ಸಮವಸ್ತ್ರ ವಿತರಣೆಯಲ್ಲಿ ಬಹುಕೋಟಿ ನಷ್ಟ; 32,176 ಮಂದಿ ಅಧಿಕಾರಿ, ನೌಕರರ ವಿರುದ್ಧ ಕ್ರಮಕ್ಕೆ ಹಿಂದೇಟು

ಬೆಂಗಳೂರು; ವಿದ್ಯಾವಿಕಾಸ ಯೋಜನೆಯಡಿಯಲ್ಲಿ ವಿತರಿಸಿದ್ದ ಒಟ್ಟು ಸಮವಸ್ತ್ರಗಳ ಪೈಕಿ 6 ಲಕ್ಷ ಸೆಟ್‌ಗಳ ವ್ಯತ್ಯಾಸಕ್ಕೆ ಕಾರಣರು ಎಂಬ ಆರೋಪಕ್ಕೆ ಗುರಿಯಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರುಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರುಗಳು ಸೇರಿದಂತೆ ಒಟ್ಟು 32,176 ಮಂದಿ ವಿರುದ್ಧ ಕ್ರಮ ಜರುಗಿಸುವುದರಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಹಿಂದೆ ಸರಿದಿದೆ.

 

ಶೇ. 3ರಷ್ಟರ ಪ್ರಮಾಣದಲ್ಲಿ ಮಕ್ಕಳಿಗೆ ಸಮವಸ್ತ್ರವು ಪೂರೈಕೆಯಾಗಿದೆ. ದುರ್ಬಳಕೆಗೆ ಅವಕಾಶವಿರುವುದಿಲ್ಲ. ಆದ್ದರಿಂದ ಸಮವಸ್ತ್ರ ವಿತರಣೆಯಲ್ಲಿ ಯಾವುದೇ ದುರುಪಯೋಗವಾಗಿಲ್ಲ,’ ಎಂದು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.

 

2022-23ನೇ ಸಾಲಿನಲ್ಲಿ ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಗುವುದು ಎಂದು ಸಚಿವ ಬಿ ಸಿ ನಾಗೇಶ್‌ ಅವರು ಭರವಸೆ ನೀಡಿದ್ದಾರಾದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ತಲುಪಿಲ್ಲ ಎಂದು ಗೊತ್ತಾಗಿದೆ. ಇದರ ಬೆನ್ನಲ್ಲೇ ಹಿಂದಿನ ವರ್ಷಗಳಲ್ಲಿ ಸಮವಸ್ತ್ರಗಳ ಬೇಡಿಕೆ ಪಟ್ಟಿ ಸಲ್ಲಿಸುವಲ್ಲಿ ವಿಳಂಬ ಎಸಗಿ ಆ ನಂತರ ಬಹುಕೋಟಿ ನಷ್ಟಕ್ಕೆ ಕಾರಣರಾಗಿದ್ದ ಅಧಿಕಾರಿ, ನೌಕರರ ವಿರುದ್ಧ ಕ್ರಮಕೈಗೊಳ್ಳುವುದು ಕಷ್ಟಸಾಧ್ಯ ಎಂದು ನೀಡಿರುವ ಲಿಖಿತ ಸಮಜಾಯಿಷಿಯು ಚರ್ಚೆಗೆ ಗ್ರಾಸವಾಗಿದೆ.

 

ವಿದ್ಯಾವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೆ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಂದು ಜೊತೆ ಸಮವಸ್ತ್ರ ವಿತರಣೆ ಮಾಡಲು ಡೈಸ್‌ ಡಾಟಾ ಆಧರಿಸಿ ಡಿಡಿಪಿಐ, ಬಿಇಒ ಮತ್ತು ಮುಖ್ಯ ಶಿಕ್ಷಕರುಗಳು ಸಿದ್ಧಪಡಿಸಿದ್ದ ಬೇಡಿಕೆ ಪಟ್ಟಿಯಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು. ಇದರಿಂದ ಬಹುಕೋಟಿ ರುಪಾಯಿಗಳಷ್ಟು ನಷ್ಟವಾಗಿದೆ ಎಂದು ಸಿಎಜಿ  ಆಕ್ಷೇಪಗಳನ್ನು ವ್ಯಕ್ತಪಡಿಸಿತ್ತು. ವರದಿ ಸಲ್ಲಿಸಿ ಹಲವು ವರ್ಷಗಳಾದರೂ ಕ್ರಮ ಕೈಗೊಳ್ಳಲು ವಿಫಲವಾಗಿರುವ  ಸರ್ಕಾರವು ಬಹುಕೋಟಿ ನಷ್ಟಕ್ಕೆ ಕಾರಣರಾದ ಮುಖ್ಯಶಿಕ್ಷಕರು, ಬಿಇಒ, ಡಿಡಿಪಿಐಗಳ ರಕ್ಷಣೆಗೆ ನಿಂತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.  ಈ ಕುರಿತು ‘ದಿ ಫೈಲ್‌’ಗೆ ಕೆಲ ದಾಖಲೆಗಳು ಲಭ್ಯವಾಗಿವೆ.

 

‘ಇದರಲ್ಲಿ ಶೇ.3ರಷ್ಟು ಅಂದರೆ 6 ಲಕ್ಷ ಸೆಟ್‌ಗಳ ವ್ಯತ್ಯಾಸ ಉಂಟಾಗಿದೆ. ಇದು 26 ಜಿಲ್ಲೆಗಳ ದಾಸ್ತಾನಿನಲ್ಲಿ ವ್ಯತ್ಯಾಸವಾಗಿದ್ದು ಆ ಎಲ್ಲಾ 26 ಜಿಲ್ಲೆಗಳ 26 ಉಪ ನಿರ್ದೇಶಕರು/150 ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಅಂದಾಜು 32,000 ಶಾಲೆಗಳಲ್ಲಿನ 32,000 ಮುಖ್ಯ ಶಿಕ್ಷಕರ ಮೇಲೆ ಕ್ರಮ ಜರುಗಿಸುವುದು ಕಷ್ಟ ಸಾಧ್ಯವಾಗಿದೆ,’ ಎಂದು ಇಲಾಖೆ ನಿರ್ಧರಿಸಿದೆಯಲ್ಲದೆ   ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಲಿಖಿತ ಉತ್ತರವನ್ನು ಒದಗಿಸಿದೆ. ಇದರ ಪ್ರತಿಯು  ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉತ್ತರದ ಪ್ರತಿ

 

ಡೈಸ್‌ ಅಂಕಿ ಅಂಶದಲ್ಲಿ ಬೇಡಿಕೆ ಪೂರೈಕೆ ವ್ಯತ್ಯಾಸ, ಶಾಲೆಯಿಂದ ಹೊರುಗಲಿದ ಮಕ್ಕಳಿಗೆ, ಅತಿವೃಷ್ಟಿ ಇತರೆ ಸಂದರ್ಭಗಳಲ್ಲಿ ವಿತರಣೆ, ದಾಖಲಾದ ಮಕ್ಕಳು ಸಮವಸ್ತ್ರ ಪಡೆದು ಶಾಲೆಯಿಂದ ವರ್ಗಾವಣೆ, ಭೌತಿಕವಾಗಿ ಬೆಳವಣಿಗೆ ಹೆಚ್ಚಿರುವ ಮಕ್ಕಳಿಗೆ ಅಳತೆ ಕಡಿಮೆ ಆಗಿತ್ತು. ಹೀಗಾಗಿ 2 ಸೆಟ್‌ ಸಮವಸ್ತ್ರಗಳ ವಿತರಣೆ ಆಗಿರುವ ಸಾಧ್ಯತೆ ಇದೆ ಎಂದು ಇಲಾಖೆಯು ಸಮಜಾಯಿಷಿ ನೀಡಿದೆ ಎಂದು ತಿಳಿದು ಬಂದಿದೆ.

 

2015-16ನೇ ಸಾಲಿನಿಂದ 2018-19ನೇ ಸಾಲಿನವರೆಗೆ ಸರಬರಾಜು ಮತ್ತು ಹಂಚಿಕೆಯನ್ನು ಪರಿಗಣನೆಗೆ ತೆಗೆದುಕೊಂಡು 2018-19ರ ಅಂತ್ಯಕ್ಕೆ ಲೆಕ್ಕಚಾರ ಮಾಡಿ ತಯಾರಿಸಿದ್ದ ಕೋಷ್ಟಕದ ಪ್ರಕಾರ 4,03,936 ಸೆಟ್‌ಗಳು ದಾಸ್ತಾನಿನಲ್ಲಿ ಇಲ್ಲದಿರುವುದು ಕಂಡು ಬಂದಿದೆ. ನಾಲ್ಕು ವರ್ಷಗಳ ಸರಬರಾಜಿನಲ್ಲಿ ಪ್ರತಿ ವರ್ಷ ಅಂದಾಜು 48 ಲಕ್ಷ ಮಕ್ಕಳಿಗೆ ಅಂದರೆ 4 ವರ್ಷಗಳಲ್ಲಿ 1.92 ಕೋಟಿ ಮಕ್ಕಳಿಗೆ 1.92 ಕೋಟಿ ಸಮವಸ್ತ್ರ ಸರಬರಾಜು ಮಾಡಲಾಗಿತ್ತು.

 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕರು 89, 456 ಮಕ್ಕಳಿಗೆ ಸಮವಸ್ತ್ರ ವಿತರಿಸಲು ಬೇಡಿಕೆ ಸಲ್ಲಿಸಿದ್ದರು. ಆದರೆ ಅಂದು ಲಬ್ಯವಿದ್ದ ಡೈಸ್‌ ವರದಿಗಿಂತ ಇದು 16,860 ಹೆಚ್ಚಾಗಿತ್ತು. ಆ ಮಸಯದಲ್ಲಿ ಲಭ್ಯವಿದ್ದ ಡೈಸ್‌ ಮಾಹಿತಿ ಪ್ರಕಾರ ಮಕ್ಕಳ ಸಂಖ್ಯೆಯು 72,596 ಇದ್ದರೂ 89,456 ಮಕ್ಕಳಿಗೆ ಸಮವಸ್ತ್ರ ಸರಬರಾಜು ಮಾಡಲು ಕಾರ್ಯಾದೇಶ ನೀಡಲಾಗಿತ್ತು.

 

ಬಾಗಲಕೋಟೆ ಜಿಲ್ಲೆಯ ಉಪನಿರ್ದೇಶಕರು 2,79,107 ಮಕ್ಕಳಿಗೆ ಸಮವಸ್ತ್ರ ವಿತರಿಸಲು ಬೇಡಿಕೆ ಸಲ್ಲಿಸಿದ್ದರು. ಆದರೆ ಡೈಸ್‌ ವರದಿಗಿಂತ 51,141 ಹೆಚ್ಚಾಗಿತ್ತು. ಆ ಸಮಯದಲ್ಲಿ ಲಭ್ಯವಿದ್ದ ಡೈಸ್‌ ಮಾಹಿತಿ ಪ್ರಕಾರ ಮಕ್ಕಳ ಸಂಖ್ಯೆಯು 2,27,933 ಇತ್ತು. ಆದರೆ 2,79,107 ಮಕ್ಕಳಿಗೆ ಸಮವಸ್ತ್ರ ಸರಬರಾಜು ಮಾಡಲು ಕಾರ್ಯಾದೇಶ ನೀಡಿದ್ದರು. ರಾಮನಗರದಲ್ಲಿಯೂ ಡೈಸ್‌ ವರದಿಗಿಂತ 2,317 ಹೆಚ್ಚಾಗಿತ್ತು. ಡೈಸ್‌ ಮಾಹಿತಿ ಪ್ರಕಾರ 77,473 ಮಕ್ಕಳಿದ್ದರೆ 78,702 ಮಕ್ಕಳಿಗೆ ಸಮವಸ್ತ್ರ ಸರಬರಾಜು ಮಾಡಲು ಆದೇಶ ಹೊರಡಿಸಲಾಗಿತ್ತು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಹಿತಿಯಿಂದ ತಿಳಿದು ಬಂದಿದೆ.

 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಡೈಸ್‌ ಮಾಹಿತಿ ಪ್ರಕಾರ 86,366 ಮಕ್ಕಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ವಾಸ್ತವದಲ್ಲಿ 83,753 ಮಕ್ಕಳಿದ್ದರು. ಇದು ಡೈಸ್‌ ವರದಿಗಿಂತ 2,737 ಕಡಿಮೆ ಇತ್ತು. ಧಾರವಾಡದಲ್ಲಿಯೂ ಡೈಸ್‌ ಮಾಹಿತಿ ಪ್ರಕಾರ 1,46,755 ಮಕ್ಕಳಿದ್ದರೆ 1,62,715 ಮಕ್ಕಳಿದ್ದಾರೆ ಎಂದು ಬೇಡಿಕೆ ಸಲ್ಲಿಸಲಾಗಿತ್ತು. ಇದು ಡೈಸ್‌ ವರದಿಗಿಂತ 9.028 ಹೆಚ್ಚಳ ತೋರಿಸಿ 1,55,783 ಮಕ್ಕಳಿಗೆ ಸಮವಸ್ತ್ರ ಸರಬರಾಜು ಮಾಡಲು ಕಾರ್ಯಾದೇಶ ನೀಡಲಾಗಿತ್ತು.

 

ಈ ಐದು ಜಿಲ್ಲೆಗಳಲ್ಲಿ ಕಂಡು ಬಂದಿರುವ ವ್ಯತ್ಯಾಸಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಮಜಾಯಿಷಿ ನೀಡಿದೆ. ‘ಈ ಹಿಂದಿನ ವರ್ಷಗಳಲ್ಲಿ ಕೆಡಿಪಿ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಶಾಲೆಗಳಿಗೆ ಸಮವಸ್ತ್ರ ಸರಬರಾಜು ಮಾಡಲಾಗಿದೆ. ಉಪ ನಿರ್ದೇಶಕರಿಂದ ಶೇ.5ರಿಂದ 8ರಷ್ಟು ಹೆಚ್ಚುವರಿ ಸಮವಸ್ತ್ರ ಬೇಡಿಕೆ ಪಟ್ಟಿ ಸಲ್ಲಿಕೆಯಾಗಿದೆ. ಅದರಂತೆ ಸಮವಸ್ತ್ರ ಸರಬರಾಜಾಗಿದೆ. ನಂತರ ಡೈಸ್‌ ಮಾಹಿತಿ ಮತ್ತು ಕೆಡಿಪಿ ಅಂಕಿ ಅಂಶಗಳಿಗೂ ವ್ಯತ್ಯಾಸ ಇರಬಹುದು,’ ಎಂದು ಸಮಜಾಯಿಷಿ ನೀಡಿರುವುದು ಗೊತ್ತಾಗಿದೆ.

 

ಕೆಲವು ಸಂದರ್ಭಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾಗದ ವಿದ್ಯಾರ್ಥಿಗಳು ಡೈಸ್‌ ಅಂಕಿ ಅಂಶದ ಸಂಗ್ರಹಣೆಗೆ ಪೂರ್ವದಲ್ಲಿಯೇ ಸರ್ಕಾರಿ ಶಾಲೆಗಳಿಂದ ದಾಖಲಾತಿಗಳನ್ನು ರದ್ದುಪಡಿಸಿಕೊಂಡು ಅನ್ಯ ಶಾಲೆಗಳಿಗೆ ಸೇರ್ಪಡೆಗೊಂಡಿರುವ ಸಾಧ್ಯತೆ ಹೆಚ್ಚಿದೆ. ಆ ಹೊತ್ತಿನವರೆಗೆ ವಿತರಣೆಯಾಗಿರುವ ಸಮವಸ್ತ್ರಗಳನ್ನು ಆ ವಿದ್ಯಾರ್ಥಿಗಳಿಂದ ಹಿಂಪಡೆಯುವುದು ಸಾಧ್ಯವಿಲ್ಲ. ಅದರೂ ಸಮವಸ್ತ್ರ ಸರಬರಾಜಿನಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸ ಇದೆ ಎಂದು ಇಲಾಖೆಯು ಒಪ್ಪಿಕೊಂಡಿದೆ.

 

ಅದೇ ರೀತಿ ಬೆಂಗಳೂರು ಉತ್ತರ ಸೇರಿದಂತೆ 26 ಜಿಲ್ಲೆಗಳಲ್ಲಿ 2015-16ರಿಂದ 2018-19ರವರೆಗೆ 8,25,815 ಸಮವಸ್ತ್ರಗಳ ಸೆಟ್‌ಗಳು ಉಳಿಯಬೇಕಾಗಿತ್ತು. ಪ್ರಸ್ತುತ 1,97,851 ಸಮವಸ್ತ್ರಗಳ ಸೆಟ್‌ಗಳು ಉಳಿದಿವೆ. ಬಾಕಿ 6,27,964 ಸಮವಸ್ತ್ರಗಳ ಸೆಟ್‌ಗಳು ವಾಸ್ತವದಲ್ಲಿ ದಾಸ್ತಾನಿನಲ್ಲಿ ಇಲ್ಲ. ಮೈಸೂರು ಸೇರಿದಂತೆ 8 ಜಿಲ್ಲೆಗಳಲ್ಲಿ 24,028 ವ್ಯತ್ಯಾಸವಿತ್ತು ಎಂದು ತಿಳಿದು ಬಂದಿದೆ.

 

ಸರಕಾರಿ ಶಾಲೆಗಳಲ್ಲಿ ನೋಂದಣಿಯಾದ ವಿದ್ಯಾರ್ಥಿಗಳ ಸಂಖ್ಯೆಗಿಂತಲೂ 2015-16 ಹಾಗೂ 2016-17ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ಸಮವಸ್ತ್ರ ವಿತರಿಸಲಾಗಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ 11.33 ಕೋಟಿ ರೂ. ನಷ್ಟವಾಗಿದೆ. ಈ ಅವ್ಯವಹಾರದ ಬಗ್ಗೆ ಇಲಾಖೆಯು ಮೌನವಹಿಸಿತ್ತು ಎಂಬುದು ಸಿಎಜಿ ಲೆಕ್ಕ ಪರಿಶೋಧನೆಯ ವೇಳೆ ಬಯಲಾಗಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts