ಮುಂಗಾರು ಪೂರ್ವ ಮಳೆಗೆ 21 ಸಾವಿರ ಎಕರೆ ಬೆಳೆನಾಶ; ಬೆಂಗಳೂರು ಬಿಟ್ಟ ಕದಲದ ಮಂತ್ರಿಮಂಡಲ

ಬೆಂಗಳೂರು; ಕಳೆದ ಮೂರು ತಿಂಗಳಿನಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ ರಾಜ್ಯದಲ್ಲಿ ಇದುವರೆಗೆ 12, 719 ಎಕರೆ ಮತ್ತು 9,332.03 ಎಕರೆ ವಿಸ್ತೀರ್ಣ ತೋಟಗಾರಿಕೆ ಪ್ರದೇಶಗಳಲ್ಲಿದ್ದ ಬೆಳೆ ನಾಶವಾಗಿದೆ. ಆದರೆ ಕೃಷಿ ಮತ್ತು ತೋಟಗಾರಿಕೆ ಸಚಿವರೂ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಬೆಂಗಳೂರು ನಗರದಲ್ಲಿ ತಳವೂರಿದ್ದಾರೆ.

 

ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿಗಳು ಪ್ರಾಥಮಿಕ ವರದಿಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಲ್ಲಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ. 2022ರ ಮೇ 19ರ ತನಕದ ವರದಿ ಮಾತ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬಳಿ ಇದೆ. ಕಳೆದೆರಡು ದಿನಗಳಿಂದ ರಾಜ್ಯದ ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆ ಭಾಗದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಹಾನಿಯಾಗಿದೆ.

 

ಮಾರ್ಚ್‌ ತಿಂಗಳಿನಿಂದ ಮೇ 19ರವರೆಗೆ ರಾಜ್ಯದಲ್ಲಿ 62 ಮಂದಿ ಬಲಿಯಾಗಿದ್ದಾರೆ. 201 ದೊಡ್ಡ ಪ್ರಾಣಿಗಳು, 652 ಚಿಕ್ಕ ಪ್ರಾಣಿಗಳು, 103 ಮನೆಗಳು ಪೂರ್ಣ ಮತ್ತು 5,015 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಅದೇ ರೀತಿ 20 ಶಾಲೆಗಳಿಗೆ ಹಾನಿಯಾಗಿದೆ ಎಂಬುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.
ಕೊಪ್ಪಳದಲ್ಲಿ 5,584.9 ಎಕರೆ, ದಾವಣಗೆರೆಯಲ್ಲಿ 1,878.06 ಎಕರೆ, ಯಾದಗಿರಿಯಲ್ಲಿ 3,481 ಎಕರೆ, ದಕ್ಷಿಣ ಕನ್ನಡದಲ್ಲಿ ಬೆಳೆ ನಷ್ಟ ಶೂನ್ಯವೆಂದು ತೋರಿಸಲಾಗಿದೆ. ಕೋಲಾರದಲ್ಲಿ 6, 341.83 ಎಕರೆ ಪ್ರದೇಶದಲ್ಲಿದ್ದ ತೋಟಗಾರಿಕೆ ಬೆಳೆ ನಷ್ಟವಾಗಿದೆ.

 

ಕಳೆದೆರಡು ತಿಂಗಳಿನಿಂದಲೂ ರಾಜ್ಯದಲ್ಲಿ ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದರೂ ಮುಖ್ಯಮಂತ್ರಿಯಾದಿಯಾಗಿ ಯಾವೊಬ್ಬ ಸಚಿವರೂ ಬೆಳೆ ನಷ್ಟ ಆಗಿರುವ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿ ನೇಮಕವಾಗಿರುವ ಐಎಎಸ್‌ ಅಧಿಕಾರಿಗಳು ಸಹ ಸ್ಥಳ ಪರಿಶೀಲನೆ ಮಾಡುವುದರಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಗೊತ್ತಾಗಿದೆ.

 

the fil favicon

SUPPORT THE FILE

Latest News

Related Posts