ದೆಹಲಿ ಸರ್ಕಾರದ ವಿದ್ಯುತ್ ಸಬ್ಸಿಡಿ ಯೋಜನೆ, ಕರ್ನಾಟಕದಲ್ಲಿ ಯಶಸ್ವಿಯಾಗುವುದೇ?

ಬೆಂಗಳೂರು; ಅರವಿಂದ ಕೇಜ್ರಿವಾಲ ನೇತೃತ್ವದ ಆಮ್ ಆದ್ಮಿ ಪಾರ್ಟಿ ಜನಸಾಮಾನ್ಯರ ಪಕ್ಷ, ಜನಸಾಮಾನ್ಯರ ಹಿತವನ್ನು ಕಾಪಾಡುವ ಪಕ್ಷವೆಂದು ಪ್ರಚಾರವನ್ನು ಮಾಡುತ್ತಲೇ ಬಂದು ದೆಹಲಿಯಲ್ಲಿ ಇಲ್ಲಿಯವರೆಗೆ ಮೂರು ಚುನಾವಣೆಗಳನ್ನು ಗೆದ್ದು ಗದ್ದುಗಗೆ ಏರಿದೆ. ಈ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಹಾಗು ಬಹು ಮಟ್ಟಿಗೆ ಜಾರಿಗೊಳಿಸಿರುವ ಘೋಷಣೆ ಗ್ರಾಹಕರಿಗೆ ವಿದ್ಯುತ್ ಬಿಲ್ಲಿನಲ್ಲಿ ಸಬ್ಸಿಡಿಯ ಸವಲತ್ತು ಎಂದು ಹೇಳಿದ್ದಲ್ಲಿ ತಪ್ಪಾಗಲಾರದು.

 

ಈ ಘೋಷಣೆಯು ಮತದಾರರಿಗೆ ಎಷ್ಟು ಆಕರ್ಷಣೀಯವಾಗಿದೆ ಎಂದರೆ ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕವೂ ಸಹ ವಿದ್ಯುತ್ ಸಬ್ಸಿಡಿಯ ಸ್ಕೀಮನ್ನು ಕರ್ನಾಟಕದ ಮುಂಬರುವ ವಿಧಾನ ಸಭೆಯ ಚುನಾವಣೆಯ ಘೋಷಣೆಯಾಗಿ ಸೇರಿಸಿಕೊಂಡಿರುವುದು ಕಂಡು ಬರುತ್ತಿದೆ.

 

ಹೀಗಿರುವಲ್ಲಿ ದೆಹಲಿಯಲ್ಲಿ ಸಫಲತೆ ಹೊಂದಿರುವ ಈ ಘೋಷಣೆಯು ನಮ್ಮ ಕರ್ನಾಟಕ ರಾಜ್ಯದಲ್ಲೂ ಸಹ ಸಫಲವಾಗುತ್ತದೆಯೇ ಎಂಬುದನ್ನು ವಿಶ್ಲೇಷಣೆ ಮತ್ತು ದೆಹಲಿಯಲ್ಲಿ ಜಾರಿಯಲ್ಲಿರುವ ವಿದ್ಯುತ್‌ ಬಿಲ್‌ನಲ್ಲಿ ಸಬ್ಸಿಡಿ ಸೌಲಭ್ಯವನ್ನು ಹೋಲಿಕೆಯನ್ನು ಸಂಕ್ಷಿಪ್ತವಾಗಿ ಇಲ್ಲಿ ಕೊಡಲಾಗಿದೆ.

 

ದೆಹಲಿಯಲ್ಲಿ ಶೇಕಡ 82ಕ್ಕಿಂತ ಹೆಚ್ಚು ಮನೆಗಳು ಒಂದಕ್ಕಿಂತ ಹೆಚ್ಚು ಮಹಡಿಗಳನ್ನು ಹೊಂದಿರುವ ಕಟ್ಟಡಗಳು ಎಂದು ದೆಹಲಿ ರಾಜ್ಯ ಸರ್ಕಾರದ ಅರ್ಥಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದ  ನಿರ್ದೇಶನಾಲಯವು ತನ್ನ 2012ರ ವರದಿಯಲ್ಲಿ ನಮೂದಿಸಲಾಗಿದೆ. ಅಂದರೆ ಈ ವರದಿಯ ಪ್ರಕಾರ ಸುಮಾರು 39,48,359 ಒಟ್ಟು ಮನೆಗಳಲ್ಲಿ 32,55,385 ಒಂದಕ್ಕಿಂತ ಹೆಚ್ಚು ಮಹಡಿಗಳನ್ನು ಹೊಂದಿವೆ ಎಂದು ನಮೂದಿಸಲಾಗಿದೆ.

 

ಈಗಿನ ಬಿಎಸ್‌ಇಸ್ ಯಮುನಾ ಶಕ್ತಿ ನಿಯಮಿತ (ಬಿಎಸ್‌ಇಸ್ ಯಮುನಾ), ಬಿಎಸ್‌ಇಸ್ ರಾಜಧಾನಿ ಶಕ್ತಿ ನಿಯಮಿತ (ಬಿಎಸ್‌ಇಸ್ ರಾಜಧಾನಿ) ಹಾಗೂ ಟಾಟಾ ಶಕ್ತಿ ದೆಹಲಿ ವಿತರಣೆ ನಿಯಮಿತ (ಟಾಟಾ) – ಈ ಮೂರು ಕಂಪನಿಗಳು ದೆಹಲಿ ರಾಜ್ಯಕ್ಕೆ ವಿದ್ಯುಚ್ಛಕ್ತಿಯನ್ನು ಪೂರೈಕೆ ಮಾಡುವ ಕಂಪನಿಗಳು ಎಂದು ದೆಹಲಿ ವಿದ್ಯುಚ್ಛಕಿ ನಿಯಂತ್ರಣ ಆಯೋಗದ ಅಂತರ್‌ಜಾಲದ ವೆಬ್‌ಸೈಟಿನಿಂದ ತಿಳಿಯಬಹುದು.

 

 

ಈ ಮೂರು ಕಂಪನಿಗಳ ಅಧಿಕೃತ ಜಾಲತಾಣಗಳ ಪ್ರಕಾರ 2019ರಲ್ಲಿ ಬಿಎಸ್‌ಇಸ್ ಯಮುನಾ ಕಂಪೆನಿಯ ಗ್ರಾಹಕರ ಸಂಖ್ಯೆ ಸುಮಾರು 16.5 ಲಕ್ಷ, ಮಾರ್ಚಿ 2021ರಲ್ಲಿ ಬಿಎಸ್‌ಇಸ್ ರಾಜಧಾನಿ ಕಂಪೆನಿಯ ಗ್ರಾಹಕರ ಸಂಖ್ಯೆ ಸುಮಾರು 27 ಲಕ್ಷ ಹಾಗೂ ಟಾಟಾ ಕಂಪೆನಿಯ ಗ್ರಾಹಕರ ಸಂಖ್ಯೆ ಸುಮಾರು 18.8 ಲಕ್ಷ, ಒಟ್ಟಾರೆ 62.3 ಲಕ್ಷ ಗ್ರಾಹಕರ ಸಂಖ್ಯೆ. ಮೇಲಿನ ಖಂಡಿಕೆಯ 2012ರ ಒಟ್ಟಾರೆ ಮನೆಗಳ ಸಂಖ್ಯೆ ಸುಮಾರು 40 ಲಕ್ಷವಿದ್ದು 2021ರಲ್ಲಿ, ಅಂದರೆ ಸುಮಾರು 9 ವರ್ಷಗಳ ನಂತರ 2021ರಲ್ಲಿ ಮನೆಗಳ ಸಂಖ್ಯೆಗಳಲ್ಲೂ ಸಹ ಶೇಕಡ 50%ರಷ್ಟು ಏರಿಕೆ ಆಗುವುದು, ಸರಿಸುಮಾರು ಸುಮಾರು 60 ಲಕ್ಷ ಮನೆಗಳಿರುವುದು ಉತ್ಪ್ರೇಕ್ಷೆ ಅಲ್ಲ.

 

ದೆಹಲಿಯಲ್ಲಿನ ವಿದ್ಯುಚ್ಛಕ್ತಿಯ ಸಂಪರ್ಕಗಳ ವಿಶೇಷತೆಯೋ ಅಥವಾ ವಿಚಿತ್ರವೋ ಎಂದರೆ ಒಂದು ಕಟ್ಟಡಕ್ಕೆ ಒಂದೇ ವಿದ್ಯುಚ್ಛಕ್ತಿಯ ಮೀಟರ್ ಇರುವುದು. ಇದರ ಅರ್ಥವೇನೆಂದರೆ ಆ ಒಂದು ಕಟ್ಟಡವು ಒಂದು, ಎರಡು, ಮೂರು ಅಥವಾ ಹತ್ತು ಮಹಡಿ ಉಳ್ಳದ್ದಾಗಿರಬಹುದು, ಆದರೆ ಮಹಡಿಯ ಸಂಖ್ಯೆಗಳಿಗೆ ಹೊರತಾಗಿ ಒಂದೇ ಒಂದು ಮೀಟರ್ ಅಳವಡಿಸಿರುವುದು ದೆಹಲಿಯ ವಿಶೇಷತೆ. ಈ ವಿಷಯ ದೆಹಲಿಯಲ್ಲಿ ನೆಲೆಸಿರುವವರಿಗೆ ಅಥವಾ ನೆಲೆಸಿದ್ದವರಿಗೆ ಮಾತ್ರ ತಿಳಿದ ವಿಷಯವಾಗಿದೆ.

 

ಗ್ರಾಹಕರ ಬಳಕೆ 200 ಯೂನಿಟ್‌ಗಳಿಗಿಂತ ಕಡಿಮೆ ಇದ್ದಲ್ಲಿ ಮಾತ್ರ ಆತನಿಗೆ ಸಬ್ಸಿಡಿ ಸಿಗುವ ಷರತ್ತು ವಿಧಿಸಿರುವ ದೆಹಲಿಯ ಗ್ರಾಹಕರಿಗೆ ಒಂದಕ್ಕಿಂತ ಹೆಚ್ಚು ಮಹಡಿ ಹೊಂದಿದ್ದ ಪಕ್ಷದಲ್ಲಿ ಸಬ್ಸಿಡಿ ದೊರೆಯುವುದಿಲ್ಲ. ಅಂದರೆ ಶೇಕಡ 82 ಕ್ಕಿಂತ ಹೆಚ್ಚು ಗ್ರಾಹಕರಿಗೆ ಈ ಸಬ್ಸಿಡಿ ಸಾಮಾನ್ಯವಾಗಿ ದೊರೆಯುವುದಿಲ್ಲ ಎಂದು ಕಾಣಿಸುತ್ತದೆ.

 

ಈ ಪರಿಸ್ಥಿತಿಯಲ್ಲಿ ದೆಹಲಿಯ ಕೇಜ್ರಿವಾಲ್ ಸರ್ಕಾರಕ್ಕೆ ಈ ಸಬ್ಸಿಡಿಯು ದೊಡ್ಡ ಆರ್ಥಿಕ ಹೊರೆ ಎನಿಸುವುದಿಲ್ಲ. ವಾಸವಾಗಿರುವ ಕುಟುಂಬಗಳ ಅನುಗುಣವಾಗಿ ಒಂದಕ್ಕಿಂತ ಹೆಚ್ಚು ಗ್ರಾಹಕರನ್ನು ಹೊಂದಿರುವ ಕರ್ನಾಟಕದಲ್ಲಿ 200 ಯೂನಿಟ್‌ಗಿಂತ ಕಡಿಮೆ ಇರುವ ಮನೆಗಳೇ ಹೆಚ್ಚಾಗಿರುವುದು ಸಾಧ್ಯ. ಹೀಗಿರುವಾಗ ಕೇಜ್ರಿವಾಲರ ಈ ಸಬ್ಸಿಡಿ ತಂತ್ರವು ನಮ್ಮ ರಾಜ್ಯದಲ್ಲಿ ಯಶಸ್ವಿಯಾಗುವುದು ಎಂದು ಈಗಲೇ ಹೇಳಲಾಗದು.

 

ಕರ್ನಾಟಕದ ವಿದ್ಯುಚ್ಛಕ್ತಿಯ ಅಂಕಿ, ಅಂಶಗಳು

 

ಕರ್ನಾಟಕದಲ್ಲಿನ ವಿದ್ಯುಚ್ಛಕ್ತಿ ಗ್ರಾಹಕರ ಅಂಕಿ ಅಂಶಗಳು ಕೆಳಗೆ ನೀಡಿರುವ ಪಟ್ಟಿಯಲ್ಲಿದೆ. ಅದರ ಪ್ರಕಾರ ವಿದ್ಯುಚ್ಛಕ್ತಿ ಗ್ರಾಹಕರ ರಾಜ್ಯಾದ್ಯಂತ ಒಟ್ಟು ಸಂಖ್ಯೆ 2.762 ಕೋಟಿ ಹಾಗೂ ಒಟ್ಟು ಜನ ಸಂಖ್ಯೆ 6.16 ಕೋಟಿ ಇದೆ. ಈ ಸಂಖ್ಯೆಗಳನ್ನು ದೆಹಲಿಯ ವಿದ್ಯುಚ್ಛಕ್ತಿ ಗ್ರಾಹಕರ ಒಟ್ಟು ಸಂಖ್ಯೆ 0.623 ಕೋಟಿ ಹಾಗೂ ಒಟ್ಟು ಜನ ಸಂಖ್ಯೆ 3.12 ಕೋಟಿಗೆ ಹೋಲಿಸಿದ ಪಕ್ಷದಲ್ಲಿ ತಲಾ ಒಬ್ಬ ವ್ಯಕ್ತಿಗೆ ಇರುವ ಗ್ರಾಹಕರ ಸಂಖ್ಯೆಯಲ್ಲಿ ಭಾರಿ, ಅಂದರೆ 1:3 ವ್ಯತ್ಯಾಸವಿದ್ದು ಕರ್ನಾಟಕದಲ್ಲಿ ಹೆಚ್ಚಿನ ಗ್ರಾಹಕರು ಇರುವ ಕಾರಣ ಸಬ್ಸಿಡಿ ಕೊಡುವುದು ಅಸಾಧ್ಯ ಎಂದು ಹೇಳಬಹುದು.

 

 

ಹೀಗಿರುವಾಗ ದೆಹಲಿಯ ವಿದ್ಯುಚ್ಛಕ್ತಿಯ ಗ್ರಾಹಕರಿಗೆ ಸಬ್ಸಿಡಿ ಕೊಡುವುದು ಯಾವುದೇ ಸರ್ಕಾರಕ್ಕೆ ಆರ್ಥಿಕವಾಗಿ ದೊಡ್ಡ ಹೊಣೆಯಾಗಲಾರದು. ಆದರೆ, ಕರ್ನಾಟಕದಂತಹ ಸಣ್ಣ ಪುಟ್ಟ ಮನೆಗಳಲ್ಲೂ ಸಹ ವಿದ್ಯುಚ್ಛಕ್ತಿಯ ಮಾಪನ ಮೀಟರನ್ನು ಅಳವಡಿಸಿರುವಾಗ ಈ ಸಬ್ಸಿಡಿ ಸ್ಕೀಮನ್ನು ಜಾರಿಯಲ್ಲಿ ತರುವುದು ಸಾಧ್ಯವೇ? ದೆಹಲಿಯಲ್ಲಿ ಇರುವ ಪರಿಸ್ಥಿತಿ ಹಾಗೂ ಕರ್ನಾಟಕದಲ್ಲಿರುವ ಪರಿಸ್ಥಿತಿಗೂ ಇರುವ ವ್ಯತ್ಯಾಸ ಆಮ್ ಆದ್ಮಿ ಪಾರ್ಟಿಯ ಕರ್ನಾಟಕ ರಾಜ್ಯ ಘಟಕದ ಮುಖಂಡರಿಗೆ ತಿಳಿದಿಲ್ಲವೇ? ಈ ವಿಷಯವನ್ನು ತಿಳಿದಿದ್ದೂ ಸಹ ಈ ಮುಂಬರುವ ಕರ್ನಾಟಕ ಚುನಾವಣೆಗಳಲ್ಲಿ ಈ ತರಹದ ಆಶ್ವಾಸನೆ ಕೊಡುವುದು ಕರ್ನಾಟಕದ ಮತದಾರರಿಗೆ ಮಾಡುವ ವಂಚನೆಯಲ್ಲವೇ?

 

ಈ ಹಿನ್ನೆಲೆಯಲ್ಲಿ ದೆಹಲಿಯ ಕೇಜ್ರಿವಾಲ್ ಸರ್ಕಾರ ಪಾರದರ್ಶಕ ಸರ್ಕಾರ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಆದರೆ ಪ್ರಶ್ನಿಸಲೆಬೇಕಾದ ಒಂದು ಮುಖ್ಯ ವಿಷಯ ಏನೆಂದರೆ ದೆಹಲಿ ಸರ್ಕಾರದ ಅಧಿಕೃತ ಜಾಲತಾಣ ಮತ್ತು ಇಂಧನ ಸಚಿವಾಲಯದ ಅಧಿಕೃತ ಜಾಲತಾಣದ ಆಡಿಟ್ ರಿಪೋರ್ಟ್ ಎಂಬ ಭಾಗದಲ್ಲಿ ಕೇವಲ ವರ್ಷ 2014-2015ರ ತನಕ ಮಾತ್ರ ಪ್ರಕಟಿಸಿರುವುದು ಸಂಶಯಕ್ಕೆ ದಾರಿ ಮಾಡಿಕೊಟ್ಟಂತಿದೆ.

the fil favicon

SUPPORT THE FILE

Latest News

Related Posts