ರಹಸ್ಯ ಬೇಧಕರಿಂದ ಅರಣ್ಯ ಇಲಾಖೆಯ ಭ್ರಷ್ಟಾಚಾರ ಬಹಿರಂಗ;45ಲಕ್ಷ ರು ಲಂಚ ನೀಡಿದ್ದರೇ ಒಬೇರಾಯ್‌?

ಬೆಂಗಳೂರು; ಈಸ್ಟ್‌ ಇಂಡಿಯಾ ಹೋಟೆಲ್ಸ್‌ಗೆ (ಒಬೆರಾಯ್‌ ಗ್ರೂಪ್‌) ಬೆಂಗಳೂರಿನ ಹೆಬ್ಬಾಳ ಕೆರೆ ಅಭಿವೃದ್ಧಿ ಗುತ್ತಿಗೆ ನೀಡಲು ಮಾಡಿರುವ ಶಿಫಾರಸ್ಸಿನ ಪ್ರಸ್ತಾವನೆ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂದು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮಹತ್ವದ ಸುಳಿವು ನೀಡಿರುವ ವಿವಿಧ ಕಂಪನಿಗಳ ನಿವೃತ್ತ ಅಧಿಕಾರಿಗಳ ಸಮೂಹದ ರಹಸ್ಯ ಬೇಧಕರೊಬ್ಬರು (Whistle Blower) ಕಾರ್ಪೋರೇಟ್‌ ಕಂಪನಿಗಳು ಹೇಗೆ ಅಧಿಕಾರಶಾಹಿಯನ್ನು ಭ್ರಷ್ಟಗೊಳಿಸಿದೆ ಎಂಬುದನ್ನು ಹೊರಗೆಡವಿದ್ದಾರೆ.

 

ಗುತ್ತಿಗೆ ನೀಡುವ ಪ್ರಸ್ತಾವನೆಗೆ ಮನ್ನಣೆ ನೀಡಿತ್ತಲ್ಲದೇ  ಕಂಪನಿಯ ಪರವಾಗಿ ಶಿಫಾರಸ್ಸು ಮಾಡಿರುವ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಂಪನಿಯೇ 45 ಲಕ್ಷ ರುಪಾಯಿ ಲಂಚ ನೀಡಿದೆ ಎಂಬುದಕ್ಕೆ ಕಂಪನಿಯ ಹಿರಿಯ ಅಧಿಕಾರಿಯ ಈ ಮೇಲ್‌ ಪುರಾವೆಯನ್ನು ಸರ್ಕಾರಕ್ಕೆ ಒದಗಿಸಿದ್ದರು. ಈ ಸಂಬಂಧ ನಿವೃತ್ತ ಅಧಿಕಾರಿಗಳ ಸಮೂಹದ ರಹಸ್ಯ ಬೇಧಕರೊಬ್ಬರು (Whistle Blower) ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಅರಣ್ಯ ಇಲಾಖೆಯು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

 

ಉಮೇಶ್‌ ಕತ್ತಿ (ದಿವಂಗತ) ಅವರು ಅರಣ್ಯ ಸಚಿವರಾಗಿದ್ದ ಅವಧಿಯಲ್ಲೇ 45 ಲಕ್ಷ ರು. ಲಂಚ ನೀಡಲಾಗಿತ್ತು ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ಈ ದೂರಿನ ಪ್ರತಿ ಮೇಲೆ ‘ಮಂಡಿಸಿ’ ಎಂದು ಮೇ 12ರಂದು ಅಧಿಕಾರಿಯೊಬ್ಬರು ಒಕ್ಕಣೆ ಹಾಕಿರುವುದು ಕಂಡು ಬಂದಿದೆ.  ಸದ್ಯ ಅರಣ್ಯ ಖಾತೆಯು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಸ್ತುವಾರಿಯಲ್ಲಿದೆ. ಅರಣ್ಯ ಇಲಾಖೆ ಸಚಿವರು ಬದಲಾದರೂ ಈ ದೂರಿನ ಮೇಲೆ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ಗೊತ್ತಾಗಿದೆ.  ರಹಸ್ಯ ಬೇಧಕರೊಬ್ಬರು ಸಲ್ಲಿಸಿರುವ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಹೆಬ್ಬಾಳ ಕೆರೆ ನಿರ್ವಹಣೆ ಸಂಬಂಧ ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಯುತ್ತಿದ್ದ ಹೊತ್ತಿನಲ್ಲಿಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಕೆರೆಯನ್ನು 15 ವರ್ಷಗಳ ಕಾಲ ನಿರ್ವಹಣೆಗಾಗಿ ಈಸ್ಟ್‌ ಇಂಡಿಯಾ ಹೋಟೆಲ್ಸ್‌ ಲಿಮಿಟೆಡ್‌ನೊಂದಿಗೆ ಗುತ್ತಿಗೆ ಒಪ್ಪಂದವನ್ನು ನವೀಕರಿಸಲು ಶಿಫಾರಸ್ಸು ಮಾಡಲಾಗಿತ್ತು. ಇದಕ್ಕೆ ಸಹಕರಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ 45 ಲಕ್ಷ ರು. ನೀಡಲು ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷ ಪಿ ಆರ್‌ ಎಸ್‌ ಒಬೇರಾಯ್‌ ಅವರು ಅನುಮತಿ ನೀಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಭೂಪಸಂದ್ರ ರಸ್ತೆಯ ಬಳಿ ಇರುವ ಈಸ್ಟ್‌ ಇಂಡಿಯಾ ಹೋಟೆಲ್‌ಗೆ ಕೆರೆ ನಿರ್ವಹಣೆ ಗುತ್ತಿಗೆ ನೀಡಿದರೆ ಅಲ್ಲಿ ಹೋಟೆಲ್‌, ರಿಯಲ್‌ ಎಸ್ಟೇಟ್‌ನಂತಹ ವಾಣಿಜ್ಯ ಚಟುವಟಿಕೆ ನಡೆಯಲಿದೆ. ಸಮಾಜ ಸೇವೆ ಭಾಗವಾಗಿಯೇ ಕೆರೆ ನಿರ್ವಹಣೆ ಮಾಡಲಾಗುತ್ತದೆ ಎಂದು ಕಂಪನಿಯು ಎಷ್ಟೇ ಸಮಜಾಯಿಷಿ ನೀಡಿದರೂ ಅದು ವಾಣಿಜ್ಯ ಉದ್ದೇಶದ ಚಟುವಟಕೆಗಳು ನಡೆಯಲಿದೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

 

‘ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಜುಲೈ 2021ರಲ್ಲಿ ಹಣ ನೀಡಲಾಗಿದೆ. ಇದಕ್ಕೆ ಒಬೇರಾಯ್‌ ಅವರ ಕೈ ಬರವಣಿಗೆ ಮತ್ತು ಅವರ ಸಹಿ ಕೂಡ ಇದೆ. ಸಿಸಿಟಿವಿ ದೃಶ್ಯಾವಳಿಗಳು ನಮ್ಮ ಬಳಿ ಇದೆ. ವಿವಿಧ ಕಂಪನಿಗಳಲ್ಲಿ ಸೇವೆ ಸಲ್ಲಿಸಿರುವ ನಿವೃತ್ತ ಉದ್ಯೋಗಿಗಳ ಗುಂಪು ನಮ್ಮದಾಗಿದೆ. ನಾವುಗಳು ಹಲವು ರಾಜ್ಯಗಳ ಕಾರ್ಪೋರೇಟ್‌ ಮತ್ತು ಅಧಿಕಾರಿಶಾಹಿಯೊಂದಿಗಿನ ಸಂಬಂಧವನ್ನು ಹೊರಗೆಡವುತ್ತಿದ್ದೇವೆ. ಹರ್ಯಾಣ ಮತ್ತು ಮೇಘಾಲಯದಲ್ಲಿ ಕಾರ್ಪೋರೇಟ್‌ ಮತ್ತು ಅಧಿಕಾರಿಶಾಹಿಯ ಕೈಜೋಡಿಸಿರುವುದನ್ನು ಈಗಾಗಲೇ ಹೊರಗೆಳೆದಿದ್ದೇವೆ. ಈ ಸಂಬಂಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಾಖಲಿಸಿದ್ದೇವೆ,’ ಎಂದು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ದೂರಿನಲ್ಲಿ ವಿವರಿಸಲಾಗಿದೆ.

 

ವಿಷಲ್‌ ಬ್ಲೋವರ್‌ ಸರ್ಕಾರಕ್ಕೆ ಸಲ್ಲಿಸಿರುವ ದೂರಿನ ಪ್ರತಿ

 

ಅರಣ್ಯ ಇಲಾಖೆಯು ಇತ್ತೀಚೆಗೆ ಲುಂಬಿನಿ ಗಾರ್ಡನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನಿರ್ವಹಣೆಗಾಗಿ ನೀಡಲಾದ ಇದೇ ರೀತಿಯ ಗುತ್ತಿಗೆಯನ್ನು ನವೀಕರಿಸಲಾಗಿತ್ತು. ಇದರ ವಿರುದ್ಧ ಸಿವಿಲ್ ಮತ್ತು ಹೈಕೋರ್ಟ್‌ನಲ್ಲಿ ಕಾನೂನು ಸಮರ ನಡೆದಿತ್ತು.ಅವಧಿ ಮುಗಿದ ಗುತ್ತಿಗೆಯ ಕಾನೂನುಬದ್ಧತೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

 

ಈಸ್ಟ್ ಇಂಡಿಯಾ ಹೋಟೆಲ್ಸ್ ಲಿಮಿಟೆಡ್ (ಒಬೆರಾಯ್ ಗ್ರೂಪ್ ಆಫ್ ಹೋಟೆಲ್ಸ್) ಹೆಬ್ಬಾಳ ಕೆರೆಯನ್ನು ಅಭಿವೃದ್ಧಿಪಡಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರದ ಜೊತೆ (LDA) ಯಿಂದ 2006 ರಲ್ಲಿ ಒಪ್ಪಂದ ಮಾಡಿಕೊಂಡಿತು. ಈ ಯೋಜನೆಯಡಿ ಕೆರೆಯನ್ನು ವಾರ್ಷಿಕ 72 ಲಕ್ಷ ರುಪಾಯಿಗೆ 15 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದೆ.

 

ಹೆಬ್ಬಾಳ ಕೆರೆಯನ್ನು ಒಬೆರಾಯ್ ಗ್ರೂಪ್ ಆಫ್ ಹೊಟೇಲ್‌ಗಳ ಈಸ್ಟ್ ಇಂಡಿಯಾ ಹೋಟೆಲ್‌ಗೆ, ನಾಗವಾರ ಕೆರೆಯನ್ನು ಲುಂಬಿನಿ ಬಿಲ್ಡರ್ಸ್‌ಗೆ, ಅಗರ ಕೆರೆಯನ್ನು ಬಯೋಟಾಗೆ ಸ್ವಲ್ಪ ಪ್ರಸಿದ್ಧ ಕಂಪನಿಗೆ ಮತ್ತು ವೆಂಗಯ್ಯ ಕೆರೆಯನ್ನು ಬೆಂಗಳೂರಿನ ಬಿಲ್ಡರ್ ಒಬ್ಬರಿಗೆ ಗುತ್ತಿಗೆ ನೀಡಲಾಗಿದೆ. ಈ ಒಪ್ಪಂದದ ಅಡಿಯಲ್ಲಿ ಡೆವಲಪರ್‌ಗಳು ರೆಸ್ಟೋರೆಂಟ್‌ಗಳನ್ನು ನಿರ್ಮಿಸಬಹುದು ಮತ್ತು ಜಲ ಕ್ರೀಡೆಗಳು ಮತ್ತು ಫುಡ್‌ ಕೋರ್ಟ್‌ಗಳನ್ನು ಅಭಿವೃದ್ಧಿಪಡಿಸಬಹುದು.

 

ಫುಡ್ ಕೋರ್ಟ್‌ಗಳು ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್‌ಗಳ ಮಧ್ಯೆ ನಾಗವಾರ ಸರೋವರವು ಈಗಾಗಲೇ ಬಹುತೇಕ ಕಣ್ಮರೆಯಾಗಿದೆ. ಹೆಬ್ಬಾಳ ಕೆರೆಯಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಅಲ್ಲಿ ಜಲಕ್ರೀಡೆ ಚಟುವಟಿಕೆಗಳು ಮತ್ತು ಜಾಗಿಂಗ್ ಪ್ರದೇಶವು ಸೇರಿದೆ. ಎರಡೂ ಕೆರೆಗಳ ಪ್ರವೇಶಕ್ಕೆ ಶುಲ್ಕ ವಿಧಿಸಲಾಗುತ್ತದೆ ಎನ್ನುತ್ತಾರೆ ಪರಿಸರ ತಜ್ಞರೊಬ್ಬರು.

the fil favicon

SUPPORT THE FILE

Latest News

Related Posts