ನಾಡಧ್ವಜ; ನಾಡಗೀತೆ ಗೊಂದಲ ಬಗೆಹರಿಸಿದ ಸರ್ಕಾರ, ಒಂದು ರಾಷ್ಟ್ರ, ಒಂದು ಧ್ವಜಕ್ಕೆ ಕಟ್ಟುಬಿದ್ದೀತೇ?

ಬೆಂಗಳೂರು; ನಾಡಗೀತೆಗೆ ನಿರ್ದಿಷ್ಟ ಸಮಯ ಹಾಗೂ ದಾಟಿ ನಿಗದಿ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಕಳೆದ 10 ವರ್ಷಗಳಿಂದಲೂ ಗೊಂದಲಕ್ಕೆ ಪೂರ್ಣ ವಿರಾಮ ಹಾಕಿರುವ ರಾಜ್ಯ ಸರ್ಕಾರವು ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜ ವಿನ್ಯಾಸ ಹಾಗೂ ಕಾನೂನಿನ ಸ್ವರೂಪ ದೊರಕಿಸಿಕೊಡಲು ಇದುವರೆಗೂ ಪ್ರಯತ್ನಿಸಿಲ್ಲ.

 

ಕರ್ನಾಟಕ ಪ್ರತ್ಯೇಕ ನಾಡ ಧ್ವಜ ವಿನ್ಯಾಸ ಮತ್ತು ಕಾನೂನಿನ ಸ್ವರೂಪ ನೀಡಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಿದ್ದ 9 ಮಂದಿಯ ಸಮಿತಿಯು ‘ಕರ್ನಾಟಕ ಸರ್ಕಾರ ನಾಡಧ್ವಜವನ್ನು ರೂಪಿಸಿ ಅದಕ್ಕೆ ಕಾನೂನು ಸ್ವರೂಪ ನೀಡುವ ಸಂಬಂಧ ಸಮರ್ಥನೀಯ ಅಂಶಗಳ ಕುರಿತು ಚರ್ಚೆ ನಡೆಸಿತ್ತು. ಉದ್ಧೇಶಿತ ಬಾವುಟಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಲು ಪತ್ರ ವ್ಯವಹಾರ ನಡೆಸುವುದು ಸೂಕ್ತ ಎಂದು ಅಭಿಪ್ರಾಯಿಸಿತ್ತು.

 

ಭಾರತ ಸಂವಿಧಾನದಲ್ಲಿ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಷಯಗಲು ಕೇಂದ್ರ ಸರ್ಕಾರದ ವಿಷಯ ವ್ಯಾಪ್ತಿಯಲ್ಲಿ ಇವೆ. ಸದ್ಯ ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಮಾತ್ರ ಸಂವಿಧಾನದ ವಿಧಿ 370ರ ಅಡಿಯಲ್ಲಿ ಪ್ರತ್ಯೇಕ ರಾಷ್ಟ್ರಧ್ವಜವನ್ನು ಹೊಂದಿತ್ತು. ಭಾರತದ ಉಳಿದ ಯಾವ ರಾಜ್ಯಗಳೂ ಸಹ ಪ್ರತ್ಯೇಕವಾದ ರಾಜ್ಯ ಧ್ವಜಗಳನ್ನು ಹೊಂದಿಲ್ಲ. ಇಂತಹ ಸನ್ನಿವೇಶದಲ್ಲಿ ಕರ್ನಾಟಕ ಸರ್ಕಾರವು ತನ್ನದೇ ಆದ ಪ್ರತ್ಯೇಕ ನಾಡಧ್ವಜವನ್ನು ಹೊಂದಲು ನಿರ್ಧರಿಸಿದ್ದು ಹೊಸ ವಿಷಯವಾಗಿತ್ತು.

 

ಅಲ್ಲದೇ ದಿ ಸ್ಟೇಟ್‌ ಎಂಬ್ಲಮ್‌ ಆಫ್‌ ಇಂಡಿಯಾ (ರೆಗ್ಯುಲೇಷನ್‌ ಆಫ್‌ ಯೂಸ್‌ ) ರೂಲ್ಸ್‌ 2007ರ ನಿಯಮಗಳಲ್ಲಿ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಲಾಂಛನವನ್ನು ರಾಜ್ಯದ ಲಾಂಛನದಲ್ಲಿ ಅಳವಡಿಸಿಕೊಳ್ಳಬಹುದು ಎಂದು ನಿಯಮ 4 ರಲ್ಲಿ ಹೇಳಿದೆ. ಈ ನಿಯಮದಡಿಯಲ್ಲಿ ಯಾವ ರಾಜ್ಯವು ಈಗಾಗಲೇ ಈ ನಿಯಮಗಳು ಜಾರಿಗೆ ಬರುವ ವೇಳೆಗೆ ತನ್ನದೇ ಆದ ಲಾಂಛನವನ್ನು ಈಗಾಗಲೇ ಅಳವಡಿಸಿಕೊಂಡಿದ್ದಲ್ಲಿ ಅಂತಹ ಮಾರ್ಪಡಿಸಿದ ಲಾಂಛನಗಳನ್ನು ಈ ನಿಯಮಗಳಲ್ಲಿ ಉಳಿಸಲಾಗಿದೆ. ಈ ರೀತಿ ರಾಜ್ಯಗಳು ರಚಿಸಿಕೊಂಡ ಲಾಂಛನವನ್ನು ರಾಜ್ಯದ ಬಾವುಟದಲ್ಲಿ ಬಳಸಲು ಕೂಡ ಅವಕಾಶ ನೀಡಲಾಗಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು.

 

ಅಲ್ಲದೇ ಈ ವಿಷಯದ ಕುರಿತು ಕೇಂದ್ರ ಅಧಿನಿಯಮ ಈಗಾಗಲೇ ಈ ಕ್ಷೇತ್ರವ್ನನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಈ ಅಧಿನಿಯಮವನ್ನು Entry 97 list 1 of the 7th scheduleನಲ್ಲಿ ರಚಿಸಿರುವುದರಿಂದ ಈ ವಿಷಯದ ಕುರಿತು ರಾಜ್ಯ ಸರ್ಕಾರಕ್ಕೆ ಶಾಸನ ರಚಿಸುವ ಅಧಿಕಾರ ಇರುವುದಿಲ್ಲ ಎಂದೂ ವರದಿಯಲ್ಲಿ ವಿವರಿಸಲಾಗಿತ್ತು.

 

ಈ ಪ್ರಕ್ರಿಯೆ ನಡೆದು 5 ವರ್ಷಗಳಾಗಿವೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಾಲುದಾರಿಕೆಯ ಮೈತ್ರಿ ಸರ್ಕಾರದ ಅವಧಿ ಮತ್ತು ಆ ನಂತರ ಪೂರ್ಣ ಪ್ರಮಾಣಲ್ಲಿ ಯಡಿಯೂರಪ್ಪ ಅವರು ಒಂದು ವರ್ಷ ಮತ್ತು ಅವರ ನಂತರ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜಕ್ಕೆ ಕಾನೂನಿನ ಸ್ವರೂಪ ದೊರಕಿಸಿಕೊಡುವ ನಿಟ್ಟಿನಲ್ಲಿ ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.

 

ಸಮಿತಿ ವರದಿಯಲ್ಲೇನಿತ್ತು?

 

ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಕನ್ನಡ ಧ್ವಜದ ಹೆಸರಿನಲ್ಲಿ ಕೆಂಪು ಮತ್ತು ಹಳದಿ ಬಣ್ಣಗಳನ್ನುಳ್ಳ ಒಂದು ಧ್ವಜವು ಪ್ರಚಲಿತವಾಗಿರುತ್ತದೆ. ಹೀಗಾಗಿ ಧ್ವಜ ಮತ್ತು ಕನ್ನಡನಾಡಿನ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಆ ಬಣ್ಣಗಳನ್ನೂ ಒಳಗೊಂಡಂತೆ ನೂತನ ತ್ರಿವರ್ಣ ಧ್ವಜದ ನಾಡಧ್ವಜವನ್ನು ವಿನ್ಯಾಸಗೊಳಿಸಲಾಗಿದೆ.

 

ಪ್ರಸ್ತುತ ಸಮಿತಿಯು ರೂಪಿಸಿರುವ ಕರ್ನಾಟಕ ಸರ್ಕಾರದ ನಾಡಧ್ವಜವು ಮೂರು ಬಣ್ಣಗಳನ್ನು ಹೊಂದಿರುತ್ತದೆ. ಇದರಲ್ಲಿ ಬಿಳಿ ಬಣ್ಣವು ಶಾಂತಿಯನ್ನು, ಹಳದಿ ಬಣ್ಣವು ಸಂಭ್ರಮ ಮತ್ತು ಧನಾತ್ಮಕತೆಯನ್ನು, ಕೆಂಪು ಬಣ್ಣವು ಧೈರ್ಯ, ಶೌರ್ಯ ಮತ್ತು ಸ್ವಾಭಿಮಾನವನ್ನು ಸಂಕೇತಿಸುತ್ತದೆ. ಈ ತ್ರಿವರ್ಣ ನಾಡಧ್ವಜದಲ್ಲಿ ಇರುವ ಬಿಳಿಬಣ್ಣದ ಮಧ್ಯಭಾಗದಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವನ್ನು ನೀಲಿಬಣ್ಣದಲ್ಲಿ ಮುದ್ರಿಸಲಾಗಿದೆ. ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನದಲ್ಲಿ ಸತ್ಯಮೇವ ಜಯತೆ ಎನ್ನುವ ವಾಕ್ಯವಿರುತ್ತದೆ.

 

ಆದರೆ ಧ್ವಜದಲ್ಲಿ ಅಕ್ಷರಗಳನ್ನು ಒಂದು ಬದಿಯಲ್ಲಿ ಮುದ್ರಿಸಿದಾಗ ಅದು ಇನ್ನೊಂದು ಬದಿಯಲ್ಲಿ ತಿರುವು ಮುರುವಾಗಿ ಕಾಣಿಸುತ್ತದೆ. ಹೀಗಾಗಿ ಸತ್ಯ ಮೇವ ಜತೆ ಎನ್ನುವ ವಾಕ್ಯವನ್ನು ಕೈಬಿಟ್ಟು ಕೇವಲ ಲಾಂಛನದ ರೇಖಾ ಚಿತ್ರವನ್ನು ಮಾತ್ರ ಧ್ವಜದಲ್ಲಿ ಅಳವಡಿಸಲಾಗಿದೆ.

 

‘ಕರ್ನಾಟಕ ಸರ್ಕಾರ ನಾಡಧ್ವಜವನ್ನು ರೂಪಿಸಿ ಅದಕ್ಕೆ ಕಾನೂನು ಸ್ವರೂಪ ನೀಡುವ ಸಂಬಂಧ ಮೇಲೆ ಹೇಳಿದ ಈ ಎಲ್ಲ ವಿಷಯಗಳ ವ್ಯಾಪ್ತಿ ಮತ್ತು ಚರ್ಚೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ತನ್ನ ಉದ್ದೇಶಿತ ಬಾವುಟಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಲು ಸಚಿವ ಸಂಪುಟದಲ್ಲಿ ನಿರ್ಣಯಿಸಿ ಆ ನಂತರ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡುವುದು ಸೂಕ್ತ,’ ಎಂದು ಸಮಿತಿಯು ವರದಿಯಲ್ಲಿ ಅಭಿಪ್ರಾಯಿಸಿತ್ತು.

 

ರಾಜ್ಯ ಬಿಜೆಪಿ ಸರ್ಕಾರವು ಅಧಿಕಾರದ ಕೊನೆ ಹೊಸ್ತಿಲಲ್ಲಿ ಬಂದು ನಿಂತಿದೆಯಾದರೂ ಒಂದು ರಾಷ್ಟ, ಒಂದು ಧ್ವಜ ಎಂಬ ಸೂತ್ರವನ್ನು ಮುಂದಿಟ್ಟುಕೊಂಡು ಅದಕ್ಕೆ ಬದ್ಧವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜಕ್ಕೆ ಕಾನೂನಿನ ಸ್ವರೂಪ ದೊರಕುವುದು ಅನುಮಾನ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

 

2012ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಡಿ.ವಿ. ಸದಾನಂದಗೌಡ ಮಂಡಿಸಿದ್ದ ಬಜೆಟ್‌ನಲ್ಲಿ ‘ನವೆಂಬರ್ 1 ರಂದು ರಾಜ್ಯದ ಎಲ್ಲ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯ’ ಎಂದು ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಸುತ್ತೋಲೆಯನ್ನೂ ಹೊರಡಿಸಲಾಗಿತ್ತು.

 

ಏತನ್ಮಧ್ಯೆ, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದ ಪ್ರಕಾಶ ಶೆಟ್ಟಿ ಎಂಬುವರು, ‘ಕನ್ನಡ ಧ್ವಜವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಕೋರಿದ್ದರು. ಈ ಸಂಬಂಧ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್‌, ಕನ್ನಡ ಧ್ವಜ ಅಧಿಕೃತವೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿತ್ತು.

 

ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ, ‘ಕನ್ನಡ ಧ್ವಜಾರೋಹಣ ಕಡ್ಡಾಯಗೊಳಿಸಿದ ಆದೇಶ ವಾಪಸ್ ಪಡೆಯಲಾಗಿದೆ’ ಎಂದು 2012ರ ಅಕ್ಟೋಬರ್‌ 4ರಂದು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.
ರಾಜ್ಯಗಳು ತಮ್ಮದೇ ಆದ ಧ್ವಜವನ್ನು ರೂಪಿಸಿಕೊಳ್ಳಲು ಕಾನೂನಿನಲ್ಲಿ ಯಾವುದೇ ಅಡ್ಡಿ ಇಲ್ಲ. ಇದನ್ನು ಸುಪ್ರೀಂಕೋರ್ಟ್‌ ಎಸ್‌.ಆರ್‌.ಬೊಮ್ಮಾಯಿ ಪ್ರಕರಣದಲ್ಲಿ ಉಲ್ಲೇಖಿಸಿದೆ.

 

ರಾಜ್ಯಗಳು ತಮ್ಮದೇ ಆದ ಧ್ವಜ ರೂಪಿಸಿಕೊಳ್ಳಲು ಸಂವಿಧಾನದಲ್ಲಿ ಯಾವುದೇ ನಿರ್ಬಂಧ ಹಾಕಿಲ್ಲ. ಆದರೆ, ನಾಡ ಧ್ವಜ ಹಾರಿಸುವಾಗ ರಾಷ್ಟ್ರಧ್ವಜಕ್ಕೆ ಅಗೌರವ ತೋರುವಂತಿಲ್ಲ. ನಾಡಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಕೆಳಗೆ ಹಾರಿಸಬೇಕು. ಈ ರೀತಿ ನಡಾವಳಿಗಳನ್ನು ರೂಪಿಸಿಕೊಂಡರೆ ಯಾವುದೇ ಧ್ವಜಗಳು ಅನಧಿಕೃತ ಅಲ್ಲ. ಆದರೂ, ಇನ್ನೂ ಕೆಲವು ಕಾನೂನಿನ ತೊಡಕುಗಳಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts