ಸೇವಾ ತೆರಿಗೆ ಹಂಚಿಕೆ ಮಾಡದ ಕೇಂದ್ರ; ಹಣಕಾಸು ಆಯೋಗದ ಶಿಫಾರಸ್ಸಿನಂತೆ ಸಿಗದ ಅನುದಾನ

ಬೆಂಗಳೂರು; ಹದಿನಾಲ್ಕು ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ಸೇವಾ ತೆರಿಗೆಯ ನಿವ್ವಳ ಆದಾಯ ಐಜಿಎಸ್‌ಟಿ ಮತ್ತು ಸೇವಾ ತೆರಿಗೆಗಳಲ್ಲಿ ರಾಜ್ಯಕ್ಕೆ ಯಾವುದೇ ಹಂಚಿಕೆಯಾಗಿಲ್ಲ ಎಂಬ ಅಂಶವನ್ನು ಸಿಎಜಿ ವರದಿಯು ಹೊರಗೆಡವಿದೆ.

14ನೇ ಹಣಕಾಸು ಆಯೋಗವು ಕೇಂದ್ರ ತೆರಿಗೆಗಳ ನಿವ್ವಳ ಆದಾಯದಲ್ಲಿ ಮತ್ತು ಸೇವಾ ತೆರಿಗೆಯ ನಿವ್ವಳ ಆದಾಯದಲ್ಲಿ ರಾಜ್ಯಗಳ ಪಾಲನ್ನು ಕ್ರಮವಾಗಿ ಶೇ.4,713 ಮತ್ತು ಶೇ.4,822ಕ್ಕೆ ನಿಗದಿಪಡಿಸಬೇಕು ಎಂದು ಶಿಫಾರಸ್ಸು ಮಾಡಿತ್ತು. ಒಟ್ಟು ಹಂಚಿಕೆಯಾಗಿದ್ದ 30,919 ಕೋಟಿಗಳಲ್ಲಿ ಕಾರ್ಪೋರೇಷನ್‌ ತೆರಿಗೆ, ಸೀಮಾ ಸುಂಕ ಮತ್ತು ಕೇಂದ್ರ ಅಬಕಾರಿ ಸುಂಕದ ಪಾಲು ಶೇ.4.75ರಷ್ಟಿತ್ತು. ಆದಾಯ ತೆರಿಗೆ ಮತ್ತು ಸಂಪತ್ತು ತೆರಿಗೆ ಶೇ.4.77ರಷ್ಟಿತ್ತು. ಸಿಜಿಎಸ್‌ಟಿ 4.76ರಷ್ಟಿತ್ತು. ಅಲ್ಲದೆ ಇತರೆ ತೆರಿಗೆಗಳು ಮತ್ತು ಸುಂಕಗಳು ಶೇ.4.80ರಷ್ಟಿತ್ತು. ಆದರೆ ವಾಸ್ತವದ ಹಂಚಿಕೆಯು ಸ್ವಲ್ಪಮಟ್ಟಿಗೆ ಬದಲಾಗಿತ್ತು ಎಂದು ಸಿಎಜಿ ವರದಿಯು ತಿಳಿಸಿದೆ.

2019-20ರ ಅವಧಿಯಲ್ಲಿ ಕೇಂದ್ರ ತೆರಿಗೆಗಳ ಒಟ್ಟು ನಿವ್ವಳ ಸಂಗ್ರಹವಾದ 6,49,749.99 ಕೋಟಿಗಳಲ್ಲಿ ರಾಜ್ಯದ ಪಾಲಿನ ನಿವ್ವಳ ಹಂಚಿಕೆಯು 30,919.00 ಕೋಟಿಗಳಷ್ಟಿತ್ತು. ‘2019-20ರ ಅವಧಿಯಲ್ಲಿ ಜಿಎಸ್‌ಟಿ ಮತ್ತು ಸೇವಾ ತೆರಿಗೆಗಳಲ್ಲಿ ರಾಜ್ಯಕ್ಕೆ ಯಾವುದೇ ಹಂಚಿಕೆಯಾಗಿಲ್ಲ,’ ಎಂದು ಸಿಎಜಿ ವರದಿ ವಿವರಿಸಿದೆ.

14ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ 2015-16ರಲ್ಲಿ 2017-18ರಲ್ಲಿ 31,801.73 ಕೋಟಿ ವರ್ಗಾವಣೆ ಮಾಡಬೇಕಿತ್ತು. ವಾಸ್ತವಿಕ ತೆರಿಗೆಯು ಈ ಸಾಲಿನಲ್ಲಿ ವರ್ಗಾವಣೆಯಾಗಿದ್ದು 31,751.96 ಕೋಟಿ ರು.. ಇದರ ವ್ಯತ್ಯಾಸ 49.77 ಕೋಟಿ ರು.ಗಳಿತ್ತು. ಅದೇ ರೀತಿ 2018-19ರಲ್ಲಿ 35,831.46 ಕೋಟಿ ವರ್ಗಾವಣೆ ಮಾಡಬೇಕಿತ್ತು. ವಾಸ್ತವಿಕ ತೆರಿಗೆಯು ಈ ಸಾಲಿನಲ್ಲಿ 35,894.83 ಕೋಟಿ ವರ್ಗಾವಣೆ ಆಗಿತ್ತು. ಇದರ ವ್ಯತ್ಯಾಸವು 63.37 ಕೋಟಿಯಷ್ಟಿತ್ತು. ಹಾಗೆಯೇ 2019-20ರಲ್ಲಿ 30,622.71 ಕೋಟಿ ವರ್ಗಾವಣೆ ಮಾಡಬೇಕಿತ್ತಾದರೂ ವಾಸ್ತವಿಕ ತೆರಿಗೆ ವರ್ಗಾವಣೆಯು 30,919.00 ಕೋಟಿ ರುಗಳಾಗಿತ್ತು. ಇದರ ವ್ಯತ್ಯಾಸವು 296.29 ಕೋಟಿಗಳಾಗಿತ್ತು ಎಂದು ಸಿಎಜಿ ವರದಿ ತಿಳಿಸಿದೆ.

’14ನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಪ್ರಕಾರ ವರ್ಗಾವಣೆಯಾಗಬೇಕಾದ ಶೇಕಡವಾರು ಹಂಚಿಕೆಗೆ ಪ್ರತಿಯಾಗಿ 2015-16ರಿಂದ 2019-20ರ ಅವಧಿಯಲ್ಲಿ ರಾಜ್ಯವು ಪಡೆದ ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿನ ಪಾಲುಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ,’ ಎಂದು ಸಿಎಜಿ ವಿಶ್ಲೇಷಿಸಿದೆ.

ಹಾಗೆಯೇ ಪಂಚಾಯತ್‌ರಾಜ್‌ ಸಂಸ್ಥೆಗಳು ಮತ್ತು ಯುಎಲ್‌ಬಿಗಳ ಮೂಲ ಅನುದಾನಕ್ಕೆ ಸಂಬಂಧಿಸಿದಂತೆ 8,359.79 ಕೋಟಿ ಮತ್ತು 4,685.51 ಕೋಟಿಗಳ ಶಿಫಾರಸ್ಸಿಗೆ ಪ್ರತಿಯಾಗಿ ಪಿಆರ್‌ಐಗಳಿಗೆ ಸಂಬಂಧಿಸಿದಂತೆ 93.37 ಕೋಟಿಗಳಷ್ಟು ಕಡಿಮೆಯಾಗಿತ್ತು. ಕಾರ್ಯಾಧರಿತ ಅನುದಾನಕ್ಕೆ ಸಂಬಂಧಿಸಿದಂತೆ ಪಿಆರ್‌ಐಗಳು ಮತ್ತು ಯುಎಲ್‌ಬಿಗಳಿಗೆ 928.87 ಕೋಟಿ ಮತ್ತು 1,171.38 ಕೋಟಿಗಳ ಶಿಫಾರಸ್ಸಿಗೆ ಪ್ರತಿಯಾಗಿ ರಾಜ್ಯವು ಕೇವಲ 179. ಕೋಟಿ (ಶೇಕಡ 19) ಮತ್ತು 485.86 ಕೋಟಿ (ಶೇ.41) ಮಾತ್ರ ಪಡೆದಿತ್ತು.

2019-20ರ ಅವಧಿಯಲ್ಲಿ ಪಿಆರ್‌ಐಗಳಿಗೆ ಪ್ರಾಥಮಿಕ ಅನುದಾನಕ್ಕೆ ಸಂಬಂಧಿಸಿದಂತೆ 3.75 ಕೋಟಿಗಳ ಕೊರತೆಯಿದ್ದರೆ ಯುಎಲ್‌ಬಿಗಳಿಗೆ ಪ್ರಾಥಮಿಕ ಅನುದಾನದ ಶಿಫಾರಸ್ಸಿನ ಪೂರ್ಣ 1,405.62 ಕೋಟಿ ಪಡೆದಿತ್ತು. ಆದರೂ ಪಂಚಾಯತ್‌ರಾಜ್‌ ಸಂಸ್ಥೆ (ಪಿಆರ್‌ಐಗಳು) ಮತ್ತು ನಗರ ಸ್ಥಳೀಯ ಆಡಳಿತ ಸಂಸ್ಥೆ (ಯುಎಲ್‌ಬಿ)ಗಳಿಗೆ ಕಾರ್ಯಾಧರಿತ ಅನುದಾನವನ್ನು 2020ರ ಮಾರ್ಚ್ ಅಂತ್ಯದವರೆಗೂ ಭಾರತ ಸರ್ಕಾರವು ಬಿಡುಗಡೆ ಮಾಡಿರಲಿಲ್ಲ ಎಂಬ ಸಂಗತಿಯನ್ನು ಸಿಎಜಿ ಬಹಿರಂಗಗೊಳಿಸಿದೆ. ಆದರೂ ಹಿಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಸಚಿವ ಕೆ ಎಸ್‌ ಈಶ್ವರಪ್ಪ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ.

ವಿದ್ಯಾರ್ಥಿ ವೇತನ, ಪ್ರೋತ್ಸಾಹಕಗಳು, ಗುತ್ತಿಗೆ, ಹೊರಗುತ್ತಿಗೆ ಮತ್ತು ಬಂಡವಾಳ ವೆಚ್ಚಗಳ ಮೂರು ಶೀರ್ಷಿಕೆಗಳಡಿ ಕ್ರಮವಾಗಿ ಶೇ.49, 88 ಮತ್ತು 75ರಷ್ಟು ಬಳಕೆಯಾಗಿದೆ. ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹಕಗಳಿಗೆಂದು ಆಯವ್ಯಯದಲ್ಲಿ ನಿಗದಿಪಡಿಸಿದ್ದ 336.94 ಕೋಟಿ ರು. ಪೈಕಿ 165.00 ಕೋಟಿಯಷ್ಟು ಮಾತ್ರ (ಶೇ. 48.97) ವೆಚ್ಚ ಮಾಡಿದ್ದನ್ನು ಸಿಎಜಿ ಹೊರಗೆಡವಿತ್ತು.

ಮಹಿಳಾ ಆಯವ್ಯಯದಲ್ಲಿ ಹಂಚಿಕೆ ಮಾಡಿದ್ದ ಹಣವನ್ನು ಮಹಿಳೆಯರ ಸಬಲೀಕರಣಕ್ಕಾಗಿ ವೆಚ್ಚ ಮಾಡದೆಯೇ ಜಾಹೀರಾತು, ಕೋವಿಡ್‌ ಬಾಬ್ತುಗಳಿಗಾಗಿ ವೆಚ್ಚ ಮಾಡಲಾಗಿತ್ತು ಎಂಬುದನ್ನು ಭಾರತದ ಲೆಕ್ಕನಿಯಂತ್ರಕರು ಮತ್ತುಮಹಾಲೆಕ್ಕಪರಿಶೋಧಕರ ವರದಿಯು ಹೊರಗೆಡವಿದೆ.

ಅಧಿಕ ಪ್ರಮಾಣದಲ್ಲಿ ನಗದು ಶಿಲ್ಕು ಹೊಂದಿದ್ದರೂ ಹಲವು ಸಂದರ್ಭಗಳಲ್ಲಿ ಮಾರುಕಟ್ಟೆಯಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದಿದೆ. 2019-20ರಲ್ಲೇ ಸರಾಸರಿ ಶೇ. 6.38 ದರದಲ್ಲಿ 19,903 ಕೋಟಿ ರು. ಬಡ್ಡಿ ಪಾವತಿಸಿರುವುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ ಬಹಿರಂಗಗೊಳಿಸಿದ್ದನ್ನು ಸ್ಮರಿಸಬಹುದು..

SUPPORT THE FILE

Latest News

Related Posts