ಬೆಂಗಳೂರು; ರಾಜ್ಯ ರಾಜಕಾರಣದಲ್ಲಿನ ತಳಮಳಕ್ಕೆ ಕಾರಣವಾಗಿರುವ ಬಿಟ್ ಕಾಯಿನ್ ಹಗರಣವು ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಹಿರಿಯ ಐಪಿಎಸ್ ಅಧಿಕಾರಿಗಳು ಪತರುಗುಟ್ಟುತ್ತಿದ್ದಾರೆ. ಹಗರಣದಲ್ಲಿ ತಮ್ಮ ಹೆಸರೇನಾದರೂ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿರುವ ಐಪಿಎಸ್ ಅಧಿಕಾರಿಗಳು ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಳಹಂತದ ಪೇದೆಗಳನ್ನು ನೇರವಾಗಿ ಸಂಪರ್ಕಿಸುತ್ತಿರುವುದು ಇದೀಗ ಬಹಿರಂಗವಾಗಿದೆ.
ಈ ಹಗರಣದಲ್ಲಿ ಇದುವರೆಗೂ ಯಾವೊಬ್ಬ ಐಪಿಎಸ್ ಅಧಿಕಾರಿಯ ಹೆಸರೂ ಅಧಿಕೃತವಾಗಿ ಬಹಿರಂಗವಾಗಿಲ್ಲ. ಆದರೂ ತನಿಖಾ ತಂಡವನ್ನು ಸಂಪರ್ಕಿಸುತ್ತಿರುವ ಅಧಿಕಾರಿಗಳು, ಹಗರಣದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.
ತನಿಖಾ ತಂಡದಲ್ಲಿರುವ ಕೆಲವರು ತಮ್ಮೊಂದಿಗೆ ನಿಕಟವಾಗಿರುವ ಮತ್ತು ಆಪ್ತರೆನಿಸಿಕೊಂಡಿರುವ ಹಿರಿಯ ಐಪಿಎಸ್ ಅಧಿಕಾರಿಗಳಿಗಷ್ಟೇ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾದ ಆಡಿಯೋವೊಂದು ‘ದಿ ಫೈಲ್’ಗೆ ಲಭ್ಯವಾಗಿದೆ.
ಸುಮಾರು ಎರಡೂವರೆ ನಿಮಿಷಗಳ ಕಾಲ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತನಿಖಾ ತಂಡದಲ್ಲಿದ್ದ ಕೆಳಹಂತದ ಪೇದೆಯೊಬ್ಬರೊಂದಿಗೆ ಸಂಭಾಷಿಸಿದ್ದಾರೆ. ಈ ವೇಳೆ ಪೇದೆಯೊಬ್ಬರು ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಗರಣದ ಕುರಿತು ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೇದೆಯೊಂದಿಗೆ ಸಂಭಾಷಿಸಿರುವ ಐಪಿಎಸ್ ಅಧಿಕಾರಿಯ ಹೆಸರನ್ನು ಗೌಪ್ಯವಾಗಿಡಲಾಗಿದೆ.
ತನಿಖಾ ತಂಡದಲ್ಲಿದ್ದ ಪೇದೆಯೊಬ್ಬರ ಜತೆ ಸಂಭಾಷಿಸಿರುವ ಹಿರಿಯ ಐಪಿಎಸ್ ಅಧಿಕಾರಿಯು ಈ ಹಗರಣದಲ್ಲಿ ಹೋಂ ಮಿನಿಸ್ಟರ್ ಇದ್ದಾರೆಯೇ, ಐಪಿಎಸ್‌ಗಳು ಎಂದರೆ ಅಂದಾಜು ಯಾರ್ಯಾರು ಹೆಸರುಗಳು ಇವೆ, ಗುಪ್ತಚರ ಎಡಿಜಿಪಿ ಅವರು ಯಾವ್ಯಾವ ಐಪಿಎಸ್ ಅಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿಗಾಗಿ ಪೇದೆಯೊಬ್ಬರ ಬಳಿ ಅಲವತ್ತುಕೊಂಡಿರುವುದು ಆಡಿಯೋದಿಂದ ತಿಳಿದು ಬಂದಿದೆ.
ಹಿರಿಯ ಐಪಿಎಸ್ ಅಧಿಕಾರಿಯ ಜತೆ ಸುಮಾರು ಎರಡೂವರೆ ನಿಮಿಷಗಳ ಕಾಲ ಸಂಭಾಷಿಸಿರುವ ತನಿಖಾ ತಂಡದಲ್ಲಿದ್ದ ಪೇದೆಯು ಸಹ ಈ ಹಗರಣದಲ್ಲಿ ಮಿನಿಸ್ಟರ್‌ಗಳು, ಮಿನಿಸ್ಟರ್ ಲೆವೆಲ್‌ನಲ್ಲಿರುವ ದೊಡ್ಡವರೂ ಇದ್ದಾರೆ ಎಂಬ ಮಾಹಿತಿಯನ್ನೂ ಅವರೊಂದಿಗೆ ಅಷ್ಟೇ ಆಪ್ತತೆಯಿಂದ ಹಂಚಿಕೊಂಡಿರುವುದು ಆಡಿಯೋದಿಂದ ಗೊತ್ತಾಗಿದೆ.
ಆಡಿಯೋದಲ್ಲೇನಿದೆ?
ಪೇದೆ; ಸರ್ ಅದು…ಪ್ಲೆಕ್ಸಿಯೇಟ್ ಆಗ್ತಾ ಇರುತ್ತೆ ಸರ್
ಐಪಿಎಸ್ ; ಹ್ಞಾಂ…
ಪೇದೆ; ಫ್ಲೆಕ್ಸಿಯಟ್ ಆಗ್ತಾ ಇರುತ್ತೆ
ಐಪಿಎಸ್; ಅಲ್ಲಾ… ಅಂದಾಜು ಇವತ್ ಬಿಟ್ರೆ ಎಷ್ಟು..?
ಪೇದೆ; ಈಗ ಒಂದ್ ಬಿಟ್ ಕಾಯಿನ್‌ಗೆ 56 ಲಕ್ಷ ಇದೆ. ಅದರಲ್ಲೂ ವೆರಿಟೀಸ್ ಇದೆ ಸಾರ್. 30 ಲಕ್ಷ ಇದೆ. ಇಟ್ ಡಿಪೆಂಡ್ಸ್ ಸರ್
ಐಪಿಎಸ್; ಹಂಗಾದ್ರೆ….ಅವ್ನ ಅಕೌಂಟ್‌ನಿಂದ ಬೇರೆ ಯಾರಿಗಾದ್ರೂ ಹೋಗಿದ್ಯಾ… ಹಣ ಎಲ್ಲಾ…ಬಿಟ್ ಕಾಯಿನ್ನು ?
ಪೇದೆ; ಹೋಗಿದೆ ಸರ್….ದೊಡ್ಡವರಿಗೆ ಸುಮಾರ್ ಜನ್ರಿಗೆ ಟ್ರಾನ್ಸಾಕ್ಷನ್ ಅದ್ರಲ್ಲೇ ಮಾಡಿರೋದು
ಐಪಿಎಸ್; ಯಾರಂತ ಗೊತ್ತಿಲ್ಲ ನಿನಗೆ
ಪೇದೆ; ಅರ್ಧಂಬರ್ದ ಗೊತ್ತಿದೆ..ಪೂರ್ತಿ ಗೊತ್ತಿಲ್ಲ …ಎಲ್ಲಾ ದೊಡ್ಡೋರೇ ಇರೋದು
ಐಪಿಎಸ್; ಯಾರ್ಯಾರು ಇದಾರೆ ಅಂದಾಜು
ಪೇದೆ; ಮಿನಿಸ್ಟರ್ ಲೆವೆಲ್‌ನಲ್ಲಿದಾರೆ…ಮಿನಿಸ್ಟರ್ ಲೆವೆಲ್…
ಐಪಿಎಸ್; ಹೋಂ ಮಿನಿಸ್ಟರ್ ಇದಾರಾ ..
ಪೇದೆ; ಅಲ್ಲಲ್ಲ ಬೇರೆ ಮಿನಿಸ್ಟರ್‌ಗಳು ಇದಾರೆ…ಐಪಿಎಸ್ ಇದಾರೆ..
ಐಪಿಎಸ್; ಐಪಿಎಸ್ ಗಳು ಅಂದ್ರೆ ಯಾರ್ಯಾರು ಅಂದಾಜು
ಪೇದೆ; ಹೆಸರು ಗೊತ್ತಿಲ್ಲ ಸರ್
ಐಪಿಎಸ್; ಆಯ್ತು ಬಿಡಪ್ಪ (ನಗುತ್ತ….) ಒಟ್ನಲ್ಲಿ ಅಂತೂ ಆಗಿದೆ…
ಪೇದೆ; ಆಗಿದೆ ಆಗಿದೆ ಸರ್..ಆಗಿರೋದಕ್ಕೆ…..ಏಯ್ಟೀನ್‌ನಲ್ಲೇ ಆಗಿರೋದು..
ಐಪಿಎಸ್; ನೆನ್ನೆ ಮೊನ್ನೆ ಶರತ್ ಅವರನ್ನು ಕರೆದಿದ್ರಾ….ಇವ್ರ ಬಗ್ಗೆ
ಪೇದೆ; ಇವ್ರು ಇಂಟಲಿಜೆನ್ಸ್ ಹೋಗಿದ್ರು….ಇಂಟ್‌ಗೆ…ಇಂಟ್‌ಗೆ….
ಐಪಿಎಸ್; ಯಾರು?
ಪೇದೆ; ಶರತ್ ಅವರು, ಈಗ ಟೂ ಟು ತ್ರೀ ಡೇಸ್ ಬ್ಯಾಕ್, ದಯಾನಂದ್ ಸಾಹೇಬ್ರು ಫುಲ್ ಅವುಂದು ಮಾಹಿತಿ ತಗೊಂಡು…
ಐಪಿಎಸ್; ಎನ್‌ಕ್ವೈಯರಿ ಅದೇ…ಅದ್ರ ಬಗ್ಗೆ ಕೇಳೋಕ್ಕೆ….ಅಷ್ಟೇನಾ…
ಪೇದೆ; ನಂದ್ ಎಲ್ಲಾ ಸರಿ ಇದೆ…ಕಟ್ ಅಂಡ್ ಕ್ಲಿಯರ್ ಇದೆ
ಐಪಿಎಸ್; ನೀವು ಈ ಕೇಸ್‌ನಲ್ಲಿ ಐಎ… ? ಏನ್ ಸೆಕ್ಷನ್ ಹಾಕಿದೀರಿ…
ಪೇದೆ; 66 ಸಿ ಅದು ಮಾಮೂಲಿ ಬೇರೇನೂ ಇಲ್ಲ
ಐಪಿಎಸ್; ಅದೇನ್ ಬೇಲೇಬಲ್ ಅಲ್ವಾ…
ಪೇದೆ; ಹೌದು ಸಾರ್ ಬೇಲ್ ಆಯ್ತಲ್ಲ…2-3 ತಿಂಗ್ಳು ಇದ್ದ ಒಳಗೇ…
ಐಪಿಎಸ್; ಬರೀ 66 ಸಿ ಗೆ ಮೂರ್ ತಿಂಗ್ಳು ಇಟ್ಕೋಳ್ತಾರಾ
ಪೇದೆ; ಆ ಮೇಲೆ 72 ಎ ಅದೇ ಹ್ಯಾಕಿಂಗ್…ಅಂದ್ ಬಿಟ್ಟು….. ಸಿಸಿಬಿ ಅವರು ಡ್ರಗ್ಸ್ ಕೇಸ್‌ನಲ್ಲಿ ಹಾಕ್ಕೊಂಡಿದ್ರು
ಐಪಿಎಸ್; ಡ್ರಗ್ಸ್ ಕೇಸ್ ಮೋಸ್ಟಲಿ ಬೇಲ್ ಇದಾಗಿರಬೇಕು. ಅದೇನ್ ಐ ಟಿ ಆಕ್ಟ್ ಅದೇನ್ ವೇಸ್ಟ್… ಬೇಲೇಬಲ್
ಪೇದೆ; ಬಟ್ ಈ ಕೇಸ್‌ನಲ್ಲಿ ಕೊಟ್ಟಿರಲಿಲ್ಲ..3 ತಿಂಗ್ಳಿದ್ದ
ಐಪಿಎಸ್; ಈಗೇನ್ ಚಾರ್ಜ್‌ಶೀಟ್ ಆಯ್ತಾ……ಐ ಓ ಯಾರು?
ಪೇದೆ; ಶರತ್ ಸಾರ್… ಈಗ ಸದ್ಯಕ್ಕೆ ಕೃಷ್ಣಕುಮಾರ್
ಐಪಿಎಸ್; ಡಿಐಜಿ ನಾ
ಪೇದೆ; ಇಲ್ಲಾ ಸಾರ್ ಇನ್ಸ್‌ಪೆಕ್ಟರ್
ಐಪಿಎಸ್; ಆಯ್ತ್….ಏನಾದ್ರೂ ಇದ್ರೆ ಕೇಳ್ತೀನಿ…ಅದೇನೋ ಕೇಳ್ಪಟ್ಟೆ…
ಪೇದೆ; ಏನಾದ್ರೂ ಇದ್ರೆ ಹೇಳ್ತೀನಿ…ಸಾರ್..ತಮ್ಮದೇನೂ ಹೆಸ್ರಿಲ್ಲ…
ಐಪಿಎಸ್; ಥ್ಯಾಂಕ್ಯೂ…..
ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿರುವ ಬಿಟ್ ಕಾಯಿನ್ ಹಗರಣವು ಆಡಳಿತ ಮತ್ತು ಪ್ರತಿಪಕ್ಷಗಳ ಅಂಗಳದಲ್ಲಿ ಪರಸ್ಪರ ಕೆಸರೆರಚಾಟಕ್ಕೂ ಕಾರಣವಾಗಿರುವುದನ್ನು ಸ್ಮರಿಸಬಹುದು.