ಬೆಂಗಳೂರು; ಅಧೀಕ್ಷಕ ಅಭಿಯಂತರುಗಳ ಮುಂಬಡ್ತಿ ನೀಡುವ ಸಂಬಂಧ ಜಲಸಂಪನ್ಮೂಲ ಇಲಾಖೆಯು ನಿಯಮಬಾಹಿರವಾಗಿ ಅಂತಿಮ ಜೇಷ್ಟತಾ ಪಟ್ಟಿಯನ್ನು ಸಿದ್ಧಪಡಿಸಿದೆ. ಬಿ ಕೆ ಪವಿತ್ರ -1 ಪ್ರಕರಣದ ಜೇಷ್ಠತಾ ಪಟ್ಟಿಯಂತೆ ಕಾನೂನುಬಾಹಿರವಾಗಿ ಪ್ರಕಟಿಸಿರುವ ಇಲಾಖೆಯು, ಪರಿಶಿಷ್ಟ ಸಮುದಾಯದ ಅರ್ಹ ಅಭಿಯಂತರರನ್ನು ಮುಂಬಡ್ತಿಯಿಂದಲೇ ವಂಚಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ವಿಶೇಷವೆಂದರೆ ಪರಿಶಿಷ್ಟ ಸಮುದಾಯದ ಗೋವಿಂದ ಕಾರಜೋಳ ಅವರೇ ಜಲಸಂಪನ್ಮೂಲ ಇಲಾಖೆಯ ಸಚಿವರಾಗಿದ್ದರೂ ಪರಿಶಿಷ್ಟ ಸಮುದಾಯದ ಹಲವು ಅಧೀಕ್ಷಕ ಅಭಿಯಂತರರನ್ನು ಜೇಷ್ಠತೆ ಪಟ್ಟಿಯಿಂದಲೇ ಕೆಳಗೆ ನೂಕಲಾಗಿದೆ. ಭ್ರಷ್ಟ ಅಧಿಕಾರಿಗಳು ಸಚಿವರನ್ನೂ ದಾರಿತಪ್ಪಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಲೋಕೋಪಯೋಗಿ ಇಲಾಖೆಯಿಂದ ಶಾಶ್ವತವಾಗಿ ವರ್ಗಾವಣೆಗೊಂಡು ಜಲಸಂಪನ್ಮೂಲ ಇಲಾಖೆಯ ಸೇವೆಯಲ್ಲಿ ವಿಲೀನಗೊಂಡ ಅಧಿಕಾರಿ, ನೌಕರರುಗಳಿಗೆ ಸಂಬಂಧಿಸಿದಂತೆ ಪವಿತ್ರ-2 ಪ್ರಕರಣದ ಅನ್ವಯ ಅಂತರ್ ಜೇಷ್ಠತಾ ಪಟ್ಟಿಯನ್ನು ನಿಗದಿಪಡಿಸಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಖುದ್ದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್ ಅವರು 2022ರ ಫೆ.15ರಂದು ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಲೋಕೋಪಯೋಗಿ ಇಲಾಖೆಯು ನಿಯಮ 42ರಡಿ ಸ್ಥಾನಪನ್ನ ಬಡ್ತಿ ನೀಡಿದ ಇಂಜನಿಯರ್‌ಗಳಿಗೆ ಲೋಕೋಪಯೋಗಿ ಇಲಾಖೆಯು ಈವರೆಗೆ ಜೇಷ್ಠತೆಯನ್ನು ನಿಗದಿಪಡಿಸದೇ ಇರುವ ಹಿನ್ನೆಲೆಯಲ್ಲಿ ಈ ಇಲಾಖೆಯ ಸೇವೆಯಲ್ಲಿ ವಿಲೀನಗೊಂಡವರುಗಳ ಅಂತಿಮ ಜೇಷ್ಠತೆ ಪಟ್ಟಿಯನ್ನು ಪ್ರಕಟಿಸಲು ಸಾಧ್ಯವಾಗಿರುವುದಿಲ್ಲ. ಲೋಕೋಪಯೋಗಿ ಇಲಾಖೆಯು ಅವರುಗಳ ಅಂತರ್‌ಜೇಷ್ಠತೆಯ ಕುರಿತಾದ ಮಾಹಿತಿಯನ್ನು ನೀಡದಿದ್ದಲ್ಲಿ ಅವರುಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ಜಲಸಂಪನ್ಮೂಲ ಇಲಾಖೆಯಲ್ಲಿ ಪ್ರಕಟಿಸಲು ಸಾಧ್ಯವಾಗುವುದಿಲ್ಲ,’ ಎಂದು ಪಿಡಬ್ಲ್ಯುಡಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ ಎಚ್ ಅನಿಲ್‌ಕುಮಾರ್ ಅವರಿಗೆ ಬರೆದಿದ್ದ ಪತ್ರದಲ್ಲಿ ವಿವರಿಸಿದ್ದರು.
ಪತ್ರ ಬರೆದು ಮೂರು ತಿಂಗಳಾದರೂ ಪಿಡಬ್ಲ್ಯೂಡಿ ಇಲಾಖೆಯು ಯಾವುದೇ ಮಾಹಿತಿಯನ್ನೂ ನೀಡಿಲ್ಲ.
ಆದರೂ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಆತುರಾತರವಾಗಿ ಅಧೀಕ್ಷಕ ಅಭಿಯಂತರ ಮುಂಬಡ್ತಿ ಪಟ್ಟಿಯ ಜೇಷ್ಠತಾ ಪಟ್ಟಿಯನ್ನು ನಿಗದಿಪಡಿಸಿದ್ದಾರೆ. ಜೇಷ್ಠತಾ ಪಟ್ಟಿ ಸೇರ್ಪಡೆಗೆ ಅನರ್ಹರಾಗಿದ್ದರೂ ಅಂತಹ ಅಧೀಕ್ಷಕ ಅಭಿಯಂತರರನ್ನು ಮುಂಬಡ್ತಿಯ ಜೇಷ್ಠತಾ ಪಟ್ಟಿಯಲ್ಲಿ ನಿಗದಿಗೊಳಿಸಿ ಒಬೊಬ್ಬರಿಂದಲೂ ತಲಾ 50 ಲಕ್ಷ ರು.ಗಳನ್ನು ವಸೂಲಿ ಮಾಡಲಾಗಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.
ನಿಯಮಬಾಹಿರವಾಗಿ ಜೇಷ್ಠತಾ ಪಟ್ಟಿ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಅಧೀಕ್ಷಕ ಅಭಿಯಂತರ ರಮೇಶ್ ಬಿ ವಿ ಎಂಬುವರು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್ ಅವರಿಗೆ 2022ರ ಮೇ 12ರಂದು ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಹಿರಿತನದ ಆಧಾರದ ಮೇಲೆ ಜೇಷ್ಟತಾ ಪಟ್ಟಿ ಸಿದ್ಧಪಡಿಸಬೇಕಿದ್ದರೂ ಹಿರಿತನವಿಲ್ಲದೇ ಕಿರಿಯರನ್ನು ಮೇಲ್ಪಂಕ್ತಿಯಲ್ಲಿ ನಿಗದಿಪಡಿಸುವ ಮೂಲಕ ಪರಿಶಿಷ್ಟ ಸಮುದಾಯದ ಹಿರಿಯ ಅಭಿಯಂತರರನ್ನು ಕೆಳಗೆ ನೂಕಲ್ಪಟ್ಟಿರುವುದು ದೂರಿನಿಂದ ಮೇಲ್ನೋಟಕ್ಕೆ ಕಂಡು ಬಂದಿದೆ. ಇಲಾಖೆಯಲ್ಲಿ ಮುಂಬಡ್ತಿ ನೀಡುವುದಕ್ಕೆ ಸಂಬಂಧಿಸಿದಂತೆ ಉನ್ನತಾಧಿಕಾರಿಗಳು ಹಣ ವಸೂಲಿ ಮಾಡಿದ್ದರೂ ಜಲಸಂಪನ್ಮೂಲ ಇಲಾಖೆಯ ಸಚಿವ ಗೋವಿಂದ ಕಾರಜೋಳ ಅವರು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ದೂರಿನಲ್ಲೇನಿದೆ?
ಅಧೀಕ್ಷಕ ಅಭಿಯಂತರರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ನನ್ನ ಜೇಷ್ಠತಾ ಸಂಖ್ಯೆ 3059ಎ ಆಗಿದ್ದು ನನ್ನ ಹೆಸರನ್ನು ಅಧಿಸೂಚನೆಯಲ್ಲಿ ಕ್ರಮ ಸಂಖ್ಯೆ 40ರಲ್ಲಿ ನಿಗದಿಗೊಳಿಸಿ ನನಗಿಂತ ಕಿರಿಯರಾದ ಚಂದ್ರಶೇಖರ್ ಎಂ ( ಕ್ರಮ ಸಂಖ್ಯೆ 3062) ಅವರನ್ನು ಅಧಿಸೂಚನೆಯಲ್ಲಿ ಕ್ರಮ ಸಂಖ್ಯೆ 13ರಲ್ಲಿ ನಿಗದಿಪಡಿಸಲಾಗಿದೆ. ಈ ಅಧಿಸೂಚನೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಸೂಚನೆ (ದಿನಾಂಕ;27-08-2019, ಸಂಖ್ಯೆ ಲೋಇ 101 ಸೇಎಸು 2019 ಹಾಗೂ ಲೋಇ 100 ಸೇಎಸು 2019) ಅನ್ವಯ ಅಧೀಕ್ಷಕ ಅಭಿಯಂತರರು ಹಾಗೂ ಕಾರ್ಯಪಾಲಕ ಅಭಿಯಂತರ ವೃಂದದ ಜೇಷ್ಠತಾ ಸಂಖ್ಯೆ ಪರಿಗಣಿಸಿರುವುದು ಬಿ ಕೆ ಪವಿತ್ರ -1 ಪ್ರಕರಣದ ಜೇಷ್ಠತಾ ಪಟ್ಟಿಯಂತೆ ಪ್ರಕಟಿಸಿರುವುದು ಕಂಡು ಬರುತ್ತದೆ ಎಂದು ದೂರಿದ್ದಾರೆ.
ಅಲ್ಲದೆ ಕ್ರಮ ಸಂಖ್ಯೆ 7ರಲ್ಲಿ ಈ ಜೇಷ್ಠತಾ ಪಟ್ಟಿಯು ಲೋಕೋಪಯೋಗಿ ಇಲಾಖೆಯ ಅಧಿಸೂಚನೆಗಳ ಪ್ರಕಾರ ಪ್ರಕಟಿಸಲಾಗುವ ಅಧೀಕ್ಷಕ ಅಭಿಯಂತರರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಆಗುವ ಮಾರ್ಪಾಡು/ಬದಲಾವಣೆಗಳಿಗೆ ಅನ್ವಯ ಪರಿಷ್ಕರಿಸುವ ಷರತ್ತಿಗೆ ಒಳಪಟ್ಟಿದೆ ಎಂದು ತಿಳಿಸಿರುವುದು ಅಧಿಸೂಚನೆಯಿಂದ ತಿಳಿದು ಬಂದಿದೆ.
ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಸಿದ್ಧಪಡಿಸಿರುವ ಅಂತಿಮ ಜೇಷ್ಠತಾ ಪಟ್ಟಿಯು ಬಿ ಕೆ ಪವಿತ್ರ -1 ಪ್ರಕರಣದ ಜೇಷ್ಠತಾ ಪಟ್ಟಿಯಂತೆ ಕಂಡು ಬಂದಿದೆ. ಅಲ್ಲದೆ ಲೋಕೋಪಯೋಗಿ ಇಲಾಖೆಯು ಅಧೀಕ್ಷಕ ಅಭಿಯಂತರರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸದೇ ಇರುವುದರಿಂದ ಈಗಾಗಲೇ ಜಲಸಂಪನ್ಮೂಲ ಇಲಾಖೆಯು ಪ್ರಕಟಿಸಿರುವ ಅಧಿಸೂಚನೆಯಂತೆ ಮುಂದಿನ ಬಡ್ತಿ ಪ್ರಕ್ರಿಯೆ ಕೈಗೊಂಡರೆ ಪರಿಶಿಷ್ಟ ಸಮುದಾಯದ ಹಲವು ಅಭಿಯಂತರರುಗಳಿಗೆ ಅನ್ಯಾಯವಾಗಲಿದೆ ಎಂದು ಗೊತ್ತಾಗಿದೆ.
ಅಧಿಸೂಚನೆಯಲ್ಲೇನಿದೆ?
ಜಲಸಂಪನ್ಮೂಲ ಇಲಾಖೆಯ ಸೇವೆಯಲ್ಲಿ ಶಾಶ್ವತವಾಗಿ ವಿಲೀನ ಹೊಂದಲು ಆನ್‌ಲೈನ್ ಮುಖಾಂತರ ಅಭಿಮತ ಸಲ್ಲಿಸಿದ ಅಧೀಕ್ಷಕ ಅಭಿಯಂತರರ ಸೇವೆಯನ್ನು ಜಲಸಂಪನ್ಮೂಲ ಇಲಾಖೆಯ ಸೇವೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು1977ರ ನಿಯಮ 16(ಎ ಅನ್ವಯ ಶಾಶ್ವತವಾಗಿ ವಿಲೀನಗೊಳಿಸಲಾಗಿದೆ ಎಂದು 2022ರ ಮೇ 10ರಂದು ಅಧಿಸೂಚನೆ ಹೊರಡಿಸಲಾಗಿದೆ.
ಅಲ್ಲದೆ 2021ರ ಡಿಸೆಂಬರ್ 2021ರಲ್ಲಿ ಅಧೀಕ್ಷಕ ಅಭಿಯಂತರರ ವೃಂದದಲ್ಲಿ ನಿಗದಿಪಡಿಸಿದ ಅರ್ಹತಾ ದಿನಾಂಕದ ಆಧಾರದ ಮೇಲೆ ಜಲಸಂಪನ್ಮೂಲ ಇಲಾಖೆಯ ಸೇವೆಯಲ್ಲಿ ಶಾಶ್ವತವಾಗಿ ವಿಲೀನ ಹೊಂದಿರುವ ಅಧೀಕ್ಷಕ ಅಭಿಯಂತರುಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು 2022ರ ಜನವರಿ 1ರಂದು ಪ್ರಕಟಿಸಲಾಗಿತ್ತು. ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕಕ್ಕೆ ಅರ್ಹತಾ ದಿನಾಂಕ ಲಭ್ಯವಾಗದೇ ಇರುವ ಅಧೀಕ್ಷಕ ಇಂಜನಿಯರ್‌ಗಳ ಪಟ್ಟಿಯನ್ನೂ ನೀಡಿತ್ತು.
ಲೋಕೋಪಯೋಗಿ ಇಲಾಖೆಯ ಅಧಿಸೂಚನೆ ಪ್ರಕಾರ ಪರಿಶಿಷ್ಟ ಸಮುದಾಯಕ್ಕೆ ಸೇರಿದ 41 ಮಂದಿ ಅಭಿಯಂತರರಿದ್ದಾರೆ. ಈ ಪೈಕಿ 7 ಮಂದಿ ಈಗಾಗಲೇ ನಿವೃತ್ತಿಯಾಗಿರುವುದು ಜೇಷ್ಠತಾ ಪಟ್ಟಿಯಿಂದ ತಿಳಿದು ಬಂದಿದೆ.