ಲಸಿಕೆ ಹಾಕಿಸದಿದ್ದರೆ ಪಡಿತರ ರದ್ದು; ತಹಶೀಲ್ದಾರ್‌, ಜಿಲ್ಲಾಧಿಕಾರಿಗಳಿಂದ ಆಹಾರ ಹಕ್ಕಿನ ಉಲ್ಲಂಘನೆ

ಬೆಂಗಳೂರು; ಕೋವಿಡ್‌ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿ ಕಾನೂನು ತರದಿದ್ದರೂ ರಾಜ್ಯದ ಚಿಂತಾಮಣಿ ಸೇರಿದಂತೆ ಹಲವು ತಾಲೂಕುಗಳ ತಹಶೀಲ್ದಾರ್‌ಗಳು ಮತ್ತು ಜಿಲ್ಲಾಧಿಕಾರಿಗಳು ‘ಲಸಿಕೆ ಪಡೆಯದಿದ್ದವರಿಗೆ ಪಡಿತರವನ್ನು ನೀಡುವುದಿಲ್ಲ’ ಎಂದು ಸುತ್ತೋಲೆ ಹೊರಡಿಸುವ ಮೂಲಕ ಆಹಾರದ ಹಕ್ಕಿನ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ!

ಲಸಿಕೆ ಸ್ವಪ್ರೇರಿತವಾಗಿರಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸ್ಪಷ್ಟವಾಗಿ ಹೇಳಿದ್ದರೂ ಲಸಿಕೆ ಪಡೆಯದವರಿಗೆ ಪಡಿತರ ನೀಡಬಾರದು ಎಂದು  ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಹಶೀಲ್ದಾರ್‌ ಹೊರಡಿಸಿರುವ ಸೂಚನೆಯು ಚರ್ಚೆಗೆ ಗ್ರಾಸವಾಗಿದೆ.

ಕಡ್ಡಾಯ ಮತ್ತು ಬಲವಂತದ ಲಸಿಕಾ ಪ್ರಯೋಗಿಸಲು ಮುಂದಾಗಿರುವ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳು ಲಸಿಕೆ ಪಡೆಯದವರಿಗೆ ಪಡಿತರ ಸ್ಥಗಿತಗೊಳಿಸಲು ಸುತ್ತೋಲೆ ಹೊರಡಿಸುತ್ತಿದ್ದರೂ ಕಂದಾಯ ಸಚಿವ ಆರ್‌ ಅಶೋಕ್‌ ಮತ್ತು ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ್‌ ಕತ್ತಿ ಈವರೆಗೂ ಚಕಾರ ಎತ್ತಿಲ್ಲ.

ಯಾದಗಿರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿಯೂ ಅಲ್ಲಿನ ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಸಹ ಪಡಿತರ ಚೀಟಿದಾರರಿಗೆ ಪಡಿತರವನ್ನು ಸ್ಥಗಿತಗೊಳಿಸಿದ್ದರು. ಇದರ ಬೆನ್ನಲ್ಲೇ ಚಿಂತಾಮಣಿ ತಾಲೂಕಿನ ತಹಶೀಲ್ದಾರ್‌ 2021ರ ಆಗಸ್ಟ್‌ 21ರಂದು ಪಡಿತರ ಸ್ಥಗಿತಗೊಳಿಸುವಂತೆ ನ್ಯಾಯಬೆಲೆ ಅಂಗಡಿ ಪ್ರಾಧಿಕಾರದವರಿಗೆ ಜ್ಞಾಪನ ಪತ್ರದಲ್ಲಿ ಸೂಚಿಸಿದ್ದಾರೆ. ಜ್ಞಾಪನ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ವ್ಯಾಕ್ಸಿನ್‌ ಪಡೆಯದೇ ಇರುವ ಪಡಿತರ ಚೀಟಿದಾರರಿಗೆ ಪಡಿತರವನ್ನು ನೀಡಲಾಗುವುದಿಲ್ಲ ಎಂಬ ಬಗ್ಗೆ ಸೂಚನಾ ಫಲಕವನ್ನು ನ್ಯಾಯಬಲೆ ಅಂಗಡಿಯ ಮುಂದೆ ಕಡ್ಡಾಯವಾಗಿ ಪ್ರಕಟಿಸುವುದು,’ ಎಂದು ಸೂಚಿಸಿರುವುದು ಜ್ಞಾಪನ ಪತ್ರದಿಂದ ತಿಳಿದು ಬಂದಿದೆ.

ಕೋವಿಡ್‌ 3ನೇ ಅಲೆ ಹರಡುತ್ತಿರುವ ಹಿನ್ನೆಲೆಯಲ್ಲಿ 2021ರ ಆಗಸ್ಟ್‌ 21ರಂದು ಚಿಂತಾಮಣಿಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮಾಲೀಕರೊಂದಿಗೆ ಕೋವಿಡ್‌ ಲಸಿಕೆ ಕುರಿತು ಚರ್ಚಿಸಲಾಗಿತ್ತು. ಲಸಿಕೆ ಸಂಬಂಧ ಪ್ರಗತಿ ಸಾಧಿಸುವ ಸಲುವಾಗಿ ಆಗಸ್ಟ್‌ ಮತ್ತು ಸೆಪ್ಟಂಬರ್‌ನಲ್ಲಿ ಕೆಲವು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿತ್ತು. ಅದರಲ್ಲಿ ಲಸಿಕೆ ಪಡೆಯದೇ ಇರುವ ಪಡಿತರಚೀಟಿದಾರರಿಗೆ ಪಡಿತರವನ್ನು ನೀಡುವುದಿಲ್ಲ ಎಂಬ ಸೂಚನೆಯನ್ನೂ ನೀಡಲಾಗಿತ್ತು ಎಂಬುದು ಜ್ಞಾಪನ ಪತ್ರದಿಂದ ತಿಳಿದು ಬಂದಿದೆ.

ಲಸಿಕೆ ನಿರಾಕರಿಸಿದವರಿಗೆ ಪಡಿತರ ನೀಡಬಾರದು ಎಂದು ಯಾದಗಿರಿ ಜಿಲ್ಲೆಯಲ್ಲಿಯೂ ಅಲ್ಲಿನ ಜಿಲ್ಲಾಧಿಕಾರಿ ರಾಗಪ್ರಿಯಾ ಅವರು ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದರು ಎಂದು ಕನ್ನಡಪ್ರಭ ಪತ್ರಿಕೆಯು ವಿಶೇಷ ವರದಿ ಪ್ರಕಟಿಸಿತ್ತು. ಪ್ರತಿ ದಿನ 15ರಿಂದ 20 ಸಾವಿರ ಲಸಿಕೆಗಳನ್ನು ನೀಡಬೇಕು. ಇದಕ್ಕಾಗಿ 12 ಗಂಟೆಗಳ ಕಾಲ ಲಸಿಕೆ ನೀಡಿದಾಗ ಮಾತ್ರ ಟಾರ್ಗೆಟ್‌ ಪೂರ್ಣಗೊಳಿಸಲು ಸಾಧ್ಯ ಎಂದು ಕೋವಿಡ್‌ ಲಸಿಕೆ ವಿತರಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದ್ದರು.

ಯಾದಗಿರಿ ಸಮೀಪದ ಅಲ್ಲಿಪೂರ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ, ಲಸಿಕೆ ಪಡೆಯದಿದ್ದರೆ ಪಡಿತರ ನೀಡುವುದಿಲ್ಲವೆಂದು ಪಂಚಾಯತ್ ಡಂಗೂರ ಸಾರಿದ್ದರು. ಗುರಿ ಸಾಧನೆ ತಲುಪಬೇಕು ಎಂಬ ಕಾರಣಕ್ಕಾಗಿ, ಮನೆಗಳಿಗೆ ನುಗ್ಗಿ ಆಟೋಗಳಲ್ಲಿ ಎತ್ತಾಕಿಕೊಂಡು ಹೋಗಿ ಕೆಲವರಿಗೆ ಲಸಿಕೆ ನೀಡಿಸಿದ್ದಾರೆ ಎಂಬ ಆಕ್ರೋಶಗಳು ಮೂಡಿಬಂದಿದ್ದವು. ವಾತಾವರಣ ಹೇಗೆ ನಿರ್ಮಾಣವಾಗಿತ್ತೆಂದರೆ, ಆರೋಗ್ಯ ಸಿಬ್ಬಂದಿಗಳು ಅಥವಾ ಅಽಕಾರಿಗಳು ಬರುತ್ತಾರೆಂದರೆ ಆ ಭಾಗದ ಎಲ್ಲ ಗ್ರಾಮಸ್ಥರು ಊರೇ ಖಾಲಿ ಮಾಡಿ ಓಡಿಹೋಗುವಂತಹ ಸ್ಥಿತಿ ನಿರ್ಮಾಣವಾಗಿತ್ತು ಎಂಬ ವರದಿ ಪ್ರಕಟವಾಗಿತ್ತು.

ನ್ಯಾಯಾಲಯದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆರಾಕ್ಸ್‌ ಸಿಬ್ಬಂದಿ, ಜಾಬ್‌ ಟೈಪಿಸ್ಟ್‌ ಮತ್ತು ಕ್ಯಾಂಟೀನ್‌ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಪ್ರಮಾಣಪತ್ರ ಹೊಂದಿದ್ದರಷ್ಟೇ ನ್ಯಾಯಾಲಯದಲ್ಲಿ ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಹೊರಡಿಸಿರುವ ಆದೇಶವು ಮೂಲಭೂತ ಹಕ್ಕು ಮತ್ತು ಖಾಸಗಿತನದ ಹಕ್ಕಿಗೆ ಚ್ಯುತಿ ತಂದಂತಾಗಿದೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಆಕ್ಷೇಪ ವ್ಯಕ್ತಪಡಿಸಿ ಮನವಿಯನ್ನೂ ಸಲ್ಲಿಸಿದ್ದನ್ನು ಸ್ಮರಿಸಬಹುದು.

ಕಡ್ಡಾಯ ಮತ್ತು ಬಲವಂತದ ಲಸಿಕಾ ಪ್ರಯೋಗದ ಕುರಿತಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿರುವ ಜನಾಧಿಕಾರ ಸಂಘರ್ಷ ಪರಿಷತ್‌, ಕಡ್ಡಾಯ ಲಸಿಕೆಯನ್ನು ಹಾಕಿಸಿಕೊಂಡು ಮತ್ತು ಆ ಲಸಿಕೆಯ ಪ್ರಮಾಣ ಪತ್ರವನ್ನು ನೀಡಿದ ಪಕ್ಷದಲ್ಲಿ ಅವರಿಗೆ ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂದು ಹೈಕೋರ್ಟ್‌ ತಾಕೀತು ಮಾಡಿದೆ. ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯಗಳು ಸಂವಿಧಾನವನ್ನು ಸಂರಕ್ಷಿಸಲು ಸ್ಥಾಪಿತವಾದ ನ್ಯಾಯಾಲಯಗಳು. ಆದರೆ ಈ ಆದೇಶದ ಬೆಳವಣಿಗೆಯು ಸಂವಿಧಾನದಲ್ಲಿ ಕ್ರೋಢೀಕೃತವಾಗಿರುವ ಮೂಲಭೂತ ಹಕ್ಕುಗಳ ವಿರುದ್ಧವಲ್ಲವೇ ಎಂದು ಮನವಿ ಪತ್ರದಲ್ಲಿ ಪ್ರಶ್ನಿಸಿತ್ತು.

‘ಕರ್ನಾಟಕ ಉಚ್ಚ ನ್ಯಾಯಾಲಯವು ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ಭರದಲ್ಲಿ ಜಾರಿಗೊಳಿಸಿರುವ ಆದೇಶದ ಮೂಲಕ ಸಿಬ್ಬಂದಿಗಳ ಮೂಲಭೂತ ಹಕ್ಕುಗಳಾದ ಗೋಪ್ಯತೆ, ಗೌರವಾನ್ವಿತ ಜೀವನ (ಅನುಚ್ಚೇಧ 21), ಜೀವನೋಪಾಯದ ಕಸುಬನ್ನು ನಡೆಸುವುದು (ಅನುಚ್ಚೇಧ 19(1)(ಜಿ)) ಹಾಗೂ ಕಾನೂನಿನ ದೃಷ್ಟಿಯಲ್ಲಿ ಸಮಾನತೆ (ಅನುಚ್ಚೇಧ 14) ಇತ್ಯಾದಿಗಳನ್ನು ಉಲ್ಲಂಘಿಸಲಾಗಿದೆ,’ ಎಂದು ಮನವಿಯಲ್ಲಿ ನಿವೇದಿಸಿತ್ತು.

ಅಲ್ಲದೆ ಈ ಆದೇಶವು ಕೇವಲ ಸಿಬ್ಬಂದಿ ವರ್ಗದವರಿಗೆ ಮಾತ್ರ ಅನ್ವಯವಾಗಿದೆ. ವಕೀಲರಿಗೆ, ವಕೀಲರ ಸಹಾಯಕ ಸಿಬ್ಬಂದಿಗೆ, ಬೆಂಚ್ ಕ್ಲರ್ಕುಗಳಿಗೆ, ಸರ್ಕಾರಿ ಅಭಿಯೋಜಕರಿಗೆ, ಮಾಜಿಸ್ಟ್ರೇಟ್‍ಗಳಿಗೆ ಹಾಗೂ ನ್ಯಾಯಾಧೀಶರುಗಳಿಗೆ ಕಡ್ಡಾಯ ಲಸಿಕೆಯ ನಿಯಮವಿಲ್ಲದಿರುವ ಕಾರಣ ತಾರತಮ್ಯದ ಸೂಚನೆ,’ ಎಂದೂ ಮನವಿ ಪತ್ರದಲ್ಲಿ ಉಲ್ಲೇಖಿಸಿತ್ತು.

ಕೊರೊನಾ ವೈರಸ್‌ನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಇತರೆ ಉಚ್ಚ ನ್ಯಾಯಾಲಯಗಳು ಸಹ ಆದೇಶಗಳನ್ನು ಜಾರಿಗೊಳಿಸಿವೆ. ಅಲಹಾಬಾದ್, ದೆಹಲಿ, ಮಹಾರಾಷ್ಟ್ರ, ಮಧ್ಯ ಪ್ರದೇಶ ಹಾಗೂ ಮದ್ರಾಸ್ ಉಚ್ಚ ನ್ಯಾಯಾಲಯಗಳ ಆದೇಶಗಳಲ್ಲಿ ಎಲ್ಲಿಯೂ ಕಡ್ಡಾಯ ಲಸಿಕೆ ನಿಬಂಧನೆ ಮತ್ತು ಲಸಿಕೆ ಪ್ರಮಾಣಪತ್ರ ನೀಡಿರೆ ಮಾತ್ರ ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂಬ ಕಟ್ಟುಪಾಡು ವಿಧಿಸಿಲ್ಲ.

ವಿಶೇಷವಾಗಿ ಅಲಹಾಬಾದ್‌ ಹಾಗೂ ಮಹಾರಾಷ್ಟ್ರ ಉಚ್ಛ ನ್ಯಾಯಾಲಯಗಳು ಕೋವಿಡ್‌ ನಿಯಂತ್ರಣ ಮತ್ತು ಸುರಕ್ಷತೆ ನಿಯಮಾವಳಿಗಳನ್ನು ಪಾಲಿಸಿದ್ದ ಪಕ್ಷದಲ್ಲಿ ಬಾರ್‌ ಅಸೋಸಿಯೇಷನ್‌, ಜೆರಾಕ್ಸ್‌ ನಡೆಸುವವರು, ಜಾಬ್‌ ಟೈಪಿಸ್ಟ್‌ಗಳು ಕ್ಯಾಂಟೀನ್‌ಗಳನ್ನು ತೆರೆದಿಡಲು ಅನುಮತಿ ನೀಡಿವೆ ಎಂದು ಮನವಿಯಲ್ಲಿ ವಿವರಿಸಿತ್ತು.

ಕಡ್ಡಾಯ ಲಸಿಕೆ ಖಾಸಗಿತನದ ಹಕ್ಕಿಗೆ ಚ್ಯುತಿ ತರಲಿದೆಯೇ?

ಕಡ್ಡಾಯ ಲಸಿಕೆಯು ಓರ್ವ ವ್ಯಕ್ತಿಯ ಖಾಸಗಿತನದ ಹಕ್ಕಿಗೆ ಚ್ಯುತಿ ತಂದಂತೆ ಎಂದು ಮನವಿಯಲ್ಲಿ ಪ್ರತಿಪಾದಿಸಿರುವ ಜನಾಧಿಕಾರ ಸಂಘರ್ಷ ಪರಿಷತ್‌, ಖಾಸಗಿತನದ ಹಕ್ಕಿನ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ 9 ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಕೆ ಎಸ್ ಪುಟ್ಟಸ್ವಾಮಿ ಮತ್ತು ಇನ್ನೋರ್ವ ವಿರುದ್ಧ ಭಾರತದ ಸರ್ಕಾರ ಮತ್ತು ಇತರರು [6 (2017) 10 ಎಸ್‍ಸಿಸಿ 1] ಪ್ರಕರಣದಲ್ಲಿ ಬಹಳ ಮಹತ್ತರವಾದ ತೀರ್ಪನ್ನು ಉಲ್ಲೇಖಿಸಿತ್ತು.

ಸರ್ವೋಚ್ಚ ನ್ಯಾಯಾಲಯವು ಖಾಸಗಿತನದ ಹಕ್ಕು ಸಂವಿಧಾನ ಪ್ರದತ್ತವಾದ ಮೂಲಭೂತ ಹಕ್ಕುಗಳಲ್ಲಿ ಒಂದು ಹಕ್ಕು ಎನ್ನುವುದರಲ್ಲಿ ಸಂಶಯವೇ ಇಲ್ಲ ಎಂದು ಬಹಳ ಅಧಿಕಾರಯುತವಾಗಿ ಹಾಗೂ ಅಧಿಕೃತವಾಗಿ ಐತಿಹಾಸಿಕವಾದ ತೀರ್ಪನ್ನು ನೀಡಿರುವ ವಿಷಯವನ್ನು ಜನಾಧಿಕಾರ ಸಂಘರ್ಷ ಪರಿಷತ್ ವಿವರಿಸಿತ್ತು.

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತನ್ನ ವೆಬ್ ಸೈಟಿನಲ್ಲಿ “ಸಾಮಾನ್ಯ ಪ್ರಶ್ನೆಗಳು” ವಿಭಾಗದ ಅಡಿಯ 3ನೇ ಪ್ರಶ್ನೆಯಾದ “ಲಸಿಕೆ ತೆಗೆದುಕೊಳ್ಳುವುದು ಕಡ್ಡಾಯವೇ?” ಎಂಬ ಪ್ರಶ್ನೆಗೆ ಉತ್ತರವಾಗಿ “ಕೋವಿಡ್ ಲಸಿಕೆ ಸ್ವಪ್ರೇರಿತ….” ಎಂದು ಹೇಳಲಾಗಿದೆ. ಈ ಉತ್ತರದ ಮೂಲ ಹಲವಾರು ವಿಜ್ಞಾನಿಗಳ, ವೈದ್ಯರ, ಸಂಶೋಧನಾಕಾರರ ಹಾಗೂ ತಜ್ಞರ ಅಭಿಪ್ರಾಯವನ್ನು ಒಳಗೊಂಡಿದೆ ಎಂದು ಪರಿಷತ್‌ ಮನವಿಯಲ್ಲಿ ಪ್ರಸ್ತಾಪಿಸಿತ್ತು.

ಕಡ್ಡಾಯ ಲಸಿಕೆಯ ಹಿನ್ನಲೆಯಲ್ಲಿ, 107 ವರ್ಷಗಳ ಮುನ್ನವೇ ನ್ಯೂಯಾರ್ಕಿನ ನ್ಯಾಯಾಧೀಶರಾದ ಕಾರ್ಡೋಜೊರವರು ಸ್ಕ್ಲೋಂಡ್ರೋಫ್ ವಿರುದ್ಧ ಸೊಸೈಟಿ ಆಫ್ ನ್ಯೂಯಾರ್ಕ್‍ನಲ್ಲಿ ನೀಡಿದ ತೀರ್ಪಿನ ಪ್ರಕಾರ ಪ್ರಾಯಸ್ಥನಾದ ಹಾಗೂ ಆರೋಗ್ಯಕರ ಬುದ್ಧಿಶಕ್ತಿಯಿರುವ ವ್ಯಕ್ತಿಯು ತನ್ನ ದೇಹದ ವಿಚಾರವಾಗಿ ಏನು ಮಾಡಬೇಕು ಎಂದು ನಿರ್ಧರಿಸುವ ಹಕ್ಕು ಸಹ ಅವನಿಗೆ ಇದೆ.

ಇಂತಹ ಸಂದರ್ಭಗಳಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳಲು ಇಷ್ಟವಿಲ್ಲದ, ಶಕ್ತನಾದ, ಪ್ರಾಯಸ್ಥ ವ್ಯಕ್ತಿಗೆ ಬಲವಂತವಾಗಿ ಅಥವಾ ಕಪಟತನದಿಂದ ಲಸಿಕೆಯನ್ನು ಕೊಡುವುದು ಅಪರಾಧವೂ ಹೌದು ಮತ್ತು ಸಿವಿಲ್ ಪ್ರಕರಣಕ್ಕೂ ಸಹ ಎಡೆ ಮಾಡಿಕೊಡುವುದು ಎಂದು ಏರ್‍ಡೇಲ್ ಎನ್‍ಎಚ್‍ಎಸ್ ಟ್ರಸ್ಟ್ ವಿರುದ್ಧ ಬ್ಲಾಂಡ್ [1993 ಎಸಿ 789 = (1993) 2 ಡಬ್ಲ್ಯೂಎಲ್‍ಆರ್ 316 = (1993) 1 ಎಎಲ್‍ಎಲ್ ಇಆರ್ 821] ಪ್ರಕರಣದಲ್ಲಿ ತೀರ್ಮಾನಿಸಲಾಗಿದೆ ಎಂಬ ವಿಷಯವನ್ನು ಮನವಿಯಲ್ಲಿ ಮಂಡಿಸಿತ್ತು.

ರೋಗ ತಡೆಗಟ್ಟುವಿಕೆಯ ಒಂದು ಕ್ರಮವಾಗಿ ಕಡ್ಡಾಯ ಅಥವಾ ಬಲವಂತದ ಲಸಿಕೆಯನ್ನು ಬಳಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರೋತ್ಸಾಹಿಸದೇ ಇರುವುದು ಅಷ್ಟೇ ಅಲ್ಲ, ನಿರಂತರವಾಗಿ ಅದರ ವಿರುದ್ಧವೂ ಸಹ ತೀರ್ಪುಗಳನ್ನು ನ್ಯಾಯಾಲಯಗಳು ನೀಡುತ್ತಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಬಲವಂತದ ಲಸಿಕಾ ಪ್ರಯೋಗದಿಂದ ಆ ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಪ್ರತಿಪಾದಿಸಿರುವ ಜನಾಧಿಕಾರ ಸಂಘರ್ಷ ಪರಿಷತ್‌ ಈ ಸಂಬಂಧ ಯೂರೋಪಿಯನ್ ಕಮೀಷನ್ ಮತ್ತು ಮಾನವ ಹಕ್ಕುಗಳ ನ್ಯಾಯಾಲಯದ ಎಕ್ಸ್ ವಿರುದ್ಧ ನೆದರ್ಲಾಂಡ್ಸ್ (ತೀರ್ಪಿನ ದಿನಾಂಕ: 04/12/1978) ಹಾಗೂ ಎಕ್ಸ್ ವಿರುದ್ಧ ಆಸ್ಟ್ರಿಯಾ (ತೀರ್ಪಿನ ದಿನಾಂಕ: 13/12/1979) ಪ್ರಕರಣವನ್ನು ಉದಾಹರಿಸಿತ್ತು.

ತಿಳಿವಳಿಕೆಯುಳ್ಳ ಆಯ್ಕೆ ಮತ್ತು ತಿಳಿವಳಿಕೆಯುಳ್ಳ ಒಪ್ಪಿಗೆಯ ಮೂಲಕ ಕಡ್ಡಾಯ ಲಸಿಕೆಯು ಮೂಲಭೂತ ಹಕ್ಕುಗಳಾದ ಜೀವನ ಹಾಗೂ ಸ್ವಾತಂತ್ರ್ಯಗಳಿಗೆ ಅಡ್ಡಿಪಡಿಸದೇ ಇರುವುದು ಒಂದು ವಿಷಯವಾದರೆ ಮತ್ತೊಂದು ಕಡೆ ಬಲವಂತದ ಲಸಿಕೆಯ ಲಕ್ಷಣಗಳು ಹಾಗೂ ಸ್ಪೂರ್ತಿಯೂ ಸಹ ದಬ್ಬಾಳಿಕೆಯಿಂದ ಕೂಡಿದ್ದು ಅದರ ಪ್ರಮಾಣವು ಹಾಗೂ ಪಾತ್ರವು ಬಹಳ ಭಯಾನಕವಾಗಿರುತ್ತದೆ ಎಂದು ಮನವಿ ಪತ್ರದಲ್ಲಿ ಹೇಳಿತ್ತು.

ಜನಸಾಮಾನ್ಯರಿಗೆ ಹಿತವನ್ನು ಮಾಡಬೇಕೆಂಬ ಸರ್ಕಾರಗಳು ಸಾರ್ವಜನಿಕ ಹಿತದೃಷ್ಟಿ ಎಂಬ ಸೋಗಿನಲ್ಲಿ ದಬ್ಬಾಳಿಕೆಯಿಂದ ಕೂಡಿದ ನಕಾರಾತ್ಮಕ ನಡಾವಳಿಗಳನ್ನು ಜಾರಿಗೊಳಿಸಿ ಜೀವನೋಪಾಯದ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ.

ಅಲ್ಲದೆ ತಮ್ಮ ಜೀವನೋಪಾಯದ ಕಸುಬಿನಿಂದ ದುಡಿಯುವುದನ್ನು ತಡೆಯುವುದು ಬಿಟ್ಟು ಅನುಚ್ಚೇಧ 38ರ ಪ್ರಕಾರ ನಡೆದುಕೊಂಡು ಜನಸಾಮಾನ್ಯರ ಜೊತೆ ಮುಖಾಮುಖಿಯಾಗಿ ಸಂವಾದಿಸಿ ಲಸಿಕೆಗಳ ಸಕಾರಾತ್ಮಕ ವಿಷಯಗಳು ಹಾಗೂ ಅದರ ಸಾಮರ್ಥ್ಯತೆಯ ಬಗ್ಗೆ ತಿಳಿಸಿದ್ದಲ್ಲಿ ಅನುಚ್ಚೇಧ 47ರಲ್ಲಿ ತಿಳಿಸಿರುವಂತೆ ಸರ್ಕಾರಗಳ ಕರ್ತವ್ಯಗಳನ್ನು ಹಾಗೂ ಅನುಚ್ಚೇಧ 39(ಎ)ನಲ್ಲಿ ನಮೂದಿಸಿರುವ ತಕ್ಕಷ್ಟು ಮಟ್ಟಿಗೆ ಜೀವನೋಪಾಯವನ್ನು ಕಾಪಾಡುವ ದಾರಿಯನ್ನು ಕಾಯುವ ಸರ್ಕಾರಗಳ ಕರ್ತವ್ಯಗಳನ್ನು ಕಾಪಾಡಿದಂತಾಗುತ್ತದೆ ಎಂದು ಪರಿಷತ್‌ ಗಮನ ಸೆಳೆದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts