ಪೊಲೀಸ್‌ ಹೌಸಿಂಗ್‌ ಸೊಸೈಟಿಯಲ್ಲಿ ಅಕ್ರಮ; ಐಪಿಎಸ್‌ ಪ್ರಕಾಶ್‌ಗೌಡ ವಿರುದ್ಧ ಕ್ರಮವಿಲ್ಲವೇಕೆ?

ಬೆಂಗಳೂರು; ಪೊಲೀಸ್‌ ಅಧಿಕಾರಿಗಳ ಮತ್ತು ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಉದ್ದೇಶಿತ ಬಡಾವಣೆ ನಿರ್ಮಾಣಕ್ಕಾಗಿ ಜಮೀನು ಖರೀದಿಸಿರುವ ದಾಖಲಾತಿ ಮತ್ತು ಅಭಿವೃದ್ಧಿದಾರರ ಮಧ್ಯೆ ಆಗಿರುವ ಒಪ್ಪಂದ, ಸಂಘದ ದಾಖಲಾತಿಗಳನ್ನು ನೀಡದೇ ಸಂಘದಲ್ಲಿರುವ 266.23 ಕೋಟಿ ರುಪಾಯಿಗಳನ್ನು ರಿಯಲ್‌ ಎಸ್ಟೇಟ್‌ ದಂಧೆಗೆ ಬಳಸಿಕೊಂಡಿದ್ದಾರೆ ಎಂಬ ಗುರುತರ ಆರೋಪಕ್ಕೆ ಹಿರಿಯ ಪೊಲೀಸ್‌ ಅಧಿಕಾರಿ ಎ ಎನ್‌ ಪ್ರಕಾಶ್‌ಗೌಡ ಅವರು ಗುರಿಯಾಗಿದ್ದಾರೆ.

ಪೊಲೀಸ್ ಅಧಿಕಾರಿಗಳ ಮತ್ತು ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎ ಎನ್‌ ಪ್ರಕಾಶ್‌ಗೌಡ ಮತ್ತು ಎಚ್‌ ಪಿ ಶ್ರೀಧರ್‌ ಎಂಬುವರು ಪೊಲೀಸರಿಂದ ಸಂಗ್ರಹಿಸಿರುವ ಸದಸ್ಯತ್ವ ಶುಲ್ಕವನ್ನು ದುರುಪಯೋಗಪಡಿಸಿಕೊಂಡು ರಿಯಲ್‌ ಎಸ್ಟೇಟ್‌ ದಂಧೆ ನಡೆಸುತ್ತಿದ್ದಾರೆ ಎಂಬ ಬಲವಾದ ಆರೋಪವೂ ಕೇಳಿ ಬಂದಿದೆ.

ಸಾವಿರಾರು ರುಪಾಯಿಗಳ ಶುಲ್ಕ ಸಂದಾಯ ಮಾಡಿಯೂ ನಿವೇಶನ ಹಂಚಿಕೆ ಮಾಡದಿರುವ ಸಂಘದ ಪದಾಧಿಕಾರಿಗಳ ಬಗ್ಗೆ ಬಾಧಿತ ಪೊಲೀಸ್‌ ಸಿಬ್ಬಂದಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2021ರ ಆಗಸ್ಟ್‌ 23ರಂದು ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಕಸಬಾ ಹೋಬಳಿ ಮಲ್ಲರಬಾಣವಾಡಿ, ಹಂಚಿಪುರ ಮತ್ತು ವಡ್ಡರಪಾಳ್ಯ ಗ್ರಾಮದಲ್ಲಿ ಬಡಾವಣೆ ನಿರ್ಮಾಣಕ್ಕೆ ಜಮೀನು ಗುರುತಿಸಲಾಗಿತ್ತು. ಈ ಜಾಗವು ಹಲವು ಸರ್ವೆ ನಂಬರ್‌ಗಳನ್ನು ಹೊಂದಿದ್ದರಿಂದ ಇವುಗಳನ್ನು ಖರೀದಿಸಿ ಭೂ ಪರಿವರ್ತನೆ ಮಾಡಲು ಗರುಡಾದ್ರಿ ಡೆವಲಪರ್ಸ್‌ ಜತೆ 2015ರ ಜನವರಿ 20ರಂದು ಎಂಒಯು ಮಾಡಿಕೊಳ್ಳಲಾಗಿತ್ತು.

ಈ ಪೈಕಿ 17 ಎಕರೆ 32 ಗುಂಟೆ ಜಮೀನನ್ನು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಬಡಾವಣೆ ನಿರ್ಮಾಣದ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಪ್ರಾಧಿಕಾರಕ್ಕೆ ನಿವೇಶನಗಳ ಬಿಡುಗಡೆಗೆ ಅರ್ಜಿ ಸಲ್ಲಿಸಿದೆ. ಅಲ್ಲದೆ 8 ಎಕರೆ 36 ಗುಂಟೆ ಜಾಗದ ವಸತಿ ವಿನ್ಯಾಸದ ಅನುಮೋದನೆಗಾಗಿ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಅಲ್ಲದೆ 63 ಎಕರೆ 27 ಗುಂಟೆ ಜಮೀನು ಜಿಪಿಎ/ಕರಾರು ಒಪ್ಪಂದ ಕ್ರಯವಾಗಿದೆ ಎಂದು ಸಂಘದ ಪರವಾಗಿ ಗೃಹ ಇಲಾಖೆಯು ಸದನಕ್ಕೆ ತಿಳಿಸಿತ್ತು. ಆದರೆ ಒಂದು ವರ್ಷವಾದರೂ ಯಾವುದೇ ಪ್ರಗತಿ ಆಗಿಲ್ಲ ಎಂಬುದು ತಿಳಿದು ಬಂದಿದೆ.

ಈ ಮಧ್ಯೆ ಸಂಘದ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ‘ಮಲ್ಲರಬಾಣವಾಡಿ ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿದ್ದ 30-40 ಅಡಿ ಅಳತೆ ನಿವೇಶನಕ್ಕೆ ಮೊದಲ ಕಂತು 2 ಲಕ್ಷ ರು.ಗಳನ್ನು ಚೆಕ್‌ ಮೂಲಕ ಪಾವತಿ ಮಾಡಿದ್ದೇವೆ. ಇದಾದ ನಂತರ ಸಂಘವು ನೀಡಿ ಕಂತುಗಳಂತೆ ಮೊದಲ ಕಂತು 2 ಕಂತುಗಳಲ್ಲಿ 2 ಲಕ್ಷ ರು. ಉಳಿದ ಕಂತುಗಳಲ್ಲಿ 75,000 ರು ಹಾಗೂ 50,000 ರು.ಗಳಂತೆ ಒಟ್ಟು 8,10,000 ರು. ರು.ಗಳನ್ನು ಪಾವತಿಸಲಾಗಿದೆ. ಆದರೆ 2 ಬಾರಿ ವಾರ್ಷಿಕ ಸಭೆ ನಡೆದ ನಂತರವೂ ನಿವೇಶನ ನೀಡಲಾಗಿಲ್ಲ. ಹಾರಿಕೆ ಉತ್ತರಗಳನ್ನು ನೀಡುತ್ತಲೇ 6-7ವರ್ಷಗಳಿಂದಲೂ ಕಾಲಹರಣ ಮಾಡಲಾಗುತ್ತಿದೆ, ‘ ಎಂದು ಸಿಬ್ಬಂದಿ ದೂರಿನಲ್ಲಿ ವಿವರಿಸಿದ್ದಾರೆ.

ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಇಲಾಖೆಯ ಹಿರಿಯ ಅಧಿಕಾರಿಳಗಾಗಿದ್ದಾರೆ. ಹೀಗಾಗಿಯೇ ಕೈ ಸಾಲ, ಬ್ಯಾಂಕ್‌ ಸಾಲ, ಚಿನ್ನಾಭರಣಗಳ ಮೇಲಿನ ಸಾಲ, ಕೆಜಿಐಡಿ ಸಾಲ ಸೇರಿದಂತೆ ಇನ್ನಿತರೆ ಸ್ವರೂಪದ ಸಾಲಗಳನ್ನು ಮಾಡಿ ಲಕ್ಷಾಂತರ ರುಪಾಯಿಗಳನ್ನು ಸಂಘಕ್ಕೆ ಪಾವತಿ ಮಾಡಿರುವುದು ದೂರಿನಿಂದ ತಿಳಿದು ಬಂದಿದೆ.

‘ಸಾವಿರಾರು ಸಂಖ್ಯೆಯ ಸದಸ್ಯರುಗಳಿಂದ ಪೂರ್ಣ ಹಣ ಕಟ್ಟಿಸಿಕೊಂಡಿರುವ ಎ ಎನ್‌ ಪ್ರಕಾಶ್‌ಗೌಡ, ಎಚ್‌ ಪಿ ಶ್ರೀಧರ್‌ ಅವರು ಬಡಾವಣೆ ನಿರ್ಮಾಣ ಮಾಡಿಲ್ಲ. ಬದಲಿಗೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಬಳಸಿಕೊಂಡಿದ್ದಾರೆ. ಎ ಎನ್ ಪ್ರಕಾಶ್‌ಗೌಡ ಅವರು ನೆಲಮಂಗಲದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅವರ ಆಪ್ತ ಎಂದು ಗುರುತಿಸಿಕೊಂಡಿದ್ದ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುವ ರಂಗಧಾಮಯ್ಯ ಎಂಬುವರಿಗೆ ಬಡಾವಣೆ ಅಭಿವೃದ್ಧಿ ಹೊಣೆಗಾರಿಕೆ ನೀಡಿದ್ದಾರೆ. ಆದರೆ ಆತ ಬಡಾವಣೆ ಅಭಿವೃದ್ಧಿಪಡಿಸಿಲ್ಲ. ಬದಲಿಗೆ ದಿನಕ್ಕೊಂದು ಸುಳ್ಳು ಹೇಳುತ್ತ ಬಡಪಾಯಿ ಪೊಲೀಸರಿಗೆ ಮೋಸ ಮಾಡುತ್ತಿದ್ದಾರೆ,’ ಎಂದು ದೂರಿನಲ್ಲಿ ಅಳಲು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬಾಧಿತ ಪೊಲೀಸರು ಸಂಘದ ಅಧ್ಯಕ್ಷ ಎ ಎನ್‌ ಪ್ರಕಾಶ್‌ಗೌಡ ಅವರನ್ನು ಪ್ರಶ್ನಿಸಿದರೆ ವೈಯಕ್ತಿಕವಾಗಿ ಗುರಿ ಮಾಡಿ ಮಾನಸಿಕವಾಗಿ ಕುಗ್ಗಿಸುತ್ತಿದ್ದಾರೆ ಎಂದು ದೂರಿರುವ ಸಂಘದ ಪೊಲೀಸ್‌ ಸದಸ್ಯರು, ಕಟ್ಟಿದ ಹಣ ಕಳೆದುಕೊಳ್ಳುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ,’ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಆದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಬಗ್ಗೆ ಗಮನಹರಿಸಿಲ್ಲ ಎಂದು ತಿಳಿದು ಬಂದಿದೆ.

ಪೊಲೀಸ್‌ ಗೃಹ ನಿರ್ಮಾಣ ಸಹಕಾರ ಸಂಘವು ಎಲ್ಲಾ ವೃಂದದ ಪೊಲೀಸ್‌ ಸಿಬ್ಬಂದಿಗೆ ಅನ್ಯಾಯವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು 2020ರ ಮಾರ್ಚ್‌ 24ರಂದು ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಸದನಕ್ಕೆ ತಿಳಿಸಿದ್ದರು. ಸದಸ್ಯರುಗಳಿಂದ 2019ರ ಮಾರ್ಚ್‌ 31ರ ಅಂತ್ಯಕ್ಕೆ ಒಟ್ಟು 266.23 ಕೋಟಿ ರು.ಗಳನ್ನು ನಿವೇಶನ ಮುಂಗಡವಾಗಿ ಸಂಗ್ರಹವಾಗಿದೆ. ಬಡಾವಣೆ ರಚಿಸಿ ಸದಸ್ಯರಿಗೆ ನಿವೇಶನಗಳನ್ನು ನೀಡಲು ಭೂ ಅಭಿವೃದ್ಧಿದಾರರಿಗೆ 2019ರ ಮಾರ್ಚ್‌ 31ಕ್ಕೆ ಅಂತ್ಯಕ್ಕೆ 173.62 ಕೋಟಿ ರು.ಗಳನ್ನು ಪಾವತಿಸಿರುವುದು ತಿಳಿದು ಬಂದಿದೆ.

ಸಂಘವು ಬಂಗಾರಪೇಟೆ ಯೋಜನೆ (ಎಸ್‌ ಎಲ್‌ ವಿ ಡೆವಲಪರ್ಸ್‌, ಹುಣಸೂರು ಯೋಜನೆ ( ಸಿರಿ ಡೆವಲಪರ್ಸ್‌ ಮತ್ತು ಕನ್ಸಲ್ಟೆಂಟ್‌), ಕೋಲಾರ ಯೋಜನೆ (ಕಾಮಧೇನು ಇನ್‌ಫ್ರಾಸ್ಟಕ್ಚರ್‌), ಮೈಸೂರು ಬನ್ನೂರು ರಸ್ತಗೆ ಯೋಜನೆ (ಪಂಚಮಿ ಡೆವಲಪರ್ಸ್‌), ತಳೂರು ಮೈಸೂರು ಯೋಜನೆ (ಆಕಿ ವೆಂಚರ್ಸ್‌), ಇಲವಾಲ ಮೈಸೂರು ಯೋಜನೆ ( ಸನ್‌ ರೈಸ್‌ ಡೆವಲಪರ್ಸ್‌, ಎಚ್‌ ಕೆ ಡೆವಲಪರ್ಸ್‌), ನೆಲಮಂಗಲ ಯೋಜನೆ (ಗರುಡಾದ್ರಿ ಡೆವಲಪರ್ಸ್‌) ಹಾಸನ ಯೋಜನೆ (ಎಸ್‌ವಿಆರ್‌ ಡೆವಲಪರ್ಸ್) ಕೈಗೆತ್ತಿಕೊಂಡಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts