ಗಡಿ ಜಿಲ್ಲೆಯ 47 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಕೊರತೆ; ತುಟಿ ಬಿಚ್ಚದ ಸಚಿವ ನಾಗೇಶ್‌

ಬೆಂಗಳೂರು; ಗಡಿ ಭಾಗದ ಚಾಮರಾಜನಗರ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಪೈಕಿ 47 ಶಾಲೆಗಳಲ್ಲಿ ಶೌಚಾಲಯ ಕೊರತೆ ಇದೆ ಎಂಬ ಸಂಗತಿಯನ್ನು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರು ಬಹಿರಂಗಪಡಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಕೇರಿಯಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ ಕೊರತೆ ಇರುವ ಬಗ್ಗೆ ಶಾಲೆಯ ಹೆಣ್ಣು ಮಕ್ಕಳು ಮುಖ್ಯಮಂತ್ರಿಗೆ ಪತ್ರ ಬರೆದು ವಾಸ್ತವಾಂಶ ತೆರೆದಿಟ್ಟಿರುವ ಬೆನ್ನಲ್ಲೇ ಜಿಲ್ಲೆಯಲ್ಲಿ 47 ಶಾಲೆಗಳಲ್ಲಿ ಶೌಚಾಲಯಗಳ ಕೊರತೆ ಇರುವುದು ಮುನ್ನೆಲೆಗೆ ಬಂದಿದೆ.

 

ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು ಚಾಮರಾಜನಗರ ಜಿಲ್ಲೆಯಲ್ಲಿನ 86 ಸರ್ಕಾರಿ ಪ್ರೌಢಶಾಲೆಗಳಲ್ಲಿಯೂ ಶೌಚಾಲಯಗಳು ಲಭ್ಯವಿದೆ ಎಂದು ಸದನಕ್ಕೆ ಉತ್ತರ ನೀಡಿದ್ದಾರಾದರೂ ಎಷ್ಟು ಶಾಲೆಗಳಲ್ಲಿ ಶೌಚಾಲಯಗಳ ಕೊರತೆ ಇದೆ ಎಂಬ ಸಂಖ್ಯೆಯನ್ನು ಹಂಚಿಕೊಂಡಿಲ್ಲ.

 

ವಿಧಾನಪರಿಷತ್‌ ಸದಸ್ಯ ಸುನೀಲಗೌಡ ವಿ ಪಾಟೀಲ ಅವರು ಕೇಳಿದ್ದ ಪ್ರಶ್ನೆಗೆ 2022ರ ಫೆ. 21ರಂದು ಉತ್ತರಿಸಿರುವ ಬಿ ಸಿ ನಾಗೇಶ್‌ ಅವರು ‘ಚಾಮರಾಜನಗರ ಜಿಲ್ಲೆಯಲ್ಲಿನ 86 ಸರ್ಕಾರಿ ಪ್ರೌಢಶಾಲೆಗಳಲ್ಲಿಯೂ ಶೌಚಾಲಯ ಲಭ್ಯವಿದೆ,’ ಎಂದು ಅಂಕಿ ಅಂಶಗಳೊಂದಿಗೆ ಉತ್ತರ ಒದಗಿಸಿದ್ದಾರೆ.

 

ಸಚಿವ ಬಿ ಸಿ ನಾಗೇಶ್‌ ಅವರು ವಿಧಾನಪರಿಷತ್‌ಗೆ ನೀಡಿರುವ ಉತ್ತರದ ಪ್ರತಿ

 

ಆದರೆ ನೈಜ ಹೋರಾಟಗಾರರ ವೇದಿಕೆಯ ಎಚ್‌ ಎಂ ವೆಂಕಟೇಶ್‌ ಅವರೊಂದಿಗೆ 8 ನಿಮಿಷ ಮಾತನಾಡಿರುವ ಚಾಮರಾಜನಗರ ಡಿಡಿಪಿಐ ಅವರು ಚಾಮರಾಜನಗರ ಜಿಲ್ಲೆಯಲ್ಲಿ 47 ಶಾಲೆಗಳಲ್ಲಿ ಶೌಚಾಲಯ ಕೊರತೆ ಇದೆ ಎಂದು ಹೇಳಿದ್ದಾರೆ. ಆದರೆ ಸಚಿವ ಬಿ ಸಿ ನಾಗೇಶ್‌ ಅವರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಶೌಚಾಲಯಗಳ ಕೊರತೆಯೇ ಇಲ್ಲವೆಂದು ಹೇಳಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಡಿಡಿಪಿಐ ಮಂಜುನಾಥ್‌ ಅವರೊಂದಿಗೆ ವೆಂಕಟೇಶ್‌ ಅವರು ನಡೆಸಿರುವ ಸಂಭಾಷಣೆಯ ಆಡಿಯೋ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಸುಮಾರ್‌ ಸ್ಕೂಲ್‌ಗಳಲ್ಲಿ ಆ ರೀತಿ ಇದೆ. ಫಂಡ್‌ ಬಂದಿದೆ. ನಿನ್ನೆಯಿಂದ ಶುರುವಾಗಿದೆ. ಸರ್‌ ಒಂದೇನಂದ್ರೆ ಎಕ್ಸಟ್ರಾ ಫಂಡ್‌ ಬಂದಿರಲಿಲ್ಲ. ಹಾಗಾಗಿ ಆಗಿರಲಿಲ್ಲ. ಇವಾಗ ನರೇಗಾ ಅಡಿಯಲ್ಲಿ 47 ಶಾಲೆಗಳನ್ನು ತಗೊಂಡಿದೀವಿ. ಮಾಡಿಸ್ತಾ ಇದೀವಿ ಸರ್‌’ ಪಂಚಾಯ್ತಿಗಳಿಂದ ತಗೊಂಡು ಮಾಡಿಸ್ತಾ ಇದೀವಿ ಸರ್‌. ಸರ್ವೆ ಮಾಡಿಸ್ತಾ ಇದೀವಿ. ಕೆಲವು ಶಾಲೆಗಳಲ್ಲಿ ನಾನ್‌ ಫಂಕ್ಷನಿಂಗ್‌ ಇತ್ತು. ಮಿಸ್ಸಾಗಿತ್ತು. 5 ವರ್ಷದಿಂದಲೂ ಈ ಸಮಸ್ಯೆ ಇದೆ. ಟಾಯ್ಲೆಟ್‌ ಫೈಲ್‌ ಸಿಕ್ಕಿರಲಿಲ್ಲ ಸಾರ್‌. 47 ಶಾಲೆಗಳನ್ನು ಅಪ್ರೂವ್ ಮಾಡಿಸಿದ್ದೀನಿ. 15ನೇ ಹಣಕಾಸು ಅಯೋಗದಲ್ಲಿ ತಗೊಳ್ಳೊದಿಕ್ಕೆ ಎಲ್ಲಾ ಸರ್ವೆ ಮಾಡಿಸಿದೀನಿ ಸರ್‌. ಫಂಡ್‌ ಪ್ರಾಬ್ಲಮ್‌ ಇತ್ತು. ನಾವೂನು ಅದನ್ನು ಐಡೆಂಟಿಫೈ ಮಾಡಿ ಮಾಡಿಸ್ತಾ ಇದೀನಿ,’ ಎಂದು ಡಿಡಿಪಿಐ ಮಂಜುನಾಥ್‌ ಅವರು ಹೇಳಿದ್ದಾರೆ.

 

ಅಲ್ಲದೇ ಶಿವಮೊಗ್ಗದ ಸೊರಬ ತಾಲೂಕಿನ ಗುಡವಿ ಬ್ಲಾಕ್‌, ಹಾಸನ ಜಿಲ್ಲೆಯ ಬೇಲೂರು ಬ್ಲಾಕ್‌ನಲ್ಲಿ ಬಾಲಕರಿಗೆ ಮತ್ತು ಗುಡವಿ ಮತ್ತು ಭದ್ರಾವತಿ ಬ್ಲಾಕ್‌ನಲ್ಲಿ ಪ್ರೌಢಶಾಲೆಯ ಬಾಲಕಿಯರಿಗೆ ಶೌಚಾಲಯವಿಲ್ಲವೆಂದು ಸಚಿವ ಬಿ ಸಿ ನಾಗೇಶ್‌ ಅವರು ಉತ್ತರಿಸಿದ್ದಾರೆ.

 

‘ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 86 ಪ್ರೌಢಶಿಕ್ಷಣ ಶಾಲೆಗಳಿದ್ದು ಇದರಲ್ಲಿ ಸುಮಾರು 47 ಶಾಲೆಗಳಲ್ಲಿ (ಎಚ್ ಬಿ ಎಸ್ ಶಾಲೆಯು ಸೇರಿದಂತೆ ) ಶೌಚಾಲಯಗಳ ಕೊರತೆ ಇದೆ. ಶೌಚಾಲಯಗಳ ನಿರ್ಮಾಣ ಮಾಡುವ ಸ್ಥಳ ಪರಿಶೀಲನೆ ಮಾಡಲಾಗಿದೆ ಎಂಬ ಬಗ್ಗೆ ಚಾಮರಾಜನಗರ ಜಿಲ್ಲಾ ಉಪ ನಿರ್ದೇಶಕ ಮಂಜುನಾಥ ರವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಂಭಾಷಣೆಯಲ್ಲಿ ವಿವರ ಒದಗಿಸಿದ್ದಾರೆ. ಆದರೆ ಶಿಕ್ಷಣ ಸಚಿವರು ಸದನಕ್ಕೆ ಲಿಖಿತ ಉತ್ತರ ನೀಡುವ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಶೌಚಾಲಯಗಳಿವೆ ಎಂಬ ಉತ್ತರವನ್ನು ನೀಡಿರುವುದು ನಾನು ಗಮನಿಸಿದ್ದೇನೆ. ಕೊರತೆ ಇರುವ ಬಗ್ಗೆ ಶಿಕ್ಷಣ ಸಚಿವರು ಮಾಹಿತಿ ನೀಡಿಲ್ಲ. ಎಲ್ಲಾ ಶಾಲೆಗಳಲ್ಲಿಯೂ ಶೌಚಾಲಯ ಇದೆ ಎಂದು ಹೇಳಿ ಕೊರತೆಯೇ ಇಲ್ಲವೆಂದು ಉತ್ತರಿಸುವ ಮೂಲಕ ಸದನಕ್ಕೆ ಮತ್ತು ರಾಜ್ಯದ ಜನತೆಯ ಮುಂದೆ ವಾಸ್ತವಾಂಶವನ್ನು ಮುಚ್ಚಿಡುತ್ತಿದ್ದಾರೆ,’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌.

 

ರಾಜ್ಯದ ಸರ್ಕಾರಿ ಶಾಲೆಗಳು ಶೌಚಾಲಯಗಳ ಕೊರತೆ ಎದುರಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. 2020-21ನೇ ಸಾಲಿನಲ್ಲಿ ರಾಜ್ಯವಲಯ ಹಾಗೂ ಮನ್ರೇಗಾ ಅನುದಾನ ಒಗ್ಗೂಡಿಸುವಿಕೆಯ ಮೂಲಕ ಶೌಚಾಲಯ ನಿರ್ಮಾಣ, ಆಟದ ಮೈದಾನ, ಆವರಣ ಗೋಡೆ, ಅಡುಗೆ ಕೋಣೆ, ಮಳೆ ನೀರು ಕೊಯ್ಲು, ಯೋಜನೆ, ಪೌಷ್ಠಿಕ ತೋಟ ನಿರ್ಮಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು 29.20 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಸಚಿವ ಬಿ ಸಿ ನಾಗೇಶ್‌ ಸದನಕ್ಕೆ ಉತ್ತರಿಸಿದ್ದಾರೆ.

 

ಒಂದು ವೇಳೆ ಮಾನ್ಯ ಶಿಕ್ಷಣ ಸಚಿವರ ಹೇಳಿಕೆ ಸತ್ಯವಾಗಿದ್ದೇ ಆದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಶೌಚಾಲಯದ ಕೊರತೆ ಬಗ್ಗೆ ಮುಖ್ಯಮಂತ್ರಿಗೆ ಕಾರ್ಡ್ ಚಳುವಳಿಯನ್ನು ಮಾಡುವ ಅವಶ್ಯಕತೆ ಏನಿರುತ್ತಿತ್ತು, ಹಾಗೂ ಈಗ ಚಾಮರಾಜನಗರ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶೌಚಾಲಯಗಳಿವೆ ಎಂದ ಮೇಲೆ ಮತ್ತೆ ಶೌಚಾಲಯ ನಿರ್ಮಾಣ ಮಾಡಲು ಹೊರಟಿರುವುದು ಏತಕ್ಕೆ ಎಂದೂ ಪ್ರಶ್ನಿಸುತ್ತಾರೆ ಎಚ್‌ ಎಂ ವೆಂಕಟೇಶ್‌.

 

2021-22ನೇ ಸಾಲಿನಲ್ಲಿ ರಾಜ್ಯ ವಲಯ ಹಾಗೂ ನರೇಗಾ ಅನುದಾನ ಒಗ್ಗೂಡಿಸುವಿಕೆಯ ಮೂಲಕ ಶಾಲಾ ಕಾಲೇಜುಗಳ ಶೌಚಾಲಯ ನಿರ್ಮಾಣ ಹಾಗೂ ದುರಸ್ತಿಗೆ 50 ಕೋಟಿ ಅನುದಾನ ಬಿಡುಗಡೆ ಮಾಡಿದೆ.
ಪ್ರತಿ ವರ್ಷವೂ ರಾಜ್ಯದ ಮುಂದುವರೆದ ಯೋಜನೆ ಕಾರ್ಯಕ್ರಮಗಳಡಿಯಲ್ಲಿ ಕುಡಿಯುವ ನೀರು, ಶೌಚಾಲಯಗಳ ನಿರ್ವಹಣೆಗಾಗಿ ಶಾಲೆಳೀಗೆ ಅನುದಾನ ಬಿಡುಗಡೆ ಮಾಡುತ್ತಲೇ ಇದೆ. 2021-22ನೇ ಸಾಲಿನಲ್ಲಿ ಶೌಚಾಲಯಗಳ ನಿರ್ವಹಣೆಗಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಘಟಕ ವೆಚ್ಚ 4,650 ರು ರು. ನಂತೆ ಒಟ್ಟು 9.67 ಕೋಟಿ ರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಘಟಕ ವೆಚ್ಚ 5,400 ರು.ನಂತೆ 12.14 ಕೋಟಿ ರು., ಸರ್ಕಾರಿ ಪ್ರೌಢಾಶಾಲೆಗಳಿಗೆ 6,750 ರು. ನಂತೆ 3.19 ಕೋಟಿ ರು. ಸೇರಿದಂತೆ ಒಟ್ಟು 25 ಕೋಟಿ ರು. ಒದಗಿಸಿರುವುದು ಉತ್ತರದಿಂದ ತಿಳಿದು ಬಂದಿದೆ.

 

ಇದಲ್ಲದೆ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಅವಶ್ಯಕತೆ ಇದ್ದ ಸರ್ಕಾರಿ ಶಾಲೆಗಳಲ್ಲಿ 670 ಶೌಚಾಲಯ ಘಟಕಗಳನ್ನು 13.04 ಕೋಟಿ ರು. ಅನುದಾನ ಬಳಸಿಕೊಂಡು 2018-19ನೇ ಸಾಲಿನಲ್ಲಿ ಸ್ವಚ್ಛ ಭಾರತ್‌ ಮಿಷನ್‌ (ಗ್ರಾ) ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯ ಸಹಯೋಗದೊಂದಿಗೆ ನಿರ್ಮಾಣ ಮಾಡಿದೆ ಎಂದೂ ಮಾಹಿತಿ ಒದಗಿಸಿದ್ದಾರೆ.

 

ರಾಜ್ಯದ ಒಟ್ಟು 47, 657 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ 42,572 ಶಾಲೆಗಳಲ್ಲಿ ಶೌಚಾಲಯವಿದೆ. 4,738 ಪ್ರೌಢಶಾಲೆಗಳ ಪೈಕಿ 4,736 ಶಾಲೆಗಳಲ್ಲಿ ಶೌಚಾಲಯ ಲಭ್ಯವಿದೆ ಎಂದು ಅಂಕಿ ಅಂಶ ಒದಗಿಸಿದ್ದಾರೆ.
ನಮ್ಮ ಶಾಲೆಯಲ್ಲಿ ಒಟ್ಟು 132 ವಿದ್ಯಾರ್ಥಿಗಳಿದ್ದೇವೆ. ಆದರೆ ನಮಗಿರುವುದು ಒಂದೇ ಒಂದು ಶೌಚಾಲಯ. ಶೌಚಾಲಯಕ್ಕೆ ಸರದಿಯಲ್ಲಿ ಹೋಗಬೇಕು. ಕನಿಷ್ಠ 30 ನಿಮಿಷ ಸರದಿಯಲ್ಲಿ ನಿಲ್ಲಬೇಕು. ಇದು ನನಗೆ ತುಂಬಾ ಮುಜುಗರವನ್ನುಂಟು ಮಾಡುತ್ತಿದೆ. ತಾವು ನನ್ನನ್ನು ಮಗಳು ಎಂದು ಭಾವಿಸಿ ಶೌಚಾಲಯ ಕಟ್ಟಿಸಿಕೊಡಿ, ನಾನು ಕೂಡಿಟ್ಟ ಹಣ 25 ರು.ಗಳನ್ನು ಕೊಡಲು ಸಿದ್ಧಳಿದ್ದೇನೆ,’ ಎಂದು ಪತ್ರದಲ್ಲಿ ಅಣ್ಣೂರು ಕೇರಿಯ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಗೋಳು ತೋಡಿಕೊಂಡಿದ್ದರು.

 

‘ಎಲ್ಲಿದೆ ಶೌಚಮುಕ್ತ ಭಾರತ? ನಾನು ಶಾಲೆ ಬಿಡಲು ಶೌಚಾಲಯವೇ ಕಾರಣ. ಇಲ್ಲಿ ಶೌಚಾಲಯ ಇಲ್ಲದಿರುವುದರಿಂದಲೇ ನಾನು ಶಾಲೆ ಬಿಡಲು ತೀರ್ಮಾನಿಸಿದ್ದೇನೆ. ನನ್ನ ಜಾಗದಲ್ಲಿ ನಿಮ್ಮ ಮಗನೋ…ಮಗಳೋ ಇದ್ದರೆ ಏನು ಮಾಡುತ್ತೀದ್ದೀರಿ,’ ಎಂದು ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಪತ್ರ ಚಳುವಳಿ ಆರಂಭಿಸಿದ್ದರು.

 

‘ಶೌಚಾಲಯ ಕಟ್ಟಿಕೊಡಲು ಕೂಡಿಟ್ಟ ಹಣವನ್ನು ನೀಡುತ್ತೇವೆ,’ ಎಂದು ಹಲವು ಮಕ್ಕಳು ಪತ್ರದಲ್ಲಿ ವಿವರಿಸಿದ್ದಾರೆ. 2 ರು.ನಿಂದ 50 ರು.ವರೆಗೆ ಕೂಡಿಟ್ಟ ಹಣವನ್ನು ಕೊಡಲು ಸಿದ್ಧರಿದ್ದೇವೆ ಎಂದು ಪತ್ರದಲ್ಲಿ ಮಕ್ಕಳು ಹೇಳಿದ್ದಾರೆ. ‘ ದಯಾಮಯಿಗಳಾದ ತಾವು ನನ್ನನ್ನು ನಿಮ್ಮ ಮಗ ಎಂದು ಭಾವಿಸಿ ಒಂದು ಶೌಚಾಲಯವನ್ನು ಕಟ್ಟಿಸಿಕೊಡಬೇಕು. ಶೌಚಾಲಯ ಇಲ್ಲದಿರುವುದು ನನಗೆ ತುಂಬಾ ದುಃಖದ ವಿಷಯ. ಎಲ್ಲಿದೆ ಸ್ವಚ್ಛ ಭಾರತ,’ ಎಂದೂ ಪತ್ರದಲ್ಲಿ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts