ಬೆಂಗಳೂರು; ತ್ರಿಚಕ್ರ ವಾಹನ, ಲ್ಯಾಪ್‌ಟಾಪ್ ಸೇರಿದಂತೆ ಇನ್ನಿತರೆ ಸಾಧನ ಸಲಕರಣೆಗಳನ್ನು ವಿಶೇಷ ಚೇತನರಿಗೆ ನಿಗದಿತ ಅವಧಿಯೊಳಗೆ ನೀಡದೇ ಶಾಸಕರ ಅನುಮತಿಯಿಲ್ಲದೇ ಅಧಿಕಾರಿಗಳು ಸರಬರಾಜು ಮಾಡುತ್ತಿಲ್ಲ ಎಂಬ ಗುರುತರವಾದ ಆರೋಪಗಳ ಕೇಳಿ ಬಂದಿರುವ ನಡುವೆಯೇ 2021-22ನೇ ಸಾಲಿನ ಹಣಕಾಸಿನ ವರ್ಷದ ಡಿಸೆಂಬರ್ ಅಂತ್ಯಕ್ಕೆ ಸಾಧನೆ ಯೋಜನೆಯಡಿ ಕೇವಲ 16 ಫಲಾನುಭವಿಗಳಿಗಷ್ಟೇ ಸಾಧನ ಸಲಕರಣೆಗಳನ್ನು ವಿತರಿಸಿದೆ. ಅ ಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವ ಅಂಗವಿಕಲ ಕ್ರೀಡಾಪಟುಗಳಿಗೆ ಧನ ಸಹಾಯ ನಿರೀಕ್ಷಿಸಿದ್ದ ವಿಶೇಷ ಚೇತನರು ತೊಂದರೆ ಅನುಭವಿಸಿರುವುದು ಇದೀಗ ಬಹಿರಂಗವಾಗಿದೆ.
ವಿಧಾನಪರಿಷತ್ ಅಧಿವೇಶನದಲ್ಲಿ ಸದಸ್ಯ ಎನ್ ರವಿಕುಮಾರ್ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಸಚಿವ ಹಾಲಪ್ಪ ಆಚಾರ್ ಅವರು ಈ ಮಾಹಿತಿಯನ್ನು ಒದಗಿಸಿದ್ದಾರೆ.
2020-21ನೇ ಸಾಲಿನಲ್ಲಿ 7,314 ವಿಶೇಷ ಚೇತನರಿಗೆ 2,220.00 ಲಕ್ಷ ರು. ವೆಚ್ಚ ಮಾಡಿರುವ ಇಲಾಖೆಯು ಡಿಸೆಂಬರ್ ಅಂತ್ಯಕ್ಕೆ ಗುರುತಿಸಲಾಗಿದ್ದ ವಿಶೇಷ ಚೇತನ ಫಲಾನುಭವಿಗಳಿಗೆ ಪ್ರತಿಯಾಗಿ ಕೇವಲ 16 ಫಲಾನುಭವಿಗಳಿಗೆ ಮಾತ್ರವೇ 69.55 ಲಕ್ಷ ರು. ವೆಚ್ಚ ಮಾಡಿದೆ.
2021-22ನೇ ಸಾಲಿನ ಹಣಕಾಸು ವರ್ಷದ ಕ್ರಿಯಾ ಯೋಜನೆಯಲ್ಲಿ ವಿವಿಧ ಫಲಾನುಭವಿ ಆಧರಿತ ಯೋಜನೆಗಳಡಿ ಒಟ್ಟು 2,20.00 ಲಕ್ಷ ರು.ಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿತ್ತು. ಒಟ್ಟು 8,435 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಈ ಪೈಕಿ 8,681 ಸಲಕರಣೆಗಳನ್ನು ವಿತರಿಸಿದೆ. ಅದೇ ರೀತಿ ಡಿಸೆಂಬರ್ 2021ರ ಅಂತ್ಯಕ್ಕೆ ಸಾಧನ ಸಲಕರಣೆ ಯೋಜನೆಯಡಿ 1,815 ಫಲಾನುಭವಿಗಳಿಗೆ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವ ಅಂಗವಿಕಲ ಕ್ರೀಡಾ ಪಟುಗಳಿಗೆ ಧನಸಹಾಯ ಮಾಡುವ ಸಾಧನ ಯೋಜನೆಯಡಿ 16 ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ.
ಸಾಧನ ಸಲಕರಣೆಗಳಿಗಾಗಿ 248.50 ಲಕ್ಷ ರು., ಲ್ಯಾಪ್‌ಟಾಪ್ ಒದಗಿಸಲು 399.50 ಲಕ್ಷ ರು., ಯಂತ್ರಚಾಲಿತ ದ್ವಿಚಕ್ರ ವಾಹನಗಳಿಗಾಗಿ 1,350.00 ಲಕ್ಷ ರು., ಶ್ರವಣ ದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ವಿತರಿಸಲು 72.00 ಲಕ್ಷ ರು., ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್ ಇನ್ನಿತರೆ ಕಿಟ್‌ಗಳಿಗೆ 100.00 ಲಕ್ಷ ರು., ಸಾಧನೆ ಯೋಜನೆಯಡಿ 50.00 ಲಕ್ಷ ರು.ಗಳನ್ನು ಆಯವ್ಯಯದಲ್ಲಿ ಅನುದಾನ ನಿಗದಿಪಡಿಸಲಾಗಿತ್ತು.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲು ಸಚಿವ ಮಾಧುಸ್ವಾಮಿ ಅವರ ಆಪ್ತ ಸಹಾಯಕರು ಲಂಚಕ್ಕೆ ಬೇಡಿಕೆ ಇರಿಸಿದ್ದರು. ಈ ಕುರಿತು ಫಲಾನುಭವಿಯೊಬ್ಬರು ಅಧಿಕಾರಿಯೊಬ್ಬರೊಂದಿಗೆ ನಡೆದಿದ್ದ ಸಂಭಾಷಣೆಯು ಸೋರಿಕೆಯಾಗಿದ್ದನ್ನು ಸ್ಮರಿಸಬಹುದು.