ಬೆಂಗಳೂರು; ಕೋವಿಡ್‌ನಿಂದ ಉದ್ಭವಿಸಿರುವ ಆರ್ಥಿಕ ಸಂಕಷ್ಟ ಮತ್ತು ಕೋವಿಡ್‌ನಿಂದ ಸಾವಿಗೀಡಾಗಿರುವ ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಪರಿಹಾರ ನೀಡಲು ಚೌಕಾಸಿ ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರವು ತಮಿಳುನಾಡಿನ ಪ್ರಸ್ತುತ ರಾಜಕೀಯ ಕುರಿತ ವಿಶ್ಲೇಷಣೆ, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ರಾಜಕೀಯ ಸೇರ್ಪಡೆ ಸೇರಿದಂತೆ ಇನ್ನಿತರೆ ಖಾಸಗಿ ಕಾರ್ಯಕ್ರಮಗಳ ಸಮಾವೇಶಕ್ಕೆ 25 ಲಕ್ಷ ರು.ಗಳನ್ನು ಪ್ರಾಯೋಜಿಸಿತ್ತು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಟಿ ವಿ ಟುಡೆ ನೆಟ್‌ವರ್ಕ್ ಸಂಸ್ಥೆಯು ಚೆನ್ನೈ ನಗರದಲ್ಲಿ 2021ರ ಮಾರ್ಚ್‌ನಲ್ಲಿ ಆಯೋಜಿಸಿದ್ದ ಖಾಸಗಿ ಸಮಾವೇಶಕ್ಕೆ ಪ್ರಾಯೋಜಕತ್ವದ ಹೆಸರಿನಲ್ಲಿ ಒಟ್ಟು 50 ಲಕ್ಷ ರು. ವೆಚ್ಚದ ಪ್ರಸ್ತಾವನೆ ಸಲ್ಲಿಸಿತ್ತು. ಕಡೆಯಲ್ಲಿ ಪ್ರಸ್ತಾವನೆಯ 50 ಲಕ್ಷ ರು. ಪೈಕಿ 25.00 ಲಕ್ಷ ರು.ಗಳನ್ನು ಭರಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ ಪಿ ಎಸ್ ಹರ್ಷ ಅವರು 2021ರ ಫೆ.26ರಂದು ಭರಿಸಲು ಅನುಮೋದಿಸಿದ್ದರು ಎಂದು ತಿಳಿದು ಬಂದಿದೆ.
ತಮಿಳುನಾಡಿನ ಪ್ರಸ್ತುತ ರಾಜಕೀಯ ಕುರಿತು ವಿಶ್ಲೇಷಣೆ, ಚಲನತ್ರ ಚಿತ್ರಗಳು ಒಟಿಟಿ ಮಾದರಿಯಲ್ಲಿ ಬಿಡುಗಡೆ ಮಾಡುವ ಕುರಿತು, ರಾಜಕೀಯ, ಸಿನಿಮಾ ವಿಶ್ಲೇಷಣೆ, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ರಾಜಕೀಯ ಸೇರ್ಪಡೆ ಕುರಿತಂತೆ ಇನ್ನಿತರೆ ಕಾರ್ಯಕ್ರಮಗಳ ಬಗ್ಗೆ ರಾಜಕೀಯ ವ್ಯಕ್ತಿಗಳು , ಚಲನಚಿತ್ರ ರಂಗದವರು ಇನ್ನಿತರೆ ವ್ಯಕ್ತಿಗಳಿಂದ ವಿಶ್ಲೇಷಣೆ ನಡೆಸಲು ಟಿ ವಿ ಟುಡೆ ನೆಟ್ ವರ್ಕ್ ಪ್ರಸ್ತಾವನೆ ಸಲ್ಲಿಸಿತ್ತು.
ಇದಲ್ಲದೆ ಟಿ ವಿ ನೆಟವರ್ಕ್ 2021ರ ಮಾರ್ಚ್‌ನಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ಇಂಡಿಯಾ ಬ್ಯುಸಿನೆಸ್ ಲೀಡ್ ಅವಾರ್ಡ್ ಕಾರ್ಯಕ್ರಮಕ್ಕೆ 45.18 ಲಕ್ಷ ರು.ಗಳ ವೆಚ್ಚ ಮಾಡಿತ್ತು.
‘ಈ ಕಾರ್ಯಕ್ರಮದಲ್ಲಿ ದೇಶದ ಹಲವಾರು ಉದ್ದಿಮೆಗಳ ಮುಖ್ಯಸ್ಥರು, ಕೈಗಾರಿಕೋದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಲಿರುವುದರಿಂದ ಈ ಕಾರ್ಯಕ್ರಮವು ರಾಜ್ಯದಲ್ಲಿ ಕೈಗಾರಿಕೆಗಳ ಪೂರಕ ಬೆಳವಣಿಗೆಗೆ ಒಂದು ಉತ್ತಮ ವೇದಿಕೆಯಾಗುವುದು. ಹಾಗೂ ಈ ಕಾರ್ಯಕ್ರಮವು ಕರ್ನಾಟಕ ರಾಜ್ಯದ ಕೈಗಾರಿಕೆಯ ಸ್ನೇಹ ನೀತಿಗಳನ್ನು ಕೈಗಾರಿಕೋದ್ಯಮಿಗಳಿಗೆ ತಿಳಿಸುವ ಮತ್ತು ರಾಜ್ಯದ ಮುಖ್ಯಮಂತ್ರಿಗಳನ್ನು ಬಿಂಬಿಸುವ ಕಾರ್ಯಕ್ರಮವಾಗಿರುವುದರಿಂದ ನವದೆಹಲಿಯಲ್ಲಿ ನಡೆಯುವ ಇಂಡಿಯಾ ಬ್ಯುಸಿನೆಸ್ ಲೀಡ್ ಅವಾರ್ಡ್ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವನ್ನು 45.18 ಲಕ್ಷ ರು. ವೆಚ್ಚದಲ್ಲಿ ಅನುಮೋದಿಸಿದೆ,’ ಎಂದು ಕನ್ನಡ, ಸಂಸ್ಕೃತಿ, ವಾರ್ತಾ ಇಲಾಖೆ (ವಾರ್ತಾಶಾಖೆ)ಯ ಅಧೀನ ಕಾರ್ಯದರ್ಶಿ ಎಂ ಜಿ ಸಿಂತ ಅವರು 2021ರ ಮಾರ್ಚ್ 23ರಂದು ಆದೇಶ ಹೊರಡಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ನೀಡಿದ್ದ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ , ಪೊಲೀಸ್ ಗೃಹ 2025 ಯೋಜನೆಗೆ ಚಾಲನೆ, ಬಹುಮಹಡಿ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ, ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್) ಆಡಳಿತ ಕಚೇರಿ ಸ್ಥಾಪನೆಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಒಟ್ಟು 89.46 ಲಕ್ಷ ರು.ಗಳನ್ನು ಜಾಹೀರಾತಿಗೆ ಖರ್ಚು ಮಾಡಿತ್ತು.
ಅದೇ ರೀತಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆ, ಕಾರ್ಯಕ್ರಮಗಳ ಸಮಗ್ರ ಚಿತ್ರಣವನ್ನು ಬಿಂಬಿಸುವ ನಾಲ್ಕು ಪುಟಗಳ ಪ್ರಾಯೋಜಿತ ಪುರವಣಿಗಾಗಿ 2020ರಲ್ಲಿ ಒಟ್ಟು 1.60 ಕೋಟಿ ರು.ಗಳನ್ನು ವೆಚ್ಚ ಮಾಡಿದೆ. ಹಾಗೆಯೇ ಜನ ಸಾಮಾನ್ಯರ ಕಲ್ಯಾಣಕ್ಕಾಗಿ ರೂಪಿಸಿದ್ದ ಯೋಜನೆಗಳ ಸಮಗ್ರ ಚಿತ್ರಣವನ್ನೊಳಗೊಂಡ ಮತ್ತು ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿದ್ದ ಕ್ರಮಗಳ ಕುರಿತು 15ರಿಂದ 30 ನಿಮಿಷದ ಕಾರ್ಯಕ್ರಮ ಪ್ರಸಾರ ಮಾಡಿರುವ ಟಿ ವಿ ಚಾನಲ್‌ಗಳಿಗೆ ರಾಜ್ಯ ಬಿಜೆಪಿ ಸರ್ಕಾರವು 57. 02 ಲಕ್ಷ ರು. ಪಾವತಿಸಿದೆ.
ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಡೆದಿದ್ದ ನೂತನ ಅನುಭವ ಮಂಟಪ ನಿರ್ಮಾಣ ಮತ್ತು ಇನ್ನಿತರೆ ಪೂಜಾ ಕಾರ್ಯುಕ್ರಮಗಳಲ್ಲಿ ಮುಖ್ಯಮಂತ್ರಿಗಳ ಭಾಷಣವನ್ನು 30 ನಿಮಿಷ ಅವಧಿಯ ನೇರ ಪ್ರಸಾರಕ್ಕೆ ಬಿಜೆಪಿ ಸರ್ಕಾರವು ಒಟ್ಟು 42.26 ಲಕ್ಷ ರು. ಖರ್ಚು ಮಾಡಿದ್ದನ್ನು ಸ್ಮರಿಸಬಹುದು.