ಬೆಂಗಳೂರು; ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಿಸಲು 132 ಕೋಟಿ ರು. ಬಿಡುಗಡೆ ಮಾಡಿ ಆದೇಶ ಹೊರಡಿಸಿರುವ ಸರ್ಕಾರವು ಕಳೆದ 5 ವರ್ಷಗಳ ಹಿಂದೆ ತಲಾ ವಿದ್ಯಾರ್ಥಿಗೆ ಬಿಡುಗಡೆ ಮಾಡಿದ್ದ ಮೊತ್ತವನ್ನೇ ನಮೂದಿಸಿ ಬಿಡುಗಡೆ ಮಾಡಿದೆ. ಪ್ರತಿಪಕ್ಷದ ಟೀಕೆ ಎದುರಿಸಲಾರದೇ ತರಾತುರಿಯಲ್ಲಿ ಹೊರಡಿಸಿದಂತಿರುವ ಈ ಆದೇಶವು ಶಿಕ್ಷಕರನ್ನು ದಾನಿಗಳು, ಖಾಸಗಿ ಸಂಸ್ಥೆಗಳ ಬಳಿ ಕೈಯೊಡ್ಡಲು ಪರೋಕ್ಷವಾಗಿ ಸೂಚಿಸಿದೆ.
ಅಲ್ಲದೆ ದಾನಿಗಳು, ಖಾಸಗಿ ಸಂಸ್ಥೆಗಳು ಈ ಉದ್ದೇಶಕ್ಕಾಗಿ ಹೆಚ್ಚುವರಿ ಹಣ ನೀಡಿದರೆ ಅದನ್ನು ಬಳಸಿಕೊಂಡು ಇನ್ನೂ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಿ ವಿತರಿಸಬಹುದು ಎಂದೂ ಆದೇಶದಲ್ಲಿ ಹೇಳಿರುವುದು ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್ ಖರೀದಿಸಲು ದಾನಿಗಳು ಮತ್ತು ಖಾಸಗಿ ಸಂಸ್ಥೆಗಳ ಬಳಿ ಶಿಕ್ಷಕರು ಕೈಯೊಡ್ಡುವ ಸ್ಥಿತಿಯನ್ನು ತಂದಿಟ್ಟಂತಾಗಿದೆ.
ಕಲಿಕಾ ಚೇತರಿಕೆ ಹಾಳೆಗಳನ್ನು ಜೆರಾಕ್ಸ್ ಮಾಡಿಸಲು ದಾನಿಗಳ ನೆರವು ಪಡೆಯಬೇಕು ಎಂದು ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದುಕೊಂಡಿರುವ ಬೆನ್ನಲ್ಲೇ ಶೂ, ಸಾಕ್ಸ್ ಖರೀದಿ ಸಂಬಂಧ ಹೊರಡಿಸಿರುವ ಆದೇಶವೂ ಚರ್ಚೆಗೆ ಗ್ರಾಸವಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರವು ಏರಿಕೆಯಾಗಿರುವ ಕಾರಣ ಎಲ್ಲಾ ರೀತಿಯ ಸರಕು, ಸಾಮಗ್ರಿ, ಉತ್ಪನ್ನಗಳ ದರವೂ ಸಹಜವಾಗಿ ಸ್ಥಳೀಯ ಮಟ್ಟದಲ್ಲಿಯೂ ಏರಿಕೆ ಕಂಡಿದೆ. ಹೀಗಿರುವಾಗ ಕಳೆದ 5 ವರ್ಷದ ಹಿಂದಿನ ದರವನ್ನೇ ಈಗಲೂ ನಮೂದಿಸಿ ಬಿಡುಗಡೆ ಮಾಡಿರುವುದಕ್ಕೆ ಶಿಕ್ಷಕರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
2019ರ ಮೇ 6ರಲ್ಲಿಯೂ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರ್ಯಾಂಡ್‌ಗಳಾದ ಬಾಟಾ, ಲಿಬರ್ಟಿ, ಲ್ಯಾನ್ಸರ್, ಪ್ಯಾರಾಗಾನ್,ಕರೋನ, ಆಕ್ಷನ್, ಲಕಾನಿ ಕಂಪನಿಗಳ ಅಧಿಕೃತ ಮಾರಾಟಗಾರರಿಂದ ಶೂ- ಸಾಕ್ಸ್‌ಗಳನ್ನು ಖರೀದಿಸಬೇಕು ಎಂದು ಸೂಚಿಸಿತ್ತು.
ಆದರೆ 2022ರ ಜುಲೈ 8ರಂದು ಹೊರಡಿಸಿರುವ ಆದೇಶದಲ್ಲಿ ಬ್ರ್ಯಾಂಡೆಡ್ ಉತ್ಪನ್ನಗಳ ಕುರಿತು ಉಲ್ಲೇಖಿಸಿಲ್ಲ. ಅಲ್ಲದೆ ಸರ್ಕಾರ ಈಗ ಬಿಡುಗಡೆ ಮಾಡಿರುವ ಹಣದಲ್ಲಿ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್‌ಗಳನ್ನು ಖರೀದಿಸಲು ಸಾಧ್ಯವಿಲ್ಲ. ಮುಕ್ತ ಮಾರುಕಟ್ಟೆಯಲ್ಲಿಯೇ ತಲಾ ಒಂದು ಜತೆ ಶೂಗೆ ಕನಿಷ್ಠ 425 ರು.ಗಳಿವೆ. ಹೀಗಾಗಿ ಸರ್ಕಾರ ತಲಾ ವಿದ್ಯಾರ್ಥಿಗೆ ಬಿಡುಗಡೆ ಮಾಡಿರುವ ಮೊತ್ತಕ್ಕೆ ಹೋಲಿಸಿದರೆ 160 ರು. ಕಡಿಮೆ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
2017-18ನೇ ಸಾಲಿನಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಖರೀದಿ ಸಂಬಂಧ ಶಾಲಾ ಎಸ್.ಡಿ.ಎಂ.ಸಿ ಖಾತೆಗಳಿಗೆ ರೂ.129.84 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಹೊರಡಿಸಿದ್ದ ಆದೇಶದಲ್ಲಿದ್ದ ದರವನ್ನೇ 2022-23ನೇ ಸಾಲಿನಲ್ಲಿಯೂ ನಮೂದಿಸಿ ಪ್ರಸಕ್ತ ಸ್ಥಳೀಯ ಮಾರುಕಟ್ಟೆಯಲ್ಲಿನ ವಾಸ್ತವ ದರಗಳನ್ನು ಪರಿಗಣಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕಳೆದ 5 ವರ್ಷದ ಹಿಂದೆ ಬಿಡುಗಡೆ ಮಾಡಿದ್ದ ಅನುದಾನಕ್ಕೆ ಹೋಲಿಸಿದರೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಬಿಡುಗಡೆ ಮಾಡಿರುವ ಅನುದಾನದಲ್ಲಿ 2.16 ಕೋಟಿ ರು. ಮಾತ್ರ ಹೆಚ್ಚಳ ಮಾಡಿದೆ. ಅಲ್ಲದೆ 2017-18ನೇ ಸಾಲಿನಲ್ಲಿ 1ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರು., 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 295 ರು., 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರು.ಗಳಂತೆ ಬಿಡುಗಡೆ ಮಾಡಿತ್ತು. ಇದೇ ದರವು 2019-20ರಲ್ಲಿಯೂ ಮುಂದುವರೆದಿತ್ತು. ಇದೀಗ 2022-23ನೇ ಶೈಕ್ಷಣಿಕ ಸಾಲಿನಲ್ಲಿಯೂ ಅದೇ ಮೊತ್ತವನ್ನು ಎಸ್‌ಡಿಎಂಸಿಗಳಿಗೆ ಬಿಡುಗಡೆ ಮಾಡಲು ಸೂಚಿಸಿದೆ.
ಬಾಟಾ, ಲಿಬರ್ಟಿ, ಲ್ಯಾನ್ಸರ್, ಪ್ಯಾರಾಗಾನ್, ಕರೋನ, ಆಕ್ಷನ್, ಲಕಾನಿ ಸೇರಿದಂತೆ ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರ್ಯಾಂಡ್‌ಗಳ ದರವು ಕಳೆದ 5 ವರ್ಷಕ್ಕೆ ಹೋಲಿಸಿದರೆ ಸ್ಥಳೀಯ ಮಟ್ಟದಲ್ಲಿಯೂ ಈ ಬಾರಿ ಹೆಚ್ಚಳವಾಗಿದೆ. ಆದರೆ ಸರ್ಕಾರವು ಚಾಲ್ತಿ ದರಗಳನ್ನು ನಮೂದಿಸದಿರುವುದು ಹೆಚ್ಚುವರಿ ಹಣಕ್ಕಾಗಿ ಶಿಕ್ಷಕರು ದಾನಿಗಳು, ಖಾಸಗಿ ಸಂಸ್ಥೆಗಳ ಬಳಿ ಕೈಯೊಡ್ಡಬೇಕಾಗಿದೆ.
‘5 ವರ್ಷದ ಹಿಂದಿನ ದರವನ್ನೇ ಆದೇಶದಲ್ಲಿ ನಮೂದಿಸಿದೆ. ಆದರೆ ಮಾರುಕಟ್ಟೆಯಲ್ಲಿ ಈಗಲೂ ಅದೇ ದರ ಇರುವುದಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರವು ಸುಮಾರು 25 ರಿಂದ 30 ರು. ಹೆಚ್ಚಳವಾಗಿದೆ. ಎಲ್ಲಾ ಸರಕು ಸಾಮಗ್ರಿಗಳ ದರವೂ ಏರಿಕೆಯಾಗಿರುತ್ತದೆ. ಹೀಗಿರುವಾಗ 5 ವರ್ಷದ ಹಿಂದಿನ ದರವನ್ನು ಪರಿಷ್ಕರಿಸಿ ಚಾಲ್ತಿ ದರವನ್ನು ನಮೂದಿಸಿ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಈಗಿನ ಸರ್ಕಾರವು 5 ವರ್ಷದ ಹಿಂದಿನ ದರವನ್ನೇ ನಮೂದಿಸಿ ಶಿಕ್ಷಕರನ್ನು ಮತ್ತೊಮ್ಮೆ ಕೈಚಾಚುವಂತೆ ಮಾಡಿದೆ. ಒಂದೊಮ್ಮೆ ದಾನಿಗಳು, ಖಾಸಗಿ ಸಂಘ ಸಂಸ್ಥೆಗಳು ನೆರವು ನೀಡದಿದ್ದರೇ ಕೆಳದರ್ಜೆಯ ಶೂ ಗಳನ್ನು ಖರೀದಿಸುವುದು ಅನಿವಾರ್ಯವಾಗುತ್ತದೆ,’ ಎನ್ನುತ್ತಾರೆ ಮುಖ್ಯ ಶಿಕ್ಷಕರೊಬ್ಬರು.
ತರಗತಿಗಳು ಆರಂಭವಾಗಿ ಏಳು ವಾರಗಳು ಕಳೆದಿದ್ದರೂ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಗಳನ್ನು ವಿತರಿಸಿರಲಿಲ್ಲ. ಹೀಗಾಗಿ ಪ್ರತಿಪಕ್ಷ ಟೀಕೆಗಳಿಗೆ ಗುರಿಯಾಗಿದ್ದ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ತಕ್ಷಣವೇ ಪೂರೈಸುವುದಾಗಿ ಆದೇಶ ಹೊರಡಿಸಿದೆ. ಮಕ್ಕಳಿಗೆ ಶೂ ಮತ್ತು ಸಾಕ್ಸ್ ಗಳನ್ನು ವಿತರಿಸಲು ರೂ. 132 ಕೋಟಿ ಮಂಜೂರು ಮಾಡಲಾಗಿದೆ. ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಸುಮಾರು 48 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶದಲ್ಲಿ ತಿಳಿಸಿದ್ದಾರೆ.
ಅಗತ್ಯವಿರುವ ಹಣವನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಮೂಲಕ ಒದಗಿಸಲಾಗುವುದು ಎಂದು ಸಚಿವ ನಾಗೇಶ್ ಹೇಳಿದ್ದರು. ಈ ಶೈಕ್ಷಣಿಕ ವರ್ಷದಲ್ಲಿ ಮೇ 16 ರಂದು ಶಾಲೆಗಳು ಪುನರಾರಂಭವಾಗಿದ್ದು, ತಮ್ಮ ವಾರ್ಡ್‌ಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್‌ಗಳನ್ನು ಒದಗಿಸುವಂತೆ ಪೋಷಕರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದರು. ಆದರೆ ಸರ್ಕಾರ ಈ ನಿರ್ಧಾರವನ್ನು ತಡೆಹಿಡಿದಿತ್ತು ಎನ್ನಲಾಗಿದೆ.