ಆನಂದ್‌ ತೇಲ್ತುಂಬೆ ಪರ ಸಹಿ ಸಂಗ್ರಹ; ಸಂಘಟನೆಗಳ ಚಟುವಟಿಕೆ ಕುರಿತು ರಾಜ್ಯ ಗುಪ್ತಚರ ಇಲಾಖೆ ವರದಿ

ಬೆಂಗಳೂರು; ಮಹಾರಾಷ್ಟ್ರದ ಭೀಮಾ-ಕೋರೆಗಾಂವ್‌ ಹಿಂಸಾಚಾರ ಪ್ರಕರಣಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸಾಮಾಜಿಕ ಹೋರಾಟಗಾರ ಆನಂದ್‌ ತೇಲ್ತುಂಬೆ ಅವರ ಬಿಡುಗಡೆಗೆ ಒತ್ತಾಯಿಸಿ ಸಹಿ ಸಂಗ್ರಹಿಸುತ್ತಿರುವ ಸಂಘಟನೆಗಳ ಚಟುವಟಿಕೆಗಳ ಕುರಿತು ರಾಜ್ಯ ಗುಪ್ತಚರ ಇಲಾಖೆಯು ಪೊಲೀಸ್‌ ಕಮಿಷನರ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ರಹಸ್ಯ ಪತ್ರ ಬರೆದಿದೆ.

 

ಸದ್ಯ ಬಂಧನಲ್ಲಿರುವ ಆನಂದ್‌ ತೇಲ್ತುಂಬೆ ಮತ್ತು ಇತರೆ 15 ಮಂದಿಯನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯದ ಹಾವೇರಿ ಸೇರಿದಂತೆ ಇನ್ನಿತರೆ ಜಿಲ್ಲೆಗಳಲ್ಲಿ ದಲಿತ ಮತ್ತಿತರ ಸಂಘಟನೆಗಳು ಸಹಿ ಅಭಿಯಾನ ನಡೆಸುತ್ತಿವೆ ಎಂದು ರಾಜ್ಯ ಗುಪ್ತಚರ ಇಲಾಖೆಯು ಪಾಕ್ಷಿಕ (2021 ಡಿಸೆಂಬರ್‌ 15ರಿಂದ 31 ಡಿಸೆಂಬರ್‌ವರೆಗೆ ) ರಹಸ್ಯ ವರದಿ ಸಿದ್ಧಪಡಿಸಿದೆ.

 

ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಕಲ್ಬುರ್ಗಿ ಮತ್ತು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್‌ಗಳಿಗೆ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಈ ರಹಸ್ಯ ಪತ್ರವನ್ನು (NO 01/C.I.CELL-1/MISC/2022) 2022ರ ಜನವರಿ 13ರಂದು ಸಿ. ಐ. ಸೆಲ್‌ನ ಉಪ ನಿರ್ದೇಶಕ ಎಂ ನಾರಾಯಣ ಅವರು ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

4 ಪುಟಗಳನ್ನು ಒಳಗೊಂಡಿರುವ ಈ ಪತ್ರದಲ್ಲಿ ರಾಜ್ಯದಲ್ಲಿ ಸಿಪಿಐ ಮಾವೋವಾದಿ ಮತ್ತು ಎಡಪಕ್ಷಗಳು ಹಾಗೂ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ನಡೆದಿಲ್ಲ ಎಂಬ ಮಾಹಿತಿಯೂ ಇದೆ. ಈ ಮಾಹಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ತಲುಪಿಸಲಾಗಿದೆ ಎಂದು ತಿಳಿದು ಬಂದಿದೆ.

 

ಬಹುಮುಖ್ಯವಾಗಿ ಆನಂದ್‌ ತೇಲ್ತುಂಬೆ ಮತ್ತಿತರರನ್ನು ಬಿಡುಗಡೆಗೊಳಿಸಲು ಕರ್ನಾಟಕ ಸ್ವಾಭಿಮಾನಿ ದಲಿತ ಶಕ್ತಿ ಸಂಘಟನೆಯು ಆಂತರಿಕ ಸಭೆ ನಡೆಸುತ್ತಿದೆ. ‘ಸಂಘಟನೆಯ ಅಧ್ಯಕ್ಷ ಮರಿದೇವಪ್ಪ ನಡುವಿನಕೇರಿ 2021ರ ನವೆಂಬರ್‌ 21ರಂದು ರಾಣೆಬೆನ್ನೂರುತಾಲೂಕಿನ ಮೈದೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ಆಂತರಿಕ ಸಭೆ ನಡೆಸಿದ್ದಾರೆ. ಆನಂದ್‌ ತೇಲ್ತುಂಬೆ ಸೇರಿದಂತೆ ಒಟ್ಟು 15 ಮಂದಿಯನ್ನು ಬಿಡುಗಡೆಗೆ ಒತ್ತಾಯಿಸಿ ಸಹಿ ಅಭಿಯಾನ ನಡೆಸಲಾಗಿದೆ. ಹಾವೇರಿ ಜಿಲ್ಲೆಯಾದ್ಯಂತ ಸುಮಾರು 3,000 ಸಹಿ ಸಂಗ್ರಹಿಸಿದ್ದು ಅದನ್ನು ಅದನ್ನು ಆನಂದ್‌ ತೇಲ್ಬುಂಬೆ ಅವರ ಪತ್ನಿ ರಮಾಬಾಯಿ ಅವರ ಹೆಸರಿನಲ್ಲಿ ಕರ್ನಾಟಕ ರಾಜ್ಯಪಾಲರಿಗೆ ಕಳಿಸಲು ನಿರ್ಧರಿಸಿದ್ದಾರೆ,’ ಎಂಬ ಮಾಹಿತಿಯು ಪತ್ರದಲ್ಲಿರುವುದು ತಿಳಿದು ಬಂದಿದೆ.

 

ಇದೇ ಪತ್ರದಲ್ಲಿ ನಕ್ಸಲ್‌ ಹೊಸಗದ್ದೆ ಪ್ರಭಾ ಎಂಬುವರು 2021ರ ಡಿಸೆಂಬರ್‌ 18ರಂದು ತಮಿಳುನಾಡಿನ ಧರ್ಮಪುರಿಯಲ್ಲಿ ಶರಣಾಗಿರುವ ಕುರಿತು ಮಾಹಿತಿಯೂ ಇದೆ. 2003ರಿಂದ ಹೊಸಗದ್ದೆ ಪ್ರಭಾ ಭೂಗತರಾಗಿದ್ದರು. ಆ ನಂತರ ನಕ್ಸಲ್‌ ಮುಖಂಡ ಬಿ ಜಿ ಕೃಷ್ಣಮೂರ್ತಿ ಅವರನ್ನು ವಿವಾಹವಾದರು. ಕಳೆದ ಹಲವು ವರ್ಷಗಳಿಂದ ಪ್ಯಾರಲಿಸಿಸ್‌ನಿಂದ ಬಳಲುತ್ತಿದ್ದು ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವಿವರಣೆಯು ಪತ್ರದಲ್ಲಿರುವುದು ಗೊತ್ತಾಗಿದೆ.

 

ಹೊಸಗದ್ದೆ ಪ್ರಭಾ ವಿರುದ್ಧ ಕರ್ನಾಟಕದಲ್ಲಿ 42 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಚಿಕ್ಕಮಗಳೂರಿನಲ್ಲಿ 28, ಶಿವಮೊಗ್ಗದಲ್ಲಿ 5, ಬೆಂಗಳೂರು ನಗರದಲ್ಲಿ 1 ಪ್ರಕರಣಗಳಿವೆ. ಇವರ ಬಂಧನಕ್ಕೆ ಸಹಕರಿಸಿದವರು ಮತ್ತು ಸುಳಿವು ನೀಡುವವರಿಗೆ 5 ಲಕ್ಷ ಬಹುಮಾನವನ್ನೂ ಸರ್ಕಾರವು ಘೋಷಿಸಿತ್ತು. ಸದ್ಯ ತಮಿಳುನಾಡು ಪೊಲೀಸರ ವಶದಲ್ಲಿದ್ದಾರೆ ಎಂಬ ಮಾಹಿತಿಯು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮತ್ತು ಪೊಲೀಸ್ ಕಮಿಷನರ್‌ಗಳಿಗೆ ಬರೆದಿರುವ ಪತ್ರದಲ್ಲಿದೆ.

 

ಅದೇ ರೀತಿ ಕರ್ನಾಟಕದ ಚರ್ಚ್‌ಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕುರಿತು ರಾಜ್ಯ ಗುಪ್ತಚರ ಇಲಾಖೆಯು ಸಮೀಕ್ಷೆಗೆ ಮುಂದಾಗಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts