ಎಪಿಎಂಸಿ ಆದಾಯದಲ್ಲಿ ಗಣನೀಯ ಇಳಿಕೆ; ಆಯವ್ಯಯ ಭಾಷಣಕ್ಕೆ ಮಾಹಿತಿ ಒದಗಿಸಿದ ಇಲಾಖೆ

photo credit; the hindu

ಬೆಂಗಳೂರು; ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತಂದ ನಂತರ ರಾಜ್ಯದ ಎಪಿಎಂಸಿಗಳಲ್ಲಿ ವ್ಯಾಪಾರ ವಹಿವಾಟುಗಳು ತೀರಾ ಕಡಿಮೆಯಾಗಿದೆ ಮತ್ತು ಎಪಿಎಂಸಿಗಳು ಅನುಭವಿಸುತ್ತಿರುವ ಆರ್ಥಿಕ ನಷ್ಟದ ಕುರಿತು ಯಾವುದೇ ಮಾಹಿತಿ ಇಲ್ಲವೆಂದಿದ್ದ ಕೃಷಿ ಮಾರಾಟ ಇಲಾಖೆಯು ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಆದಾಯವು ಗಣನೀಯವಾಗಿ ಕಡಿಮೆಯಾಗಿದೆ ಎಂದು ಇದೀಗ ಒಪ್ಪಿಕೊಂಡಿದೆ.

 

2022-23ನೇ ಸಾಲಿನ ಆಯವ್ಯಯ ಭಾಷಣಕ್ಕೆ ಸಹಕಾರ ಇಲಾಖೆ ವ್ಯಾಪ್ತಿಯಲ್ಲಿರುವ ಕೃಷಿ ಮಾರಾಟ ಇಲಾಖೆಯು ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಹಿತಿ ಒದಗಿಸಿದೆ. ಆಯವ್ಯಯ ಭಾಷಣಕ್ಕೆ ಇಲಾಖೆಯು ಒದಗಿಸಿರುವ ಮಾಹಿತಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಆಧಿನಿಯಮ 1966ಕ್ಕೆ ತಿದ್ದುಪಡಿ ತಂದಿರುವುದರಿಂದ ಹಾಗೂ ಈ ಹಿಂದೆ ಸಂಗ್ರಹಿಸಲಾಗುತ್ತಿದ್ದ ಮಾರುಕಟ್ಟೆ ಶುಲ್ಕವನ್ನು ಶೇ.1.50ರಿಂದ ಶೇ.0.60ಕ್ಕೆ ಇಳಿಕೆ ಮಾಡಲಾಗಿರುವುದರಿಂದ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಆದಾಯವು ಗಣನೀಯವಾಗಿ ಕಡಿಮೆಯಾಗಿರುವುದರಿಂದ 2022-23ನೇ ಸಾಲಿಗೆ ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳದಿರಲು ತೀರ್ಮಾನಿಸಲಾಗಿರುತ್ತದೆ,’ ಎಂದು 2022-23ನೇ ಸಾಲಿನ ಆಯವ್ಯಯ ಭಾಷಣಕ್ಕೆ ಕೃಷಿ ಮಾರಾಟ ಇಲಾಖೆಯು ಮಾಹಿತಿ ಒದಗಿಸಿದೆ.

ಆಯವ್ಯಯ ಭಾಷಣಕ್ಕೆ ಒದಗಿಸಿರುವ ಮಾಹಿತಿ ಪ್ರತಿ

 

ಅದೇ ರೀತಿ ಪ್ರಗತಿಯನ್ನು ಉತ್ತಮಪಡಿಸಲು ಇನ್ನಿತರೆ ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಬಗ್ಗೆಯೂ ಮಾಹಿತಿ ಒದಗಿಸಿರುವ ಕೃಷಿ ಮಾರಾಟ ಇಲಾಖೆಯು ‘ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಆದಾಯವು ಗಣನೀಯವಾಗಿ ಕಡಿಮೆಯಾಗಿರುವುದರಿಂದ 2022-23ನೇ ಸಾಲಿಗೆ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿರಲು ತೀರ್ಮಾನಿಸಲಾಗಿದೆ,’ ಎಂದು ಪುನರುಚ್ಛರಿಸುವ ಮೂಲಕ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ಆದಾಯವು ಕುಸಿತವಾಗಿದೆ ಎಂದು ಒಪ್ಪಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಆದಾಯ ಎಷ್ಟು ಕಡಿಮೆಯಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿಲ್ಲ.

 

ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತಂದ ನಂತರ ಮತ್ತು ತಿದ್ದುಪಡಿ ತರುವ ಮುನ್ನ ಅನುಭವಿಸಿರುವ ನಷ್ಟದ ಮಾಹಿತಿ ಕೋರಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದ ‘ದಿ ಫೈಲ್‌’ಗೆ ಉತ್ತರಿಸಿದ್ದ ಕೃಷಿ ಮಾರಾಟ ಇಲಾಖೆಯ ಜಂಟಿ ನಿರ್ದೇಶಕರು ‘ನಷ್ಟದ ಬಗ್ಗೆ ಕೇಂದ್ರ ಕಚೇರಿಯಲ್ಲಿ ಮಾಹಿತಿ ಲಭ್ಯವಿರುವುದಿಲ್ಲ,’ ಎಂದು ಉತ್ತರ ನೀಡಿ ಕೈತೊಳೆದುಕೊಂಡಿದ್ದರು.

 

ಅಲ್ಲದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬೇಕು ಎಂದು ಉತ್ತರಿಸಿದ್ದ ಕೃಷಿ ಮಾರಾಟ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ಹಕ್ಕು ಕಾಯ್ದೆಯ ಕಲಂ 6(3)ರ ಅನ್ವಯ ಮಾಹಿತಿ ಪಡೆಯುವುದಕ್ಕಾಗಿ ಕೋರಿಕೆ ಅಧಿನಿಯಮವನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತಂದ ನಂತರ ರಾಜ್ಯದ ಎಪಿಎಂಸಿಗಳಲ್ಲಿ ವ್ಯಾಪಾರ ವಹಿವಾಟು ತೀರಾ ಕಡಿಮೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ‘ಬಂದಿದೆ,’ ಎಂದು ಉತ್ತರಿಸಿದ್ದಾರಾದರೂ ಎಪಿಎಂಸಿಗಳಲ್ಲಿನ ವ್ಯಾಪಾರ ವಹಿವಾಟುಗಳು ಎಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಮತ್ತು ಇದರಿಂದ ಸಂಭವಿಸಿರುವ ನಷ್ಟದ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ.

 

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ದಿ) ಅಧಿನಿಯಮ 1966 ಕಾಯ್ದೆ (ಸಂಖ್ಯೆ; 59/2020) ಮೂಲಕ ಕಲಂ 8(2) ಹಾಗೂ ಕಲಂ 117ಕ್ಕೆ ತಿದ್ದುಪಡಿ ಮಾಡಿ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿಯೆ ಮಾರಾಟ ಮಾಡಬೇಕು ಎಂಬ ನಿರ್ಬಂಧ ತೆರವುಗೊಳಿಸಿದೆ. ಹಾಗೆಯೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ನಿಯಂತ್ರಣವನ್ನು ಪ್ರಾಂಗಣಕ್ಕಷ್ಟೇ ಸೀಮಿತಗೊಳಿಸಿದೆ. ಕಲಂ 8(2)ರ ಉಲ್ಲಂಘನೆಗೆ ದಂಡ ಮತ್ತು ಸಜೆ ಶಿಕ್ಷೆಯನ್ನು ವಿಧಿಸುತ್ತಿದ್ದ ಕಲಂ 117ನ್ನೂ ಕೈ ಬಿಡಲಾಗಿದೆ ಎಂದು ಸಚಿವ ಸೋಮಶೇಖರ್‌ ವಿವರ ಒದಗಿಸಿದ್ದರು.

 

‘ಕಾಯ್ದೆ ತಿದ್ದುಪಡಿ ನಂತರ ರಾಜ್ಯದಲ್ಲಿನ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಹಿಂದಿನಂತೆ ಪ್ರಾಂಗಣದಲ್ಲಿ ಲೈಸೆನ್ಸ್‌ ಹೊಂದಿರುವ ನೇರ ಖರೀದಿ ಕೇಂದ್ರ, ರೈತ-ಗ್ರಾಹಕ ಮಾರುಕಟ್ಟೆ ಪ್ರಾಂಗಣ, ಖಾಸಗಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ಅಥವಾ ತಮ್ಮ ಹೊಲದಲ್ಲೇ ತಮ್ಮ ಇಚ್ಛೆಯಂತೆ ಮಾರಾಟ ಮಾಡಲು ಅವಕಾಶ ಲಭ್ಯವಾಗಿದೆ. ಹಾಗಾಗಿ ರೈತ ಸಮುದಾಯಕ್ಕೆ ಅನುಕೂಲವಾಗಿದೆ. ರೈತರು ತೊಂದರೆಗೊಳಾಗಿರುವುದು ಕಂಡು ಬಂದಿರುವುದಿಲ್ಲ,’ ಎಂದು ಉತ್ತರಿಸಿದ್ದರು.

 

ಆರ್ಥಿಕ ನಷ್ಟವನ್ನು ಸರಿದೂಗಿಸಲು ರಾಜ್ಯ ಸಂಚಿತ ನಿಧಿ ವಂತಿಗೆ ಶೇ. 0.20ರಷ್ಟು ಹಂಚಿಕೆ ಮಾಡಲಾಗಿದೆ. ರಾಜ್ಯ ಕೃಷಿ ಮಾರಾಟ ಮಂಡಳಿಗೆ ಶೇ.0.05ರಷ್ಟು ವಂತಿಗೆ, ಅಡಮಾನ ಸಾಲ ಯೋಜನೆಗೆ ಶೇ. 0.10, ಕೃಷಿ ವಿಶ್ವವಿದ್ಯಾಲಯಗಳ ವಂತಿಗೆ ಶೇ.0.01, ಅಪತದ್ಧನ ಶೇ.0.04, ಅಭಿವೃದ್ಧಿ ವೆಚ್ಚಗಳು ಶೇ. 0.25, ಶಾಸನೇತರ ವೆಚ್ಚಗಳು ಶೇ.0.25, ರೆಮ್ಸ್‌ ಸಂಸ್ಥೆ ವಹಿವಾಟು ವೆಚ್ಚ ಶೇ. 0.10, ಆವರ್ತ ನಿಧಿ ಶೇ. 0.40, ಮಾರುಕಟ್ಟೆ ಸುಧಾರಣೆ ನಿಧಿ ಶೇ.0.10 ವಂತಿಗೆ ಮರು ಹಂಚಿಕೆ ಮಾಡಿದೆ.

 

ಇದರಂತೆ ಮಾರುಕಟ್ಟೆ ಸಮಿತಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ವೇತನ, ಭತ್ಯೆ, ಮಾರುಕಟ್ಟೆ ಸಮಿತಿಗಳ ಚುನಾವಣೆ ವೆಚ್ಚ ಮುಂತಾದ ಬಾಬ್ತುಗಳಿಗೆ ತಗಲುವ ವೆಚ್ಚವನ್ನು ಮಾರುಕಟ್ಟೆ ಕಾಯ್ದೆ ಕಲಂ 91ರ ಮೇರೆಗೆ ಇಲಾಖೆ ನಿರ್ದೇಶಕರು ನಿಗದಿಪಡಿಸುವ ದರದಲ್ಲಿ ಮಾರುಕಟ್ಟೆ ಸಮಿತಿಗಳು ರಾಜ್ಯ ಸಂಚಿತ ನಿಧಿಗೆ ವಂತಿಗೆ ರೂಪದಲ್ಲಿ ಪಾವತಿಸಬೇಕಿತ್ತು. ಕಾಯ್ದೆ ಕಲಂ 64-ಬಿರ ಮೇರೆಗೆ ರಾಜ್ಯ ಸರ್ಕಾರವು ಸ್ಥಾಪಿಸಿರುವ ಆವರ್ತ ನಿಧಿಗೆ ಜಮೆ ಮಾಡಬೇಕಿತ್ತು.

 

ಮಾರುಕಟ್ಟೆ ಸಮಿತಿಗಳು ಆಕರಿಸುವ ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕವನ್ನು ಶೇ. 0.60ಕ್ಕೆ ನಿಗದಿಪಡಿಸಿದೆ. ಹಾಗೆಯೇ ರಾಜ್ಯ ಸಂಚಿತ ನಿಧಿಗೆ ಸಮಿತಿಗಳಿಂದ ಪಾವತಿಸಬೇಕಿದ್ದ ವಂತಿಗೆಗೆ ವಿನಾಯಿತಿ ನೀಡಿ ಈ ವೆಚ್ಚವನ್ನೂ ಸರ್ಕಾರವೇ ಭರಿಸಲು ಕ್ರಮ ವಹಿಸಿದೆ ಎಂಬ ಉತ್ತರಿಸಿದ್ದರು.

 

ರಾಜ್ಯ ಸರ್ಕಾರವು ನಿಗದಿಪಡಿಸಿದ ಶೇ. 0.60 ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕದಲ್ಲಿ ಮರು ಹಂಚಿಕೆ ಮಾಡಿತ್ತು. ಆವರ್ತ ನಿಧಿಗೆ ಶೆ. 0.10, ಕೃಷಿ ಮಾರಾಟ ಮಂಡಳಿಗೆ ವಂತಿಗೆ ಶೇ. 0.05, ಮತ್ತು ಪ್ರಾಂಗಣದಲ್ಲಿ ಮೂಲಭೂತ ಸೌಕರ್ಯ, ನಿರ್ವಹಣೆ ಮತ್ತು ಸಮಿತಿ ಆಡಳಿತ ವೆಚ್ಚಕ್ಕೆ ಶೇ. 0.44, ರೆಮ್ಸ್‌ ಸಂಸ್ಥೆಗೆ ವಹಿವಾಟು ಶುಲ್ಕದ ರೂಪದಲ್ಲಿ ಶೇ. 0.01ರಷ್ಟು ಮರು ಹಂಚಿಕೆ ಮಾಡಿದೆ ಎಂದು ಉತ್ತರದಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts