‘ದಿ ಫೈಲ್‌, ವಾರ್ತಾಭಾರತಿ’ ವರದಿ ಪರಿಣಾಮ; ಅಣ್ಣೂರುಕೇರಿ ಶಾಲೆ ಮಕ್ಕಳಿಗೆ ಶೌಚಾಲಯ ನಿರ್ಮಾಣಕ್ಕೆ ಕ್ರಮ

ಬೆಂಗಳೂರು; ಶೌಚಾಲಯವಿಲ್ಲದೇ ತೀವ್ರ ಮುಜುಗರಕ್ಕೊಳಗಾಗಿ ಮುಖ್ಯಮಂತ್ರಿಗೆ ಪತ್ರ ಬರೆದು ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದ್ದ ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿ ಸರ್ಕಾರಿ ಪ್ರೌಢಶಾಲೆ ಮಕ್ಕಳ ಅಹವಾಲು ಕಡೆಗೂ ಫಲ ಕೊಟ್ಟಿದೆ.

 

ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯಕ್ಕೂ ಪರದಾಡುತ್ತಿದ್ದರ ಬಗ್ಗೆ ಮುಖ್ಯಮಂತ್ರಿಗೆ ಬರೆದಿದ್ದ ಪತ್ರವನ್ನಾಧರಿಸಿ ‘ದಿ ಫೈಲ್‌’ ಮತ್ತು ‘ವಾರ್ತಾಭಾರತಿ’ ಪತ್ರಿಕೆಯು ವರದಿ ಪ್ರಕಟಿಸುತ್ತಿದ್ದಂತೆ ಮಾಜಿ ಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ಶಾಲೆಗೆ ಶೌಚಾಲಯ ನಿರ್ಮಾಣ ಮಾಡಿಕೊಡುವ ಸಂಬಂಧ ಚಾಮರಾಜನಗರ ಡಿಡಿಪಿಐಯೊಂದಿಗೆ ಮಾತನಾಡಿ ಶಾಲೆಗೆ ಶೌಚಾಲಯ ನಿರ್ಮಾಣ ಮಾಡಿಕೊಡಲು ಸೂಚಿಸಿದ್ದಾರೆ.

 

ಅವರ ಸೂಚನೆಯಂತೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಾಣ ಮಾಡುವ ಸಂಬಂಧ ಜಾಗವನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗುರುತಿಸಿದ್ದಾರೆ. ಇದನ್ನು ಖುದ್ದು ಮಾಜಿ ಶಿಕ್ಷಣ ಸಚಿವ ಎಸ್‌ ಸುರೇಶ್‌ ಕುಮಾರ್‌ ಅವರು ಖಚಿತಪಡಿಸಿದ್ದಾರೆ. ಇದು ‘ದಿ ಫೈಲ್‌ ಮತ್ತು ವಾರ್ತಾಭಾರತಿ’ ಪತ್ರಿಕೆಯ ವರದಿಯ ಫಲಶೃತಿ.

 

ಆದರೆ ಹಾಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಪ್ರಕರಣದ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆಯಾಗಲೀ, ಕ್ರಮವನ್ನಾಗಲೀ ಕೈಗೊಂಡಿಲ್ಲ. ಆದರೆ ಮಾಜಿ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ತಕ್ಷಣ ಪ್ರತಿಕ್ರಿಯಿಸುವ ಮೂಲಕ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 

‘ಅಣ್ಣೂರು ಗ್ರಾಮ ಪಂಚಾಯ್ತಿಯ ಶಾಲೆ ಬಗ್ಗೆ ವರದಿ, ಮಾಹಿತಿ ಮತ್ತು ವಿದ್ಯಾರ್ಥಿನಿಯರು ಮುಖ್ಯಮಂತ್ರಿಗೆ ಬರೆದಿದ್ದ ಪತ್ರ ಕುರಿತು ಚಾಮರಾಜನಗರ ಡಿಡಿಪಿಐ ಮತ್ತು ಶಾಸಕರ ಜತೆ ಮಾತನಾಡಿದ್ದೇನೆ. ಆ ಶಾಲೆಯ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇವತ್ತು ಜಾಗದ ಮಾರ್ಕಿಂಗ್‌ ಮಾಡಿದ್ದಾರೆ. ಬಹುಶಃ ಶೀಘ್ರದಲ್ಲಿ ನಿರ್ಮಾಣ ಆಗುತ್ತೆ. ಐದೈದು ಘಟಕಗಳಿರುವ ಶೌಚಾಲಯ ನಿರ್ಮಾಣ ಆಗುತ್ತೆ,’ ಎಂದು ಎಸ್‌ ಸುರೇಶ್‌ಕುಮಾರ್‌ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದ್ದಾರೆ.

 

ಶೌಚಾಲಯ ನಿರ್ಮಾಣಕ್ಕೆ ಅಧಿಕಾರಿಗಳು ಜಾಗ ಪರಿಶೀಲನೆ ನಡೆಸುತ್ತಿರುವುದು

 

ಅದೇ ರೀತಿ ಬೆಂಗಳೂರು ನಗರದಲ್ಲಿರುವ ನೈಜ ಹೋರಾಟಗಾರರ ವೇದಿಕೆಯ ಎಚ್‌ ಎಂ ವೆಂಕಟೇಶ್‌ ಅವರು ಚಾಮರಾಜನಗರ ಡಿಡಿಪಿಐ ಮಂಜುನಾಥ್‌ ಅವರೊಂದಿಗೆ ಈ ಕುರಿತು ಚರ್ಚಿಸಿದ್ದಾರೆ. ಶಾಶ್ವತ ಶೌಚಾಲಯ ನಿರ್ಮಾಣ ಆಗುವವರೆಗೂ ತಕ್ಷಣವೇ ತಾತ್ಕಾಲಿಕ ಇ-ಟಾಯ್ಲೆಟ್‌ಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಶಿಕ್ಷಣ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಹರಿದು ಬರುತ್ತಿದ್ದರೂ ಗ್ರಾಮೀಣ ಶಾಲೆಗೆ ಶೌಚಾಲಯ ನಿರ್ಮಾಣ ಮಾಡಿಕೊಡದಿರುವುದರ ಬಗ್ಗೆ ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

‘ನಮ್ಮ ಶಾಲೆಯಲ್ಲಿ ಒಟ್ಟು 132 ವಿದ್ಯಾರ್ಥಿಗಳಿದ್ದೇವೆ. ಆದರೆ ನಮಗಿರುವುದು ಒಂದೇ ಒಂದು ಶೌಚಾಲಯ. ಶೌಚಾಲಯಕ್ಕೆ ಸರದಿಯಲ್ಲಿ ಹೋಗಬೇಕು. ಕನಿಷ್ಠ 30 ನಿಮಿಷ ಸರದಿಯಲ್ಲಿ ನಿಲ್ಲಬೇಕು. ಇದು ನನಗೆ ತುಂಬಾ ಮುಜುಗರವನ್ನುಂಟು ಮಾಡುತ್ತಿದೆ. ತಾವು ನನ್ನನ್ನು ಮಗಳು ಎಂದು ಭಾವಿಸಿ ಶೌಚಾಲಯ ಕಟ್ಟಿಸಿಕೊಡಿ, ನಾನು ಕೂಡಿಟ್ಟ ಹಣ 25 ರು.ಗಳನ್ನು ಕೊಡಲು ಸಿದ್ಧಳಿದ್ದೇನೆ,’

 

‘ಎಲ್ಲಿದೆ ಶೌಚಮುಕ್ತ ಭಾರತ? ನಾನು ಶಾಲೆ ಬಿಡಲು ಶೌಚಾಲಯವೇ ಕಾರಣ. ಇಲ್ಲಿ ಶೌಚಾಲಯ ಇಲ್ಲದಿರುವುದರಿಂದಲೇ ನಾನು ಶಾಲೆ ಬಿಡಲು ತೀರ್ಮಾನಿಸಿದ್ದೇನೆ. ನನ್ನ ಜಾಗದಲ್ಲಿ ನಿಮ್ಮ ಮಗನೋ…ಮಗಳೋ ಇದ್ದರೆ ಏನು ಮಾಡುತ್ತೀದ್ದೀರಿ,’ ಎಂದು ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಪತ್ರ ಚಳುವಳಿ ಆರಂಭಿಸಿದ್ದರು.

 

‘ಶೌಚಾಲಯ ಕಟ್ಟಿಕೊಡಲು ಕೂಡಿಟ್ಟ ಹಣವನ್ನು ನೀಡುತ್ತೇವೆ,’ ಎಂದು ಹಲವು ಮಕ್ಕಳು ಪತ್ರದಲ್ಲಿ ವಿವರಿಸಿದ್ದಾರೆ. 2 ರು.ನಿಂದ 50 ರು.ವರೆಗೆ ಕೂಡಿಟ್ಟ ಹಣವನ್ನು ಕೊಡಲು ಸಿದ್ಧರಿದ್ದೇವೆ ಎಂದು ಪತ್ರದಲ್ಲಿ ಮಕ್ಕಳು ಹೇಳಿದ್ದಾರೆ. ‘ ದಯಾಮಯಿಗಳಾದ ತಾವು ನನ್ನನ್ನು ನಿಮ್ಮ ಮಗ ಎಂದು ಭಾವಿಸಿ ಒಂದು ಶೌಚಾಲಯವನ್ನು ಕಟ್ಟಿಸಿಕೊಡಬೇಕು. ಶೌಚಾಲಯ ಇಲ್ಲದಿರುವುದು ನನಗೆ ತುಂಬಾ ದುಃಖದ ವಿಷಯ. ಎಲ್ಲಿದೆ ಸ್ವಚ್ಛ ಭಾರತ,’ ಎಂದೂ ಪತ್ರದಲ್ಲಿ ಪ್ರಶ್ನಿಸಿದ್ದರು. ಈ ಕುರಿತು ‘ದಿ ಫೈಲ್‌’ 2022ರ ಫೆ.24ರಂದು ವರದಿ ಪ್ರಕಟಿಸಿತ್ತು.

‘ತುಂಬಾ ಮುಜುಗರ, ನಿಮ್ಮ ಮಗಳೆಂದು ಶೌಚಾಲಯ ಕಟ್ಟಿಸಿಕೊಡಿ’; ಸಿಎಂ ಮೊರೆ ಹೊಕ್ಕ ಗಡಿಜಿಲ್ಲೆ ಮಕ್ಕಳು

 

2021-22ನೇ ಸಾಲಿನ ಆಯವ್ಯಯದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಅಡಿಯ ಶಾಲೆಗಳಿಗೆ ಮೂಲಭೂತ ಸೌಲಭ್ಯ ಯೋಜನೆಗೆ (ಲೆಕ್ಕ ಶೀರ್ಷಿಕೆ; 4202-01-202-1-05-133) ಘೋಷಿಸಿದ್ದ ಅನುದಾನದ ಪೈಕಿ 15 ಕೋಟಿ ಮೊತ್ತದ ಅನುದಾನ ಕ್ರಿಯಾಯೋಜನೆಗೆ 2022ರ ಫೆಬ್ರುವರಿ 23ರಂದು ಅನುಮೋದನೆ ನೀಡಿ ಅನುದಾನ ಬಿಡುಗಡೆಗೆ ಆದೇಶ ಹೊರಡಿಸಿದೆ.

 

ಪದವಿಪೂರ್ವ ಶಿಕ್ಷಣ ಇಲಾಖೆಯ 12 ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ 42 ತರಗತಿ ಕೊಠಡಿ, 6 ಪ್ರಯೋಗಾಲಯ ಕೊಠಡಿ, 34 ಶೌಚಾಲಯ ಬ್ಲಾಕ್‌ ನಿರ್ಮಾಣಕ್ಕೆ 15.00 ಕೋಟಿ ರು. ವೆಚ್ಚದ ಕ್ರಿಯೋ ಯೋಜನೆ ಸಲ್ಲಿಸಿತ್ತು.

 

ಅಲ್ಲದೆ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣ, ಸಿಡಬ್ಲ್ಯೂಎಸ್‌ಎನ್‌ ಶೌಚಾಲಯ ನಿರ್ಮಾಣಕ್ಕೆ ಸಮಗ್ರ ಶಿಕ್ಷಣ ಯೋಜನೆಯಡಿ 2018-19, 2019-20ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಿಗೆ ಅನುದಾನವೇ ಮಂಜೂರಾಗಿಲ್ಲ.

 

ಹಾಗೆಯೇ 2020-21 ಮತ್ತು 2021-22ನೇ ಸಾಲಿನ ಪಿಎಬಿ ಸಭಾ ನಡವಳಿಯಂತೆ ಶೌಚಾಲಯವೂ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯಗಳಿಗೆ ಅನುದಾನ ಅನುಮೋದನೆಯಾಗಿದ್ದರೂ ಕೇಂದ್ರ ಸರ್ಕಾರದಿಂದಲೇ ಅನುದಾನ ಬಿಡುಗಡೆಯಾಗದ ಕಾರಣ ರಾಜ್ಯದ ಹೊಂದಾಣಿಕೆ ಪಾಲು ಕೂಡ ಬಿಡುಗಡೆಯಾಗಿಲ್ಲ. ಹೀಗಾಗಿ ಶಾಲೆಗಳಲ್ಲಿ ಕಾಮಗಾರಿಗಳು ಅನುಷ್ಠಾನಗೊಂಡಿಲ್ಲ ಎಂಬುದು ಬಿ ಸಿ ನಾಗೇಶ್‌ ಅವರು 2022ರ ಫೆಬ್ರುವರಿ 21ರಂದು ಕೆ ಎ ತಿಪ್ಪೇಸ್ವಾಮಿ ಅವರಿಗೆ ಉತ್ತರಿಸಿದ್ದರು.

Your generous support will help us remain independent and work without fear.

Latest News

Related Posts