ಪರಿಹಾರ ಮೊತ್ತದಲ್ಲಿ ಇಳಿಕೆ; ‘ದಿ ಫೈಲ್‌’ ವರದಿ ಬೆನ್ನಲ್ಲೇ ದನಿ ಎತ್ತಿದ ಸಿದ್ದರಾಮಯ್ಯ

ಬೆಂಗಳೂರು; ಕೋವಿಡ್‌ನಿಂದ ಸಾವಿಗೀಡಾದ ವ್ಯಕ್ತಿಯ ಕುಟುಂಬ ಸದಸ್ಯರಿಗೆ 4 ಲಕ್ಷ ರು. ಪರಿಹಾರ ನೀಡಲು ಆದೇಶ ಹೊರಡಿಸಿ ಆ ನಂತರ ಅದನ್ನು ಕೇಂದ್ರ ಸರ್ಕಾರವು ಹಿಂಪಡೆದುಕೊಂಡಿದ್ದರ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮದ ಪ್ರಕಾರ ಪ್ರತಿ ಕುಟುಂಬಕ್ಕೆ 4 ಲಕ್ಷ ರು. ನೀಡಬೇಕು ಎಂದು ಮಾರ್ಗಸೂಚಿ ಆದೇಶ ಹೊರಡಿಸಿ ಆ ನಂತರ ಕೆಲವೇ ಗಂಟೆಗಳಲ್ಲೇ ಆದೇಶವನ್ನೂ ಹಿಂಪಡೆದಿತ್ತು. ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ 2021ರ ಸೆಪ್ಟಂಬರ್‌ನಲ್ಲಿ ಆದೇಶವನ್ನು ಹೊರಡಿಸಿದ್ದ ಕೇಂದ್ರ ಸರ್ಕಾರವು ಒಟ್ಟು ಮೊತ್ತವನ್ನು 50,000 ರು.ಕ್ಕಿಳಿಸಿ ಆದೇಶವನ್ನು ಹೊರಡಿಸಿತ್ತು. ಆ ನಂತರ ಅದನ್ನು ಹಿಂಪಡೆದುಕೊಂಡಿತ್ತು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

ಕೋವಿಡ್‌; 3.50 ಲಕ್ಷ ಕೇಂದ್ರದಿಂದ ಕಡಿತ, ಸರಿದೂಗಿಸಲು ಸಂಧ್ಯಾ ಸುರಕ್ಷಾಕ್ಕೆ ಕೈ ಹಾಕಿದ್ದೇಕೆ?

ಟ್ವೀಟ್‌ನಲ್ಲೇನಿದೆ?

ಕೇಂದ್ರ ಸರ್ಕಾರವು 2020ರ ಮಾರ್ಚ್‌ 14ರಂದು ಕೋವಿಡ್‌ನಿಂದ ಮರಣ ಹೊಂದಿದ ಪ್ರತಿ ವ್ಯಕ್ತಿಗೆ 4 ಲಕ್ಷ ರು.ಗಳನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶ ಹೊರಡಿಸಿ, ಅದೇ ದಿನ ಆದೇಶವನ್ನು ಮಾರ್ಪಡಿಸಿಕೊಂಡಿದೆ,’ ಎಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಅಲ್ಲದೆ ‘ಕುಟುಂಬದ ದುಡಿಯುವ ಸದಸ್ಯನನ್ನು ಕಳೆದುಕೊಂಡವರು ಸಣ್ಣ ಮಟ್ಟದ ಬದುಕು ಕಟ್ಟಿಕೊಳ್ಳಬೇಕಾದರೆ ನಾಗರಿಕವೆನ್ನಿಸಿಕೊಂಡ ಸರ್ಕಾರಗಳು ನೊಂದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಈ ಹಿನ್ನಲೆಯಲ್ಲಿ ನಾವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ನಿಯಮಗಳ ಪ್ರಕಾರ ಪ್ರತಿ ಕುಟುಂಬಕ್ಕೆ 5 ಲಕ್ಷವನ್ನಾದರೂ ಕಡ್ಡಾಯವಾಗಿ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.

ಮೊದಲು ಕೊರೊನಾ ಸಾವಿನ ಸಂಖ್ಯೆಯನ್ನು ಸುಳ್ಳು ಲೆಕ್ಕ ನೀಡಿ ಕಡಿಮೆ ತೋರಿಸಿದಿರಿ, ಈಗ ಪರಿಹಾರದ ಮೊತ್ತವನ್ನು ಕೂಡ ಕಡಿತಗೊಳಿಸಿ ಸತ್ತವರ ಜತೆ ಬದುಕಿರುವ ಅವರ ಕುಟುಂಬವನ್ನು ಸಾಯಿಸಲು ಹೊರಟಿದ್ದೀರಿ, ನೊಂದವರ ಶಾಪ ಸರ್ಕಾರಕ್ಕೆ ತಟ್ಟದೇ ಇರಲಾರದು ಎಂದೂ ಹೇಳಿದ್ದಾರೆ.

ಕೋವಿಡ್‌ನಿಂದ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಕ್ಕೂ 50,000 ರು ಮತ್ತು ಬಿಪಿಎಲ್‌ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದರೆ ಒಂದು ಪ್ರಕರಣದಲ್ಲಿ 1.50 ಲಕ್ಷ ರು. ಪರಿಹಾರ ನೀಡಲು ರಾಜ್ಯ ಬಿಜೆಪಿ ಸರ್ಕಾರವು ಅಳೆದು ತೂಗಿ ಆದೇಶಿಸಿತ್ತು.
ಅಲ್ಲದೆ ರಾಜ್ಯ ಬಿಜೆಪಿ ಸರ್ಕಾರವು 1.50 ಲಕ್ಷ ರು. ಪರಿಹಾರ ನೀಡಲು ಸಾಮಾಜಿಕ ಭದ್ರತೆ ಯೋಜನೆಗಳಲ್ಲೊಂದಾದ ಸಂಧ್ಯಾ ಸುರಕ್ಷಾ ನಿಧಿಗೆ ಕೈ ಹಾಕಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ನಿಯಮದ ಪ್ರಕಾರ 4 ಲಕ್ಷ ರು.ಗಳನ್ನು ಕೇಂದ್ರ ಸರ್ಕಾರವು ನೀಡಿದ್ದರೆ ಸಂಧ್ಯಾ ಸುರಕ್ಷಾ ನಿಧಿಯನ್ನು ಬಳಸುವ ಅವಶ್ಯಕತೆ ಇರಲಿಲ್ಲ. ಆದರೀಗ ಕೇಂದ್ರ ಸರ್ಕಾರವು ತಾನು ನೀಡಬೇಕಿದ್ದ 4.00 ಲಕ್ಷ ರು.ಗಳಲ್ಲಿ 3.50 ಲಕ್ಷ ರು.ಗಳನ್ನು ಕಡಿತಗೊಳಿಸಿ ಕೇವಲ 50 ಸಾವಿರ ರು. ನೀಡಲು ಮಾರ್ಗಸೂಚಿ ಹೊರಡಿಸಿರುವ ಕ್ರಮ ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಕೋವಿಡ್‌ನಿಂದ ಸಾವಿಗೀಡಾದವರಿಗೆ ಪರಿಹಾರ ನೀಡಲು ರಾಷ್ಟ್ರೀಯ ವಿಪತ್ತು ಮತ್ತು ರಾಜ್ಯ ವಿಪತ್ತು ನಿಧಿ ನಿಯಮಗಳನ್ನು ಅನ್ವಯಿಸಲಾಗಿದೆ. ಕೋವಿಡ್‌ನಿಂದ ಸಾವಿಗೀಡಾದ ಮೃತಪಟ್ಟ ಕುಟುಂಬ ಸದಸ್ಯರಿಗೆ 4 ಲಕ್ಷ ರು.ಗಳ ಆರ್ಥಿಕ ನೆರವುನ್ನು ಸಕ್ಷಮ ಪ್ರಾಧಿಕಾರದ ಮೂಲಕ ವಿಪತ್ತು ನಿಧಿ ನಿಯಮಗಳನ್ವಯ ನೀಡಬೇಕು ಎಂದು ಕೇಂದ್ರ ಸರ್ಕಾರವು 2020ರ ಮಾರ್ಚ್‌ 14ರಂದು ಮಾರ್ಗಸೂಚಿ ಸುತ್ತೋಲೆಯನ್ನು ಹೊರಡಿಸಿತ್ತು.

ಆದರೆ ಈ ಮಾರ್ಗಸೂಚಿ ಸುತ್ತೋಲೆಯನ್ನು ಬದಲಿಸಿದ್ದ ಕೇಂದ್ರ ಸರ್ಕಾರವು 2021ರ 25ರಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದರ ಪ್ರಕಾರ ಕೋವಿಡ್‌ 19 ವೈರಾಣು ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಯ ಕಾನೂನುಬದ್ಧ ವಾರಸುದಾರರಿಗೆ 50,000 ರು. ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಕೇಂದ್ರದ ನಿರ್ದೇಶನದಂತೆ 2021 ಸೆ.28ರಂದು ಆದೇಶ ಹೊರಡಿಸಿದ್ದ ರಾಜ್ಯ ಬಿಜೆಪಿ ಸರ್ಕಾರವು ಈ ಹಿಂದೆ ಹೊರಡಿಸಿದ್ದ 1 ಲಕ್ಷ ರು. ಪರಿಹಾರ ಧನ ವಿತರಣೆ ಆದೇಶವನ್ನು ಹಿಂಪಡೆದುಕೊಂಡು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 50,000 ರು.ಗಳನ್ನು ಜಿಲ್ಲಾ ವಿಪತ್ತು ಪರಿಹಾರ ನಿಧಿ ಮೂಲಕ ವಿತರಿಸಲು ಆದೇಶಿಸಿತ್ತು.

ಕೋವಿಡ್‌ ಸಾವು; ಒಂದು ಲಕ್ಷ ಪರಿಹಾರ ಘೋಷಿಸಿದ್ದ ಆದೇಶ ಹಿಂಪಡೆದ ಸರ್ಕಾರ

ಈ ಆದೇಶವು ಹೊರಬೀಳುತ್ತಿದ್ದಂತೆ ವಿರೋಧ ವ್ಯಕ್ತವಾಗುವ ಸಾಧ್ಯತೆಗಳೇ ಹೆಚ್ಚಿದ್ದರಿಂದಾಗಿ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿನ ನಿಧಿಯನ್ನು ಬಳಸಿಕೊಂಡು 1 ಲಕ್ಷ ರು. ಮತ್ತು ಕೇಂದ್ರದ ಮಾರ್ಗಸೂಚಿಗಳಲ್ಲಿ ಹೇಳಿರುವಂತೆ 50,000 ಸೇರಿ ಒಟ್ಟು 1.50 ಲಕ್ಷ ರು.ಗಳ ಪರಿಹಾರ ನೀಡಲು ಸೆ.28ರಂದೇ ಪರಿಷ್ಕೃತ ಆದೇಶವನ್ನು ಹೊರಡಿಸಿದ್ದನ್ನು ಸ್ಮರಿಸಬಹುದು.

ಕೋವಿಡ್‌ ಸಾವು ಪರಿಹಾರ;ಅತ್ಯಲ್ಪ ಅವಧಿಯಲ್ಲೇ 2 ಆದೇಶ ಹೊರಡಿಸಿ ರಾಗಬದಲಾಯಿಸಿದ ಸರ್ಕಾರ

ಇನ್ನು, ಕೋವಿಡ್‌ನಿಂದ ಸಾವಿಗೀಡಾದ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಪರಿಹಾರ ನೀಡಿಕೆ ಸಂಬಂಧ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸ್ಪಷ್ಟತೆಯೇ ಇರಲಿಲ್ಲ. ಕೋವಿಡ್‌ ಸೋಂಕಿನಿಂದ ಮೃತರಾದ ಬಡತನ ರೇಖೆಗಿಂತ ಕೆಳಗಿರುವವರಿಗೆ ಒಂದು ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯುವ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಆ ಆದೇಶವನ್ನೂ ಹಿಂಪಡೆದು ಪರಿಷ್ಕೃತವಾದ ಮತ್ತೊಂದು ಆದೇಶವನ್ನು ಹೊರಡಿಸಿತ್ತು.

ಕೋವಿಡ್‌ನಿಂದ ಮೃತ ವ್ಯಕ್ತಿಗಳ ಕುಟುಂಬದ ವಾರಸುದಾರರಿಗೆ ಪರಿಹಾರ ನೀಡುವ ಸಂಬಂಧ ಕಂದಾಯ ಇಲಾಖೆಯು (ವಿಪತ್ತು ನಿರ್ವಹಣೆ) ಸೆ.28ರ ಒಂದೇ ದಿನದಲ್ಲಿ ಎರಡೆರಡು ಆದೇಶಗಳನ್ನು ಹೊರಡಿಸಿದೆ. 1 ಲಕ್ಷ ರು.ಪರಿಹಾರ ಆದೇಶವನ್ನು ಹಿಂಪಡೆದುಕೊಳ್ಳುವ ಸಂಬಂಧ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ರಶ್ಮಿ ಎಂ ಎಸ್‌ ಅವರು ಹೊರಡಿಸಿದ್ದರು.

ಈ ಅದೇಶ ಹೊರಬೀಳುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿದ್ದರಿಂದಾಗಿ ದಿಢೀರ್‌ ಎಂದು ರಶ್ಮಿ ಎಂ ಎಸ್‌ ಅವರು ಹೊರಡಿಸಿದ್ದ ಆದೇಶವನ್ನು ಹಿಂಪಡೆದು ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಸರ್ಕಾರದ ಉಪ ಕಾರ್ಯದರ್ಶಿ ಕೆ ಸಿ ಕುಮಾರ್‌ ಅವರು ಮತ್ತೊಂದು ಆದೇಶವನ್ನು ಹೊರಡಿಸಿದ್ದರು.

ಪರಿಷ್ಕೃತ ಆದೇಶದಲ್ಲೇನಿದೆ?

ರಾಜ್ಯ ಸರ್ಕಾರದಿಂದ ಸಂಧ್ಯಾ ಸುರಕ್ಷಾ ಯೋಜನೆಯ ಲೆಕ್ಕ ಶೀರ್ಷಿಕೆಯಡಿ 1 ಲಕ್ಷ ರು.ಗಳನ್ನು ನೇರ ನಗದು ವರ್ಗಾವಣೆ ಮತ್ತು ಕೇಂಧ್ರ ಸರ್ಕಾರದ ಮಾರ್ಗಸೂಚಿಗಳಂತೆ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಪ್ರತಿಯೊಬ್ಬ ಮೃತರ ವಾರಸುದಾರರಿಗೆ ತಲಾ 50 ಸಾವಿರ ರು.ಗಳನ್ನು ನೇರ ನಗದು ವರ್ಗಾವಣೆ ವ್ಯವಸ್ಥೆ ಮೂಲಕ ಪಾವತಿಸಬೇಕು ಎಂದು ಆದೇಶಿಸಿದ್ದರು.

ಅಲ್ಲದೆ ಬಿಪಿಎಲ್‌ ಹೊರತುಪಡಿಸಡಿದ (ಎಪಿಎಲ್‌ ಮತ್ತು ಇತರೆ) ಕುಟುಂಬದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮರಣ ಸಂಭವಿಸಿದಲ್ಲಿ ಅಂತಹ ಕುಟುಂಬಕ್ಕೆ ಎಸ್‌ಡಿಆರ್‌ಎಫ್‌ ಅಡಿ ಮೃತ ಸಂಖ್ಯೆಗೆ ಅನುಗುಣವಾಗಿ 5ಲಾ 50 ಸಾವಿರ ರು.ಗಳನ್ನು ಪಾವತಿಸಬೇಕು ಎಂದೂ ಪರಿಷ್ಕೃತ ಆದೇಶದಲ್ಲಿ ಹೇಳಲಾಗಿತ್ತು.

ಕೋವಿಡ್‌ ವೈರಾಣು ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಗಳ ವಾರಸುದಾರರಿಗೆ 50,000 ರು.ಗಳ ಪರಿಹಾರ ನೀಡಲು ಕೇಂದ್ರ ಸರ್ಕಾರದ ಸೂಚನೆ ಬಂದ ಹಿನ್ನೆಲೆಯಲ್ಲಿ 1 ಲಕ್ಷ ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ 2021ರ ಸೆ.23ರಂದು ಹೊರಡಿಸಿದ್ದ ಆದೇಶವನ್ನೇ ಹಿಂಪಡೆದುಕೊಂಡಿದೆ. ಈ ಸಂಬಂಧ 2021ರ ಸೆ.28ರಂದು ಪರಿಷ್ಕೃತ ಆದೇಶ ಹೊರಡಿಸಿತ್ತು.

ಕೋವಿಡ್‌ ಸೋಂಕಿನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಆಸರೆ ನೀಡುವ ನಿಟ್ಟಿನಲ್ಲಿ 1 ಲಕ್ಷ ಪರಿಹಾರ ಘೋಷಿಸಲಾಗಿತ್ತು. ಅರ್ಹ ಸಂತ್ರಸ್ತ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ 1 ಲಕ್ಷ ರು.ಗಳನ್ನುಪಾವತಿಸಲು ಆದೇಶಿಸಿತ್ತು.

‘ಕೇಂದ್ರ ಗೃಹ ಸಚಿವಾಲಯದ 2021 ಸೆ.25ರ ನಿರ್ದೇಶನದಂತೆ ಕೋವಿಡ್‌-19 ವೈರಾಣು ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ತಿಯ ಕಾನೂನು ಬದ್ಧ ವಾರಸುದಾರರಿಗೆ 50,000 ರು. ಪರಿಹಾರ ನೀಡಲು ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿರುವುದರಿಂದ ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬದ ವ್ಯಕ್ತಿಯ ವಾರಸುದಾರರಿಗೆ ಜಿಲ್ಲಾ ವಿಪತ್ತು ಪರಿಹಾರ ನಿಧಿಯಿಂದ ಚೆಕ್ ಮೂಲಕ ಪಾವತಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿ ಸೆ.23ರಂದು ಹೊರಡಿಸಲಾಗಿದ್ದ ಆದೇಶವನ್ನು ಯಥಾವತ್ತಾಗಿ ಹಿಂಪಡೆಯಲಾಗಿದೆ,’ ಎಂದು ಸೆ.28ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿತ್ತು.

ಕೋವಿಡ್‌ನಿಂದ ಮೃತ ಹೊಂದಿದ ಬಿಪಿಎಲ್‌ ಕುಟುಂಬದ ದುಡಿಯುವ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ವಿತರಣೆ ಕುರಿತಂತೆ ರಾಜ್ಯದಲ್ಲಿ ಒಟ್ಟು 7,711 ಅರ್ಜಿಗಳು ಸಲ್ಲಿಕೆಯಾಗಿವೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 950 ಅರ್ಜಿಗಳು ಸಲ್ಲಿಕೆಯಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 445, ಧಾರವಾಡ ಜಿಲ್ಲೆಯಲ್ಲಿ 434, ಹಾಸನ ಜಿಲ್ಲೆಯಲ್ಲಿ 443, ಕೊಪ್ಪಳದಲ್ಲಿ 633, ಮೈಸೂರು ಜಿಲ್ಲೆಯಲ್ಲಿ 783 ಅರ್ಜಿಗಳು ಸಲ್ಲಿಕೆಯಾಗಿವೆ.

the fil favicon

SUPPORT THE FILE

Latest News

Related Posts