ಗಡಿ ತಾಲೂಕುಗಳಿಗೆ ಅನುದಾನ; 12 ಮುಖ್ಯಮಂತ್ರಿಗಳು ಬಂದು ಹೋದರೂ ಹೆಚ್ಚಳವಾಗದ ಅನುದಾನ

ಬೆಂಗಳೂರು; ಗಡಿ ಅಭಿವೃದ್ಧಿ ತಾಲೂಕುಗಳಿಗೆ ನೀಡುತ್ತಿದ್ದ ಅನುದಾನದಲ್ಲಿ ಹೆಚ್ಚಳ ಮಾಡುವ ಸಂಬಂಧ ಸದನದಲ್ಲಿ ನೀಡಿದ್ದ ಭರವಸೆ 17 ವರ್ಷಗಳಾದರೂ ಈಡೇರಿಲ್ಲ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ 10 ವರ್ಷಗಳ ನಂತರವೂ ಹಿಂದುಳಿದ ತಾಲೂಕುಗಳಿಗೆ ಅನುದಾನ ಮರೀಚಿಕೆಯಾಗಿದೆ.

ಎಸ್‌ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುದಾನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಭರವಸೆ ನೀಡಿತ್ತಾದರೂ ಗಡಿ ಅಭಿವೃದ್ಧಿ ತಾಲೂಕುಗಳಿಗೆ ಸಂಪನ್ಮೂಲ ಮತ್ತು ಆದ್ಯತೆಗಳ ಅನುಗುಣವಾಗಿ ಅನುದಾನದಲ್ಲಿ ಹೆಚ್ಚಳವಾಗಲೇ ಇಲ್ಲ. ಹೀಗಾಗಿ 15ನೇ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯು 17 ವರ್ಷಗಳ ಹಿಂದೆ ಸಚಿವರು ನೀಡಿದ್ದ ಭರವಸೆಯನ್ನು ಕಾಯ್ದಿರಿಸಿದೆ.

ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ರಘುಪತಿ ಭಟ್‌ ಅವರು 2021ರ ಸೆಪ್ಟಂಬರ್ 21ರಂದು ಸಲ್ಲಿಸಿರುವ 15ನೇ ವಿಧಾನಸಭೆಯ 11ನೇ ವರದಿಯು ಸದನದಲ್ಲಿ ನೀಡಲಾಗುವ ಭರವಸೆಗಳ ಸ್ಥಿತಿಗತಿಯನ್ನು ಅನಾವರಣಗೊಳಿಸಿದೆ. ಈ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕನ್ನಡ, ಸಂಸ್ಕೃತಿ, ವಾರ್ತಾ, ಸಾರ್ವಜನಿಕ ಸಂಪರ್ಕ, ವೈದ್ಯಕೀಯ ಶಿಕ್ಷಣ, ಸಮಾಜ ಕಲ್ಯಾಣ, ಜಲ ಸಂಪನ್ಮೂಲ (ಸಣ್ಣ ನೀರಾವರಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಲ ಸಂಪನ್ಮೂಲ (ಭಾರೀ ನೀರಾವರಿ) ಇಲಾಖೆಗಳಿಗೆ ಸಂಬಂಧಿಸಿದ ಭರವಸೆಗಳ ಪೈಕಿ ಒಟ್ಟು 33 ಭರವಸೆಗಳ ಮೇಲೆ ಯಾವುದೇ ಕ್ರಮ ಜರುಗಿಸದ ಕಾರಣ ಕಾಯ್ದಿರಿಸಿದೆ.

ವಿಶೇಷವೆಂದರೆ ಗಡಿ ಅಭಿವೃದ್ಧಿ ತಾಲೂಕುಗಳಿಗೆ ವೀರೇಂದ್ರ ಪಾಟೀಲ್‌ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ತಾಲೂಕುಗಳಿಗೆ ತಲಾ 25 ಲಕ್ಷ ರು.ಗಳ ಅನುದಾನ ನೀಡಲಾಗುತ್ತಿತ್ತು. ಆದರೆ ಆ ನಂತರ ಬಂದ ಸರ್ಕಾರಗಳು ಅನುದಾನವನ್ನು ತಲಾ 2 ರಿಂದ 3 ಲಕ್ಷ ರು.ಗಳಿಗಿಳಿಸಿತ್ತು ಎಂಬ ಸಂಗತಿಯು ವರದಿಯಿಂದ ತಿಳಿದು ಬಂದಿದೆ.

ಭ್ರಷ್ಟ ಮತ್ತು ಅಯೋಗ್ಯರೇ ತುಂಬಿರುವಂತಹ ಶಾಸನಸಭೆಯಲ್ಲಿ ಆ ಶಾಸನಸಭೆ ಕಾರಣಕ್ಕಾಗಿ ಇದೊಂದು ಹುಚ್ಚರ ಆಡಳಿತವಾಗಿದೆ. ಪ್ರಾಧಿಕಾರ ರಚನೆಯೂ ಸಹ ದುರುದ್ದೇಶದಿಂದ ಕೂಡಿದ ರಾಜಕೀಯ ತೀರ್ಮಾನಗಳೇ ಹೊರತು ಸಮಗ್ರ ಅಭಿವೃದ್ಧಿಯತ್ತ ಇಡುವ ಪ್ರಾಮಾಣಿಕ ಕ್ರಮಗಳಾಗಿ ಉಳಿದಿಲ್ಲ. ಇವತ್ತು ಕಾರ್ಯಾಂಗ ತನ್ನ ಸ್ವಂತಿಕೆಯನ್ನು ಕಳೆದುಕೊಂಡು ರಾಜಕಾರಣಿಗಳ ಗುಲಾಮರಾಗಿರುವ ಕಾರಣಕ್ಕಾಗಿ 17 ವರ್ಷಗಳಿಂದ ಇಂತಹ ಭರವಸೆಗಳು ನೆನೆಗುದಿಗೆ ಬಿದ್ದಿವೆ.

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು ಕರ್ನಾಟಕ ರಾಷ್ಟ್ರಸಮಿತಿ

ಗಡಿಯಂಚಿನಲ್ಲಿರುವ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಕಾರ್ಯ, ಚಟುವಟಿಕೆಗಳಿಗೆ ವಾರ್ಷಿಕ ಕನಿಷ್ಠ 10 ಲಕ್ಷ ರು.ಗಳನ್ನಾದರೂ ನೀಡಬೇಕು ಎಂದು 2003ರ ಜುಲೈ 30ರಂದು ಸದನದಲ್ಲಿ ಎನ್‌ ಎಚ್‌ ಶಿವಶಂಕರರೆಡ್ಡಿ ಅವರು ಸರ್ಕಾರದ ಗಮನಸೆಳೆದಿದ್ದರು. ಆ ಸಂದರ್ಭದಲ್ಲಿ ಸಚಿವರಾಗಿದ್ದವರು ಸಂಪನ್ಮೂಲ ಮತ್ತು ಆದ್ಯತೆಗಳ ಅನುಗುಣವಾಗಿ ಅನುದಾನ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಈ ಭರವಸೆ ಈಡೇರಿದೆಯೇ ಇಲ್ಲವೇ ಎಂಬುದನ್ನು 2020ರ ನವಂಬರ್‌ 27ರಂದು ಸರ್ಕಾರಿ ಭರವಸೆಗಳ ಸಮಿತಿಯು ಪರಿಶೀಲನೆಗೆ ಕೈಗೆತ್ತಿಕೊಂಡಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.

ಪ್ರಾಧಿಕಾರ ರಚನೆಯಾದರೂ ಹೆಚ್ಚಳವಿಲ್ಲ

ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನುದಾನದಲ್ಲಿ ಹೆಚ್ಚಳ ಮಾಡಬೇಕಿದ್ದ ಸರ್ಕಾರವೂ 17 ವರ್ಷಗಳಿಂದಲೂ ಹಿಂದುಳಿಯುತ್ತಲೇ ಬಂದಿದೆ. ಗಡಿ ಅಭಿವೃದ್ಧಿಯಡಿ ಯೋಜನಾ ಇಲಾಖೆಯಿಂದ ಅನುದಾನ ಹಂಚಿಕೆಯಾಗುತ್ತಿತ್ತು. 2010ರ ನಂತರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೂ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಅನುದಾನ ಹೆಚ್ಚಳವಾಗಿಲ್ಲ. ಆರ್ಥಿಕ ಇಲಾಖೆಯು ವಾರ್ಷಿಕ ಹಂಚಿಕೆ ಮಾಡಿದ ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸಿ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಅನುದಾನ ನೀಡಲಾಗುತ್ತಿದೆ.

ಅದೇ ರೀತಿ ಗಡಿ ಭಾಗಗಳ ಗಡಿ ಪಂಚಾಯ್ತಿಗಳನ್ನು ಗುರುತಿಸಿ ಪಂಚಾಯ್ತಿವಾರು ಅನುದಾನ ಹಂಚಿಕೆ ಬಗ್ಗೆ ಹಿಂದುಳಿದಿರುವಿಕೆ ಹಾಗೂ ಇತರ ಸೂಚ್ಯಂಕ ಗುರುತಿಸಿ ಅನುದಾನ ಹಂಚಿಕೆ ಮಾಡುವ ಬಗ್ಗೆ ಪ್ರಾಧಿಕಾರದ ಅಧಿನಿಯಮಕ್ಕೆ ಸೂಕ್ತ ತಿದ್ದುಪಡಿ ಕುರಿತಾದ ವಿಚಾರ ಇನ್ನೂ ಚರ್ಚೆಯ ಹಂತದಲ್ಲೇ ಇರುವುದು ವರದಿಯಿಂದ ತಿಳಿದು ಬಂದಿದೆ.

‘ಇತ್ತೀಚಿನ ವರ್ಷಗಳಲ್ಲಿ ಗಡಿ ಭಾಗದಲ್ಲಿ ಹೊಸ ತಾಲೂಕುಗಳನ್ನು ಅಧಿನಿಯಮದಲ್ಲಿ ಸೇರ್ಪಡೆ ಮಾಡಬೇಕಾಗುತ್ತದೆ. ಅಲ್ಲದೆ ಗಡಿ ಭಾಗಗಳಲ್ಲಿ ಇರುವ ಗಡಿಗೆ ಹೊಂದಿಕೊಂಡಿರುವ ಗ್ರಾಮ ಪಂಚಾಯ್ತಿಗಳನ್ನು ಗುರುತಿಸುವುದು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅತ್ಯಗತ್ಯವಾಗಿದ್ದು ಹೆಸರುಗಳನ್ನು ಸೇರ್ಪಡೆ ಮಾಡಬೇಕಾಗುತ್ತದೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಮಾಹಿತಿ ಪಡೆದು ಅಧಿನಿಯಮಕ್ಕೆ ಸೂಕ್ತ ತಿದ್ದುಪಡಿ ಮಾಡಿ ಪ್ರಸ್ತಾವನೆ ಮಂಡಿಸಬೇಕು,’ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿರುವುದು ಗೊತ್ತಾಗಿದೆ.

ದಿವಂಗತ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಡಿಭಾಗದ ತಾಲೂಕುಗಳ ಅಭಿವೃದ್ಧಿಗಾಗಿ 25 ಲಕ್ಷ ರು. ಅನುದಾನ ನೀಡಲಾಗುತ್ತಿತ್ತು. ಈಗ ವಾರ್ಷಿಕ 2-3 ಲಕ್ಷ ರು.ಗಳನ್ನು ನೀಡಲಾಗುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಅಭಿವೃದ್ಧಿ ಕಾರ್ಯ ಕೈಗೊಳ್ಳಲು 2-3 ಲಕ್ಷ ರು.ಗಳಿಂದ ಸಾಧ್ಯವಾಗದಿರುವುದರಿಂದ ವೀರೇಂದ್ರ ಪಾಟೀಲ್‌ ಅವರ ಸರ್ಕಾರದಲ್ಲಿ ನೀಡಲಾಗುತ್ತಿದ್ದ 25 ಲಕ್ಷ ರು. ಅನುದಾನ ನೀಡುವುದನ್ನು ಮುಂದುವರೆಸಬೇಕು ಎಂದು ಸಮಿತಿಯು ಸೂಚಿಸಿದೆ.

ಇವತ್ತು ಆಯಾ ಭಾಗದ ಅಸಮತೋಲನಗಳನ್ನು ಗಮನದಲ್ಲಿಟ್ಟುಕೊಂಡು ವಿಧಾನಸಭೆ ಕ್ಷೇತ್ರಗಳಿಗೆ ಅನುದಾನ ಮಂಜೂರು ಮಾಡುತ್ತಿಲ್ಲ. ಕೇವಲ ರಾಜಕೀಯ ಕಾರಣಗಳಿಗಾಗಿ ಮತ್ತು ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಯಾರೂ ಚೆನ್ನಾಗಿ ಪರ್ಸೆಂಟೇಜ್‌ನ್ನುಹಂಚಿಕೊಳ್ಳುತ್ತಾರೋ ಆಯಾ ಕ್ಷೇತ್ರಗಳಿಗೆ ಮಾತ್ರ ವಿಶೇಷವಾಗಿ ಅನುದಾನ ಬಿಡುಗಡೆ ಆಗುತ್ತಿವೆ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

the fil favicon

SUPPORT THE FILE

Latest News

Related Posts