ಪಿಎಸ್‌ಐ ಹಗರಣ; ಕಾಂಗ್ರೆಸ್‌ ಶಾಸಕನ ಪುತ್ರ ಅರುಣ್‌, ಸೋದರ ಎಸ್‌ ವೈ ಪಾಟೀಲ್‌ರಿಂದಲೂ 30 ಲಕ್ಷ ಲಂಚ

ಬೆಂಗಳೂರು; ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ವಿವಿಧ ರೀತಿಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ಹಗರಣದ ಒಳಸುಳಿಯನ್ನು ಒಂದೊಂದಾಗಿ ಬಹಿರಂಗಗೊಳಿಸುತ್ತಿದ್ದಾರೆ.

 

ಈ ಹಗರಣದ ಕುರಿತು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್‌ ಅಬ್ಬರಿಸುತ್ತಿರುವ ಹೊತ್ತಿನಲ್ಲಿಯೇ ತನ್ನದೇ ಶಾಸಕ ಎಂ ವೈ ಪಾಟೀಲ್‌ ಎಂಬುವರ ಪುತ್ರ ಅರುಣಕುಮಾರ್ ಪಾಟೀಲ್‌ ಅವರು ತಮ್ಮ  ಗನ್‌ಮ್ಯಾನ್‌ನ್ನು ಪಿಎಸ್‌ಐ ಆಗಿ ನೇಮಕ ಮಾಡಿಸಲು 30 ಲಕ್ಷ ರು.ಗೆ ಮಾತುಕತೆ ನಡೆದಿತ್ತು. ಈ ಪೈಕಿ 10 ಲಕ್ಷ ರು.ಗಳನ್ನು ಮುಂಗಡವಾಗಿ  ಲಂಚ ನೀಡಿದ್ದರು ಎಂಬ ಅಂಶವನ್ನು ಆರೋಪಿ ರುದ್ರಗೌಡ ಪಾಟೀಲ್ ಎಂಬಾತ ಸ್ವಇಚ್ಛಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಈತ ನೀಡಿರುವ ಹೇಳಿಕೆಯು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ದೂಡಿದಂತಾಗಿದೆ.

 

 

ಅಲ್ಲದೆ ಇದೇ ರುದ್ರಗೌಡ ಪಾಟೀಲ್‌ನನ್ನು ದಸ್ತಗಿರಿ ಮಾಡಲು ಬಂದಿದ್ದ ಪಿಎಸ್‌ಐ ಚಂದ್ರಶೇಖರ್‌ ಎಂಬುವರಿಗೆ 37 ಲಕ್ಷ ರುಗ.ಳನ್ನು ನೀಡಿ ಕೇಸ್‌ನಿಂದ ತನ್ನ ಹೆಸರು ಕೈಬಿಡುವಲ್ಲಿ ಯಶಸ್ವಿಯಾಗಿದ್ದರು ಎಂಬ ಅಂಶವು ಇದೇ ಸ್ವ ಇಚ್ಚಾ ಹೇಳಿಕೆಯಲ್ಲಿ ವಿವರಿಸಲಾಗಿದೆ. ರುದ್ರಗೌಡ ಪಾಟೀಲ್‌ನ ಸ್ವ ಇಚ್ಚಾ ಹೇಳಿಕೆ ಮತ್ತು ದೋಷಾರೋಪಣೆ ಪಟ್ಟಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸ್ವ ಇಚ್ಛಾ  ಹೇಳಿಕೆಯ ವಿವರ

545 ಸಿವಿಲ್‌ ಪಿಎಸ್ಐ ನೇಮಕಾತಿ ಲಿಖಿತ ಪರೀಕ್ಷೆಗೂ ಪೂರ್ವದಲ್ಲಿ ಒಂದೆರಡು ತಿಂಗಳು ಮುಂಚಿತವಾಗಿ ನನಗೆ ಅಫಜಲಪುರ ವಿಧಾನಸಭೆ ಕ್ಷೇತ್ರದ ಶಾಸಕರಾದ ಎಮ್‌ ವೈ ಪಾಟೀಲ್‌ ಅವರ ಮಗ ಅರುಣಕುಮಾರ್ ಪಾಟೀಲ್ ಅವರು ನನಗೆ ಕರೆ ಮಾಡಿ ನಮ್ಮ ಹತ್ತಿರ ಗನ್‌ಮ್ಯಾನ್ ಆಗಿಕೆಲಸ ಮಾಡುತ್ತಿರುವ ಹಯ್ಯಾಳಿ ದೇಸಾಯಿಯವರು ಪಿಎಸ್‌ಐ ಪರೀಕ್ಷೆಗೆ ಅರ್ಜಿ ಹಾಕಿದ್ದು ಅವರನ್ನು ಪಿಎಸ್‌ಐ ಮಾಡಿಸು ಎಂದು ಕೇಳಿಕೊಂಡರು. ನಾನು ಮಂಜುನಾಥ ಮೇಳಕುಂದಿಯವರ ಮೊಬೈಲ್‌ ನಂಬರ್‌ ಕೊಟ್ಟೆನು. ಅರುಣ್‌ಕುಮಾರ್‌ ಪಾಟೀಲ್‌ ಮತ್ತು ಮಂಜುನಾಥ ಮೇಳಕುಂದಿಯವರು ಏನು ಮಾತನಾಡಿಕೊಂಡರು ಎಂಬುದು ನನಗೆ ಗೊತ್ತಿಲ್ಲ.

 

ಸ್ವಲ್ಪ ಹೊತ್ತಿನ ನಂತರ ಮಂಜುನಾಥ ಮೇಳಕುಂದಿಯವರು ನನಗೆ ಕರೆ ಮಾಡಿ ಅರುಣಕುಮಾರ್ ಪಾಟೀಲ್‌ ಅವರು ಫೋನ್ ಮಾಡಿ ವಿಚಾರ ತಿಳಿಸಿ ತಾನು ಅರುಣಕುಮಾರ ಪಾಟೀಲ ಅವರಿಗೆ ದುಡ್ಡು ಯಾರು ಕೊಡುತ್ತಾರೆ ಎಂದು ಕೇಳಿದ್ದಕ್ಕೆ ಅರುಣಕುಮಾರ ಪಾಟೀಲ್‌ ಅವರು ನಮ್ಮ ಚಿಕ್ಕಪ್ಪ ಎಸ್‌ ವೈ ಪಾಟೀಲ ಅವರು ಕೊಡುತ್ತಾರೆ ಎಂದು ಹೇಳಿದ್ದಾರೆಂದು ನನಗೆ ಹೇಳಿದನು.

 

ಆರ್‌ ಡಿ ಪಾಟೀಲ್‌ನ ಸ್ವ ಇಚ್ಚಾ ಹೇಳಿಕೆ ಪ್ರತಿ

 

ಮಂಜುನಾಥ ಮೇಳಕುಂದಿಯವರು 40 ಲಕ್ಷ ರು ಕೊಡುವಂತೆ ಎಸ್‌ ವೈ ಪಾಟೀಲರಿಗೆ ಹೇಳು ಎಂದು ನನಗೆ ಹೇಳಿದರು. ನಾನು ಆಯಿತು ಕೇಳುತ್ತೇನೆ ಎಂದು ಮಂಜುನಾಥ ಮೇಳಕುಂದಿಯವರಿಗೆ ಹೇಳಿದೆನು. ನಂತರ ನಾನು ಎಸ್‌ ವೈ ಪಾಟೀಲ ಅವರೊಂದಿಗೆ ಮಾತನಾಡಿ ಮಂಜುನಾಥ ಮೇಳಕುಂದಿಯವರು ಹಯ್ಯಾಳಿ ದೇಸಾಯಿಗೆ ಸಹಾಯ ಮಾಡಲು 40 ಲಕ್ಷ ರು. ಕೇಳಿರುವ ವಿಚಾರವನ್ನು ತಿಳಿಸಿದೆನು. ಕೊನೆಗೆ ನಾನು ಹಾಗೂ ಎಸ್‌ ವೈ ಪಾಟೀಲ ಅವರು ಸೇರಿ ಮಂಜುನಾಥ ಮೇಳಕುಂದಿಯವರಿಗೆ 30 ಲಕ್ಷ ರು. ಮಾತ್ರ ಕೊಡುವ ಬಗ್ಗೆ ತೀರ್ಮಾನಿಸಿದೆವು ಎಂದು ವಿವರಿಸಿದ್ದಾರೆ.

 

ಹಯ್ಯಾಳಿ ದೇಸಾಯಿ ಅವರು ನಮಗೆ ಅಡ್ವಾನ್ಸ್‌ ಆಗಿ 10 ಲಕ್ಷ ರು.ಗಳನ್ನು ಕೊಟ್ಟಿದ್ದು ನಾನು 5 ಲಕ್ಷ ರು. ಹಣವನ್ನು ಕಲ್ಬುರ್ಗಿ ನಗರದ ಬಸ್‌ಸ್ಟ್ಯಾಂಡ್‌ ಹತ್ತಿರ ನನ್ನ ಇನ್ನೋವ ಕಾರ್‌ (ನಂಬರ್ ಕೆ3 32 ಪಿ 4576) ನಲ್ಲಿ ಹೋಗಿ ಪಡೆದುಕೊಂಡಿರುತ್ತೇನೆ. ಹಾಗೂ ನನ್ನ ಅಣ್ಣ ಮಹಾಂತೇಶ ಪಾಟೀಲ್ ಅವರು 5 ಲಕ್ಷ ರು. ಪಡೆದುಕೊಂಡಿರುತ್ತೇವೆ. ಬಾತ್ಮಿದಾರರು ಹೇಳುವಂತೆ ನಾನು 14 ಕ್ಯಾಂಡಿಡೇಟ್‌ಗಳಿಗೆ ಅಕ್ರಮವಾಗಿ ಪಿಎಸ್ಐ ಪರೀಕ್ಷೆಯಲ್ಲಿ ಸಹಾಯ ಮಾಡಿ ಪಿಎಸ್‌ಐ ಆಗಿ ಸೆಲೆಕ್ಟ್‌ ಆಗುವಂತೆ ಮಾಡಿರುತ್ತೇನೆ ಎನ್ನುವುದು ಪೂರ್ಣ ಸತ್ಯವಲ್ಲ ಎಂದು ಹೇಳಿಕೆಯಲ್ಲಿ ನಿರಾಕರಿಸಿದ್ದಾರೆ.

 

ಆದರೆ ನನ್ನ ದೂರದ ಸಂಬಂಧಿ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ನಿವಾಸಿ ವಸಂತ ನರಿಬೋಳ ಅವರ ಪುತ್ರ ಎನ್ ವಿ ಸುನೀಲ್‌ಕುಮಾರ್‌ನಿಗೆ ಪಿಎಸ್‌ಐ ಪರೀಕ್ಷೆಯಲ್ಲಿ ಆಯ್ಕೆ ಆಗುವಂತೆ ಮಾಡಲು ವಸಂತ ನರಿಬೋಳ ಅವರಿಂದ 30 ಲಕ್ಷ ರು.ಗಳನ್ನು ಪಡೆದುಕೊಂಡಿರುತ್ತೇನೆ. ಅದೇ ರೀತಿ ವಿಶಾಲ ಶಿರೂರ ಎಂಬ ಕ್ಯಾಂಡಿಡೇಟ್‌ನಿಂದ 42 ಲಕ್ಷ ರು. ಪಡೆದಿರುತ್ತೇನೆ. ಪ್ರಭು ಎಂಬುವರಿಂದ 50 ಲಕ್ಷ, ಇಸ್ಮಾಯಿಲ್ ಖಾದರ್‌ ಅವರಿಂದ 50 ಲಕ್ಷ ಕೊಟ್ಟಿರುತ್ತೇನೆ. ಸದರಿ ಹಣವು ನಾನು ಪಿಎಸ್ಐ ಪರೀಕ್ಷೆಯಲ್ಲಿ ಆಯ್ಕೆಯಾದ ಪಿಎಸ್‌ಐ ಕ್ಯಾಂಡಿಡೇಟ್‌ಗಳಿಂದ ಪಡೆದುಕೊಂಡ ಅಕ್ರಮ ಲಾಭದ ಹಣವಾಗಿರುತ್ತದೆ ಎಂದು ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ.

 

ಕೆಲ ದಿನಗಳ ನಂತರ ಪಿಎಸ್‌ಐ ಚಂದ್ರಶೇಖರ್‌ ಅವರು ನನ್ನನ್ನು ದಸ್ತಗಿರಿ ಮಾಡಲು ಕಲ್ಬುರ್ಗಿಗೆ ಬಂದಿದ್ದರು. ಬಸುರೆಡ್ಡಿ ಹಾಗೂ ಅಭಿಜತ್ ಕದಂ ಅವರು ನನ್ನಿಂದ ಪಡೆದುಕೊಂಡ 70 ಲಕ್ಷ ರುಗ.ಳನ್ನು ಪೂರ್ತಿಯಾಗಿ ಪಿಎಸ್‌ಐ ಚಂದ್ರಶೇಖರ್‌ ಅವರಿಗೆ ನೀಡದೇ ಕೇವಲ 35 ಲಕ್ಷ ರು.ಗಳನ್ನು ನೀಡಿ ಉಳಿದ ಹಣದಲ್ಲಿ 2 ಹೊಸ ಟಿಪ್ಪರ್‌ಗಳನ್ನು ಬೇನಾಮಿ ಹೆಸರಿನಲ್ಲಿ ಬಸುರೆಡ್ಡಿ ಅವರು ಖರೀದಿಸಿರುವುದು ಮತ್ತು ಉಳಿದ ಹಣದಲ್ಲಿ ಅಭಿಜಿತ್‌ ಕದಂ ಹಾಗೂ ಇತರರು ಪಡೆದುಕೊಂಢಿರುತ್ತಾರೆ ಎಂಬ ವಿಚಾರವು ನನ್ನ ಗಮನಕ್ಕೆ ಬಂದಿತು. ನಂತರ ನಾನು ಮತ್ತೆ 37 ಲಕ್ಷ ರುಗ.ಳನ್ನು ಪಿಎಸ್ಐ ಚಂದ್ರಶೇಖರ್‌ ಅವರಿಗೆ ಕೊಟ್ಟು ಕೇಸ್‌ನಿಂದ ನನ್ನ ಹೆಸರು ಕೈಬಿಡುವಂತೆ ನೋಡಿಕೊಂಡಿರುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

ನನಗೆ ಪರಿಚಿತರು ಹಾಗೂ ವಿಶ್ವಾಸಿಕರಾದ ಮಣೂರ ಗ್ರಾಮದ ಅಸ್ಲಂ ಮುಜಾವರ್‌ ಹಾಗೂ ಕರ್ಜಗಿ ಗ್ರಾಮದ ಮುನಾಫ್‌ ರೆವೂರ ಅವರುಗಳು ಪಿಎಸ್‌ಐ ಕ್ಯಾಂಡಿಕೇಟ್‌ಗಳನ್ನು ಹುಡುಕಿ ತಂದು ನನ್ನ ಮುಂದೆ ಕ್ಯಾಂಡಿಡೇಟ್‌ಗಳಿಗೂ ಮತ್ತು ನನ್ನ ಮಧ್ಯೆ ಡೀಲ್ ಮಾಡಿಸುತ್ತಿದ್ದರು.

 

ಈ ಅಕ್ರಮ ದಂಧೆಯಲ್ಲಿ ಅವರನ್ನು ಬ್ಲೂಟೂತ್‌ ಡಿವೈಸ್‌ಗೆ ಬೇಕಾಗುವ ಪರ್ಯಾಯ ಸಿಮ್‌ ಮತ್ತು ಮೊಬೈಲ್‌ಗಳನ್ನು ಏರ್ಪಾಡು ಮಾಡಲು ಉತ್ತರಗಳನ್ನು ಹೇಳಬೇಕಾದರೆ ಇತರರಿಗೆ ಗೊತ್ತಾಗದಂತೆ ಕಾಯಲು ಬಳಸಿಕೊಂಡಿರುತ್ತೇನೆ. ಅದಕ್ಕಾಗಿ ಅವರಿಗೂ ಸಹ ನಾನು ಕಾಲಕಾಲಕ್ಕೆ ಅವಶ್ಯಕತೆಗನುಗಣವಾಗಿ ಲಕ್ಷಾಂತರ ರುಪಾಯಿ ನೀಡಿರುತ್ತೇನೆ. ಇವುರಗಳಲ್ಲದೇ ಇನ್ನೂ ಕೆಲವು ಹುಡುಗರನ್ನು ಅಕ್ರಮಕ್ಕೆ ಬಳಸಿಕೊಂಡಿರುತ್ತೇನೆ. ಅವರ ಹೆಸರು ಈಗ ನನಗೆ ನೆನಪಿಗೆ ಬರುತ್ತಿಲ್ಲ. ನೆನಪಿಸಿಕೊಂಡು ನಂತರ ತಿಳಿಸುತ್ತೇನೆ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.

 

ಅದೇ ರೀತಿ ಆರ್‌ ಡಿ ಪಾಟೀಲ್‌ ಕೆಪಿಎಸ್ಸಿಯಿಂದ ಎಸ್‌ಡಿಎ, ಎಫ್‌ಡಿಎ, ಪಿಡಬ್ಲ್ಯೂಡಿ ಎಇ, ಜೆಇ ಮತ್ತು ಪೊಲೀಸ್‌ ಕಾನ್ಸ್‌ಟೆಬಲ್‌ ಹುದ್ದೆಗಳ ನೇಮಕಾತಿಗಾಗಿ ನಡೆಸಿದ್ದ ಲಿಖಿತ ಪರೀಕ್ಷೆಯಲ್ಲಿಯೂ ತನ್ನ ಸಹಚರರೊಂದಿಗೆ ಸೇರಿಕೊಂಡು ಅಕ್ರಮ ಎಸಗಿರುವುದು ಕಂಡು ಬಂದಿದೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.

 

ಅಲ್ಲದೆ ಪಿಡಬ್ಲ್ಯೂಡಿ ಇಲಾಖೆಯ ಅಸಿಸ್ಟಂಟ್‌ ಎಂಜಿನಿಯರ್‌ ಹುದ್ದೆ ನೇಮಕಾತಿ ಸಂಬಂಧ ಬ್ಲೂಟೂತ್‌ ಡಿವೈಸ್‌ ಮೂಲಕ ಅಕ್ರಮವಾಗಿ ಉತ್ತರ ಹೇಳಿಸಿ ಪರೀಕ್ಷೆ ಬರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಯಲ್ಲಿ (ಮೊಕದ್ದಮೆ ಸಂಖ್ಯೆ 294/2021), ಕಲಂ 418, 406, 420, 120(ಬಿ), 379 ರೆ/ವಿ ಐಪಿಸಿ ಮತ್ತು ಕಲಂ 117 ಎಜುಕೇಷನ್‌ ಆಕ್ಟ್‌ ಕಲಂ 66, ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

 

ಹಾಗೆಯೇ ಪೊಲೀಸ್‌ ಕಾನ್ಸ್‌ಟೆಬಲ್‌ ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕಲ್ಬುರ್ಗಿ ನಗರದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ದಸ್ತಗಿರಿ ಮಾಡಲಾಗಿತ್ತು ಎಂಬುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts