ಬೈಯಪ್ಪನಹಳ್ಳಿ, ಕಲ್ಬುರ್ಗಿಯಲ್ಲಿ 17 ಎಕರೆ ಗೋಮಾಳದ ಮೇಲೂ ರಾಷ್ಟ್ರೋತ್ಥಾನ ಪರಿಷತ್‌ ಕಣ್ಣು

ಬೆಂಗಳೂರು; ಶೈಕ್ಷಣಿಕ ಚಟುವಟಿಕೆಗಳಿಗಾಗಿ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿಯಲ್ಲಿ 9-32 ಎಕರೆ ಗೋಮಾಳವನ್ನು ಮಂಜೂರು ಮಾಡಿಸಿಕೊಂಡಿರುವ ರಾಷ್ಟ್ರೋತ್ಥಾನ ಪರಿಷತ್‌, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಜಾಲ ಹೋಬಳಿಯ ಬೈಯಪ್ಪನಹಳ್ಳಿ ಬಳಿ 10.00 ಎಕರೆ ಮತ್ತು ಗುಲ್ಬರ್ಗಾ ಜಿಲ್ಲೆಯ ಶರಣಸಿರಸಿ ಪಟ್ಟಣದಲ್ಲಿ 7.00 ಎಕರೆ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದೆ.

 

ಪ್ರಸ್ತುತ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದು ಆದೇಶ ಹೊರಡಿಸಲು ಬಾಕಿ ಇತ್ತು. ಅದರಂತೆ ಜಮೀನುಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗಾಗಿ ಮಾರ್ಗಸೂಚಿ ದರ ಶೇ. 10ರ ದರದಲ್ಲಿ ಮಂಜೂರು ಮಾಡಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ ದಿನೇಶ್‌ ಹೆಗ್ಡೆ ಅವರು 2020ರ ಡಿಸೆಂಬರ್‌ 1ರಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಈ ಸಂಬಂಧ ಕೂಡಲೇ ಕಡತ ಮಂಡಿಸಿ ಎಂದು ಅದೇ ಕೋರಿಕೆ ಪತ್ರದ ಮೇಲೆ ಒಕ್ಕಣೆ ಹಾಕಿದ್ದರು.

 

ರಾಷ್ಟ್ರೋತ್ಥಾನ ಪರಿಷತ್‌ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಸಲ್ಲಿಸಿರುವ ಕೋರಿಕೆ ಪ್ರತಿ

 

ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಜಮೀನು ಮಂಜೂರಾತಿ ಸಂಬಂಧದ 388 ಪುಟಗಳನ್ನೊಳಗೊಂಡ ಸಮಗ್ರ ಕಡತವನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದಿದೆ.

 

ಬೈಯಪ್ಪನಹಳ್ಳಿ ಬಳಿ 10 ಎಕರೆ ಜಮೀನನನ್ನು ಶೈಕ್ಷಣಿಕ ಚಟುವಟಿಕೆಗಳಿಗಾಗಿ ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಬೇಕು ಎಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಸ್‌ ಆರ್‌ ವಿಶ್ವನಾಥ್‌ ಅವರು ಟಿಪ್ಪಣಿ ಹಾಕಿದ್ದರು.

 

ಈ ಜಮೀನು ಕೂಡ ಗೋಮಾಳವಾಗಿತ್ತು. ಬೈಯಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್‌ 80ರಲ್ಲಿ 53-12 ಗುಂಟೆ ಜಮೀನು ಮೂಲತಃ ಸರ್ಕಾರಿ ಗೋಮಾಳವಾಗಿದೆ. ಈ ಪೈಕಿ 4 ಎಕರೆ ಜಮೀನು ಹೊಸ ಸರ್ವೆ ನಂಬರ್‌ಗಳಿಗೆ ಪೋಡಿ ದುರಸ್ತಿಯಾಗಿದೆ. ಉಳಿಕೆ ಜಮೀನಿನ ಪೈಕಿ ಹಾಲಿ ಪಹಣಿಯಂತೆ ಸರ್ಕಾರಿ ಗೋಮಾಳ ಶೀರ್ಷಿಕೆಗೆ 16-02 ಎಕರೆ , ಸಾರ್ವಜನಿಕ ರಸ್ತೆಗಾಗಿ 1-10 ಎಕರೆ, ರಾಜೀವ್‌ಗಾಂಧಿ ವಸತಿ ನಿಗಮಕ್ಕೆ 20-00 ಎಕರೆ ಮಂಜೂರಾಗಿದೆ. ಉಳಿಕೆ ವಿಸ್ತೀರ್ಣದಲ್ಲಿ ಸುರೇಶ್‌ ಎಂಬುವರಿಗೆ 2 ಎಕರೆ, ಕೆ ಎಸ್‌ ಮಣಿ ಎಂಬುವರಿಗೆ 2-20 ಎಕರೆ ಖಾತೆ ದಾಖಲಾಗಿದೆ.

 

ಪ್ರಸ್ತಾಪಿತ ಸರ್ವೆ ನಂಬರ್‌ನಲ್ಲಿ ಈಗಾಗಲೇ ಎಪಿಎಂಸಿ (ಯಶವಂತಪುರ)ಗೆ 8-30 ಎಕರೆ, ಪೂರಿ ಜಗನ್ನಾಥ ಟ್ರಸ್ಟ್‌ಗೆ 3-00 ಎಕರೆ, ಘನ ತ್ಯಾಜ್ಯ ವಿಲೇವಾರಿಗಾಗಿ 1 ಎಕರೆ, ಹರಾಜಿಗಾಗಿ 8-32 ಎಕರೆ, ಜಮೀನುಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

 

ಹರಾಜಿಗಾಗಿ ಪ್ರಸ್ತಾವನೆ ಸಲ್ಲಿಸಿರುವುದನ್ನು ರದ್ದುಪಡಿಸಿ ರಾಷ್ಟ್ರೋತ್ಥಾನ ಪರಿಷತ್‌ಗೆ 8-32 ಎಕರೆ ಜಮೀನನ್ನು ಶೈಕ್ಷಣಿಕ ಚಟುವಟಿಕೆಗಳಿಗಾಗಿ ಮಂಜೂರು ಮಾಡಲು ಗ್ರಾಮಸ್ಥರ ತಂಟೆ, ತಕರಾರು ಇರುವುದಿಲ್ಲವೆಂದು ಗ್ರಾಮಸ್ಥರ ಮಹಜರ್‌ನೊಂದಿಗೆ ವರದಿ ಸಲ್ಲಿಕೆಯಾಗಿದೆ.

 

ಅಲ್ಲದೆ ಬೆಸ್ಕಾಂ 2 ಎಕರೆ ಜಮೀನಿಗೆ ಮಂಜೂರಾತಿ ಕೋರಿತ್ತು. ಈ ಬಗ್ಗೆ ಯಾವುದೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ. ಆದ್ದರಿಂದ ಬೈಯಪ್ಪನಹಳ್ಳಿಯ ಗ್ರಾಮದ ಸರ್ವೆ ನಂಬರ್‌ 80ರಲ್ಲಿ 10 ಎಕರೆ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‌ ಸಂಸ್ಥೆಗೆ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಮಂಜೂರು ಮಾಡಲು ಪೂರಕ ದಾಖಲೆಗಳೊಂದಿಗೆ ವಾಸ್ತವಾಂಶದ ವರದಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2020ರ ಜುಲೈ 21ರಂದು ಸಲ್ಲಿಸಿದ್ದರು.

 

ಗುಲ್ಬರ್ಗಾ ಜಿಲ್ಲೆ ಪಟ್ಟಣ ಹೋಬಳಿಯ ಶರಣ ಸಿರಸಗಿ ಗ್ರಾಮದ ಸರ್ವೆ ನಂಬರ್‌ 243ರಲ್ಲಿ 7 ಎಕರೆ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ 2007ರ ಜನವರಿ 11ರಂದೇ ಮನವಿ ಸಲ್ಲಿಸಿತ್ತು.

 

ಕಲ್ಬುರ್ಗಿಯಲ್ಲಿಯೂ ಗೋಮಾಳ ಮಂಜೂರಿಗೆ ಸಲ್ಲಿಸಿದ್ದ ಪ್ರಸ್ತಾವನೆ ಪ್ರತಿ

 

ಈ ಕುರಿತು ಹಲವಾರು ಪತ್ರ ವ್ಯವಹಾರಗಳ ನಂತರ 2012ರ ನವೆಂಬರ್‌ 29ರಂದು ಗುಲ್ಬರ್ಗಾ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. 2013ರಲ್ಲಿ ಅದು ಸಚಿವ ಸಂಪುಟದಲ್ಲಿ ಅನುಮೋದನೆಯೂ ದೊರೆತಿತ್ತು. ಈಗ ಮತ್ತೆ ಅದನ್ನು ಪರಿಶೀಲಿಸಿ ನಮಗೆ ಆ ಜಮೀನನ್ನು ಮಂಜೂರು ಮಾಡುವ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 2020ರ ಮಾರ್ಚ್‌ 16ರಂದು ಕೋರಿಕೆ ಸಲ್ಲಿಸಿದ್ದರು.

SUPPORT THE FILE

Latest News

Related Posts