ಬೆಂಗಳೂರು; ಕೋವಿಡ್-19 ನಿರ್ವಹಣೆಗಾಗಿ ಹಣವಿಲ್ಲ, ಸಂಪನ್ಮೂಲ ಸ್ಥಗಿತಗೊಂಡಿದೆ, ಖಜಾನೆ ಬರಿದಾಗಿದೆ ಎಂದೆಲ್ಲಾ ದೈನೈಸಿ ಸ್ಥಿತಿಯನ್ನು ಮುಂದಿರಿಸಿದ್ದ ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ನೀಡಿದ್ದ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು.ಗಳನ್ನು ವೆಚ್ಚ ಮಾಡಿದೆ.
ರಾಜ್ಯಕ್ಕೆ ಜಿಎಸ್‌ಟಿ ಸೇರಿದಂತೆ ವಿವಿಧ ರೀತಿಯ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಒಕ್ಕೂಟ ಸರ್ಕಾರವು ಎಸಗುತ್ತಿರುವ ತಾರತಮ್ಯ ಮತ್ತು ಪ್ರವಾಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ವಾಸ್ತವ ಪರಿಹಾರ ಮೊತ್ತವನ್ನು ಹಂಚಿಕೆ ಮಾಡುವಲ್ಲಿ ಅನ್ಯಾಯ ಎಸಗುತ್ತಿದೆ ಎಂಬ ಬಲವಾದ ಆರೋಪಗಳ ನಡುವೆಯೇ ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬಕ್ಕೆ ರಾಜ್ಯದ ಬೊಕ್ಕಸದಿಂದ 44.85 ಲಕ್ಷ ರು.ಗಳನ್ನು ಜಾಹೀರಾತಿಗಾಗಿ ವೆಚ್ಚ ಮಾಡಿರುವುದು ಮುನ್ನೆಲೆಗೆ ಬಂದಿದೆ.
ಜಾಹೀರಾತು ವೆಚ್ಚದ ವಿವರ (ಪತ್ರಿಕೆವಾರು)
ವಿಜಯವಾಣಿ – 9,86,972 ರು.
ವಿಜಯ ಕರ್ನಾಟಕ – 6,68,239 ರು.
ಪ್ರಜಾವಾಣಿ – 7,42,522 ರು.
ಉದಯವಾಣಿ – 4,84,332 ರು.
ಕನ್ನಡಪ್ರಭ – 3,95,640 ರು.
ಸಂಯುಕ್ತ ಕರ್ನಾಟಕ – 4,16,164 ರು.
ಹೊಸ ದಿಗಂತ – 3,95,640 ರು.
ವಿಶ್ವವಾಣಿ – 3,95,640 ರು.
ಈ ಜಾಹೀರಾತನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನೇರವಾಗಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿಲ್ಲ. ಬದಲಿಗೆ ಸರ್ಕಾರದಿಂದ ಅಂಗೀಕೃತ ಏಜೆನ್ಸಿಗಳ ಮೂಲಕ ಜಾಹೀರಾತನ್ನು ಬಿಡುಗಡೆ ಮಾಡಿದೆ. ಆದರೆ ಪ್ರಾದೇಶಿಕ, ಜಿಲ್ಲಾ ಮತ್ತು ತಾಲೂಕು ಮಟ್ಟದ ಪತ್ರಿಕೆಗಳಿಗೆ ಜಾಹೀರಾತು ಬಿಡುಗಡೆ ಮಾಡಿಲ್ಲ ಎಂದು ತಿಳಿದು ಬಂದಿದೆ.
ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ, ಪ್ರಧಾನಿ ಹುಟ್ಟು ಹಬ್ಬಕ್ಕೆ 44.85 ಲಕ್ಷ ರು.ಗಳನ್ನು ಜಾಹೀರಾತಿಗಾಗಿ ಖರ್ಚು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.