Sunday | March 22, 2026 |

ಬೊಕ್ಕಸಕ್ಕೆ 495 ಕೋಟಿ ನಷ್ಟ ಪ್ರಕರಣದಲ್ಲಿ ಐಎಎಸ್‌ ರಾಜೇಶ್‌ಗೌಡ ವಿರುದ್ಧ ಕ್ರಮವಿಲ್ಲವೇಕೆ?

Support THE-FILE

spot_img

ಬೆಂಗಳೂರು; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ಬಡಾವಣೆಯಲ್ಲಿ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಮತ್ತಿತರರಿಗೆ ಪರ್ಯಾಯ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಬೀಸಿದ ಚಾಟಿ ಏಟಿಗೆ ತತ್ತರಿಸಿದ ರಾಜ್ಯ  ಬಿಜೆಪಿ ಸರ್ಕಾರವು  ಆಯುಕ್ತ ಎಂ ಬಿ ರಾಜೇಶ್‌ಗೌಡ  ಅವರನ್ನು ಎತ್ತಂಗಡಿ ಮಾಡಿದೆಯಾದರೂ ಗ್ರಾಮೀಣ ಮೂಲಸೌಕರ್ಯ ಯೋಜನೆಗಳ (ಆರ್‌ಐಡಿಎಫ್‌) ಅನುಷ್ಟಾನದಲ್ಲಿ ಆಡಳಿತ ನಿಯಮಗಳ ಉಲ್ಲಂಘನೆ ಮತ್ತು ಏರಿಕೆ ವೆಚ್ಚದಲ್ಲಿ ಗಣನೀಯ ಹೆಚ್ಚಳ ಮತ್ತು ಇದರಿಂದ ಸರ್ಕಾರದ ಬೊಕ್ಕಸಕ್ಕೆ 495 ಕೋಟಿ ರುಪಾಯಿನಷ್ಟು ಆರ್ಥಿಕ ನಷ್ಟ   ಸಂಭವಿಸಿರುವ ಪ್ರಕರಣದಲ್ಲಿ ಆರೋಪಕ್ಕೆ ಒಳಗಾಗಿರುವ ಇದೇ ರಾಜೇಶ್‌ಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದೆ.

 

ಬಿಡಿಎನ ಹಾಲಿ ಆಯುಕ್ತ ಐಎಎಸ್‌ ಅಧಿಕಾರಿ ರಾಜೇಶ್‌ಗೌಡ, ಚೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಜಯ ವಿಭವಸ್ವಾಮಿ ಮತ್ತು ಒಬ್ಬ ಕೆಎಎಸ್‌ ಅಧಿಕಾರಿ ಸೇರಿದಂತೆ ಒಟ್ಟು 8 ಅಧಿಕಾರಿಗಳ ವಿರುದ್ಧ ಸಹಕಾರ ಇಲಾಖೆ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

 

ಅಲ್ಲದೆ ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾಪಿಸಿಲ್ಲ. ಸರ್ಕಾರದ ಬೊಕ್ಕಸಕ್ಕೆ ತೀವ್ರ ಆರ್ಥಿಕ ನಷ್ಟಕ್ಕೆ ಕಾರಣರಾಗಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಈ ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನೂ ತಯಾರಿಸಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸಲು ಸೂಚಿಸಿ 6 ತಿಂಗಳಾದರೂ ಈವರೆಗೂ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ. ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಕೂಡ ಈ ಕುರಿತು ಗಮನಹರಿಸಿಲ್ಲ ಎಂದು ಗೊತ್ತಾಗಿದೆ.

 

2015-16ರಲ್ಲಿ ರಾಜ್ಯದಲ್ಲಿ ಜಾರಿಗೊಂಡಿದ್ದ ಡಬ್ಲ್ಯೂಐಎಫ್‌, ಎನ್‌ಡಬ್ಲ್ಯೂಎಸ್‌ ಮತ್ತು ಗ್ರಾಮೀಣ ಮೂಲಸೌಕರ್ಯಗಳ ಯೋಜನೆ ಅನುಷ್ಠಾನದಲ್ಲಿ ಆಡಳಿತ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಬಿಡಿಎ ನ ಹಾಲಿ ಆಯುಕ್ತ ಐಎಎಸ್‌ ಅಧಿಕಾರಿ ರಾಜೇಶ್‌ಗೌಡ ಮತ್ತು ಮತ್ತೊಬ್ಬ ಐಎಎಸ್‌ ಅಧಿಕಾರಿ ಜಯ ವಿಭವಸ್ವಾಮಿ ಸೇರಿದಂತೆ ಒಟ್ಟು  8  ಅಧಿಕಾರಿಗಳು ಗುರಿಯಾಗಿದ್ದರು.

 

ಪ್ರಕರಣದ ವಿವರ

 

ರಾಜ್ಯದ 60 ಉಗ್ರಾಣ ಕೇಂದ್ರಗಳಲ್ಲಿ 11.14 ಲಕ್ಷ ಮೆಟ್ರಿಕ್ ಸಾಮರ್ಥ್ಯದ ಉಗ್ರಾಣಗಳು ಹಾಗೂ ಮೂಲಭೂತ ಸೌಕರ್ಯ ಕಾಮಗಾರಿ ಅನುಷ್ಠಾನಗೊಳಿಸುವ 724.81 ಕೋಟಿ ರು ಮೊತ್ತದ ಯೋಜನೆಯಲ್ಲಿ 495 ಕೋಟಿ ರು.ಗೂ ಅಧಿಕ ನಷ್ಟವಾಗಿತ್ತು.

 

ಉಗ್ರಾಣಗಳ ಸಾಮರ್ಥ್ಯ ಅಭಿವೃದ್ಧಿ ಕಾಮಗಾರಿಗೆ 2016ರ ಮಾರ್ಚ್‌ 3 ರಂದು ಕರೆದಿದ್ದ ಟೆಂಡರ್‌ನಲ್ಲಿ ಸೋಮ ಎಂಟರ್‌ಪ್ರೈಸೆಸ್‌ ಟೆಂಡರ್‌ ಪ್ರೀಮಿಯಂ ದರದ ಶೇ.7.673ರಂತೆ ಒಟ್ಟು 795.97 ಕೋಟಿ ರು. ವೆಚ್ಚದಲ್ಲಿ 9 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು 2016ರ ಮೇ 17ರಂದು ಹಿಂದಿನ ಕಾಂಗ್ರೆಸ್‌ ಸರ್ಕಾರವು ಕಾರ್ಯಾದೇಶ ನೀಡಿತ್ತು.

 

ಕಪ್ಪು ಮಣ್ಣು ಪ್ರದೇಶ, ಭೂ ಜಾಗ ಬದಲಿಸಿದ ಕಾರಣ ಹೆಚ್ಚುವರಿಯಾಗಿ ತಳಪಾಯದ ಕಾಮಗಾರಿಗಳ ನಿರ್ವಹಣೆಯಿಂದ ಹಾಗೂ ಸ್ಥಳೀಯ ಕಾರಣಗಳಿಂದ ವಿವಿಧ ವಿನ್ಯಾಸಗಳ ಅಳವಡಿಕೆ ಸೆರಿದಂತೆ ಇನ್ನಿತರ ಅಂಶಗಳಿಂದಾಗಿ ಯೋಜನಾ ಮೊತ್ತದಲ್ಲಿ ಏರಿಕೆಯಾಗಿತ್ತು. ಅಧಿಕಾರಿಗಳು ಮೊದಲೇ ಸರಿಯಾಗಿ ಅಂದಾಜಿಸಿದ್ದರೆ ಯೋಜನಾ ಮೊತ್ತದಲ್ಲಿ ಏರಿಕೆಯಾಗುತ್ತಿರಲಿಲ್ಲ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನಾ ಮೊತ್ತದಲ್ಲಿ ಏರಿಕೆಯಾಗಿತ್ತು ಎಂದು ತಿಳಿದು ಬಂದಿದೆ.

ಉಗ್ರಾಣಕ್ಕೆ ಬಾಯಿ ಹಾಕಿದ ಐಎಎಸ್‌ ಹೆಗ್ಗಣಗಳು; 495 ಕೋಟಿ ನಷ್ಟದ ಹೊಣೆ ಹೊರುವರ್ಯಾರು?

ಈ ಮಧ್ಯೆ ಯೋಜನೆಯ ಅನುಷ್ಠಾನದ ಕುರಿತು ಗುತ್ತಿಗೆದಾರರಾದ ಸೋಮ ಎಂಟರ್‌ಪ್ರೈಸೆಸ್‌ ಲಿಮಿಟೆಡ್‌ ಅರ್ಬಿಟ್ರೇಷನ್‌ನಲ್ಲಿ ದಾವೆ ಹೂಡಿತ್ತು. ನಿಗಮದ ವತಿಯಿಂದ 435.00 ಕೋಟಿ ರು.ಗಳಿಗೆ ಸೋಮಾ ಎಂಟರ್‌ಪ್ರೈಸೆಸ್‌ ಕ್ಲೈಮ್‌ ಮಾಡಿತ್ತು. ಇದಕ್ಕೆ ಸಂಬಂಧಪಟ್ಟಂತೆ ನಿಗಮಕ್ಕೆ ಆಗಿರುವ ಆರ್ಥಿಕ ನಷ್ಟದ ಕುರಿತು ಪ್ರಾರಂಭಿಕ ಹಂತದಲ್ಲಿ 395.00 ಕೋಟಿ ರು.ಗಳಿಗೆ ಗುತ್ತಿಗೆದಾರರಿಂದ ಪಡೆಯಲು ಕೌಂಟರ್‌ ಕ್ಲೈಮ್‌ ಮಾಡಲಾಗಿತ್ತು.

 

ಯೋಜನೆ ಕಾಮಗಾರಿಯಲ್ಲಿನ ಅನುಷ್ಠಾನದಲ್ಲಿನ ವಿಳಂಬದಿಂದಾಗಿಯೇ 265 ಕೋಟಿ ರು. ಹೆಚ್ಚುವರಿಯಾಗಿತ್ತು. ಬಾಡಿಗೆಯಿಂದ ಬರಬೇಕಿದ್ದ ಆದಾಯದಲ್ಲಿ 48.35 ಕೋಟಿ ರು. ಸೇರಿದಂತೆ ಒಟ್ಟು 495.27 ಕೋಟಿ ರು. ನಷ್ಟವಾಗಿತ್ತು ಎಂದು ಗೊತ್ತಾಗಿದೆ. ಯೋಜನಾ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ಆಧರಿಸಿ ಗುತ್ತಿಗೆದಾರರು 01ರಿಂದ 33ನೇ ಐಪಿಎ ಬಿಲ್‌ಗಳವರೆಗೆ 678.68 ಕೋಟಿಗೆ ಬಿಲ್‌ ಸಲ್ಲಿಸಿತ್ತು. ನಿಗಮದ ವಲಯವಾರು ಅಭಿಯಂತರರು ಐಟಂವಾರು ಪರಿಮಾಣಗಳನ್ನು ಪರಿಶೀಲಿಸಿ 668.65 ಕೋಟಿಗಳಿಗೆ ದೃಢೀಕರಿಸಲಾಗಿತ್ತು.

 

ನಿಗಮವು ಕಾಮಗಾರಿಗಳ ವಾಸ್ತವಿಕ ನಿರ್ವಹಣೆಗೆ ಸಂಬಂಧಿಸಿದಂತೆ 668.65 ಕೋಟಿ ರು.ಗಳನ್ನು ಪಾವತಿಸಬೇಕಾಗಿದ್ದು ಈ ಪೈಕಿ 612.18 ಕೋಟಿ ರು.ಗಳನ್ನು ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿತ್ತು. ಬಾಕಿ ಮೊತ್ತ 56.46 ಕೋಟಿಗಳನ್ನು ನಿಯಮಗಳ ರೀತಿ ಶಾಸನಬದ್ಧ ಕಡಿತಗಳು ಮತ್ತು ಎಲ್‌ಡಿಗಳಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಅದರಂತೆ ಗುತ್ತಿಗೆದಾರರಿಗೆ ಯಾವುದೆ ಪಾವತಿ ಬಾಕಿ ಇಲ್ಲವೆಂಬ ವರದಿಯನ್ನು ಆರ್ಬಿಟ್ರೇಷನ್‌ ಟ್ರಿಬ್ಯೂನಲ್‌ಗೆ ಸಲ್ಲಿಸಲಾಗಿತ್ತು ಎಂದು ತಿಳಿದು ಬಂದಿದೆ.

 

ನಿರ್ಮಾಣ ಸಂದರ್ಭದಲ್ಲಿ ಜಾಗಗಳ ಭೌಗೋಳಿಕ ಲಕ್ಷಣಗಳ ಆಧಾರದ ಮೇಲೆ ನಿರ್ಮಾಣ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಐಟಂವಾರು ಪರಿಮಾಣಗಳು ವ್ಯತ್ಯಾಸವಾಗಿತ್ತು. ಅನುಮೋದಿತ ಅಂದಾಜು ಪಟ್ಟಿಯಲ್ಲಿ ಅವಕಾಶ ಕಲ್ಪಿಸದೇ ಇರುವ ಕೆಲವು ಹೆಚ್ಚುವರಿ ಐಟಂಗಳನ್ನು ಉಪಯೋಗಿಸಿಕೊಂಡು ನಿರ್ಮಾಣ ಮಾಡಿದ್ದರಿಂದಾಗಿಯೇ ಯೋಜನಾ ಮೊತ್ತವು ಹೆಚ್ಚುವರಿಯಾಗಿತ್ತು.

 

2013-14, 2014-15, 2015-16ನೆ ಸಾಲಿನ ಡಬ್ಲ್ಯೂಐಎಫ್‌, ಎನ್‌ಡಬ್ಲ್ಯೂಎಸ್‌ ಯೋಜನೆಯಡಿಯಲ್ಲಿ ನಬಾರ್ಡ್‌ ಸಂಸ್ಥೆಯಿಂದ 615.78 ಕೋಟಿ ಸಾಲವನ್ನು ಸರ್ಕಾರದ ಖಾತರಿಯೊಂದಿಗೆ ಪಡೆಇದತ್ತು. 2015-16ನೇ ಸಾಲಿನ ನಿರ್ಮಾಣ ಕಾಮಗಾರಿಯನ್ನು ವಹಿಸಿಕೊಂಡಿದ್ದ ಸೋಮಾ ಎಂಟರ್‌ಪ್ರೈಸೆಸ್‌ ಕರಾರು ಒಪ್ಪಂದದ ಪ್ರಕಾರ ಕಾಮಗಾರಿಯನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಬಾಡಿಗೆ ಆದಾಯದಲ್ಲಿಯೂ ಖೋತಾ ಆಗಿತ್ತು. ಅಲ್ಲದೆ ಎರಡು ವರ್ಷದ ಮೊರಾಟರಿಯಮ್‌ ಅವಧಿ ಮುಗಿದ ನಂತರ ಸಾಲ ಮರುಪಾವತಿಯ ಷೆಡ್ಯೂಲ್‌ 2019-20ರಿಂದ ಪ್ರಾರಂಭವಾಗಿತ್ತು. ಉಗ್ರಾಣಗಳ ನಿರ್ಮಾಣ ಕಾಮಗಾರಿಯು ಪೂರ್ಣಗೊಳ್ಳದಿರುವ ಕಾರಣ ನಿರೀಕ್ಷೆಯಂತೆ ಸಂಗ್ರಹಣಾ ಶುಲ್ಕ ರೂಪದಲ್ಲಿ ನಿಗಮಕ್ಕೆ ಆದಾಯ ಪಡೆಯಲು ಸಾಧ್ಯವಾಗಿಲ್ಲ ಎಂಬುದು ಗೊತ್ತಾಗಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ ಆರ್‌ ಬೆನಕನಹಳ್ಳಿ ಅವರು ವರದಿ ನೀಡಿದ್ದರು. ‘ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೇ ವಿಳಂಬ ಮಾಡಿದ್ದರಿಂದ ಅಭಿವೃದ್ಧಿ ಕುಂಠಿತವಾಗಿತ್ತಲ್ಲದೆ ಬೊಕ್ಕಸಕ್ಕೆ ತೀವ್ರ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದರು. ಏರಿಕೆ ವೆಚ್ಚವನ್ನು ಶೇ.50ಕ್ಕಿಂತಲೂ ಹೆಚ್ಚಳಗೊಳಿಸಿದ್ದರು. ಈ ಪ್ರಕರಣದಲ್ಲಿ 8 ಅಧಿಕಾರಿಗಳು ಭಾಗಿಯಾಗಿದ್ದಾರೆ. ಇದೊಂದು ಗಂಭೀರ ದುರ್ನಡತೆ,’ ಎಂದು ಬೆನಕನಹಳ್ಳಿ ಅವರು ವರದಿಯಲ್ಲಿ ಉಲ್ಲೇಖಿಸಿದ್ದರು.

 

ಇದನ್ನಾಧರಿಸಿ ಬಿಡಿಎ ಆಯುಕ್ತ ಐಎಎಸ್‌ ಅಧಿಕಾರಿ ರಾಜೇಶ್‌ಗೌಡ, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಐಎಎಸ್‌ ಅಧಿಕಾರಿ ಜಯ ವಿಭವಸ್ವಾಮಿ, ಕೆಎಎಸ್‌ ಅಧಿಕಾರಿ ಡಾ ಎನ್‌ ನವೀನ್‌ಕುಮಾರ್‌ ರಾಜು, ಕಾರ್ಯಪಾಲಕ ಅಭಿಯಂತರ ಹನುಮಂತರಾಯಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಅರಣಿ ಗಿರೀಶ್‌, ಮಲ್ಲಿಕಾರ್ಜುನ ಆಲೀಪುರ, ಸಿ ಎಸ್‌ ಹೆಗಡೆ ಮತ್ತು ಸಿ ಎಸ್‌ ಗಾಂಜಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಡಾ ಆನಂದ ಕೆ ಅವರು ಸಹಕಾರ ಇಲಾಖೆಗೆ 2021ರ ಆಗಸ್ಟ್‌ 17ರಂದು ಪತ್ರ ಬರೆದಿದ್ದರು.

 

ಇಬ್ಬರು ಐಎಎಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-1)ಗೆ ಪ್ರಸ್ತಾಪ ಸಲ್ಲಿಸಬೇಕು. ಕೆಎಎಸ್‌ ಅಧಿಕಾರಿ ಮತ್ತು ಉಳಿದ 4 ಮಂದಿ ಅಧಿಕಾರಿಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಜಂಟಿ ಇಲಾಖೆ ವಿಚಾರಣೆ ಕೈಗೊಳ್ಳಲು ಅನುವಾಗುವಂತೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದು ಇಲಾಖೆ ಅನುಮೋದನೆಯೊಂದಿಗೆ ಕರಡು ದೋಷಾರೋಪಣೆ ಪಟ್ಟಿ ತಯಾರಿಸಬೇಕು ಎಂದು 2021ರ ಮಾರ್ಚ್‌ ಮತ್ತು ಮೇ 25ರಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಕೋರಿತ್ತು,’ ಎಂಬ ಮಾಹಿತಿ ಪತ್ರದಿಂದ ಗೊತ್ತಾಗಿದೆ.

 

ಕಳೆದ ಮಾರ್ಚ್‌ ಮತ್ತು ಮೇ ತಿಂಗಳಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪತ್ರ ಬರೆದಿದ್ದರೂ ಸಹಕಾರ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌ ಜಯರಾಮ್‌ ಅವರಿಗೆ ಪತ್ರ ಬರೆದಿದ್ದಾರೆ.

ಉಗ್ರಾಣವನ್ನೇ ಮುಕ್ಕಿದ ಐಎಎಸ್‌ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳದೇ 1,479 ಕೋಟಿ ನೆರವಿಗೆ ಪ್ರಸ್ತಾವನೆ ಸಲ್ಲಿಕೆ

 

ಈ ಪತ್ರದ ಮೇಲೂ ಇಲಾಖೆಯು ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಸಹಕಾರ ಇಲಾಖೆಯು ಅದೇ ಯೋಜನೆಗೆ ಹೆಚ್ಚಿನ ಆರ್ಥಿಕ ನೆರವು ಕೋರಿ ಸಚಿವ ಸಂಪುಟಕ್ಕೆ  ಪ್ರಸ್ತಾವನೆ ಸಲ್ಲಿಸಿತ್ತು.

Hot this week

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

Topics

ಬೆಳೆ ಹವಾಮಾನ ನಿಗಾ ಸಭೆ ನಡೆಸಿಲ್ಲ, ಮಾಹಿತಿ ವ್ಯವಸ್ಥೆಯೂ ಇಲ್ಲ; ಸಿಎಜಿಯನ್ನೂ ತಪ್ಪುದಾರಿಗೆಳೆದ ಸರ್ಕಾರ

ಬೆಂಗಳೂರು;  ರಾಜ್ಯದಲ್ಲಿ ಬರ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಬೆಳೆ ಹವಾಮಾನ ನಿಗಾ...

ರಾಡಾರ್ ಸ್ಟ್ರೀಮ್‌ ಗೇಜ್‌, ವೈರ್‍‌ಲೆಸ್‌ ಸಾಧನ ಅಳವಡಿಕೆ; ನಡೆಯದ ತಾಂತ್ರಿಕ ಪರಿಶೀಲನೆ, 3.54 ಕೋಟಿ ವ್ಯರ್ಥ

ಬೆಂಗಳೂರು;  ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹದ ಮುನ್ನೆಚ್ಚರಿಕೆಗಾಗಿ 2.45 ಕೋಟಿ...

ಎಂ ಆರ್ ಸೀತಾರಾಂ ಕುಟುಂಬ ಸದಸ್ಯರ ವಿರುದ್ಧ ಭೂಕಬಳಿಕೆ ಆರೋಪ; ದೂರು ಮರೆಮಾಚಿತ್ತೇ ಕಂದಾಯ ಇಲಾಖೆ?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಅಕ್ಲೇನಹಳ್ಳಿ...

ನರೇಗಾ ಅಕ್ರಮ; 2 ವರ್ಷದಲ್ಲಿ 105.1 ಕೋಟಿ ದುರುಪಯೋಗ, 12.34 ಕೋಟಿಯಷ್ಟೇ ವಸೂಲು

  ಬೆಂಗಳೂರು; ಕಳೆದ ಮೂರು ವರ್ಷಗಳಲ್ಲಿ  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 64,806 ಪ್ರಕರಣಗಳಲ್ಲಿ...

ಚೆಮನೂರು ಬ್ಲಾಕ್‌ನಲ್ಲಿ ಗಣಿಗಾರಿಕೆ; ಅದಾನಿ ಸಮೂಹದ ಎಸಿಸಿಗೆ ಲೆಟರ್ ಆಫ್ ಇಂಟೆಂಟ್‌ ಕೊಡಲು ಗಣಿ ಇಲಾಖೆ ಉತ್ಸುಕ!

ಬೆಂಗಳೂರು; ಭವಿಷ್ಯದ ಸರ್ಕಾರಿ ಟೆಂಡರ್, ಹರಾಜು ಮತ್ತು ಗಣಿಗಾರಿಕೆ ಸಂಬಂಧಿತ ಪ್ರಕ್ರಿಯೆಗಳಲ್ಲಿ...

ರೋಹಿತ್ ವೇಮುಲ ಕಾಯ್ದೆ; ವ್ಯಾಖ್ಯಾನಗಳು ಅಸ್ಪಷ್ಟ, ಕಾನೂನು ಬಲವಿಲ್ಲ, ವಿಧೇಯಕವೇ ಅಪೂರ್ಣ

ಬೆಂಗಳೂರು; ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು...

ಗ್ರಾಮಠಾಣ ಜಮೀನು ಅದಲು-ಬದಲು; ಆರ್ಥಿಕ ಇಲಾಖೆ ಆಕ್ಷೇಪ ಬದಿಗೊತ್ತಿ ಎಂ ಆರ್ ಸೀತಾರಾಂ ಕುಟುಂಬದ ಬೆನ್ನಿಗೆ ನಿಂತ ಸರ್ಕಾರ

ಬೆಂಗಳೂರು; ಸರ್ಕಾರಿ ಭೂಮಿಗೆ ರಸ್ತೆಯ ಸಂಪರ್ಕ ಹೊಂದಿಲ್ಲದಿರುವ, ರಸ್ತೆ ಸಂಪರ್ಕ ಕಲ್ಪಿಸದೇ...

ಅದಾನಿ ಎಸಿಸಿ ಲಿಮಿಟೆಡ್‌ನಿಂದ ಅಕ್ರಮ ಗಣಿಗಾರಿಕೆ; ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಲೋಕಾ ತನಿಖೆಗೆ ಶಿಫಾರಸ್ಸು, ಕಡತಕ್ಕೆ ಧೂಳು

ಬೆಂಗಳೂರು;  ಕಲ್ಬುರ್ಗಿಯ ವಾಡಿಯಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್...

Related Articles

Popular Categories

error: Content is protected !!