‘ತುಂಬಾ ಮುಜುಗರ, ನಿಮ್ಮ ಮಗಳೆಂದು ಶೌಚಾಲಯ ಕಟ್ಟಿಸಿಕೊಡಿ’; ಸಿಎಂ ಮೊರೆ ಹೊಕ್ಕ ಗಡಿಜಿಲ್ಲೆ ಮಕ್ಕಳು

photo-thefile

ಬೆಂಗಳೂರು; ‘ನಮ್ಮ ಶಾಲೆಯಲ್ಲಿ ಒಟ್ಟು 132 ವಿದ್ಯಾರ್ಥಿಗಳಿದ್ದೇವೆ. ಆದರೆ ನಮಗಿರುವುದು ಒಂದೇ ಒಂದು ಶೌಚಾಲಯ. ಶೌಚಾಲಯಕ್ಕೆ ಸರದಿಯಲ್ಲಿ ಹೋಗಬೇಕು. ಕನಿಷ್ಠ 30 ನಿಮಿಷ ಸರದಿಯಲ್ಲಿ ನಿಲ್ಲಬೇಕು. ಇದು ನನಗೆ ತುಂಬಾ ಮುಜುಗರವನ್ನುಂಟು ಮಾಡುತ್ತಿದೆ. ತಾವು ನನ್ನನ್ನು ಮಗಳು ಎಂದು ಭಾವಿಸಿ ಶೌಚಾಲಯ ಕಟ್ಟಿಸಿಕೊಡಿ, ನಾನು ಕೂಡಿಟ್ಟ ಹಣ 25 ರು.ಗಳನ್ನು ಕೊಡಲು ಸಿದ್ಧಳಿದ್ದೇನೆ,’

 

‘ಎಲ್ಲಿದೆ ಶೌಚಮುಕ್ತ ಭಾರತ? ನಾನು ಶಾಲೆ ಬಿಡಲು ಶೌಚಾಲಯವೇ ಕಾರಣ. ಇಲ್ಲಿ ಶೌಚಾಲಯ ಇಲ್ಲದಿರುವುದರಿಂದಲೇ ನಾನು ಶಾಲೆ ಬಿಡಲು ತೀರ್ಮಾನಿಸಿದ್ದೇನೆ. ನನ್ನ ಜಾಗದಲ್ಲಿ ನಿಮ್ಮ ಮಗನೋ…ಮಗಳೋ ಇದ್ದರೆ ಏನು ಮಾಡುತ್ತೀದ್ದೀರಿ,’

 

ಹೀಗೆ ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಪತ್ರ ಚಳುವಳಿ ಆರಂಭಿಸಿರುವುದು ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆಯ ತಾಲೂಕಿನ ಅಣ್ಣೂರು ಕೇರಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಮಕ್ಕಳು.

 

ಪತ್ರ ಚಳವಳಿ ಆರಂಭಿಸಿರುವ ಅಣ್ಣೂರು ಕೇರಿಯ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಶೌಚಾಲಯ ನಿರ್ಮಾಣ ಮಾಡಿಕೊಡದಿದ್ದರೆ ಶಾಲೆಯನ್ನೇ ಬಿಡಬೇಕಾದ ಸ್ಥಿತಿ ಇದೆ ಎಂದು ಬರೆದಿರುವ ಸಾಲು ಸಾಲು ಪತ್ರಗಳತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗಿಯೂ  ನೋಡಿಲ್ಲ ಎಂದು ತಿಳಿದು ಬಂದಿದೆ. ಅಣ್ಣೂರು ಕೇರಿಯ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಪತ್ರ ಬರೆದಿರುವುದನ್ನು ‘ದಿ ಫೈಲ್‌’ ಖಚಿತಪಡಿಸಿಕೊಂಡಿದೆ.

 

‘ಶೌಚಾಲಯ ಕಟ್ಟಿಕೊಡಲು ಕೂಡಿಟ್ಟ ಹಣವನ್ನು ನೀಡುತ್ತೇವೆ,’ ಎಂದು ಹಲವು ಮಕ್ಕಳು ಪತ್ರದಲ್ಲಿ ವಿವರಿಸಿದ್ದಾರೆ. 2 ರು.ನಿಂದ 50 ರು.ವರೆಗೆ ಕೂಡಿಟ್ಟ ಹಣವನ್ನು ಕೊಡಲು ಸಿದ್ಧರಿದ್ದೇವೆ ಎಂದು ಪತ್ರದಲ್ಲಿ ಮಕ್ಕಳು ಹೇಳಿದ್ದಾರೆ. ‘ ದಯಾಮಯಿಗಳಾದ ತಾವು ನನ್ನನ್ನು ನಿಮ್ಮ ಮಗ ಎಂದು ಭಾವಿಸಿ ಒಂದು ಶೌಚಾಲಯವನ್ನು ಕಟ್ಟಿಸಿಕೊಡಬೇಕು. ಶೌಚಾಲಯ ಇಲ್ಲದಿರುವುದು ನನಗೆ ತುಂಬಾ ದುಃಖದ ವಿಷಯ. ಎಲ್ಲಿದೆ  ಸ್ವಚ್ಛ ಭಾರತ,’ ಎಂದೂ ಪತ್ರದಲ್ಲಿ ಪ್ರಶ್ನಿಸಿರುವುದು ತಿಳಿದು ಬಂದಿದೆ.

 

ಮತ್ತೊಂದು ಸಂಗತಿ ಎಂದರೆ 2021-22ನೇ ಸಾಲಿನ ಆಯವ್ಯಯದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಅಡಿಯ ಶಾಲೆಗಳಿಗೆ ಮೂಲಭೂತ ಸೌಲಭ್ಯ ಯೋಜನೆಗೆ (ಲೆಕ್ಕ ಶೀರ್ಷಿಕೆ; 4202-01-202-1-05-133) ಘೋಷಿಸಿದ್ದ ಅನುದಾನದ ಪೈಕಿ 15 ಕೋಟಿ ಮೊತ್ತದ ಅನುದಾನ ಕ್ರಿಯಾಯೋಜನೆಗೆ 2022ರ ಫೆಬ್ರುವರಿ 23ರಂದು ಅನುಮೋದನೆ ನೀಡಿ ಅನುದಾನ ಬಿಡುಗಡೆಗೆ ಆದೇಶ ಹೊರಡಿಸಿದೆ.

 

ಪದವಿಪೂರ್ವ ಶಿಕ್ಷಣ ಇಲಾಖೆಯ 12 ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ 42 ತರಗತಿ ಕೊಠಡಿ, 6 ಪ್ರಯೋಗಾಲಯ ಕೊಠಡಿ, 34 ಶೌಚಾಲಯ ಬ್ಲಾಕ್‌ ನಿರ್ಮಾಣಕ್ಕೆ 15.00 ಕೋಟಿ ರು. ವೆಚ್ಚದ ಕ್ರಿಯಾ ಯೋಜನೆ ಸಲ್ಲಿಸಿತ್ತು.

 

ಅಲ್ಲದೆ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣ, ಸಿಡಬ್ಲ್ಯೂಎಸ್‌ಎನ್‌ ಶೌಚಾಲಯ ನಿರ್ಮಾಣಕ್ಕೆ ಸಮಗ್ರ ಶಿಕ್ಷಣ ಯೋಜನೆಯಡಿ 2018-19, 2019-20ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಿಗೆ ಅನುದಾನವೇ ಮಂಜೂರಾಗಿಲ್ಲ. ಹಾಗೆಯೇ 2020-21 ಮತ್ತು 2021-22ನೇ ಸಾಲಿನ ಪಿಎಬಿ ಸಭಾ ನಡವಳಿಯಂತೆ ಶೌಚಾಲಯವೂ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯಗಳಿಗೆ ಅನುದಾನ ಅನುಮೋದನೆಯಾಗಿದ್ದರೂ ಕೇಂದ್ರ ಸರ್ಕಾರದಿಂದಲೇ ಅನುದಾನ ಬಿಡುಗಡೆಯಾಗದ ಕಾರಣ ರಾಜ್ಯದ ಹೊಂದಾಣಿಕೆ ಪಾಲು ಕೂಡ ಬಿಡುಗಡೆಯಾಗಿಲ್ಲ.  ಹೀಗಾಗಿ ಶಾಲೆಗಳಲ್ಲಿ ಕಾಮಗಾರಿಗಳು ಅನುಷ್ಠಾನಗೊಂಡಿಲ್ಲ ಎಂಬುದು ಬಿ ಸಿ ನಾಗೇಶ್‌ ಅವರು 2022ರ ಫೆಬ್ರುವರಿ 21ರಂದು ಕೆ ಎ ತಿಪ್ಪೇಸ್ವಾಮಿ ಅವರಿಗೆ ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

ದೊಡ್ಡ ಪ್ರಮಾಣದ ದುರಸ್ತಿ ಸಂಬಂಧ 60 ಕಾಮಗಾರಿಗಳಿಗೆ 2020-21ರಲ್ಲಿ 2.87 ಕೋಟಿ, ಹೆಣ್ಣು ಮಕ್ಕಳ ವಸತಿ ನಿಲಯಕ್ಕೆ 9 ಕೋಟಿ, ಹೆಣ್ಣು ಮಕ್ಕಳ ಶೌಚಾಲಯ ಮತ್ತು ಸಿಡಬ್ಲ್ಯೂಎಸ್‌ಎನ್‌ ಶೌಚಾಲಯ ನಿರ್ಮಾಣಕ್ಕೆ ಬಿಡಿಗಾಸೂ ನೀಡಿಲ್ಲ. 2021-22ರಲ್ಲಿ ದೊಡ್ಡ ಪ್ರಮಾಣದ ದುರಸ್ತಿಗೆ 7 ಕಾಮಗಾರಿಗಳಿಗೆ 32.00 ಲಕ್ಷ ರು., 91 ಸಿಡಬ್ಲೂಎಸ್‌ಎನ್‌ ಶೌಚಾಲಯ ನಿರ್ಮಾಣಕ್ಕೆ 2.41 ಕೋಟಿ, ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣಕ್ಕೆ 6.50 ಲಕ್ಷ ರು. ಅನುಮೋದನೆಯಾಗಿದ್ದರೂ ಕೇಂದ್ರ ಸರ್ಕಾರವು ತನ್ನ ಪಾಲನ್ನು ಬಿಡುಗಡೆ ಮಾಡಿಲ್ಲ ಎಂಬುದು ಉತ್ತರದಿಂದ ಗೊತ್ತಾಗಿದೆ.

 

ರಾಜ್ಯ ವಲಯ, ನರೇಗಾ ಅನುದಾನ ಒಗ್ಗೂಡಿಸುವಿಕೆ ಮೂಲಕ ಶೌಚಾಲಯ ನಿರ್ಮಾಣ ಮತ್ತು ದುರಸ್ಥಿಗೆ ಕೋಟ್ಯಂತರ ರುಪಾಯಿ ಅನುದಾನ ಒದಗಿಸಲಾಗಿದೆ ಎಂಬುದು ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿನ ಒಟ್ಟು ಶಾಲೆಗಳ ಪೈಕಿ 179 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಈ ಪೈಕಿ 85 ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯಗಳಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರ 2022ರ ಫೆ.21ರಂದು ಸುನೀಲ್‌ಗೌಡ ಬಿ ಪಾಟೀಲ್‌ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದಾರೆ.

 

ವಿಶೇಷವೆಂದರೆ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಮತ್ತು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರ ತವರು ಜಿಲ್ಲೆ ತುಮಕೂರಿನ ಚಿಕ್ಕನಾಯಕನಹಳ್ಳಿ, ಕುಣಿಗಲ್‌, ಶಿರಾ, ಮಧುಗಿರಿಯಲ್ಲಿ, 6 ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯಗಳೇ ಇಲ್ಲ. 2021-22ನೇ ಸಾಲಿನಲ್ಲಿ ರಾಜ್ಯದ ಶಾಲೆಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯಗಳ ನಿರ್ವಹಣೆಗೆ 25 ಕೋಟಿ ರು. ಅನುದಾನ ಒದಗಿಸಿದ್ದರೂ ಶಾಲೆಗಳಲ್ಲಿ ಶೌಚಾಲಯ ಹೊಂದಿಲ್ಲ ಎಂಬ ಸಂಗತಿ ನಾಗೇಶ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಬಲವರ್ಧನೆಗೊಳಿಸಲು 2018-19ನೇ ಆಯವ್ಯಯದಲ್ಲಿ ಘೋಷಿಸಿದ್ದ ವಿಶೇಷ ಪ್ಯಾಕೇಜ್‌ ಯೋಜನೆಯಡಿ ಇನ್ನೂ 31.46 ಕೋಟಿ ರು. ಮತ್ತು 2020-21ನೇ ಸಾಲಿನ ವಿಶೇ‍ಷ ಪ್ಯಾಕೇಜ್‌ನ ಅಡಿಯಲ್ಲಿ 50 ಕೋಟಿ ರು. ಸೇರಿ ಒಟ್ಟಾರೆ 81.46 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.

 

ಬಾಕಿ ಉಳಿದಿರುವ ಅನುದಾನವನ್ನು ಬಿಡುಗಡೆ ಮಾಡದ ಸರ್ಕಾರವು ಇದೀಗ 2022-23ನೇ ಸಾಲಿಗೆ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಮೂಲಭೂತ ಸೌಲಭ್ಯಕ್ಕಾಗಿ 60 ಕೋಟಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಕಟ್ಟಡ/ತರಗತಿ ಕೊಠಡಿಗಳ ದುರಸ್ತಿ, ನವೀಕರಣಕ್ಕಾಗಿ 35 ಕೋಟಿ ರು. ಒಳಗೊಂಡಂತೆ 424.46 ಕೋಟಿ ರು. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

 

ಇನ್ನು ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ರಾಜ್ಯಾದಾದ್ಯಂತ 750 ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ದಿಗಾಗಿ ತಲಾ 10 ಲಕ್ಷ ರು.ಗಳಂತೆ 7500.00 ಲಕ್ಷ ರು ಗಳ ಅನುದಾನ ಬಿಡುಗಡೆಯಾಗಿದ್ದರೂ ರಾಜ್ಯದ ಹಲವು ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶುದ್ಧ ಶೌಚಾಲಯಗಳ ನಿರ್ಮಾಣಕ್ಕೆ ಆಸಕ್ತಿ ವಹಿಸಿಲ್ಲ.

 

ಶೌಚಾಲಾಯಗಳ ನಿರ್ಮಾಣಕ್ಕೆ 2021-22ನೇ ಸಾಲಿನಲ್ಲಿ ರಾಜ್ಯ ವಲಯ ಹಾಗೂ ನರೇಗಾ ಅನುದಾನ ಒಗ್ಗೂಡಿಸುವಿಕೆ ಮೂಲಕ ಶೌಚಾಲಯ ನಿರ್ಮಾಣ ಹಾಗೂ ದುರಸ್ತೆಗೆ 3500.00 ಲಕ್ಷ ರು.ಗಳ ಅನುದಾನ ಒದಗಿಸಲಾಗಿದೆ ಎಂದು ಸರ್ಕಾರ ಪ್ರಚಾರ ಗಿಟ್ಟಿಸಿಕೊಂಡಿದೆಯಾದರೂ ಇದುವರೆಗೂ ಬರಹುತೇಕ ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶುದ್ಧ ಶೌಚಾಲಯಗಳೇ ಇಲ್ಲ ಎಂದು ತಿಳಿದು ಬಂದಿದೆ.

 

2021-22ನೇ ಸಾಲಿನ ರಾಜ್ಯ ಸರ್ಕಾರದ ಬಂಡವಾಳ ವೆಚ್ಚ ಯೋಜನೆಯಡಿ ವಿವಿದ ವಿಧಾನಸಭೆ ಕ್ಷೇತ್ರದ ಸರ್ಕಾರಿ ಶಾಲಾ ಕಟ್ಟಡಗಳ ತುರ್ತು ದುರಸ್ಥಿಗೆ 6.00 ಲಕ್ಷ ರು ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಅನುದಾನವನ್ನು ಗರಿಷ್ಠ ಶಾಲೆಗಳಲ್ಲಿ ದುರಸ್ಥಿ ಕಾರ್ಯ ವಿಸ್ತರಿಸಲು ಸ್ಥಳೀಯವಾಗಿ ಜಾರಿಯಲ್ಲಿರುವ ವಿವಿಧ ಅಭಿವೃದ್ದಿ ಯೋಜನೆಗಳ ಅನುದಾನವನ್ನು ಒಗ್ಗೂಡಿಸುವಿಕೆ ಮೂಲಕ ಅನುಷ್ಠಾನಗೊಳಿಸಲಾಗಿದೆ ಎಂದು ಸರ್ಕಾರ ಹೇಳಿತ್ತು.

 

2021-22ನೇ ಸಾಲಿನಲ್ಲಿ ಕೊಠಡಿಗಳ ದುರಸ್ತಿ, ನುತನ ಶಾಲಾ ಕಟ್ಟಡಗಳ ನಿರ್ಮಾಣ, ಶಾಲಾ ಕೊಠಡಿಗಳ ನಿರ್ಮಾಣ, ಶೌಚಾಲಯಗಲ ನಿರ್ಮಾಣ ಮತ್ತು ದುರಸ್ತಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ಇಡೀ ರಾಜ್ಯಕ್ಕೆ ಇಲ್ಲಿಯವರೆಗೆ 33243.64 ಲಕ್ಷ ರು.ಗಳ ಅನುದಾನ ಬಿಡುಗಡೆ ಮಾಡಲಾಗಿದೆ.

 

ಅದೇ ರೀತಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ನಿಧಿಯಿಂದ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಿಗೆ ಕೊಠಡಿಗಳ ದುರಸ್ತಿ, ನೂತನ ಶಾಲಾ ಕಟ್ಟಡಗಳ ನಿರ್ಮಾಣ, ಶೌಚಾಲಯಗಳ ನಿಮಾfಣ ಮತ್ತು ದುರಸ್ತಿ, ಇನ್ನಿತರೆ ಮೂಲಭೂತ ಸೌಲಭ್ಯಗಳಿಗೆ 15882.56 ಲಕ್ಷ ಅನುದಾನಹಂಚಿಕೆ ಮಾಡಲಾಗಿದೆ.
ಸಮಗ್ರ ಶಿಕ್ಷಣ-ಕರ್ನಾಟಕದಡಿ 2021-22ನೇ ಸಾಲಿನಲ್ಲಿ ಹೆಚ್ಚುವರಿ ಶಾಲಾ ಕೊಠಡಿ, ದುರಸ್ತಿ, ಹೆಚ್ಚುವರಿ ಶೌಚಾಲಯಗಳು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಒಟ್ಟು 8826.950 ಲಕ್ಷ ರು. ಅನುದಾನವನ್ನು ಒದಗಿಸಲಾಗಿದೆ.

 

ಹಿಜಾಬ್‌, ಕೇಸರಿ ಮತ್ತು ನೀಲಿ ಶಾಲು ಧರಿಸಿ ತರಗತಿಗಳಿಗೆ ಪ್ರವೇಶಿಸುತ್ತಿರುವುದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ ರಾಜ್ಯದ ಬಹುತೇಕ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಶುದ್ಧ ಶೌಚಾಲಯಗಳೇ ಇಲ್ಲ ಎಂಬ ಸಂಗತಿ ವಿದ್ಯಾರ್ಥಿಗಳಿಗೆ ಮುಖ್ಯ ಕಾರ್ಯಸೂಚಿಯಾಗಿಯೇ ಇಲ್ಲ.

 

ಶಾಲೆ, ಕಾಲೇಜುಗಳಲ್ಲಿನ ಹೆಣ್ಣು ಮಕ್ಕಳಿಗೆ ಶುದ್ಧ ಶೌಚಾಲಯಗಳಿಲ್ಲ ಎಂಬ ಸಂಗತಿ ಸರ್ಕಾರದ ಗಮನಕ್ಕೆ ಬಂದಿದ್ದರೂ ಹೆಣ್ಣು ಮಕ್ಕಳಿಗೆ ಶುದ್ಧ ಶೌಚಾಲಯಗಳನ್ನು ನಿರ್ಮಿಸಲು ಸರ್ಕಾರವು ನೈಜ ಕಾಳಜಿಯನ್ನು ಪ್ರದರ್ಶಿಸಿಲ್ಲ. ಅಷ್ಠೇ ಏಕೆ ಹಿಜಾಬ್‌, ಕೇಸರಿ, ನೀಲಿ ಶಾಲಿನಲ್ಲಿ ಮುಳುಗಿರುವ ವಿದ್ಯಾರ್ಥಿಗಳೂ ಸಹ ಶುದ್ಧ ಶೌಚಾಲಯಗಳಿಗಾಗಿ ಬೀದಿಗೂ ಇಳಿದಿಲ್ಲ.

the fil favicon

SUPPORT THE FILE

Latest News

Related Posts