ರಾಷ್ಟ್ರೋತ್ಥಾನಕ್ಕೆ 5 ಎಕರೆ ಜಮೀನು ಹಂಚಿಕೆ; ಸಂಘ ಪರಿವಾರದ ಒತ್ತಡಕ್ಕೆ ಮಣಿದ ಸರ್ಕಾರ

ಬೆಂಗಳೂರು; ಕೈಗಾರಿಕೆ ಉದ್ದೇಶಕ್ಕೆ ಮೀಸಲಿಟ್ಟ ಜಮೀನಿನಲ್ಲಿ ರಾಷ್ಟ್ರೋತ್ಥಾನ ಪರಿಷತ್‌ ಸೇರಿದಂತೆ ಇನ್ನಿತರ ಸಂಸ್ಥೆಗಳಿಗೆ ಮಾರ್ಗಸೂಚಿ ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ರಾಷ್ಟ್ರೋತ್ಥಾನ ಪರಿಷತ್‌ಗೆ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು 5 ಎಕರೆ ವಿಸ್ತೀರ್ಣದ ನಿವೇಶನ ಸ್ವಾಧೀನ ಪತ್ರ ನೀಡಿರುವುದು ಬಹಿರಂಗವಾಗಿದೆ.

ಧಾರವಾಡದ ಮಮ್ಮಿಗಟ್ಟಿ ನರೇಂದ್ರ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆ ಉದ್ದೇಶಗಳಿಗಾಗಿಯೇ ಮೀಸಲಿಟ್ಟಿದ್ದ 241.5 ಎಕರೆ ಪ್ರದೇಶದ ಪೈಕಿ ರಾಷ್ಟ್ರೋತ್ಥಾನ ಪರಿಷತ್‌, ಪ್ರಕಲ್ಪ ಹೋಟೆಲ್ ಮತ್ತು ಪ್ರಕಲ್ಪ ಆಸ್ಪತ್ರೆಗೆ ಮೂರು ನಿವೇಶನಗಳನ್ನು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹಂಚಿಕೆ ಮಾಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಪೈಕಿ ರಾಷ್ಟ್ರೋತ್ಥಾನ ಪರಿಷತ್‌ಗೆ 5 ಎಕರೆ ವಿಸ್ತೀರ್ಣ ಹೊಂದಿರುವ ಜಾಗ ಹಂಚಿಕೆಯಾಗಿತ್ತು ಎಂದು ತಿಳಿದು ಬಂದಿದೆ.

ಕೆಐಎಡಿಬಿ ಮಾಡಿರುವ ಈ ಹಂಚಿಕೆಯನ್ನು ಪ್ರಶ್ನಿಸಿ ಧಾರವಾಡ ಗ್ರೋತ್‌ ಸೆಂಟರ್‌ ಸಂಸ್ಥೆಯು ಹೈಕೋರ್ಟ್‌ನ ಧಾರವಾಡದ ವಿಭಾಗೀಯ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು. ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಪೀಠವು ವಿಚಾರಣೆಯನ್ನು 2021ರ ಡಿಸೆಂಬರ್‌ 3ಕ್ಕೆ ಮುಂದೂಡಿದೆ.

ಅರ್ಜಿಯು ವಿಚಾರಣೆ ಹಂತದಲ್ಲಿರುವಾಗಲೇ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆಯ ಹಿಂದಿನ ಸಚಿವ ಜಗದೀಶ್‌ ಶೆಟ್ಟರ್‌ ಅವಧಿಯಲ್ಲಿಯೇ ರಾಷ್ಟ್ರೋತ್ಥಾನ ಪರಿಷತ್‌ಗೆ ನಿವೇಶನ ಸ್ವಾಧೀನ ಪತ್ರವನ್ನು ನೀಡಲಾಗಿದೆ ಎಂದು ಗೊತ್ತಾಗಿದೆ.

ಈ ಅರ್ಜಿಯಲ್ಲಿ ಕೇಂದ್ರ ಸರ್ಕಾರದ ಕೈಗಾರಿಕೆ ಸಚಿವಾಲಯ, ಕರ್ನಾಟಕ ಸರ್ಕಾರದ ವಾಣಿಜ್ಯ, ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯದರ್ಶಿ, ಜಂಟಿ ನಿರ್ದೇಶಕ, ಮಂಡಳಿಯ ಅಭಿವೃದ್ಧಿ ಅಧಿಕಾರಿ, ರಾಷ್ಟ್ರೋತ್ಥಾನ ಪರಿಷತ್‌, ಪ್ರಕಲ್ಪ ಆಸ್ಪತ್ರೆ ಮತ್ತು ಪ್ರಕಲ್ಪ ಹೋಟೆಲ್‌ಗಳ ಮುಖ್ಯಸ್ಥರನ್ನು ಪ್ರತಿವಾದಿಯನ್ನಾಗಿಸಲಾಗಿದೆ.

ಕೈಗಾರಿಕೋದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ಮೀಸಲಿಟ್ಟಿದ್ದ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‌ ಸೇರಿ ಇನ್ನಿತರೆ ಸಂಸ್ಥೆಗಳಿಗೆ ಮಂಜೂರು ಮಾಡಿರುವುದು ಸರಿಯಲ್ಲ ಎಂಬ ವಾದವೂ ಕೈಗಾರಿಕೋದ್ಯಮಿಗಳಿಂದ ವ್ಯಕ್ತವಾಗಿದೆ. “ಸುಮಾರು 10,000 ಕೈಗಾರಿಕೋದ್ಯಮಿಗಳು ಮತ್ತು ಕಾರ್ಮಿಕರಿಗೆ ವಸತಿ ಸೌಕರ್ಯಗಳ ಅಗತ್ಯವಿದೆ. ಅಲ್ಲದೆ ಈಗಾಗಲೇ ಮೀಸಲಿಟ್ಟಿರುವ 241.5 ಎಕರೆಯಲ್ಲಿಯೂ ಉದ್ದೇಶ ಈಡೇರಿಸಲು ಆಗುವುದಿಲ್ಲ. ಹೀಗಿರುವಾಗ ರಾಷ್ಟ್ರೋತ್ಥಾನ ಪರಿಷತ್‌ ಮತ್ತಿತರೆ ಸಂಸ್ಥೆಗಳಿಗೆ ಬೇರೆ ಉದ್ದೇಶಗಳಿಗೆ ನಿವೇಶನ ನೀಡುವ ಅಗತ್ಯವೇನಿತ್ತು,’ ಎಂದು ಕೈಗಾರಿಕೋದ್ಯಮಿಯೊಬ್ಬರು ಹೇಳುತ್ತಾರೆ.

ರೈತರಿಗೆ ಭೂಮಿ ಸ್ವಾಧೀನಪಡಿಸಿಕೊಂಡಿರುವ ಮಂಡಳಿಯು ಅದೇ ಉದ್ದೇಶಕ್ಕೆ ಮಾತ್ರ ಭೂಮಿ ಬಳಸಿಕೊಳ್ಳಬೇಕಿತ್ತು. ವಸತಿ ಬಡಾವಣೆ ಅಭಿವೃದ್ಧಿ ನಂತರ ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟ ಭೂಮಿಯನ್ನು ಶಾಲೆ, ಆಸ್ಪತ್ರೆ, ಹೋಟೆಲ್‌ಗೆ ಮಂಜೂರು ಮಾಡಬಹುದು. ಆದರೆ ಕೈಗಾರಿಕೆ ಪ್ರದೇಶವಿನ್ನೂ ಅಭಿವೃದ್ಧಿಯಾಗದಿದ್ದರೂ ಸಂಘ ಪರಿವಾರದ ಒತ್ತಡಕ್ಕೆ ಮಣಿದಿರುವ ರಾಜ್ಯ ಬಿಜೆಪಿ ಸರ್ಕಾರವು ರಾಷ್ಟ್ರೋತ್ಥಾನ ಪರಿಷತ್‌ಗೆ ನಿವೇಶನ ಹಂಚಿಕೆ ಮಾಡುವ ಮೂಲಕ ಮಾರ್ಗಸೂಚಿಗಳನ್ನು ನೇರವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಪ್ರಕರಣದ ವಿವರ

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಧಾರವಾಡ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಮ್ಮಿಗಟ್ಟಿ ಮತ್ತು ನರೇಂದ್ರ ಗ್ರಾಮಗಳಲ್ಲಿ 241.5 ಎಕರೆ ಪ್ರದೇಶವನ್ನು ಧಾರವಾಡ ಅಭಿವೃದ್ಧಿ ಕೇಂದ್ರಕ್ಕೆ ಕೈಗಾರಿಕಾ ಟೌನ್‌ಶಿಪ್ ಅಭಿವೃದ್ಧಿಪಡಿಸಲು 1994ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. 2019-20ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) 11 ಎಕರೆಯಲ್ಲಿ ಅಭಿವೃದ್ಧಿ ವಸತಿ ವಿಸ್ತರಣೆಗೆ ನಿರ್ಣಯವನ್ನು ಅಂಗೀಕರಿಸಿತ್ತು.

ವಿಸ್ತರಣೆ ಸಂಬಂಧ ಕಾಮಗಾರಿಗಳು ನಡೆಯುತ್ತಿವೆ. ಉಳಿದ 130.5 ಎಕರೆಯಲ್ಲಿ ಬೇರೆ ಬೇರೆ ಉದ್ದೇಶಗಳಿಗೆ ವಿವಿಧ ನಿವೇಶನಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಹಂಚಿಕೆ ಮಾಡಿದೆ. ಮಂಡಳಿಯ ಈ ನಿರ್ಧಾರವನ್ನು ವಿರೋಧಿಸಿದ್ದ ಧಾರವಾಡ ಗ್ರೋತ್‌ ಸೆಂಟರ್‌ ಹಂಚಿಕೆಯನ್ನು ರದ್ದುಗೊಳಿಸಬೇಕು ಎಂದು ಸರ್ಕಾರಿ ಅಧಿಕಾರಿಗಳಿಗೆ ಮೇಲ್ಮನವಿಯನ್ನೂ ಸಲ್ಲಿಸಿತ್ತು.

ಆದರೆ ಅಧಿಕಾರಿಗಳು ಹಂಚಿಕೆಯನ್ನು ರದ್ದುಗೊಳಿಸದ ಕಾರಣ ಧಾರವಾಡ ಗ್ರೋತ್‌ ಸೆಂಟರ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು. ಭೂ ಮಂಜೂರಾತಿ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್‌ ಅವರು ಮಧ್ಯಂತರ ಆದೇಶದಲ್ಲಿ ಸೂಚಿಸಿದ್ದರು.

Your generous support will help us remain independent and work without fear.

Latest News

Related Posts