ಕಳಂಕಿತ ಎಂಡಿ ಪರ ವಕಾಲತ್ತು; ಮಾಜಿ ಪ್ರಧಾನಿ ಪತ್ರದ ಬೆನ್ನಲ್ಲೇ ಸಚಿವ ಮಾಧುಸ್ವಾಮಿ ಪತ್ರವೂ ಬಹಿರಂಗ

photo credit-frontlinehindu

ಬೆಂಗಳೂರು; ಹೇಮಾವತಿ, ಗೊರೂರು ವಲಯದಲ್ಲಿ ಎಲ್ಲಾ ಭಾರೀ ನೀರಾವರಿ ಯೋಜನೆಗಳ ಟೆಂಡರ್‌ನಲ್ಲಿ ಗೋಲ್‌ಮಾಲ್‌ ಮಾಡಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ ಜೈ ಪ್ರಕಾಶ್‌ ಅವರ ಪರ ಇದೀಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಕೂಡ ಬೆನ್ನಿಗೆ ನಿಂತಿದ್ದಾರೆ.

 

ಕೆ ಜೈಪ್ರಕಾಶ್‌ ಅವರು ಇದೇ ಮೇ 31ಕ್ಕೆ ನಿವೃತ್ತಿಯಾಗುತ್ತಿದ್ದು ಇವರ ಸೇವಾವಧಿಯನ್ನು ಇನ್ನೂ 2 ವರ್ಷಗಳವರೆಗೆ ವಿಸ್ತರಿಸಬೇಕು ಎಂದು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರು ಪತ್ರ ಬರೆದಿದ್ದರ ಬೆನ್ನಲ್ಲೇ ಜೆ ಸಿ ಮಾಧುಸ್ವಾಮಿ ಅವರು ಕೂಡ 2022ರ ಮೇ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಇವರು 18 ವರ್ಷಗಳಿಗೂ ಮಿಗಿಲಾದ ಸೇವೆಯನ್ನು ಜಲಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದು ಕಳೆದ 2 ವರ್ಷಗಳಿಂದ ಕೆಎನ್‌ಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿ ಅತ್ಯುತ್ತಮ ಕೆಲಸ ನಿರ್ವಹಿಸಿರುತ್ತಾರೆ. ಕೆಎನ್‌ಎನ್‌ಎಲ್‌ನಿಂದ ಈ ಭಾಗದಲ್ಲಿ ಕೈಗೊಂಡಿರುವ ಕೆಲಸಗಳನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ಮತ್ತು ಇನ್ನಿತರ ಮಹತ್ತರ ಯೋಜನೆಗಳ ನಿರ್ವಹಣೆಗೆ ಇವರ ಸೇವೆ ಅತ್ಯವಶ್ಯಕವಾಗಿರುತ್ತದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು ಪ್ಯಾರಾ 95(2)ರ ಅನ್ವಯ ಒಂದು ವರ್ಷದ ಅವಧಿಗೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿಯೇ ಮುಂದುವರೆಸಬೇಕು,’ ಎಂದು ಜೆ ಸಿ ಮಾಧುಸ್ವಾಮಿ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

 

ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಬರೆದಿರುವ ಪತ್ರದ ಪ್ರತಿ

 

ಕೆ ಜೈಪ್ರಕಾಶ್‌ ಅವರನ್ನು ನಿವೃತ್ತಿ ನಂತರವೂ 2 ವರ್ಷದ ಅವಧಿಗೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿಯೇ ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2022ರ ಮೇ 16ರಂದು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರು ಪತ್ರ ಬರೆದಿದ್ದನ್ನು ಸ್ಮರಿಸಬಹುದು.

ಕಿಕ್‌ಬ್ಯಾಕ್‌ ಆರೋಪಿ ಅಧಿಕಾರಿ ಪರ ಅಖಾಡಕ್ಕಿಳಿದ ಮಾಜಿ ಪ್ರಧಾನಿ; ಅಧಿಕಾರಾವಧಿ 2 ವರ್ಷ ವಿಸ್ತರಣೆಗೆ ಪತ್ರ

ಹೇಮಾವತಿ ಮತ್ತು ಗೊರೂರು ವಲಯದಲ್ಲಿ ಅನುಷ್ಠಾನಗೊಂಡಿರುವ ಭಾರೀ ನೀರಾವರಿ ಯೋಜನೆಗಳ ಟೆಂಡರ್‌ಗಳಲ್ಲಿ ದೊಡ್ಡ ಮೊತ್ತದ ಕಿಕ್‌ ಬ್ಯಾಕ್ ಪಡೆದು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪಕ್ಕೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪ್ರಧಾನ ಇಂಜಿನಿಯರ್‌ ಕೆ ಜೈಪ್ರಕಾಶ್‌ ಗುರಿಯಾಗಿದ್ದಾರೆ.

 

ಕೆ ಜೈಪ್ರಕಾಶ್‌ ವಿರುದ್ಧ ದೂರಿನ ಅಂಶಗಳೇನು?

 

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ ಜಯಪ್ರಕಾಶ್‌ ಮತ್ತು ಪ್ರಧಾನ ವ್ಯವಸ್ಥಾಪಕ ಗಂಗಾಧರ್‌ ಅವರ ವಿರುದ್ಧ ಜವರೇಗೌಡ ಎಂಬುವರು ಎಸಿಬಿಗೆ ದೂರು ಸಲ್ಲಿಸಿದ್ದರು. ಭಾರೀ ನೀರಾವರಿ ಯೋಜನೆಗಳ ಟೆಂಡರ್‌ ಮತ್ತು ಎಲ್‌ಒಸಿ ಬಿಡುಗಡೆಯಲ್ಲಿ ದೊಡ್ಡಮೊತ್ತದ ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು.

 

ಕೆ ಜೈಪ್ರಕಾಶ್‌ ಅವರು ತಮ್ಮ ಮಗನನ್ನು ಬಿಎಸ್‌ಆರ್‌ ಮತ್ತು ಸ್ಟಾರ್‌ ಬಿಲ್ಡರ್‌ ಕಂಪನಿಯಲ್ಲಿ ಪಾಲುದಾರರನ್ನಾಗಿ ಮಾಡಿ, ಹೇಮಾವತಿ, ಗೊರೂರು ವಲಯದಲ್ಲಿ ಎಲ್ಲಾ ಭಾರೀ ನೀರಾವರಿ ಯೋಜನೆಗಳ ಟೆಂಡರ್‌ನಲ್ಲಿ ಗೋಲ್‌ಮಾಲ್‌ ಮಾಡಿರುತ್ತಾರೆ ಎಂದು ಜವರೇಗೌಡ ಎಂಬುವರು ದೂರಿನಲ್ಲಿ ವಿವರಿಸಿದ್ದಾರೆ.

 

ಜೈಪ್ರಕಾಶ್‌ ಮತ್ತು ಪ್ರಧಾನ ವವ್ಯವಸ್ಥಾಪಕ ಬಿ ಕೆ ಗಂಗಾಧರ್‌ ಸೇರಿ ಈ ಎರಡೂ ಕಂಪನಿಗಳಿಗೆ ಆದ್ಯತೆ ಮೇಲೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿರುತ್ತಾರೆ. ಮತ್ತು ಟೆಂಡರ್‌ ಪರಿಮಾಣಗಳನ್ನು ಮೀರಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸಲಾಗಿದೆ ಎಂದು ಪರಿಗಣಿಸಿ ಈ ಎರಡೂ ಕಂಪನಿಗಳಿಗೆ ನೀಡಿ ಕಿಕ್‌ಬ್ಯಾಕ್‌ ಪಡೆದಿರುತ್ತಾರೆ. ಇವರ ಅಧಿಕಾರವಾಧಿಯಲ್ಲಿ ಟೆಂಡರ್‌ಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಬಯಲಿಗೆಳೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸಿಬಿಗೆ ದೂರಿದ್ದರು.

 

ಎಸಿಬಿ ಮಾಡಿದ್ದೇನು?

 

ಈ ದೂರು ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ ಒಳಪಡದ ಕಾರಣ ಜಲಸಂಪನ್ಮೂಲ ಇಲಾಖೆಯ ವಿಚಕ್ಷಣಾ ದಳದ ಮೂಲಕ ತನಿಖೆ ನಡೆಸಬೇಕು ಎಂದು ಎಸಿಬಿಯ ಎಡಿಜಿಪಿಗೆ ಎಸ್ಪಿ ಯತೀಶ್‌ಚಂದ್ರ ಅವರು 2021ರ ಆಗಸ್ಟ್‌ 16ರಂದು ಪತ್ರ ಬರೆದಿದ್ದರು.

 

ಈ ಅರ್ಜಿಯನ್ನು ಪರಿಶೀಲಿಸಿದ್ದ ಎಸಿಬಿಯು ‘ ಅರ್ಜಿಯಲ್ಲಿನ ವಿಷಯವು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವ್ಯಾಪ್ತಿಗೆ ಒಳಪಡದೇ ಇರುವುದರಿಂದ ಇಲಾಖೆಯ ಆಡಳಿತಾತ್ಮಕ ವಿಷಯವಾಗಿರುವುದರಿಂದ ದೂರು ಅರ್ಜಿಯಲ್ಲಿ ಜಾಗೃತ ಅಧಿಕಾರಿಗಳ ಪರಿಶೀಲನೆ ಸಲುವಾಗಿಜಲಸಂಪನ್ಮೂಲ ಇಲಾಖೆಗೆ ಕಳಿಸಿಕೊಡಬೇಕು ಎಂದು ಎಸಿಬಿ ಎಡಿಜಿಪಿ ಕಚೇರಿಗೆ ವರದಿ ಸಲ್ಲಿಸಿದ್ದರು ಎಂಬುದು ಪತ್ರದಿಂದ ತಿಳಿದು ಬಂದಿದೆ.

 

‘ಪೊಲೀಸ್‌ ಇನ್ಸ್‌ಪೆಕ್ಟರ್‌ ಸಲ್ಲಿಸಿರುವ ವರದಿಯಂತೆ ಎಸ್‌ ಎಂ ಜವರೇಗೌಡ ಅವರು ನೀಡಿರುವ ದೂರು ಅರ್ಜಿಯಲ್ಲಿನ ಆರೋಪಗಳ ಬಗ್ಗೆ ಜಲಸಂಪನ್ನೂಲ ಇಲಾಖೆಯ ಜಾಗೃತ ಅಧಿಕಾರಿಗಳಿಂದ ಪರಿಶೀಲನೆ ಕೈಗೊಳ್ಳಬೇಕು. ಇದನ್ನು ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಕಳಿಸಿಕೊಡಬೇಕು,’ ಎಂದು ಎಸಿಬಿಯ ಎಸ್ಪಿ ಯತೀಶ್‌ ಚಂದ್ರ ಅವರು 2021ರ ಆಗಸ್ಟ್‌ 16ರಂದು ಎಸಿಬಿಯ ಎಡಿಜಿಪಿ ಅವರಿಗೆ ಪತ್ರ ಬರೆದಿದ್ದರು.

the fil favicon

SUPPORT THE FILE

Latest News

Related Posts