ಇಸ್ಲಾಮಿಯಾ ಸಂಸ್ಥೆಯ ಕಟ್ಟಡ, ಜಾಗ ವಶ; ಸಂಘ ಪರಿವಾರದ ಒತ್ತಡ?

ಬೆಂಗಳೂರು; ಒತ್ತುವರಿ ಪ್ರಕರಣದಲ್ಲಿ ಕಳೆದ 16 ವರ್ಷಗಳ ಹಿಂದೆಯೇ ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗೆ ಕ್ಲೀನ್‌ ಚಿಟ್‌ ದೊರೆತಿದ್ದರೂ ರಾಜ್ಯ ಬಿಜೆಪಿ ಸರ್ಕಾರವು ಇದೀಗ ಸಂಸ್ಥೆಯ ಕಟ್ಟಡ ಸೇರಿದಂತೆ ಒಟ್ಟು 37 ಕೋಟಿ ಬೆಲೆಬಾಳುವ 3.20 ಎಕರೆ ಭೂಮಿಯನ್ನು ವಶಕ್ಕೆ ಪಡೆದಿದೆ. ಸಂಘ ಪರಿವಾರದ ಒತ್ತಡವೇ ಇದಕ್ಕೆ ಕಾರಣ ಎಂಬ ಮಾತು ಕೇಳಿ ಬಂದಿದೆ.

ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ಯಾವುದೇ ಭೂಮಿಯನ್ನು ಒತ್ತುವರಿ ಮಾಡಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ವರದಿ ನೀಡಿತ್ತು. ಆದರೆ ಆ ವರದಿಯನ್ನು ಬದಿಗೆ ಸರಿಸುವ ಮೂಲಕ 3.20 ಎಕರೆಯನ್ನು ವಶಕ್ಕೆ ಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಪ್ರಕರಣದ ಬಗ್ಗೆ ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ವಿಧಾನಪರಿಷತ್‌ನ ಸದಸ್ಯ ಎನ್‌ ರವಿಕುಮಾರ್‌ ಅವರು ಕಂದಾಯ ಇಲಾಖೆಯ ಕದ ತಟ್ಟಿದ್ದರು. ಒತ್ತುವರಿ ಆರೋಪದಿಂದ ಮುಕ್ತಗೊಂಡಿರುವ ಬಗ್ಗೆ ಸರ್ಕಾರದಲ್ಲಿಯೇ ದಾಖಲೆ, ವರದಿಗಳಿದ್ದರೂ ಎನ್‌ ರವಿಕುಮಾರ್‌ ಅವರು ವಿಧಾನಪರಿಷತ್‌ ಅಧಿವೇಶನದಲ್ಲಿ ಸರಣಿ ಪ್ರಶ್ನೆಗಳನ್ನು ಕೇಳಿದ್ದರು.

ಅಲ್ಲದೆ ‘ಸುಳ್ಳು ದಾಖಲೆ ಹಾಗೂ ತಪ್ಪು ಮಾಹಿತಿ ನೀಡಿ ಪ್ರಾರಂಭಿಸಲಾದ ಕಾಲೇಜಿನ ಅನುಮತಿ ಹಿಂಪಡೆಯಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ,’ ಎಂದು ಸದನದಲ್ಲಿ ಪ್ರಶ್ನಿಸಿದ್ದರು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದ ಸಚಿವ ಅಶ್ವಥ್‌ನಾರಾಯಣ್‌ ಅವರು ಈ ಸಂಸ್ಥೆಯು ಒತ್ತುವರಿ ಮಾಡಿಲ್ಲ ಎಂದು ಉತ್ತರಿಸಿದ್ದರು.

ತನಿಖಾ ವರದಿ ಎತ್ತಿ ಹಿಡಿದಿದ್ದ ಅಶ್ವಥ್‌ನಾರಾಯಣ್‌

ಒತ್ತುವರಿ ಮಾಡಿಕೊಂಡಿರುವ ಆರೋಪ ಸಂಬಂಧ ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಸದನದಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದ ಸಚಿವ ಅಶ್ವಥ್‌ನಾರಾಯಣ್‌ ಅವರು ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವೂ ಸ್ಥಳ ಮತ್ತು ದಾಖಲೆಗಳ ಪರಿಶೀಲನೆ ವರದಿಯಲ್ಲಿ ಭೂಮಿ ಒತ್ತುವರಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯನ್ನೇ ಎತ್ತಿ ಹಿಡಿದಿದ್ದರು. ಈ ವರದಿಯನ್ನಾಧರಿಸಿ ಇಸ್ಲಾಮಿಯಾ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಯು ಯಾವುದೇ ಒತ್ತುವರಿ ಮಾಡಿಲ್ಲ ಎಂದು ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಅಧಿವೇಶನದಲ್ಲೇ ಲಿಖಿತ ಉತ್ತರ ನೀಡಿದ್ದರು.

ಈ ಉತ್ತರದಿಂದ ಸಮಾಧಾನಗೊಳ್ಳದ ಎನ್‌ ರವಿಕುಮಾರ್‌ ಅವರು ಕಂದಾಯ ಇಲಾಖೆಯ ಕದ ತಟ್ಟಿದ್ದರು. ಆ ವೇಳೆಯಲ್ಲಿ ಕಂದಾಯ ಇಲಾಖೆಯು ಉನ್ನತ ಶಿಕ್ಷಣ ಇಲಾಖೆಯಲ್ಲಿದ್ದ ವರದಿಯನ್ನು ತಳ್ಳಿ ಹಾಕಿತ್ತು.

ಒತ್ತುವರಿ ಎಂದಿದ್ದ ಕಂದಾಯ ಇಲಾಖೆ

ವಿಶೇಷವೆಂದರೆ ಈ ಪ್ರಕರಣದಲ್ಲಿ ಉನ್ನತ ಶಿಕ್ಷಣ ಇಲಾಖೆ ನೀಡಿದ್ದ ವರದಿಯನ್ನು ಕಂದಾಯ ಇಲಾಖೆಯು ತಳ್ಳಿ ಹಾಕಿತ್ತು. ‘ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ಹುಳಿಮಾವು ಗ್ರಾಮದ ಸರ್ವೆ ನಂಬರ್‌ 63ರಲ್ಲಿ 5 ಎಕರೆ ಜಾಗವನ್ನು ಒತ್ತುವರಿ ಮಾಡಿರುವುದನ್ನು ತಹಶೀಲ್ದಾರ್‌ ನ್ಯಾಯಾಲಯದ ಆದೇಶದ ಮೇರೆಗೆ 2009ರ ಜುಲೈ 25ರಂದು ಆದೇಶಿಸಿದೆ. 2016ರ ಅಕ್ಟೋಬರ್‌ 1ರಂದು ಒತ್ತುವರಿ ಜಾಗವನ್ನು ತೆರವುಗೊಳಿಸಲಾಗಿದೆ,’ ಎಂದು ಉತ್ತರಿಸಿತ್ತು.

ಒತ್ತುವರಿ ತೆರವುಗೊಳಿಸಲು 2009ರಲ್ಲಿ ನ್ಯಾಯಾಲಯ ಆದೇಶಿಸಿದ್ದರೆ 2016ರಲ್ಲಿ ತೆರವುಗೊಳಿಸಲಾಗಿದೆ ಎಂದು ಕಂದಾಯ ಇಲಾಖೆ ಹೇಳುತ್ತಿದೆ. ಆದರೆ ಶಿಕ್ಷಣ ಇಲಾಖೆಯ ತಜ್ಞರ ಸಮಿತಿಯು 2004ರ ಆಗಸ್ಟ್‌ 16ರಂದು ಸರ್ಕಾರಕ್ಕೆ ನೀಡಿದ್ದ ಸ್ಥಳ ತನಿಖಾ ವರದಿಯಲ್ಲಿ ಭೂಮಿ ಒತ್ತುವರಿ ಬಗ್ಗೆ ಮಾಹಿತಿ ಇರಲಿಲ್ಲ.

ಆದರೂ ಸರ್ಕಾರದ ಆದೇಶದಂತೆ ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಟ್ಟಡ ಸೇರಿದಂತೆ ಒಟ್ಟು 3.20 ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದಿದೆ. ಬೇಗೂರು ಹೋಬಳಿಯ ಹುಳಿಮಾವು ಗ್ರಾಮದ ಸರ್ವೇ ನಂ.63 ರಲ್ಲಿ ಸುಮಾರು ರೂ. 37 ಕೋಟಿ ಬೆಲೆಬಾಳುವ ಆಸ್ತಿ ಇದಾಗಿದೆ. ಸರ್ಕಾರದ ಆದೇಶದಂತೆ ಜಾರಿದಳದ ವಿಶೇಷ ಜಿಲ್ಲಾಧಿಕಾರಿ ದುರ್ಗಾಶ್ರೀ, ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಡಾ ಶಿವಣ್ಣ, ತಹಸೀಲ್ದಾರ್ ರಾಮಲಕ್ಷ್ಮಯ್ಯ ಅವರ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅಕ್ರಮವಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು, ಶಿಕ್ಷಣ ಸಂಸ್ಥೆಯನ್ನು ನಡೆಸಿದ್ದಲ್ಲದೇ, ಸಂಸ್ಥೆಯು ಈ ಹಿಂದೆ ಜಮೀನನ್ನು ಮಂಜೂರಿ ಮಾಡಿಕೊಡಲು ಕೋರಿ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸುತ್ತಾ ಬಂದಿತ್ತು. ಈ ಮನವಿಗಳನ್ನು 2010 ರಲ್ಲೆ ತಿರಸ್ಕರಿಸಿದ್ದು, ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಲು ಸೂಚಿಸಿತ್ತು ಎಂದು ಜಾರಿ ದಳ ಹೇಳುತ್ತಿದೆ.

ಸಂಸ್ಥೆಯು ವಿವಿಧ ನ್ಯಾಯಾಲಯಗಳಲ್ಲಿ ಈ ಕುರಿತು ಮೇಲ್ಮನವಿ ಸಲ್ಲಿಸಿ ಅವುಗಳನ್ನು ನ್ಯಾಯಾಲಯದಿಂದ ತಿರಸ್ಕರಿಸಲಾಗಿತ್ತು. ನಂತರ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಮೇಲ್ಮನವಿಯನ್ನೂ ಕೂಡ ತಿರಸ್ಕರಿಸಲಾಗಿತ್ತು ಎಂದೂ ಸರ್ಕಾರ ಹೇಳಿದೆ.

the fil favicon

SUPPORT THE FILE

Latest News

Related Posts