ಪರ್ವಕ್ಕೆ 49 ಲಕ್ಷ ಖರ್ಚು; ಬೆಳವಾಡಿಗೆ 1 ಲಕ್ಷ, ಬಿದ್ದಪ್ಪಗೆ 95 ಸಾವಿರ

ಬೆಂಗಳೂರು: ಸಾಹಿತಿ ಎಸ್‌ ಎಲ್‌ ಭೈರಪ್ಪ ಅವರ ಕಾದಂಬರಿ ಆಧಾರಿತ ‘ಪರ್ವ’ ನಾಟಕ ಪ್ರದರ್ಶನಕ್ಕೆ ಆಯವ್ಯಯದಲ್ಲಿ ಒದಗಿಸಿದ್ದ 1 ಕೋಟಿ ರು. ಅನುದಾನದಲ್ಲಿ ಮೈಸೂರುವೊಂದರಲ್ಲೇ ನಡೆದಿರುವ 12 ಪ್ರದರ್ಶನಗಳಿಗೆ ಇದುವರೆಗೆ 49.10 ಲಕ್ಷ ರು. ಖರ್ಚಾಗಿದೆ. ಇದರಲ್ಲಿ ನಾಟಕ ನಿರ್ದೇಶನ ಮಾಡಿರುವ ಪ್ರಕಾಶ್‌ ಬೆಳವಾಡಿ ಅವರಿಗೆ 1 ಲಕ್ಷ ಹಾಗೂ ವಸ್ತ್ರ ವಿನ್ಯಾಸಕ ಪ್ರಸಾದ್‌ ಬಿದ್ದಪ್ಪ ಅವರಿಗೆ 95 ಸಾವಿರ ರು. ಪಾವತಿಯಾಗಿದೆ.

ಮೈಸೂರುವೊಂದರಲ್ಲೇ 49 ಲಕ್ಷ ರು. ಖರ್ಚು ಮಾಡಿರುವ ರಂಗಾಯಣವು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಪ್ರದರ್ಶನ ಏರ್ಪಡಿಸಲು ಹೆಚ್ಚಿನ ಅನುದಾನಕ್ಕೆ ಮೊರೆ ಹೋಗುವ ಸಾಧ್ಯತೆಯೂ ಇದೆ.

ಪರ್ವ ನಾಟಕದ ಕುರಿತು ವಿಧಾನಪರಿಷತ್‌ ಸದಸ್ಯ ಪಿ ಆರ್‌ ರಮೇಶ್‌ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಇಂಧನ, ಕನ್ನಡ, ಸಂಸ್ಕೃತಿ ಸಚಿವ ವಿ ಸುನೀಲ್‌ಕುಮಾರ್‌ ಅವರು ನಾಟಕದ ಖರ್ಚು ವೆಚ್ಚದ ಮಾಹಿತಿ ಒದಗಿಸಿದ್ದಾರೆ.

2021ರ ಸೆಪ್ಟಂಬರ್‌ 4ರಿಂದ ಪುನರ್‌ ಆರಂಭವಾಗಿರುವ ಬೆನ್ನಲ್ಲೇ ಸಚಿವ ಸುನೀಲ್‌ಕುಮಾರ್‌ ಅವರು ನೀಡಿರುವ ವೆಚ್ಚದ ವಿವರ ಮತ್ತು ನಾಟಕವು ಸಮಾಜದ ಮೇಲೆ ಬೀರಿರುವ ಪರಿಣಾಮದ ಕುರಿತು ಸರ್ಕಾರ ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.

ಅಲ್ಲದೆ ನಾಟಕ ಪ್ರದರ್ಶನದಿಂದ ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ರಾಜ್ಯ ಬಿಜೆಪಿ ಸರ್ಕಾರವು ಪತ್ರಿಕೆಗಳು, ವಾಹಿನಿಗಳು ಪ್ರಕಟಿಸಿರುವ ಲೇಖನ ಮತ್ತು ವಿಮರ್ಶೆಗಳ ಆಧಾರದ ಮೆಲೆ ನಾಟಕವು ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರಿದೆ ಎಂದು ಭಾವಿಸಿದೆ. ಯಾವುದೇ ನಾಟಕದ ಪರಿಣಾಮದ ಕುರಿತು ಅಧ್ಯಯನ ನಡೆಸುವ ಪರಿಪಾಠ ಇಲ್ಲ ಎಂದು ಉತ್ತರಿಸಿದ್ದಾರೆ.

‘ಪರ್ವ ನಾಟಕ ನೋಡಿದ ಎಲ್ಲಾ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ಎಲ್ಲಾ ಪತ್ರಿಕೆಗಳು, ವಾಹಿನಿಗಳು, ಮೆಚ್ಚುಗೆ ವರದಿ, ಲೇಖನ, ವಿಮರ್ಶೆಗಳನ್ನು ಪ್ರಕಟಿಸಿರುವುದರಿಂದ ನಾಟಕ ಒಟ್ಟಾರೆ ಸಮಾಜದ ಮೇಲೆ ಒಳ್ಳೆಯ ಪರಿಣಾಮ ಬೀರಿದೆ ಎಂದು ಭಾವಿಸಲಾಗಿದೆ,’ ಎಂದು ಉತ್ತರಿಸಿದ್ಧಾರೆ.

ನಿರ್ದೇಶನಕ್ಕೆ 1 ಲಕ್ಷ ಸಂಭಾವನೆ-12 ಪ್ರದರ್ಶನಕ್ಕೆ 49  ಲಕ್ಷ ಖರ್ಚು

ಪರ್ವ ನಾಟಕವನ್ನು ನಿರ್ದೇಶಿಸಿರುವ ಪ್ರಕಾಶ್‌ ಬೆಳವಾಡಿ ಅವರಿಗೆ 1.00 ಲಕ್ಷ ರು. ಸಂಭಾವನೆ ಮತ್ತು ಅಂತರಾಷ್ಟ್ರೀಯ ಮಟ್ಟದ ವಸ್ತ್ರ ವಿನ್ಯಾಸಕ ಪ್ರಸಾದ್‌ ಬಿದ್ದಪ್ಪ ಅವರಿಗೆ 95,000 ರು., ನೀಡಿರುವುದು ಸುನೀಲ್‌ಕುಮಾರ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

2021ರ ಮಾರ್ಚ್ 12ರಿಂದ ಪ್ರದರ್ಶನ ಆರಂಭಗೊಂಡಿದ್ದು ಮೈಸೂರಿನಲ್ಲಿ ಮಾತ್ರ ಈವರೆವಿಗೆ 12 ಪ್ರದರ್ಶನ ನಡೆಸಲಾಗಿದೆ. ಈ ನಾಟಕದ ಸಿದ್ಧತೆಗಾಗಿ 2020-21ನೇ ಸಾಲಿನಲ್ಲಿ ಬಿಡುಗಡೆ ಮಾಡಿದ್ದ 50 ಲಕ್ಷ ರು. ಇದುವರೆಗೆ ಪೂರ್ಣ ವೆಚ್ಚವಾಗಿರುವುದು ಉತ್ತರದಿಂದ ಗೊತ್ತಾಗಿದೆ.

ಖರ್ಚಿನ ವಿವರ

ಪರ್ವ ಬೃಹತ್‌ ರಂಗ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡ ಹೆಚ್ಚುವರಿ ಕಲಾವಿದರಿಗೆ ಈವರೆವಿಗೆ 25 ಲಕ್ಷ ರು. ಸಂಭಾವನೆ ಪಾವತಿಸಲಾಗಿದೆ. ರಂಗ ಸಜ್ಜಿಕೆ ನಿರ್ಮಾಣಕ್ಕೆ ಸಮಾಗ್ರಿಗಳ ಖರೀದಿ, ನಿರ್ಮಾಣ ಮಾಡಿದ ಕಲಾವಿದರ, ತಂತ್ರಜ್ಞರಿಗೆ 4,32,436 ರು., ನಾಟಕದ ಆಭರಣಗಳು, ಇದಕ್ಕೆ ಸಂಬಂಧಿಸಿದ ಪರಿಕರ ಖರೀದಿ ಹಾಗೂ ವಿನ್ಯಾಸಕರ ಸಂಭಾವನೆ, ಪ್ರಯಾಣ, ಸಾಗಣೆ ವೆಚ್ಚವೆಂದು 1,14,042 ರು., ನಾಟಕದ ಎಲ್ಲಾ ಪಾತ್ರಗಳಿಗೆ ವಸ್ತ್ರಗಳ ಖರೀದಿ ಮತ್ತು ಸಿದ್ಧತೆಗೆ 2,62,250 ರು., ನಾಟಕದ ಪಾತ್ರಗಳಿಗೆ ಮುಖವಾಡ, ಪರಿಕರಗಳ ತಯಾರಿಕೆಗೆ ಸಾಮಗ್ರಿ ಖರೀದಿ ಹಾಗೂ ನಿರ್ಮಾಣ ಮಾಡಿದ ಕಲಾವಿದರಿಗೆ 1,11,600 ರು., ಪರ್ವ ಕಾದಂಬರಿಯ ರಂಗರೂಪ ಕುರಿತು ವಿಚಾರಣ ಸಂಕಿರಣ ಸಂಘಟನೆಗೆ 70,685 ರು. ಪಾವತಿಸಲಾಗಿದೆ.

ಪ್ರಚಾರ ಸಾಮಗ್ರಿಗಳ ಮುದ್ರಣ, ಸಾಗಣೆ, ಅಳವಡಿಕೆ (ಪೋಸ್ಟರ್‌, ಬ್ಯಾನರ್‌, ಟಿಕೆಟ್‌ ಹಾಗೂ ಬ್ರೋಷರ್‌)ಗೆ 2,18,087 ರು., ನಾಟಕದ ಮೆಗಾ ಶೋಗಳ ಸಂಚಾಲಕರ ಸಂಭಾವನೆ ಮತ್ತು ಪ್ರಯೋಗಗಳಿಗೆ 35,000 ರು., ಮೇಕಿಂಗ್‌ ಅಫ್‌ ಪರ್ವ ಸಾಕ್ಷ್ಯ ಚಿತ್ರ ಹಾಗೂ ಪರ್ವ ನಾಟಕದ ಸಂಪೂರ್ಣ ದಾಖಲೀಕರಣಕ್ಕೆ 1,55,450 ರು. , ಪರ್ವ ಮಹಾ ಕಾದಂಬರಿಯನ್ನು ರಂಗ ಪಠ್ಯವನ್ನಾಗಿ ಸಿದ್ಧಪಡಿಸಿದ ನಾಟಕಕಾರರಿಗೆ 50,000 ರು. ಸೇರಿದಂತೆ ಒಟ್ಟು 49,10,777 ರು. ವೆಚ್ಚ ಮಾಡಲಾಗಿದೆ ಎಂದು ಸುನೀಲ್‌ಕುಮಾರ್‌ ಅವರು ಲೆಕ್ಕ ಒದಗಿಸಿದ್ದಾರೆ.

ಎಸ್‌ ಎಲ್ ಭೈರಪ್ಪನವರ ಪರ್ವ ಕಾದಂಬರಿ ಆಧರಿತ ಪರ್ವ ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶನ ಏರ್ಪಡಿಸಲು ಮೈಸೂರು ರಂಗಾಯಣಕ್ಕೆ 2020-21ನೇ ಸಾಲಿನ ಆಯವ್ಯಯದಲ್ಲಿ 1 ಕೋಟಿ ರು. ಕಾಯ್ದಿರಿಸಿದ್ದರು. ‘ಪರ್ವ ಕಾದಂಬರಿಯ ಒಟ್ಟು ಆಶಯಕ್ಕೆ ಧಕ್ಕೆ ಬಾರದಂತೆ ಕಾದಂಬರಿಯ ಎಲ್ಲಾ ಅಂಶಗಳನ್ನು ಕಾದಂಬರಿಕಾರರೊಂದಿಗೆ ಚರ್ಚಿಸಿ ಕಾದಂಬರಿ ನಿಷ್ಠವಾಗಿ ನಾಟಕೀಯ ಅಂಶಗಳಿಗೆ ಒತ್ತು ನೀಡಿ ಸುಮಾರು ಎಂಟೂವರೆ ತಾಸುಗಳ ನಾಟಕವಾಗಿ ರಂಗಪಠ್ಯ ಸಿದ್ಧಪಡಿಸಿ ನಾಟಕ ಪ್ರದರ್ಶನ ನಡೆಸಲಾಗುತ್ತಿದೆ,’ ಎಂದು ಉತ್ತರಿಸಿದ್ದಾರೆ.

ಪರ್ವ ನಾಟಕ ಪ್ರದರ್ಶನ ವಿಷಯವು ರಂಗಕರ್ಮಿ,ಚಲನಚಿತ್ರ ನಿರ್ದೇಶಕ ಎಂ.ಎಸ್‌.ಸತ್ಯು ಮತ್ತು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರ ನಡುವೆ ವಾಗ್ವಾದ ನಡೆದಿತ್ತು. ಮೈಸೂರಿನವರಿಗೆ ಎಂಟು ಗಂಟೆ ಕುಳಿತು ನೋಡಲು ಬಹಳ ಪುರುಸೊತ್ತಿದೆ ಎಂದು ಕೆಲವರು ಸುದೀರ್ಘ ನಾಟಕ ಮಾಡಿದ್ದಾರೆ. ನಾಟಕದ ನಡುವೆ ಊಟವನ್ನೂ ಹಾಕಿಸ್ತಾರೆ’ ಎಂದು ಮಾಡಿದ್ದ ಟೀಕೆಯು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರನ್ನು ಕೆರಳಿಸಿತ್ತು.

‘ನಾಟಕವು ಅಷ್ಟು ದೀರ್ಘವಾಗಿ ಇರಬೇಕಿಲ್ಲ. ನಾವು ಏನನ್ನು ಹೇಳಬೇಕು ಎಂಬುದನ್ನು ಸೂಕ್ಷ್ಮವಾಗಿ, ಒಂದು ಸೀಮಿತ ಚೌಕಟ್ಟಿನಲ್ಲಿ ಹೇಳಬೇಕು. ಆಗ ಅಷ್ಟೊಂದು ದೀರ್ಘವಾಗಿ ಬೆಳೆಯುವುದಿಲ್ಲ. ನಾಟಕ ಮಾಡಿದ್ದನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ ಸಮಯದ ಮಿತಿ ಇಟ್ಟು ಕೆಲಸ ಮಾಡಿದರೆ ಅದರಿಂದ ಆಗುವಂತಹ ಪರಿಣಾಮ ಹೆಚ್ಚು. ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ನಾಟಕ ಆಡುವುದರಿಂದ ಜನರ ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ’ ಎಂದು ಹೇಳಿದ್ಧಾರೆ ಎಂದು ಮಾಧ್ಯಮಗಳು ಮಾಡಿದ್ದ ವರದಿಯನ್ನು ಸ್ಮರಿಸಬಹುದು.

ಸತ್ಯು ಅವರ ಹೇಳಿಕೆಗೆ ತಮ್ಮ ಭಾಷಣದಲ್ಲಿ ತಿರುಗೇಟು ನೀಡಿದ ಅಡ್ಡಂಡ ಸಿ.ಕಾರ್ಯಪ್ಪ, ‘ಸತ್ಯು ಅವರು ಪರ್ವದ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಹೆಮ್ಮೆ ಆಗುತ್ತದೆ. ಪರ್ವ ಅವರನ್ನು ಕಾಡಿದೆ. ಅದು ಕಾಡುತ್ತಲೇ ಇರಬೇಕು’ ಎಂದು ಉತ್ತರಿಸಿದ್ದರು.

‘ಪರ್ವ ನಾಟಕವನ್ನು ಬಿಜೆಪಿಯವರು ಮಾಡಿಲ್ಲ. ಎಸ್‌.ಎಲ್‌.ಭೈರಪ್ಪ ಅವರು 48 ವರ್ಷಗಳ ಹಿಂದೆ ಬರೆದ ಬಹುಚರ್ಚಿತ, ಪ್ರಗತಿಪರ ಕಾದಂಬರಿ ಅದು. ಸತ್ಯು ಅವರು ಅದನ್ನು ಓದಿದ್ದಾರೋ ಗೊತ್ತಿಲ್ಲ’ ಎಂದು ಕುಟುಕಿದ್ದನ್ನು ಸ್ಮರಿಸಬಹುದು.

‘ಏಳೂವರೆ ಗಂಟೆಯ ನಾಟಕ ಬೇಕೇ, ಬೇಡವೇ ಎಂಬುದನ್ನು ನಾನು ಅಥವಾ ನೀವು ನಿರ್ಧಾರ ಮಾಡುವುದಲ್ಲ. ಜನರು ನಿರ್ಧರಿಸುತ್ತಾರೆ. ಅಷ್ಟು ಹೊತ್ತು ಕುಳಿತು ನಾಟಕ ನೋಡಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ಸಂಶೋಧನೆ ನಡೆಸುವಂತೆ ಸತ್ಯು ಅವರನ್ನು ಕೇಳಿಕೊಳ್ಳುತ್ತೇನೆ. ಏಳೂವರೆ ಗಂಟೆಯ ನಾಟಕ ಪ್ರದರ್ಶನ ಇರುವಾಗ ಊಟ ಬೇಕಾಗುತ್ತದೆ’ ಎಂದು ಸಮರ್ಥಿಸಿಕೊಂಡಿದ್ದರು.

‘ಸುದೀರ್ಘ ನಾಟಕವನ್ನು ನಾವು ಹೊಸದಾಗಿ ತುರುಕಿದ್ದಲ್ಲ. ರಾಮಾಯಣ ದರ್ಶನಂ ನಾಟಕವನ್ನು ಐದೂವರೆ ಗಂಟೆ ಮಾಡಿದ್ದಾರೆ. ಈಗ ಈ ಅಸಹನೆ, ಕ್ರೋಧ, ಚಡಪಡಿಕೆ ಏಕೆ’ ಎಂದು ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts