ಬೆಂಗಳೂರು; ಪೊಲೀಸ್ ಅಧಿಕಾರಿಗಳಿಂದ ಸುಲಿಗೆಗೊಳಗಾಗಿರುವ ಕ್ರಷರ್ ಉದ್ಯಮಿಯೊಬ್ಬರ ಪ್ರಕರಣವು ಎಡಿಜಿಪಿ ಅಧಿಕಾರಿ ಮತ್ತು ಐಪಿಎಸ್ ಅಧಿಕಾರಿ ********** ಗಮನದಲ್ಲಿತ್ತು. ವಂಚನೆಗೊಳಗಾಗಿರುವ ಆರೋಪಿಯಿಂದ ಹಣ ಪಡೆದುಕೊಳ್ಳಲು ಕ್ರಷರ್ ಉದ್ಯಮಿಯು ಪೊಲೀಸ್ ಅಧಿಕಾರಿಗಳ ಬಳಿ ಗೋಗರೆದಿದ್ದರೂ ಹೆಚ್ಚುವರಿ ಹಣಕ್ಕಾಗಿ ಬೇಡಿಕೆ ಇರಿಸಿದ್ದ ಸಂಗತಿಯೂ ಇದೀಗ ಬಹಿರಂಗವಾಗಿದೆ.
ಪ್ರಕರಣದ ಕುರಿತು ಕ್ರಷರ್ ಉದ್ಯಮಿಯು ಇನ್ಸ್‌ಪೆಕ್ಟರ್ ಒಬ್ಬರ ಜತೆ ಮಾತನಾಡಿರುವ ಧ್ವನಿಮುದ್ರಿಕೆಯಲ್ಲಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್, ಹಾಗೆಯೇ ಮತ್ತೊಬ್ಬ ಐಪಿಎಸ್ ಅಧಿಕಾರಿ ********** ಹೆಸರು ಮೂರ್ನಾಲ್ಕು ಬಾರಿ ಪ್ರಸ್ತಾಪವಾಗಿದೆ. ಇನ್ಸ್‌ಪೆಕ್ಟರ್ ಮತ್ತು ಕ್ರಷರ್ ಉದ್ಯಮಿಯ ಮಧ್ಯೆ ನಡೆದಿರುವ ಮಾತುಕತೆಗೆ ಸಂಬಂಧಿಸಿದಂತೆ 4 ನಿಮಿಷ ಅವಧಿಯ 2 ಆಡಿಯೋ ತುಣಕುಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ನಾಲ್ಕು ನಿಮಿಷದ ಆಡಿಯೋ ತುಣುಕಿನಲ್ಲಿ ಕ್ರಷರ್ ಉದ್ಯಮಿಯು ತನ್ನ ಅಸಹಾಯಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಕೌಟುಂಬಿಕ ಪರಿಸ್ಥಿತಿಯನ್ನು ವಿವರಿಸಿರುವ ಜತೆಯಲ್ಲಿ ಪ್ರಕರಣದ ಕುರಿತು ಆತಂಕಕ್ಕೊಳಗಾಗಿರುವುದು ಸಂಭಾಷಣೆಯ ತುಣುಕಿನಿಂದ ಗೊತ್ತಾಗಿದೆ.
ಮುಖ್ಯವಾಗಿ ಪದೇ ಪದೇ ಐಪಿಎಸ್ ಅಧಿಕಾರಿ ********** ಹೆಸರು ಪ್ರಸ್ತಾಪವಾಗಿರುವ ಜತೆಯಲ್ಲಿಯೇ ಡಿವೈಎಸ್ಪಿ ಒಬ್ಬರ ಹೆಸರನ್ನೂ ಕ್ರಷರ್ ಉದ್ಯಮಿ ಹೇಳಿದ್ದಾರೆ. ಡಿವೈಎಸ್ಪಿಯು ಇರಿಸಿದ್ದ ಹಣದ ಬೇಡಿಕೆಯನ್ನು ಪೂರೈಸಿದ್ದ ಕ್ರಷರ್ ಉದ್ಯಮಿಯಿಂದ ಇನ್ನಷ್ಟು ಹಣಕ್ಕೆ ಬೇಡಿಕೆ ಇಡಲಾಗಿತ್ತು. ಆರಂಭಿಕ ಹಂತದಲ್ಲಿ ಇರಿಸಿದ್ದ ಒಟ್ಟು ಬೇಡಿಕೆ ಪೈಕಿ ನಾಲ್ಕು ಲಕ್ಷ ರು.ಗಳನ್ನು ತಲುಪಿಸಲಾಗಿದೆ ಎಂದು ಕ್ರಷರ್ ಉದ್ಯಮಿಯು ಇನ್ಸ್‌ಪೆಕ್ಟರ್‌ಗೆ ಖಚಿತಪಡಿಸಿರುವುದು ಲಭ್ಯ ಇರುವ ಆಡಿಯೋ ತುಣುಕಿನಿಂದ ತಿಳಿದು ಬಂದಿದೆ.
ಮೊದಲೆರಡು ನಿಮಿಷದ ಆಡಿಯೋನಲ್ಲೇನಿದೆ?
ದೂರುದಾರ; ಹಲೋ ಸಾರ್….. ಮಂಜು ಮಾತನಾಡ್ತಿರೋದು…
ಇನ್ಸ್‌ಪೆಕ್ಟರ್; ಸಾರಿ ಕಣೋ…ನಾನು ನೋಡಿಲ್ಲ. ದೇವಸ್ಥಾನಕ್ಕೆ ಹೋಗಿದ್ದೆ….
ದೂರುದಾರ; ಪರವಾಗಿಲ್ಲ ಸಾರ್, ನಾನು ದೇವಸ್ಥಾನಕ್ಕೆ ಹೋಗಿ ಕೈ ಮುಕ್ಕಂಡು ಬಂದೆ. ಮನೇಲಿ ಮಿಸ್ಸಸ್‌ದು ಒಂದೇ ರಾಮಾಯಣ…. ಟೆನ್ಷನ್ ತಗೋತಿದ್ರು ಅದ್ಕೆ ನಿಮ್ಗೆ ಒಂದ್ಸಲ ಫೋನ್ ಮಾಡೋಣ ಅಂತ…
ಇನ್ಸ್‌ಪೆಕ್ಟರ್; ಈಗೇನು…..ಎಸ್ಪಿ ಸಾರ್ ಕಡೆಯಿಂದ ಮತ್ತೆ ಹೇಳಿಸ್ಬೇಕಾ….ಏನ್ ಮಾಡೋಣ
ದೂರುದಾರ; ಇಲ್ಲ ಸಾರ್..ಈಗ ನೀವು ಹೇಳಿದ್ ಪ್ರಕಾರ….ಅವತ್ತು ನಾನು ಫಸ್ಟ್ ಡೇ…ನೀವ್ ಹೇಳಿದ್ರಿ….ಸಾರ್….ನಿಮ್ ಮೇಲೆ ನಂಬಿಕೆ ಇಟ್ಕೋಂಡ್ ಫೋರ್ ಲ್ಯಾಕ್ಸ್ ಎತ್ಕೊಂಡ್ ಬಂದು ಕೊಟ್ಟೆ. ಎರಡ್ ಮೂರು ದಿನ ಬಿಟ್ ಇನ್ನೊಂದ್ ಲ್ಯಾಕ್ ಕೊಟ್ಟ್‌ಬಿಟ್ಟೆ. ಎಲ್ಲ ಕ್ಲಿಯರ್ ಸಾರ್. ಡಿವೈಎಸ್ಪಿ ಸಾರ್ ಕಡೆಯಿಂದ ಏನ್ ಮಾಡೋಕೆ ಆಗ್ತಿಲ್ಲ.. ಸಾರ್ ಏನ್ ಮಾಡೋದು ಹೇಳಿ ಸಾರ್.
ಇನ್ಸ್‌ಪೆಕ್ಟರ್; ನೀನು ಆಫೀಸ್ ಹತ್ರ ಬಾ…..ನಾನ್ ಮಾತಾಡ್ತೀನಿ…
ದೂರುದಾರ; ನನ್ ಕೈಲಿ …ನನ್ ಮಿಸ್ಸೆಸ್ ಹತ್ರ ಏನೋ ಹೇಳೋದು ಗೊತ್ತಾಗ್ತಾ ಇಲ್ಲ….ಒಂದೇ ಒಂದ್ ಹೆಲ್ಪ್ ಮಾಡಿಕೊಡಿ ಸಾರ್….ಪ್ಲೀಸ್ ಸಾರ್
ಇನ್ಸ್‌ಪೆಕ್ಟರ್; ನೀನು ಆಫೀಸ್ ಹತ್ರ ಬಾ……
ದೂರುದಾರ; ಮಿಸ್ಸೆಸ್ ಹತ್ರ ಮಾತಾಡ್ತೀರಾ ಸಾರ್
ಇನ್ಸ್‌ಪೆಕ್ಟರ್; ಹೂಂ….ನಾಳೆ ಮಾತಾಡ್ತೀನಿ..ಮನೇಲಿ ಇದೀನಿ…
ದೂರುದಾರ; ಸರಿ ಸರ್……ಬೇಜಾರ್ ಮಾಡ್ಕೋಬೇಡಿ….ದೇವಸ್ಥಾನದಿಂದ ಬಂದೆ… ನಿಮ್ ಜೊತೆ ಮಾತನಾಡೋಣ ಅಂದ್ಕೊಂಡು…ಎರಡ್ ಮೂರ್ ದಿನದಲ್ಲಿ ಏನಾದ್ರೂ ಮಾಡ್ಕೊಡಿ….ಸಾರ್….
ಇನ್ಸ್‌ಪೆಕ್ಟರ್; ನಾನೇನಪ್ಪ…ನನ್ ಕಡೆಯಿಂದ ಮ್ಯಾಕ್ಸಿಮಮ್ ನಾನು ಸಾವಿರ ಸಲ ಫೋನ್ ಮಾಡ್ಸಿದೀನಿ…..ನಿಂಗೆ ಗೊತ್ತಿದೆ…..ನಾನು ಇನ್ ಏನ್ ಮಾಡ್ಲಿ…
ದೂರುದಾರ; ಡಿವೈಎಸ್ಪಿ ಸರ್ ಕಡೆಯಿಂದ ಏನೂ ಮಾಡೋಕೆ ಅಗೋಲ್ವಾ….
ಇನ್ಸ್‌ಪೆಕ್ಟರ್;ನಿಂಗೆ ಗೊತ್ತಲ್ಲಾ…ನಿನ್ ಕೇಸ್ ಎಫ್‌ಐಆರ್ ಆಗಿದೆ…ಮಾಡ್ಸು ಅಂತ..
ದೂರುದಾರ; ಸಾರ್ ಅಲ್ಲಿ ಹೋಗಿ ನೀವ್ ಹೇಳಿದ್ರಲ್ವಾ…. ಅಲ್ಲ…ಸಾರ್…ನೋಡಿ ಮಂಜು ಅಂತ….ಮಾಡ್ದೆ ಎಲ್ಲಾ…..ಬ್ಯಾಂಕ್‌ದು ಸಿಕ್ಕಾಪಟ್ಟೆ ಬೇಜಾರ್ ಆಗ್ಬಿಟ್ಟಿದೆ…..
ಇನ್ಸ್‌ಪೆಕ್ಟರ್; ನೋಡೋ… ನಾನು ಇನ್ವೆಸ್ಟಿಗೇಷನ್ ಅಫೀಸರ್ ಆಗಿದ್ರೆ…ನಾನ್ ಏನ್ ಬೇಕಾದ್ರೂ ಮಾತಾಡ್ತಿನಿ….ನಿಂಗೆ ಗೊತ್ತಿದೆ ನನ್ ಬಗ್ಗೆ…..ನಿಂಗೆ ….ಎಷ್ಟ್ ಸಪೋರ್ಟ್ ಮಾಡಿದೀನಿ……ಎಸ್ಪಿ ಸಾಹೇಬ್ರು ಕೂಡ ಎಷ್ಟ್ ಸಾರಿ ಹೇಳಿದಾರೆ… ಪಾಪ… ನೀನು ಸೀಮಂತ್ ಸಾರ್ ಕಡೆಯಿಂದ ಹೇಳ್ಸಿದೀಯಾ…ಎಡಿಜಿಪಿ ಸಾಹೇಬ್ರು ಕಡೆಯಿಂದ…ನೂ…. ಬಾ ..ನೀನು… ನಾಳೆ ಬಾ…..
ದೂರುದಾರ; ಸರಿ ಸಾರ್…
ಆಡಿಯೋ 2
ಇನ್ಸ್‌ಪೆಕ್ಟರ್; ಮಂಜು….
ದೂರುದಾರ; ಸಾರ್ ನಮಸ್ತೆ ಸಾರ್..
ಇನ್ಸ್‌ಪೆಕ್ಟರ್; ನಮಸ್ತೆ ಹೇಳ್ ಮಂಜು…
ದೂರುದಾರ; ಸಾರ್ ಟೂ ಮಿನಿಟ್ ಫ್ರೀ ಯಾಗಿದ್ರೆ ಮಾತಾಡ್‌ಬೇಕಿತ್ತು….ಅದ್ಕೆ ಕೇಳೋಣ ಅಂತ ಫೋನ್ ಮಾಡ್ದೆ….
ಇನ್ಸ್‌ಪೆಕ್ಟರ್ ; ಮಾತಾಡ್ ಮಂಜು……ನಾಳೆ ಸಿಗ್ತೀರಾ… ಶುಕ್ರವಾರ…..
ದೂರುದಾರ; ಅರ್ಥ ಆಗ್ಲಿಲ್ಲ ಸಾರ್….
ಇನ್ಸ್‌ಪೆಕ್ಟರ್; ಅಲ್ಲಾ ಫೋನ್‌ಲ್ಲೇ ಮಾತಾಡ್ತೀಯಾ….ಅಥವಾ ಹೊರಗಡೆ ಮಾತಾಡ್ತಿಯಾ…
ದೂರುದಾರ; ಇಲ್ಲಾ ಸಾರ್….ಫೋನ್‌ನಲ್ಲೇ….ಮನೇಲಿ ಹೋಗ್‌ಬಿಟ್ಟು ಮಿಸ್ಸೆಸ್ ಬೇರೆ ತುಂಬಾ ಭಯ ಬಿದ್ದಿದಾರೆ…ಯಾವ್ ಕೆಲ್ಸಾನೂ ಆಗಿಲ್ಲ ಅಂತ….ನೆನ್ನೆ ಮಾತಾಡ್ದೆ…ಬ್ಯುಸಿ ಇದ್ರಿ….ಮೊನ್ನೆ ಮಾತಾಡ್ದೆ. ಬ್ಯುಸಿ ಇದ್ರಿ
ಇನ್ಸ್‌ಪೆಕ್ಟರ್; ನಾಳೆ ಮಾಡಿ ಫ್ರೀ ಇರ್ತಿನಿ….
ದೂರುದಾರ; ಎಷ್ಟೊತ್ಗೆ ಮಾಡ್ಲಿ……
ಇನ್ಸ್‌ಪೆಕ್ಟರ್; ಒಂದ್ ಹನ್ನೊಂದ್ ಹನ್ನೆರಡ್ ಗಂಟೆಗೆ ಮಾಡ್ ಮಂಜು…
ದೂರುದಾರ; ಆಯ್ತು ಸಾರ್.. ಥ್ಯಾಂಕ್ಯು…ಸಾರ್….ಥ್ಯಾಂಕ್ಯು….
ಇನ್ಸ್‌ಪೆಕ್ಟರ್; ಏನ್ ಆಯ್ತು….ಮಾತಾಡ್ಸಿದಿಯಾ…
ದೂರುದಾರ; ಮಾತಾಡ್ಸಿದೀನಿ ಸಾರ್….ಅದ್ಕೆ ನಿಮ್ಹತ್ರ….ಅಲ್ಲಿ…. ಡಿವೈಎಸ್ಪಿ ಸಾರ್ ಹತ್ರ ಹೋದ್ರೆ…..ಮತ್ತೆ ಇದು ಅಂತ ಹೇಳ್ತಾ ಇದಾರೆ….
ಇನ್ಸ್‌ಪೆಕ್ಟರ್; ನಾಡಿದ್ದು…..ಅಫೀಸ್ ಹತ್ರ ಬಂದ್ ಬಿಡು……ಎಸ್ಪಿ ಸಾರ್ ಜತೆ ಡೈರೆಕ್ಟ್ ಆಗಿ…..ಮಾತಾಡ್ಸಿತ್ತೀನಿ…
ದೂರುದಾರ; ಅದ್ಕೆ ನೀವ್ ಹ್ಯಂಗ್ ಹೇಳಿದ್ರೆ…..ಏನ್ ಮಾಡ್ಬೇಕು..ಅಂತ….ಅದ್ಕೆ ವೇಟ್ ಮಾಡ್ತಾ ಇದ್ದೆ
ಇನ್ಸ್‌ಪೆಕ್ಟರ್; ಆಯ್ತು….ಮಂಜು.
ದೂರುದಾರ; ಬೆಳಗ್ಗೆ ಮಾಡ್ಲಾ…ಸಾರ್
ಇನ್ಸ್‌ಪೆಕ್ಟರ್; ಇವ್ರು…ಐಜಿಪಿ ಕಡೆಯಿಂದ ಮಾತಾಯ್ತಾ…..
ದೂರುದಾರ; ಅರ್ಥ ಆಗ್ಲಿಲ್ಲ ಸಾರ್…ಅಲ್ಲೋದ್ರೆ ರವಿ ಸಾರ್ ಸಾಕು…..ನಿಮ್ ಕೆಲ್ಸ ಮುಗ್ಸಿ ಕೊಡೋಕೆ…ಅಂತಾರೆ ಸಾರ್…
ಇನ್ಸ್‌ಪೆಕ್ಟರ್; ಹೂಂ……..ಅಲ್ಲಾ ಐಜಿ ಸಾಹೇಬ್ರು ಹೇಳಿದ್ರಾ ಇಲ್ವಾ….ಇವರಿಗೆ
ದೂರುದಾರ; ಇನ್ನೂ ಇಲ್ಲಾ ಸಾರ್…..ಅವರು ನಮ್ ಫ್ರೆಂಡ್ ಊರ್ ಕಡೆಯೋರು….ರವಿಚನ್ನಣ್ಣವರ್ ಸಾರ್ ಸಾಕು…..ಅಂತಾರೆ….
ಇನ್ಸ್‌ಪೆಕ್ಟರ್.; …ಹೋ…………ಹೇಳಿದ್ರಾ ಅಲ್ವಾ….ಸುಮ್ನೆ ಒಂದ್ ಮಾತು ಹೇಳ್ಸಕ್ ಏನಾಗಿತ್ತಂತೆ…ಅದನ್ನು ಅವರೇ ಸಾಕು ಅನ್ನೋಂಗ್ರಿದ್ರೆ ಇಷ್ಟ್ ದಿನ ಏನ್ ಮಾಡಿದ್ರು ಅಂತ….ಮಹದೇವಪ್ಪ ಏನಂತಾರೆ…..?
ದೂರುದಾರ; ಅದೇ ಸರ್ ಅಮೌಂಟ್ ಕೇಳಿದ್ರಲ್ಲಾ….ಮತ್ತೆ ಯಾರ್ ಕಡೆಯಿಂದ ಇನ್ನೂ ಅಮೌಂಟ್ ಎಕ್ಸ್‌ಪೆಕ್ಟ್ ಮಾಡ್ತಾವ್ರೆ…
ಇನ್ಸ್‌ಪೆಕ್ಟರ್; ಮನುಷ್ಯ ಅಲ್ಲ ಬಿಡಪ್ಪ…..ಅವ್ರು…..ಎಲ್ಲಾ….ಮಾನವೀಯತೆ ಇರ್ಬೇಕು ಮನುಷ್ಯಂಗೆ……..ಆಯ್ತು…ನಾಳೆ ಸಿಗ್ತೀನಿ….. ನಾಳೆ ಸಿಗೋಣ…
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ವಲಯದ ಐಜಿ ಚಂದ್ರಶೇಖರ್ ಅವರು ಐಪಿಎಸ್ ಅಧಿಕಾರಿಗೆ ಕ್ಲೀನ್ ಚಿಟ್ ನೀಡಿದ್ದರಲ್ಲದೆ ಸಿಪಿಐ ಮತ್ತು ಇಬ್ಬರು ಎಎಸ್‌ಐ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಶಿಫಾರಸ್ಸು ಮಾಡಿದ್ದನ್ನು ಸ್ಮರಿಸಬಹುದು.