ಅರ್ಧಕೋಟಿ ಅವ್ಯವಹಾರ; ಆರೋಪಿತ ಅಧಿಕಾರಿಯ ಸ್ಥಳ ನಿಯುಕ್ತಿಗೆ ಶಿಫಾರಸ್ಸು, ರಕ್ಷಣೆಗಿಳಿದ ಸಚಿವ!

photo credit; thenewsminute

ಬೆಂಗಳೂರು; ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯಿಂದ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಪಾವತಿಸದೆಯೇ ಅರ್ಧಕೋಟಿಗೂ ಅಧಿಕ ಮೊತ್ತವನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿದ್ದ ತುಮಕೂರು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ಅವರನ್ನು ಆರೋಗ್ಯ ಇಲಾಖೆಯ ಯೋಜನೆ ವಿಭಾಗಕ್ಕೆ ವರ್ಗಾಯಿಸಿರುವುದು ಇದೀಗ ಬಹಿರಂಗವಾಗಿದೆ.

 

ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರ ಟಿಪ್ಪಣಿ ಮೇರೆಗೆ ಸರ್ಕಾರವು ಅವರನ್ನು ಆರೋಗ್ಯ ಸೌಧದಲ್ಲಿರುವ ಯೋಜನೆ ವಿಭಾಗಕ್ಕೆ ವರ್ಗಾಯಿಸಿದೆ. ಇವರ ಟಿಪ್ಪಣಿಯನ್ನು ಪರಿಶೀಲಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಗಾವಣೆಗೆ ಅನುಮೋದಿಸಿದ್ದಾರೆ. ಈ ಸಂಬಂಧ ಟಿಪ್ಪಣಿ ಹಾಳೆಯೊಂದು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ನಡವಳಿಯಲ್ಲೇನಿದೆ?

 

ಡಾ ವೀರಭದ್ರಯ್ಯ ಟಿ ಎ ಜಿಲ್ಲಾ ಶಸ್ತ್ರಚಿಕಿತ್ಸಕ ಜಿಲ್ಲಾ ಆಸ್ಪತ್ರೆ ತುಮಕೂರು ಇವರನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ (ಆಕುಕ/739/ಹೆಚ್‌ಎಸ್‌ಹೆಚ್‌/2022 ದಿನಾಂಕ 12-09-2022ರಲ್ಲಿ ವರ್ಗಾವಣೆಗೊಳಿಸಲಾಗಿತ್ತು. ಸ್ಥಳ ನಿಯುಕ್ತಿಗೊಳಿಸಿರುವುದಿಲ್ಲ. ಆದ್ದರಿಂದ ಇವರನ್ನು ಖಾಲಿ ಇರುವ ಡಿಡಿ (ಪ್ಲಾನಿಂಗ್‌) ಆರೋಗ್ಯ ಬೆಂಗಳೂರು ಅಥವಾ ಡಿಡಿ (ಬ್ಯಾಕ್ಟಿರಿಯಾಲಜಿ) ಪಿಎಚ್‌ಐ ಕೆ ಆರ್‌ ವೃತ್ತ ಹುದ್ದೆಗೆ ವರ್ಗಾಯಿಸಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು 2022ರ ಸೆ.13ರಂದು ನಡವಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದ್ದರು.

 

ಇದನ್ನು ಪರಿಶೀಲಿಸಿದ ನಂತರ ಅದೇ ನಡವಳಿಯಲ್ಲಿ ‘ ‘ಮುಂದುವರಿಯುವುದು’ ಎಂದು ಷರಾ ಬರೆದಿದ್ದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದ ಭ್ರಷ್ಟಾಚಾರ ಅರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೈ ಎಸ್‌ ಪಾಟೀಲ್‌ ಅವರು ಸಮಿತಿ ರಚಿಸಿ ತನಿಖೆಗೆ ಆದೇಶಿಸಿದ್ದರು. ಈ ಮಧ್ಯೆ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಲಾಗಿತ್ತಾದರೂ ಯಾವುದೇ ಸ್ಥಳ ನಿಯುಕ್ತಿಗೊಳಿಸಿರಲಿಲ್ಲ. ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸೂಚಿಸಬೇಕಿದ್ದ ಕಾನೂನು ಸಚಿವರೇ ಆರೋಪಿತ ಅಧಿಕಾರಿಗೆ ಸ್ಥಳ ನಿಯುಕ್ತಿಗೊಳಿಸಲು ಶಿಫಾರಸ್ಸು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಪ್ರಕರಣವೇನು?

 

ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣವನ್ನು ಸಂದಾಯ ಮಾಡಬೇಕಿತ್ತು. ಈ ಹಣವನ್ನು ಖಾತೆ ಸಂಖ್ಯೆ 200101002676ಗೆ ಸಂದಾಯವಾಗಬೇಕಿತ್ತು. ಆದರೆ ಅರ್ಧಕೋಟಿಗೂ ಹೆಚ್ಚು ಮೊತ್ತವನ್ನು ಸಂದಾಯ ಮಾಡದೇ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

 

2018ರಲ್ಲಿ 24,12,863 ರು., 2019ರಲ್ಲಿ 18, 33,560 ರು., 2020ರಲ್ಲಿ 290161, 2021ರಲ್ಲಿ 1210063 ಸೇರಿ ಒಟ್ಟು 55,46,647 ರು. ದುರ್ಬಳಕೆ ಆಗಿದೆ ಎಂದು ಹೇಳಲಾಗಿತ್ತು. ಇದರಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಟಿ ಎ ವೀರಭದ್ರಯ್ಯ ಹಾಗೂ ವಿಷಯ ನಿರ್ವಾಹಕ ಹರೀಶ್‌ ಇವರು ಭಾಗಿಯಾಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿದ್ದರು. ಈ ಸಂಬಂಧ ಜಿಲ್ಲಾಧಿಕಾರಿ ವೈ ಎಸ್‌ ಪಾಟೀಲ್‌ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಕೆ ಚನ್ನಬಸಪ್ಪ, ಜಿ.ಪಂ ಲೆಕ್ಕಾಧಿಕಾರಿ ನಾಗೇಶ್‌, ಮಹಾನಗರಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಗುರಬಸವೇಗೌಡ, ಶಿರಸ್ತದಾರ್‌ ವಸಂತರಾಜು ಅವರನ್ನು ಒಳಗೊಂಡ ತನಿಖಾ ಸಮಿತಿಯನ್ನು ರಚಿಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts