ಬೆಂಗಳೂರು; ಬಡ್ತಿ ಮತ್ತು ವರ್ಗಾವಣೆ ಪ್ರಕ್ರಿಯೆಯಲ್ಲಿ ಸ್ವಜನಪಕ್ಷಪಾತವೂ ಸೇರಿಂತೆ ಹಲವು ರೀತಿಯ ಅಕ್ರಮಗಳನ್ನು ಎಸಗಿದ್ದಾರೆ ಎಂಬ ಆರೋಪಗಳಿಗೆ ಗುರಿಯಾಗಿರುವ ದಾವಣಗೆರೆ ಜಿಲ್ಲಾ ಡಿಡಿಪಿಐ ಪರಮೇಶ್ವರಪ್ಪ ಅವರ ಸೇವೆಯನ್ನು ದಾವಣಗೆರೆ ಜಿಲ್ಲೆಯಲ್ಲಿಯೇ ಮುಂದುವರೆಸಲು ಮೂವರು ಪ್ರಭಾವಿ ಶಾಸಕರು ನಡೆಸಿದ್ದ ಲಿಂಗಾಯತ ಲಾಬಿ ಮತ್ತು ಉಳಿದ ಜಿಲ್ಲೆಗಳಲ್ಲಿ ಇತರೆ ಸಚಿವರು, ಶಾಸಕರ ಶಿಫಾರಸ್ಸು ಪತ್ರಗಳ ಹಾವಳಿ ಇರುವುದು ಇದೀಗ ಬಹಿರಂಗವಾಗಿದೆ.
ಮೂರೂ ವರ್ಷಗಳಿಂದಲೂ ಒಂದೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಮಾಜಿ ಸಚಿವ ಎಸ್ ಎ ರವೀಂದ್ರನಾಥ್, ಹಿಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಮತ್ತು ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಪರಮೇಶ್ವರಪ್ಪ ಅವರನ್ನು ಉಳಿಸಿಕೊಳ್ಳಲು ಲಾಬಿ ಮಾಡುವ ಮೂಲಕ ಲಿಂಗಾಯತ ಪ್ರೇಮವನ್ನು ಮೆರೆದಿದ್ದಾರೆ.
ಎಂ ಪಿ ರೇಣುಕಾಚಾರ್ಯ ಅವರು 2021ರ ಜುಲೈ 9ರಂದು, ಚನ್ನಗಿರಿ ಶಾಸಕ ಕೆ ಮಾಡಾಳ್ ವಿರೂಪಾಕ್ಷಪ್ಪ ಅವರು ಜುಲೈ 5, ಎಸ್ ಎ ರವೀಂದ್ರನಾಥ್ ಅವರು ಜುಲೈ 8 ಮತ್ತು ಮಾಯಕೊಂಡ ಶಾಸಕ ಪ್ರೊ ಎನ್ ಲಿಂಗಣ್ಣ ಅವರು ಜುಲೈ 9ರಂದು ಶಿಫಾರಸ್ಸು ಪತ್ರ ನೀಡಿದ್ದರು. ಪರಮೇಶ್ವರಪ್ಪ ಅವರನ್ನು ದಾವಣಗೆರೆ ಜಿಲ್ಲೆಯಲ್ಲಿಯೇ ಮುಂದುವರೆಸಿ ಎಂದು ಟಿಪ್ಪಣಿ ಪತ್ರದ ಮೇಲೆ ‘ಮಾನ್ಯ ಮುಖ್ಯಮಂತ್ರಿಗಳು ಮುಂದುವರೆಸಿ,’ ಎಂದು ಆದೇಶಿಸಿರುತ್ತಾರೆ ಶಿಕ್ಷಣ ಇಲಾಖೆಯು ಷರಾ ಬರೆದಿರುವುದು ಸ್ವೀಕೃತಿ ಪತ್ರದಿಂದ ಗೊತ್ತಾಗಿದೆ.
ವಿಶೇಷವೆಂದರೆ ವಿಧಾನಸಭೆಯ ಹಕ್ಕು ಬಾಧ್ಯತೆಗಳ ಸಮಿತಿಯ ಅಧ್ಯಕ್ಷರೂ ಆಗಿದ್ದ ಶಾಸಕ ಎಸ್ ಎ ರವೀಂದ್ರನಾಥ್ ಅವರು ಪರಮೇಶ್ವರಪ್ಪ ಅವರ ಜಾಗಕ್ಕೆ ಚಿತ್ರದುರ್ಗದ ಸಿಟಿಇನ ಜಿ ಆರ್ ತಿಪ್ಪೇಶಪ್ಪ ಅವರನ್ನು ವರ್ಗಾವಣೆ ಮಾಡಲು 2021ರ ಮಾರ್ಚ್ 13ರಂದು ಶಿಫಾರಸ್ಸು ಪತ್ರ ನೀಡಿದ 4 ತಿಂಗಳ ಅಂತರದಲ್ಲೇ ಅಂದರೆ 2021ರ ಜುಲೈ 8ರಂದು ಸಿ ಆರ್ ಪರಮೇಶ್ವರಪ್ಪ ಅವರನ್ನು ದಾವಣಗೆರೆ ಜಿಲ್ಲೆಯಲ್ಲಿಯೇ ಮುಂದುವರೆಸಿ ಎಂದು ಶಿಫಾರಸ್ಸು ಪತ್ರ ನೀಡಿರುವುದು ತಿಳಿದು ಬಂದಿದೆ.
ವರ್ಗಾವಣೆಗೊಳಿಸಲು ಅಮಾನತು ತಂತ್ರ ಬಳಕೆ?
ಗ್ರಾಮೀಣ ಪ್ರದೇಶ ಮತ್ತು ಜಿಲ್ಲೆಯ ಗಡಿ ಭಾಗದಲ್ಲಿರುವ ಕುಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಶಾಲೆಗಳಿಗೆ ವರ್ಗಾವಣೆ ಮಾಡಲು ಡಿಡಿಪಿಐ ಪರಮೇಶ್ವರಪ್ಪ ಅವರು ಕ್ಷುಲಕ ಕಾರಣಗಳನ್ನು ಮುಂದಿರಿಸಿ ಅಮಾನತು ತಂತ್ರ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಗರ ಪ್ರದೇಶಗಳಿಗೆ ಹೊಂದಿಕೊಂಡಿರುವ ಶಾಲೆಗಳಿಗೆ ವರ್ಗಾವಣೆ ಬಯಸುವ ಶಿಕ್ಷಕರನ್ನು ಮೊದಲು ಕ್ಷುಲಕ ಕಾರಣಗಳಿಗೆ ಅಮಾನತುಗೊಳಿಸಿ ಆ ನಂತರ ಅಮಾನತು ಅವಧಿ ಪೂರ್ಣಗೊಳ್ಳುವ ಮುನ್ನವೇ ಅಮಾನತು ಆದೇಶವನ್ನು ಹಿಂದಕ್ಕೆ ಪಡೆದು ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಶಾಲೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದರ ಹಿಂದೆ ಹಣದ ವ್ಯವಹಾರವೂ ನಡೆದಿದೆ ಎಂಬ ಅನುಮಾನವನ್ನು ಹಲವು ಶಿಕ್ಷಕರು ವ್ಯಕ್ತಪಡಿಸಿದ್ದಾರೆ.
ಶಾಸಕ ಎಸ್ ಎ ರವೀಂದ್ರನಾಥ್ ಅವರ ವಾಸಸ್ಥಳ ಶಿರಮಗೊಂಡನಹಳ್ಳಿ ಮತ್ತು ನಾಗಮ್ಮ ಕೇಶವಮೂರ್ತಿ ಬಡಾವಣೆ, ಜಿಎಲ್‌ಪಿಎಸ್ ಹನುಮಂತಾಪುರ, ಶಾಸಕ ಲಿಂಗಣ್ಣ ಪ್ರತಿನಿಧಿಸುವ ಮಾಯಕೊಂಡ ವಿಧಾನಸಭೆ ಕ್ಷೇತ್ರದ ಹಿಂಡಸಕಟ್ಟೆ ಶಾಲೆ ಸೇರಿದಂತೆ ಜಿಲ್ಲೆಯ ಹಲವು ಶಾಲೆಗಳಿಗೆ ಇತ್ತೀಚೆಗೆ ಆಗಿರುವ ಶಿಕ್ಷಕರ ವರ್ಗಾವಣೆ ಪ್ರಕರಣಗಳಲ್ಲಿ ಪರಮೇಶ್ವರಪ್ಪ ಅವರು ಅಮಾನತು ತಂತ್ರಗಾರಿಕೆ ಬಳಸಿದ್ದಾರೆ ಎಂದು ಗೊತ್ತಾಗಿದೆ.
ಇದಲ್ಲದೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಂಬಡ್ತಿ ನೀಡಿರುವ ಹಲವು ಪ್ರಕರಣಗಳಲ್ಲಿ ಡಿಡಿಪಿಐ ಪರಮೇಶ್ವರಪ್ಪ ಅವರು ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಅಲ್ಲದೆ ಇಂತಹ ಪ್ರಕರಣಗಳಲ್ಲಿ ಸ್ವಜಾತಿ ಪ್ರೇಮವೂ ಇದೆ ಎಂಬ ಮಾತುಗಳು ಕೇಳಿ ಬಂದಿವೆ.
ಇದಿಷ್ಟೇ ಅಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಶಿಕ್ಷಕರ ವರ್ಗಾವಣೆ, ಪ್ರಾಂಶುಪಾಲರ ಮುಂದುವರಿಕೆಯಲ್ಲಿಯೂ ಪ್ರಭಾವಿ ಸಚಿವರ ಶಿಫಾರಸ್ಸು ಪತ್ರದ ಕರಾಮತ್ತು ನಡೆದಿದೆ. ಮಂಡ್ಯದ ಡಯಟ್‌ನ ಪ್ರಾಂಶುಪಾಲ ಎಂ ಶಿವಮಾದಪ್ಪ ಎಂಬುವರನ್ನು ಅದೇ ಜಿಲ್ಲೆಯಲ್ಲಿ ಮುಂದುವರೆಸಲು ಯುವ ಸಬಲೀಕರಣ, ಕ್ರೀಡೆ ಸಚಿವ ಡಾ ನಾರಾಯಣಗೌಡ ಅವರು ನೀಡಿದ್ದ ಶಿಫಾರಸ್ಸು ಟಿಪ್ಪಣಿ ಮೇಲೆ ‘ಮುಖ್ಯಮಂತ್ರಿಗಳು ಮುಂದುವರೆಸಿ,’ ಎಂದು ಆದೇಶಿಸಿದ್ದಾರೆ.
ಅಲ್ಲದೆ ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಅವರು ಉಡುಪಿಯ ಡಯಟ್ ಪ್ರಾಂಶುಪಾಲ ವೇದಮೂರ್ತಿ, ಸಂಸದ ಜಿ ಎಸ್ ಬಸವರಾಜ್ ಅವರು ಡಿಡಿಪಿಐ ಎಂ ರೇವಣಸಿದ್ದಪ್ಪ, ಬಿ ಶ್ರೀರಾಮುಲು ಅವರು ಕೆ ರವಿಶಂಕರರೆಡ್ಡಿ ಅವರ ಮುಂದುವರಿಕೆಗೆ ಶಿಫಾರಸ್ಸು ಪತ್ರ ನೀಡಿರುವುದು ತಿಳಿದು ಬಂದಿದೆ.