ಬೆಂಗಳೂರು: ಬೃಹತ್ ಮತ್ತು ಕೈಗಾರಿಕೆ ಸಚಿವ ಮುರುಗೇಶ್ ಆರ್ ನಿರಾಣಿ ಅವರ ಒಡೆತನದ ನಿರಾಣಿ ಷುಗರ್ಸ್ ಲಿಮಿಟೆಡ್, ಸಹ-ಕಂಪನಿಗೆ ಸೇರಿರುವ ಸ್ಥಿರಾಸ್ತಿಯನ್ನು ಅಡಮಾನವಾಗಿರಿಸಿ 85.00 ಕೋಟಿ ರು. ಸಾಲವನ್ನು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಿಂದ ಪಡೆದಿದೆ. ಅಲ್ಲದೆ ಇದಕ್ಕೆ ಬೆಂಬಲವಾಗಿ ಯಾವುದೇ ದಾಖಲೆಗಳನ್ನೂ ಸಹ ಕಂಪನಿಯು ಒದಗಿಸಿಲ್ಲ ಎಂಬುದೂ ಇದೀಗ ಬಹಿರಂಗವಾಗಿದೆ.
ಮುಖ್ಯಮಂತ್ರಿ ಹುದ್ದೆ ಗದ್ದುಗೆ ಜಿದ್ದಿನಲ್ಲಿ ತೀವ್ರ ಪೈಪೋಟಿ ನೀಡಿ ಕಡೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಶಾಸನಬದ್ಧ ಲೆಕ್ಕ ಪರಿಶೋಧನಾ ವರದಿಯೂ ಮುನ್ನೆಲೆಗೆ ಬಂದಿದೆ.
ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ 2018-19ನೇ ಸಾಲಿನ ಶಾಸನಬದ್ಧ ಲೆಕ್ಕ ಪರಿಶೋಧನೆ ವರದಿಯು ನಿರಾಣಿ ಷುಗರ್ಸ್ ಲಿಮಿಟೆಡ್ ಪಡೆದಿದ್ದ 85.00 ಕೋಟಿ ಸಾಲದ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದೆ. ಶಾಸನಬದ್ಧ ಲೆಕ್ಕ ಪರಿಶೋಧನೆ ವರದಿಯ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ನಿರಾಣಿ ಷುಗರ್ಸ್ ಒದಗಿಸಿರುವ ದಾಖಲೆಯ ಪ್ರಕಾರ ಸ್ಥಿರಾಸ್ತಿಯು ರತ್ನ ಸಿಮೆಂಟ್ಸ್ (ಎಡವಾಡ)ಗೆ ಸೇರಿದ್ದಾಗಿದೆ. ಇದಕ್ಕೆ ಬೆಂಬಲವಾಗಿ ಯಾವ ದಾಖಲೆಗಳು ರತ್ನ ಸಿಮೆಂಟ್ಸ್‌ರವರು ಒದಗಿಸಿಲ್ಲದ ಕಾರಣ ರತ್ನ ಸಿಮೆಂಟ್ಸ್ ಆಡಳಿತ ಮಂಡಳಿಗೆ ಸ್ಥಿರಾಸ್ತಿಯನ್ನು ಬೇರೆ ಕಂಪನಿಗೆ ಸಾಲ ಪಡೆಯಲು ಅಡಮಾನ ಮಾಡಿಕೊಡುವ ಅಧಿಕಾರವಿದೆ ಎಂದು ಖಾತರಿಪಡಿಸಲಾಗುವುದಿಲ್ಲ,’ ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಹಾಗೆಯೇ ನಿರಾಣಿ ಷುಗರ್ಸ್‌ಗೆ 85.00 ಕೋಟಿ ರು.ಸಾಲ ಮಂಜೂರಾತಿ ಮಾಡುವ ಸಂಬಂಧದಲ್ಲಿಯೂ ಮಂಜೂರಾತಿ ನಿಬಂಧನೆಗಳನ್ನು ಪಾಲಿಸಿಲ್ಲ ಎಂಬ ಸಂಗತಿ ಲೆಕ್ಕ ಪರಿಶೋಧನಾ ವರದಿಯಿಂದ ಗೊತ್ತಾಗಿದೆ. ‘ಮಂಜೂರಾತಿ ನಿಬಂಧನೆ ಸಂಖ್ಯೆ 09ರ ಪ್ರಕಾರ ರತ್ನ ಸಿಮೆಂಟ್ಸ್ (ಎಡವಾಡ) ನಿರ್ದೇಶಕರು ಮತ್ತು ಪ್ರವರ್ತಕರುಗಳು ಬ್ಯಾಂಕಿನ ನಾಮಮಾತ್ರ ಸದಸ್ಯ ಸದಸ್ಯರಾಗಿರುಬೇಕಾಗುತ್ತದೆ. ಹಾಗೂ ನಿರಾಣಿ ಷುಗರ್ಸ್ ದವರು ಪಡೆಯುವ ಸಾಲಕ್ಕೆ ಮತ್ತು ಸಾಲ ಚುಕ್ತಾ ಆಗುವವರೆಗೂ ವೈಯಕ್ತಿಕ ಖಾತರಿ ನೀಡಬೇಕಾಗಿರುತ್ತದೆ. ವೈಯಕ್ತಿಕ ಖಾತರಿಯ ಪ್ರತಿಯನ್ನು ಪರಿಶೀಲನೆ ಒದಗಿಸಿಲ್ಲ,’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.
ಇನ್ನು, ನಿರಾಣಿ ಷುಗರ್ಸ್ ಲಿಮಿಟೆಡ್ ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರವನ್ನು ಪಡೆದಿಲ್ಲ. ‘ ಎಲ್ಲಾ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರವನ್ನು ಪಡೆಯದ ಕಾರಣ ಅಪೆಕ್ಸ್ ಬ್ಯಾಂಕ್‌ನಿಂದ ಮಂಜೂರಾದ ದುಡಿಯುವ ಬಂಡವಾಳ ಸಾಲದ ಹೊಣೆಗಾರಿಕೆಯು ಅಪೆಕ್ಸ್ ಬ್ಯಾಂಕ್‌ನದ್ಧೇ ಆಗಿರುತ್ತದೆ. ಇದು ಕಂಪನಿಯು ಒದಗಿಸಿರುವ ಭದ್ರತೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ,’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಹೇಳಲಾಗಿದೆ.
ಅದೇ ರೀತಿ ಈ ಕಂಪನಿಗೆ ಸಾಲ ಮಂಜೂರಾತಿ ಮಾಡಿದ ನಂತರ ನಡೆದಿರುವ ಬೆಳವಣಿಗೆಗಳ ಕುರಿತು ಶಾಸನಬದ್ಧ ಲೆಕ್ಕ ಪರಿಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಯಂತ್ರ ಮತ್ತು ಸ್ಥಾವರಗಳ ಮೇಲೆ ಬಜಾಜ್ ಅಲೆಯನ್ಸ್‌ರಿಂದ ಪಡೆದ ವಿಮೆ ನವೆಂಬರ್ 2018ಕ್ಕೆ ಮುಗಿದಿದ್ದು ಹಾಗೂ ದಾಸ್ತಾನು ಪಾಲಿಸಿಯು ಸಹ ಏಪ್ರಿಲ್ 2019ಕ್ಕೆ ಮುಕ್ತಾಯಗೊಂಡಿದೆ. ಈ ಪಾಲಿಸಿಗಳನ್ನು ನವೀಕರಿಸಿರುವುದಿಲ್ಲ,’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.
ಸಾಲ ಮಂಜೂರಾತಿ ನಿಬಂಧನೆ 25ರ ಪ್ರಕಾರ ಸಾಲಗಾರ ಕಂಪನಿಯು ತನ್ನ ಎಲ್ಲಾ ಸ್ಥಿರ ಹಾಗೂ ಚಾಲ್ತಿ ಆಸ್ತಿಗಳ ಮೇಲಿನ 2ನೇ ಚಾರ್ಜ್‌ನ್ನು ಫಾರಂ ನಂ ಸಿಎಚ್‌ಜಿ 1ರ ಮೂಲಕ ಅಪೆಕ್ಸ್ ಬ್ಯಾಂಕ್‌ನ ಪರವಾಗಿ ರಿಜಿಸ್ಟರ್ ಆಫ್ ಕಂಪನೀಸ್‌ನಲ್ಲಿ 2ನೇ ಚಾರ್ಜ್ ಸೃಷ್ಟಿ ಮಾಡಬೇಕು. ಆದರೆ ನಿರಾಣಿ ಷುಗರ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ 2ನೇ ಚಾರ್ಜ್ ಸೃಷ್ಟಿಗೆ ಸಂಬಂಧಿಸಿದ ದಾಖಲೆಗಳು ಕಡತದಲ್ಲಿರಿಸಿರಲಿಲ್ಲ ಎಂಬುದು ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.