ಕೋಲಾಹಲ; ಶಿಫಾರಸ್ಸು ಅನುಷ್ಠಾನಗೊಂಡಿಲ್ಲ, ಮೂಲಪ್ರೇರಿತರಿಗೆ ಜವಾಬ್ದಾರಿ ತಪ್ಪಲಿಲ್ಲ

ಬೆಂಗಳೂರು; ವಿಧಾನಪರಿಷತ್‌ನಲ್ಲಿ ಸಭಾಪತಿಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಂದರ್ಭದಲ್ಲಿ ನಡೆದ ಕೋಲಾಹಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿಯು ಮಧ್ಯಂತರ ವರದಿಯಲ್ಲಿ ಮಾಡಿದ್ದ ಪ್ರಮುಖ ಶಿಫಾರಸ್ಸುಗಳನ್ನು 8 ತಿಂಗಳು ಕಳೆದರೂ ಅನುಷ್ಠಾನಗೊಳಿಸಿಲ್ಲ.

ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್‌ನಾರಾಯಣ್‌ ಅವರು ಈ ಘಟನೆಗೆ ಮೂಲ ಪ್ರೇರಿತರು ಎಂದು ಮಧ್ಯಂತರ ವರದಿಯಲ್ಲಿ ಹೇಳಿದ್ದ ಸದನ ಸಮಿತಿಯು ಇವರು ಸರ್ಕಾರದ ಯಾವುದೇ ಜವಾಬ್ದಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವುದು ಸೂಕ್ತವಲ್ಲವೆಂದು ಶಿಫಾರಸ್ಸು ಮಾಡಿತ್ತು. ಆದರೆ ಇವರಿಬ್ಬರನ್ನೂ ಸಚಿವರನ್ನಾಗಿ ಮುಂದುವರೆಸಿ ಜವಾಬ್ದಾರಿ ಹುದ್ದೆ ನೀಡುವ ಮೂಲಕ ಸದನ ಸಮಿತಿ ನೀಡಿದ್ದ ಮಧ್ಯಂತರ ವರದಿಯ ಔಚಿತ್ಯವನ್ನೇ ಪ್ರಶ್ನಿಸಿದಂತಾಗಿದೆ. ವರದಿಯ ಪ್ರತಿಯನ್ನು ‘ದಿ ಫೈಲ್‌’ ಆರ್‌ಟಿಐ ಮೂಲಕ ಪಡೆದುಕೊಂಡಿದೆ.

ಉಪ ಸಭಾಪತಿಯವರು ನಿಯಮಬಾಹಿರವಾಗಿ ಪೀಠವನ್ನು ಅಲಂಕರಿಸಲು ಪ್ರಚೋದನೆ ನೀಡಿದ್ದರು ಎಂಬ ಆರೋಪಕ್ಕೆ ಜೆ ಸಿ ಮಾಧುಸ್ವಾಮಿ ಮತ್ತು ಡಾ ಅಶ್ವಥ್‌ನಾರಾಯಣ್‌ ಅವರು ಗುರಿಯಾಗಿದ್ದರು. ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಸದನ ಸಮಿತಿಯು ಇವರಿಬ್ಬರು ಈ ಘಟನೆಯಲ್ಲಿ ಮೂಲ ಪ್ರೇರಿತರು ಎಂದು ಸಾಕ್ಷ್ಯಾಧಾರಗಳಿಂದ ದೃಢಪಡಿಸಿತ್ತು. ಅಲ್ಲದೆ ಇವರಿಬ್ಬರದ್ದು ಅಸಂಸದೀಯ ಮತ್ತು ಕಾನೂನು ಬಾಹಿರ ನಡವಳಿಕೆ ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿತ್ತು.

‘ಉಪ ಸಭಾತಿಯವರು ನಿಯಮಬಾಹಿರವಾಗಿ ಪೀಠವನ್ನು ಅಲಂಕರಿಸಲು ಪ್ರಚೋದನೆ ನೀಡಿದ ಕಾನೂನು ಮತ್ತು ಸಂಸದೀಯ ವ್ವವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್‌ನಾರಾಯಣ್‌ ಅಸಂಸದೀಯ ಮತ್ತು ಕಾನೂನುಬಾಹಿರ ನಡವಳಿಕೆಯನ್ನು ಸಮಿತಿಯು ಖಂಡಿಸುತ್ತದೆ,’ ಎಂದು ಮಧ್ಯಂತರ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಕರಣದ ಹಿನ್ನೆಲೆ

ವಿಧಾನ ಪರಿಷತ್ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ಯಾವುದೇ ಅವಕಾಶ ನೀಡದಂತೆ ಆಗ್ರಹಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ವಿಧಾನ ಪರಿಷತ್ ಸಭಾಪತಿ ವಿರುದ್ಧ ಬಿಜೆಪಿ ಸಲ್ಲಿಸಿದ ಅವಿಶ್ವಾಸ ನಿರ್ಣಯದ ಪ್ರಸ್ತಾಪವನ್ನು ಸಭಾಪತಿಗಳು ತಿರಸ್ಕರಿಸಿದ್ದರು. ಮೇಲೆ ಚರ್ಚೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡದಂತೆ ಸದನದಲ್ಲಿ ಕಾಂಗ್ರೆಸ್‌ ಒತ್ತಾಯಿಸಿತ್ತು.

ಡಿಸೆಂಬರ್ 7ರಂದು ಆರಂಭವಾಗಿದ್ದ ವಿಧಾನಸಭೆ ಚಳಿಗಾಲದ ಅಧಿವೇಶನ ಡಿಸೆಂಬರ್ 10ರಂದು ಅನಿರ್ದಿಷ್ಟಾವಧಿ ಮುಂದೂಡಿಕೆಯಾಗಿತ್ತು. ಗೋಹತ್ಯೆ ವಿಧೇಯಕ ಮಸೂದೆ ಮಂಡನೆಗೆ ಅವಕಾಶ ಮಾಡಿಕೊಡದ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ಮುಂದಾಗಿತ್ತು. ಆದರೆ ಅವಿಶ್ವಾಸ ನಿರ್ಣಯವನ್ನು ತಾಂತ್ರಿಕ ಹಾಗೂ ಕಾನೂನಾತ್ಮಕ ಕಾರಣಗಳಿಂದ ಸಭಾಪತಿ ಅವರು ತಿರಸ್ಕರಿಸಿದ್ದರು. ಆಗ ಮತ್ತೆ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮುಂದಾಗಿತ್ತು.

ವಿಧಾನಪರಿಷತ್‌ ಸಭಾಪತಿಯಾಗಿದ್ದ ಪ್ರತಾಪಚಂದ್ರಶೆಟ್ಟಿ ಅವರ ವಿರುದ್ಧ ಡಿಸೆಂಬರ್ 25 ರಂದು ಬಿಜೆಪಿ ಅವಿಶ್ವಾಸ ಮಂಡನೆ ನೋಟಿಸ್‌ ನೀಡಿತ್ತು. ನಿಯಮದ ಪ್ರಕಾರ 14 ದಿನಗಳ ಮೊದಲು ನೋಟಿಸ್‌ ನೀಡಬೇಕು. ಆದರೆ ಸಭಾಪತಿ ಚಳಿಗಾಲದ ಅಧಿವೇಶದ ಸಂದರ್ಭದಲ್ಲಿ ಅವಿಶ್ವಾಸನ ನಿರ್ಣಯ ಪ್ರಸ್ತಾವವನ್ನು ಮಂಡಿಸಲು ಅವಕಾಶ ನೀಡಿಲ್ಲ. ಅವಿಶ್ವಾಸನ ನಿರ್ಣಯದಲ್ಲಿ ಸಭಾಪತಿ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ನೋಟಿಸ್‌ ಸಂವಿಧಾನ ಬದ್ಧವಾಗಿಲ್ಲ ಎಂದು ಸಭಾಪತಿ ತಿರಸ್ಕಾರ ಮಾಡಿದ್ದರಲ್ಲದೆ ಅಧಿವೇಶನವನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಮತ್ತೊಮ್ಮೆ ಅಧಿವೇಶನ ನಡೆದಿತ್ತು. ವಿಧಾನ ಪರಿಷತ್‌ನಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ನಿರ್ಣಯ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವಿನ ಕಿತ್ತಾಟ, ತಳ್ಳಾಟ ನಡೆದಿತ್ತು.

ಹಿರಿಯರ ಮನೆ ಎಂದು ಕರೆಯಲ್ಪಡುವ ವಿಧಾನಪರಿಷತ್‌ನಲ್ಲಿ ಸದಸ್ಯರು ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಈ ಘಟನೆಯನ್ನು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ತಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡಿತ್ತಲ್ಲದೆ ಹಾಗೂ ಸಮರ್ಥನೆಯನ್ನು ನೀಡಿತ್ತು. ಅಲ್ಲದೆ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts