ

 

ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ 83 ವರ್ಷದ ಕಾಮೇಗೌಡ ಅವರ ಜಲಕ್ರಾಂತಿಯನ್ನು ಪ್ರಧಾನಿ ನರೇಂದ್ರ ಮೋದಿ ‘ಮನದ ಮಾತು’ ತಿಂಗಳ ಬಾನುಲಿ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು. ಕಾಮೇಗೌಡರ ಕೆಲಸವನ್ನು ಕೊಂಡಾಡಿದ್ದನ್ನು ಸ್ಮರಿಸಬಹುದು.

 

 

ಮೋದಿ ಹೇಳಿದ್ದೇನು?

 

 

ಕರ್ನಾಟಕದ ಮಂಡ್ಯದಲ್ಲಿ 80-85 ವಯೋಮಾನದ ಒಬ್ಬ ಹಿರಿಯರಿದ್ದಾರೆ. ಅವರು ಕಾಮೇಗೌಡ, ಅವರೊಬ್ಬ ಸಾಮಾನ್ಯ ರೈತ. ಆದರೆ ಅವರ ವ್ಯಕ್ತಿತ್ವ ಅಸಾಧಾರಣ. ಅವರು ಮಾಡಿರುವ ಕೆಲಸವನ್ನು ಕೇಳಿದರೆ ಯಾರಿಗಾದರೂ ಅಚ್ಚರಿಯಾಗುತ್ತದೆ. 80-85 ವರ್ಷದ ಕಾಮೇಗೌಡರು ತಮ್ಮ ಜಾನುವಾರುಗಳನ್ನು ಮೇಯಿಸುತ್ತಾರೆ, ಆದರೆ, ಜತೆಜತೆಗೇ ತಮ್ಮ ಜಮೀನಿನಲ್ಲಿ ಹೊಸ ಕೆರೆಯೊಂದನ್ನು ನಿರ್ಮಿಸುವ ಕೈಂಕರ್ಯವನ್ನೂ ಮಾಡುತ್ತಾರೆ.

 

 

ಅವರು ತಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸಲು ಬಯಸುತ್ತಾರೆ. ಜಲ ಸಂರಕ್ಷಣೆಗಾಗಿ ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸುವ ಕಾಯಕದಲ್ಲಿ ಅವರು ತಲ್ಲೀನರಾಗಿರುತ್ತಾರೆ. 80-85 ವಯೋಮಾನದ ಕಾಮೇಗೌಡರು ಇಲ್ಲಿಯವರೆಗೆ ಸುಮಾರು 16 ಕೆರೆಗಳನ್ನು ನಿರ್ಮಿಸಿದ್ದಾರೆ ಎಂದು ಕೇಳಿದರೆ ನೀವು ಚಕಿತರಾಗುತ್ತೀರಿ. ಇವೆಲ್ಲವನ್ನೂ ಅವರು ತಮ್ಮ ಪ್ರಯತ್ನದಿಂದ, ಪರಿಶ್ರಮದಿಂದಲೇ ನಿರ್ಮಿಸಿದ್ದಾರೆ. ಅವರು ಕಟ್ಟಿರುವ ಈ ಕೆರೆಗಳು ಬಹಳ ದೊಡ್ಡದಾಗಿರಲಿಕ್ಕಿಲ್ಲ, ಆದರೆ, ಅವರ ಪ್ರಯತ್ನ ಬಹಳ ದೊಡ್ಡದು. ಇವರ ಕೆರೆಗಳಿಂದ ಇಂದು ಆ ಇಡೀ ಪ್ರದೇಶಕ್ಕೆ ಹೊಸ ಜೀವನ ಸಿಕ್ಕಿದೆ ಎಂದು ಅಭಿನಂದಿಸಿದ್ದರು.

the fil favicon

SUPPORT THE FILE

Latest News

Related Posts