ಪರ್ವ ರಂಗಪ್ರದರ್ಶನಕ್ಕೆ 49 ಲಕ್ಷ ವೆಚ್ಚ; ‘ದಿ ಫೈಲ್‌’ ವರದಿ ವಿಸ್ತರಿಸಿದ ಪ್ರಜಾವಾಣಿ

ಬೆಂಗಳೂರು: ಸಾಹಿತಿ ಎಸ್‌ ಎಲ್‌ ಭೈರಪ್ಪ ಅವರ ಕಾದಂಬರಿ ಆಧಾರಿತ ‘ಪರ್ವ’ ನಾಟಕದ 12 ರಂಗ ಪ್ರದರ್ಶನಕ್ಕೆ 49 ಲಕ್ಷ ರು. ಖರ್ಚಾಗಿದೆ ಎಂದು ‘ದಿ ಫೈಲ್‌’ ವರದಿ ಪ್ರಕಟಿಸಿದ್ದ ವರದಿಯನ್ನು ಪ್ರಜಾವಾಣಿಯು ವಿಸ್ತರಿಸಿದೆ. ಇದು ಸಹಭಾಗಿ ಪತ್ರಿಕೋದ್ಯಮವನ್ನು ಮುಂದುವರೆಸಿದಂತಾಗಿದೆ.

ಪರ್ವ ರಂಗ ಪ್ರದರ್ಶನಕ್ಕೆ ಆಗಿದ್ದ ವೆಚ್ಚದ ಸಂಪೂರ್ಣ ವಿವರಗಳನ್ನು ‘ದಿ ಫೈಲ್‌’ ಮೊದಲು ವರದಿ ಪ್ರಕಟಿಸಿತ್ತು. ಇದನ್ನಾಧರಿಸಿ ಪ್ರಜಾವಾಣಿಯು ಅಕ್ಟೋಬರ್‌ 2ರಂದು ವರದಿಯನ್ನು ಪ್ರಕಟಿಸಿದೆ. ಮೈಸೂರುವೊಂದರಲ್ಲೇ 49 ಲಕ್ಷ ರು. ಖರ್ಚು ಮಾಡಿರುವ ರಂಗಾಯಣವು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಪ್ರದರ್ಶನ ಏರ್ಪಡಿಸಲು ಹೆಚ್ಚಿನ ಅನುದಾನಕ್ಕೆ ಮೊರೆ ಹೋಗುವ ಸಾಧ್ಯತೆಯೂ ಇದೆ ಎಂದು ‘ದಿ ಫೈಲ್‌’ ತನ್ನ ವರದಿಯಲ್ಲಿ ಹೇಳಿತ್ತು.

ಪರ್ವಕ್ಕೆ 49 ಲಕ್ಷ ಖರ್ಚು; ಬೆಳವಾಡಿಗೆ 1 ಲಕ್ಷ, ಬಿದ್ದಪ್ಪಗೆ 95 ಸಾವಿರ

ಈ ವರದಿಯನ್ನು ವಿಸ್ತರಿಸಿರುವ ಪ್ರಜಾವಾಣಿಯು ಸಚಿವ ಸುನಿಲ್‌ಕುಮಾರ್‌ ಮತ್ತು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರ ಅಭಿಪ್ರಾಯವನ್ನು ವರದಿಯಲ್ಲಿ ಪ್ರಕಟಿಸಿದೆ.

ಬೇರೊಂದು ಮಾಧ್ಯಮದಲ್ಲಿ ಪ್ರಕಟವಾಗುವ ವರದಿಯನ್ನು ವಿಸ್ತರಿಸುವ ಮುಖ್ಯವಾಹಿನಿಯ ಪತ್ರಿಕೆಗಳು ವರದಿ ಪ್ರಕಟಿಸುವ ಮೂಲಕ ಸಹಭಾಗಿತ್ವ ಪತ್ರಿಕೋದ್ಯಮವನ್ನು ಮುಂದುವರೆಸುತ್ತಿರುವುದು ಉತ್ತಮ ಬೆಳವಣಿಗೆ.

ನಿರ್ದೇಶಕ ಪ್ರಕಾಶ್‌ ಬೆಳವಾಡಿ ಅವರು 1 ಲಕ್ಷ ರು.ಗಳ ಸಂಭಾವನೆಯನ್ನು ನಿರಾಕರಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. ಅಲ್ಲದೆ ಈ ಹಣವನ್ನು ಕೊರೊನಾ ಕಾಲದಲ್ಲಿ ಆಮ್ಲಜನಕದ ಸಿಲಿಂಡರ್‌ ಖರೀದಿಸಿ ರೋಟರಿಗೆ ಹಸ್ತಾಂತರಿಸಲಾಗಿದೆ. ಅದಕ್ಕೆ 1.32 ಲಕ್ಷ ಖರ್ಚಾಗಿರುವುದು ಪ್ರಜಾವಾಣಿ ವರದಿಯಿಂದ ತಿಳಿದು ಬಂದಿದೆ.

ಪರ್ವ ನಾಟಕದ ಕುರಿತು ವಿಧಾನಪರಿಷತ್‌ ಸದಸ್ಯ ಪಿ ಆರ್‌ ರಮೇಶ್‌ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಇಂಧನ, ಕನ್ನಡ, ಸಂಸ್ಕೃತಿ ಸಚಿವ ವಿ ಸುನೀಲ್‌ಕುಮಾರ್‌ ಅವರು ನಾಟಕದ ಖರ್ಚು ವೆಚ್ಚದ ಮಾಹಿತಿ ಒದಗಿಸಿದ್ದರು.

ಖರ್ಚಿನ ವಿವರ

ಪರ್ವ ಬೃಹತ್‌ ರಂಗ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡ ಹೆಚ್ಚುವರಿ ಕಲಾವಿದರಿಗೆ ಈವರೆವಿಗೆ 25 ಲಕ್ಷ ರು. ಸಂಭಾವನೆ ಪಾವತಿಸಲಾಗಿದೆ. ರಂಗ ಸಜ್ಜಿಕೆ ನಿರ್ಮಾಣಕ್ಕೆ ಸಮಾಗ್ರಿಗಳ ಖರೀದಿ, ನಿರ್ಮಾಣ ಮಾಡಿದ ಕಲಾವಿದರ, ತಂತ್ರಜ್ಞರಿಗೆ 4,32,436 ರು., ನಾಟಕದ ಆಭರಣಗಳು, ಇದಕ್ಕೆ ಸಂಬಂಧಿಸಿದ ಪರಿಕರ ಖರೀದಿ ಹಾಗೂ ವಿನ್ಯಾಸಕರ ಸಂಭಾವನೆ, ಪ್ರಯಾಣ, ಸಾಗಣೆ ವೆಚ್ಚವೆಂದು 1,14,042 ರು., ನಾಟಕದ ಎಲ್ಲಾ ಪಾತ್ರಗಳಿಗೆ ವಸ್ತ್ರಗಳ ಖರೀದಿ ಮತ್ತು ಸಿದ್ಧತೆಗೆ 2,62,250 ರು., ನಾಟಕದ ಪಾತ್ರಗಳಿಗೆ ಮುಖವಾಡ, ಪರಿಕರಗಳ ತಯಾರಿಕೆಗೆ ಸಾಮಗ್ರಿ ಖರೀದಿ ಹಾಗೂ ನಿರ್ಮಾಣ ಮಾಡಿದ ಕಲಾವಿದರಿಗೆ 1,11,600 ರು.ವೆಚ್ಚ ಮಾಡಿರುವುದು ಸಚಿವ ಸುನಿಲ್‌ಕುಮಾರ್‌ ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಪರ್ವ ಕಾದಂಬರಿಯ ರಂಗರೂಪ ಕುರಿತು ವಿಚಾರಣ ಸಂಕಿರಣ ಸಂಘಟನೆಗೆ 70,685 ರು., ಪ್ರಚಾರ ಸಾಮಗ್ರಿಗಳ ಮುದ್ರಣ, ಸಾಗಣೆ, ಅಳವಡಿಕೆ (ಪೋಸ್ಟರ್‌, ಬ್ಯಾನರ್‌, ಟಿಕೆಟ್‌ ಹಾಗೂ ಬ್ರೋಷರ್‌)ಗೆ 2,18,087 ರು., ನಾಟಕದ ಮೆಗಾ ಶೋಗಳ ಸಂಚಾಲಕರ ಸಂಭಾವನೆ ಮತ್ತು ಪ್ರಯೋಗಗಳಿಗೆ 35,000 ರು., ಮೇಕಿಂಗ್‌ ಅಫ್‌ ಪರ್ವ ಸಾಕ್ಷ್ಯ ಚಿತ್ರ ಹಾಗೂ ಪರ್ವ ನಾಟಕದ ಸಂಪೂರ್ಣ ದಾಖಲೀಕರಣಕ್ಕೆ 1,55,450 ರು. , ಪರ್ವ ಮಹಾ ಕಾದಂಬರಿಯನ್ನು ರಂಗ ಪಠ್ಯವನ್ನಾಗಿ ಸಿದ್ಧಪಡಿಸಿದ ನಾಟಕಕಾರರಿಗೆ 50,000 ರು. ಸೇರಿದಂತೆ ಒಟ್ಟು 49,10,777 ರು. ವೆಚ್ಚ ಮಾಡಲಾಗಿದೆ ಎಂದು ಸುನೀಲ್‌ಕುಮಾರ್‌ ಅವರು ಲೆಕ್ಕ ಒದಗಿಸಿದ್ದಾರೆ.

ಎಸ್‌ ಎಲ್ ಭೈರಪ್ಪನವರ ಪರ್ವ ಕಾದಂಬರಿ ಆಧರಿತ ಪರ್ವ ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶನ ಏರ್ಪಡಿಸಲು ಮೈಸೂರು ರಂಗಾಯಣಕ್ಕೆ 2020-21ನೇ ಸಾಲಿನ ಆಯವ್ಯಯದಲ್ಲಿ 1 ಕೋಟಿ ರು. ಕಾಯ್ದಿರಿಸಿದ್ದರು. ‘ಪರ್ವ ಕಾದಂಬರಿಯ ಒಟ್ಟು ಆಶಯಕ್ಕೆ ಧಕ್ಕೆ ಬಾರದಂತೆ ಕಾದಂಬರಿಯ ಎಲ್ಲಾ ಅಂಶಗಳನ್ನು ಕಾದಂಬರಿಕಾರರೊಂದಿಗೆ ಚರ್ಚಿಸಿ ಕಾದಂಬರಿ ನಿಷ್ಠವಾಗಿ ನಾಟಕೀಯ ಅಂಶಗಳಿಗೆ ಒತ್ತು ನೀಡಿ ಸುಮಾರು ಎಂಟೂವರೆ ತಾಸುಗಳ ನಾಟಕವಾಗಿ ರಂಗಪಠ್ಯ ಸಿದ್ಧಪಡಿಸಿ ನಾಟಕ ಪ್ರದರ್ಶನ ನಡೆಸಲಾಗುತ್ತಿದೆ,’ ಎಂದು ಉತ್ತರಿಸಿದ್ದರು.

ಅಲ್ಲದೆ ನಾಟಕ ಪ್ರದರ್ಶನದಿಂದ ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ರಾಜ್ಯ ಬಿಜೆಪಿ ಸರ್ಕಾರವು ಪತ್ರಿಕೆಗಳು, ವಾಹಿನಿಗಳು ಪ್ರಕಟಿಸಿರುವ ಲೇಖನ ಮತ್ತು ವಿಮರ್ಶೆಗಳ ಆಧಾರದ ಮೆಲೆ ನಾಟಕವು ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರಿದೆ ಎಂದು ಭಾವಿಸಿದೆ. ಯಾವುದೇ ನಾಟಕದ ಪರಿಣಾಮದ ಕುರಿತು ಅಧ್ಯಯನ ನಡೆಸುವ ಪರಿಪಾಠ ಇಲ್ಲ ಎಂದು ಉತ್ತರಿಸಿದ್ದರು.

‘ಪರ್ವ ನಾಟಕ ನೋಡಿದ ಎಲ್ಲಾ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ಎಲ್ಲಾ ಪತ್ರಿಕೆಗಳು, ವಾಹಿನಿಗಳು, ಮೆಚ್ಚುಗೆ ವರದಿ, ಲೇಖನ, ವಿಮರ್ಶೆಗಳನ್ನು ಪ್ರಕಟಿಸಿರುವುದರಿಂದ ನಾಟಕ ಒಟ್ಟಾರೆ ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರಿದೆ ಎಂದು ಭಾವಿಸಲಾಗಿದೆ,’ ಎಂದು ಉತ್ತರಿಸಿದ್ಧನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts