ಇಂದ್ರಕಲಾ ಪ್ರಕರಣ; 2ನೇ ಆರೋಪಿ ಪಾಪಯ್ಯರನ್ನು ದೋಷಾರೋಪಣೆಯಲ್ಲಿ ಕೈ ಬಿಟ್ಟ ತನಿಖಾ ತಂಡ

ಬೆಂಗಳೂರು; ರಾಜ್ಯಪಾಲರ ಹುದ್ದೆ ಆಮಿಷವೊಡ್ಡಿ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರಾಗಿದ್ದ ಇಂದ್ರಕಲಾ ಅವರ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ನಿವೃತ್ತ ಎಸ್‌ ಪಿ ಪಾಪಯ್ಯ ಅವರನ್ನು ದೋಷಾರೋಪಣೆ ಪಟ್ಟಿಯಿಂದ ಕೈ ಬಿಟ್ಟಿರುವುದು ತಿಳಿದು ಬಂದಿದೆ.

ಇಂದ್ರಕಲಾ ಅವರ 2 ಖಾತೆಗಳಿಂದ 2 ಕೋಟಿ ರು. ಗಳು ಎರಡು ಕಂತುಗಳಲ್ಲಿ ಯುವರಾಜಸ್ವಾಮಿಯ 2 ಖಾತೆಗಳಿಗೆ ವರ್ಗಾವಣೆಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಒಮ್ಮೆ 2 ಲಕ್ಷ ಮತ್ತು ಮತ್ತೊಮ್ಮೆ 35 ಲಕ್ಷ ಸೇರಿ ಒಟ್ಟು 37 ಲಕ್ಷ ರು. ಪಾಪಯ್ಯ ಹೊಂದಿದ್ದ ಖಾತೆಗೆ ಯುವರಾಜಸ್ವಾಮಿ ಖಾತೆಯಿಂದ ವರ್ಗಾವಣೆಯಾಗಿರುವುದನ್ನು ತನಿಖಾ ತಂಡವು ದೃಢಪಡಿಸಿಕೊಂಡ ನಂತರ ಎಫ್‌ಐಆರ್‌ನಲ್ಲಿ 2ನೇ ಆರೋಪಿಯನ್ನಾಗಿಸಿತ್ತು.

ಆದರೆ ಇದೀಗ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಪಾಪಯ್ಯ ಹೆಸರನ್ನು ಕೈಬಿಟ್ಟಿರುವುದು ಹಲವು ಸಂದೇಹಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ವಂಚಕ ಯುವರಾಜಸ್ವಾಮಿಯನ್ನು ಇಂದ್ರಕಲಾ ಅವರಿಗೆ ಪಾಪಯ್ಯ ಎಂಬುವರೇ ಪರಿಚಯಿಸಿದ್ದರು. ಈ ಸಂಬಂಧ ಪಾಪಯ್ಯ ತನಿಖಾ ತಂಡಕ್ಕೆ ಸಾಕ್ಷ್ಯ ಹೇಳಿಕೆಯನ್ನೂ ನೀಡಿದ್ದರೂ ನಿವೃತ್ತ ಪೊಲೀಸ್‌ ಅಧಿಕಾರಿ ಎಂಬ ಕಾರಣಕ್ಕೆ ದೋಷಾರೋಪಣೆ ಪಟ್ಟಿಯಿಂದ ಕೈ ಬಿಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಾಕ್ಷ್ಯ ಹೇಳಿಕೆಯಲ್ಲೇನಿದೆ?

2000ನೇ ಇಸವಿಯಲ್ಲಿ ಮಂಗಳೂರು ನಗರ ಸಂಚಾರ ವಿಭಾಗದ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ನ್ಯಾಯಮೂರ್ತಿಗಳಾದ ಇಂದ್ರಕಲಾ ಜಿಲ್ಲಾ ನ್ಯಾಯಾಧೀಶರಾಗಿ ಮಂಗಳೂರು ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಂದಿನಿಂದ ಇಂದ್ರಕಲಾ ಅವರು ನನಗೆ ಚಿರಪರಿಚಿತರಾಗಿದ್ದು ಇಲ್ಲಿಯವರೆಗೂ ಮುಂದುವರೆದಿತ್ತು.

2018ನೇ ಸಾಲಿನಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ನಾನು ದೆಹಲಿಗೆ ಪ್ರಯಾಣ ಬೆಳೆಸುವಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವರಾಜ್‌ ಅಲಿಯಾಸ್‌ ಸ್ವಾಮಿ ಎಂಬುವರು ತಾನೂ ಆರ್‌ ಎಸ್‌ ಎಸ್‌ ನಲ್ಲಿ ಕೆಲಸ ಮಾಡುತ್ತಿದ್ದೆನು. ನನಗೆ ಪ್ರಭಾವಿ ನಾಯಕರುಗಳ ಪರಿಚಯವಿದೆ ಮತ್ತು ನಾನು ಪ್ರಭಾವಿ ವ್ಯಕ್ತಿಗಳಿಗೆ ಜ್ಯೋತಿಷ್ಯ ಹೇಳುತ್ತೇನೆ ಎಂದು ನನ್ನನ್ನು ಪರಿಚಯ ಮಾಡಿಕೊಂಡು ನಂಬಿಕೆ ಬರುವಂತೆ ಮಾಡಿ ಏನಾದರೂ ಕೆಲಸವಾಗಬೇಕಿದ್ದರೆ ತನ್ನನ್ನು ಭೇಟಿ ಮಾಡಿ ಎಂದು ತಿಳಿಸಿ ಪರಿಚಯ ಮಾಡಿಕೊಂಡು ನನ್ನ ಮೊಬೈಲ್‌ ಸಂಖ್ಯೆ ಪಡೆದುಕೊಂಡರು.

ಜ್ಯೋತಿಷ್ಯ ಹೇಳಲು ಕರೆಸಿದ್ದು ಪಾಪಯ್ಯ

ಮತ್ತೆ 2018ನೇ ಸಾಲಿನ ಜೂನ್‌ ತಿಂಗಳ ಪ್ರಾರಂಭದಲ್ಲಿ ನನ್ನ ಮೊಬೈಲ್‌ ಸಂಖ್ಯೆಗೆ ಯುವರಾಜ್‌ ಅಲಿಯಾಸ್‌ ಸ್ವಾಮಿ ಫೋನ್‌ ಮಾಡಿ ಏನಾದರೂ ಕೆಲಸವಾಗಬೇಕಿದ್ದರೆ ಹೇಳಿ ಎಂದು ತಿಳಿಸಿದನು. ನನಗೆ ಯಾವುದೇ ಕೆಲಸವಾಗಬೇಕಿಲ್ಲ ಎಂದು ತಿಳಿಸಿ ಸುಮ್ಮನಾದೆನು. ಪುನಃ ಸ್ವಲ್ಪ ದಿನ ಬಿಟ್ಟು ಯುವರಾಜ್‌ ಅಲಿಯಾಸ್‌ ಸ್ವಾಮಿ ನನಗೆ ಕರೆ ಮಾಡಿ ನಿಮ್ಮ ಕಡೆಯವರಿಗೆ ಯಾರಿಗಾದರೂ ಕೆಲಸವಾಗಬೇಕಿದ್ದರೆ ಹೇಳಿ ಮಾಡಿಕೊಡುತ್ತೇನೆ ಎಂದು ತಿಳಿಸಿದ. ಆಗ ನಾನು ನನಗೆ ಚಿರಪರಿಚಿತರಾಗಿದ್ದ ನ್ಯಾಯಮೂರ್ತಿಗಳಾದ ಇಂದ್ರಕಲಾ ಜ್ಯೋತಿಷ್ಯವನ್ನು ನಂಬುತ್ತಾರೆ. ಅವರನ್ನು ಭೇಟಿ ಮಾಡಿಸಿಕೊಡುತ್ತೇನೆ ಅವರಿಗೆ ಭವಿಷ್ಯ ಹೇಳಿ ಎಂದು ತಿಳಿಸಿದ್ದೆ ಎಂದು ಹೇಳಿಕೆಯನ್ನು ದಾಖಲು ಮಾಡಿದ್ದಾರೆ.

ನಂತರ 2018ನೇ ಸಾಲಿನ ಜೂನ್‌ ತಿಂಗಳ ಮಧ್ಯದಲ್ಲಿ ನಾನು ಯುವರಾಜ್‌ ಅಲಿಯಾಸ್‌ ಸ್ವಾಮಿ ಈತನನ್ನು ಹೊಂಬೇಗೌಡ ನಗರದಲ್ಲಿರುವ ಇಂದ್ರಕಲಾ ವಾಸದ ಮನೆಗೆ ಕರೆದುಕೊಂಡು ಹೋಗಿದ್ದಾಗ ಯುವರಾಜ್‌ ಅಲಿಯಾಸ್‌ ಸ್ವಾಮಿ ಇಂದ್ರಕಲಾ ಪರಿಚಯಿಸಿಕೊಂಡು ಅವರಿಗೆ ನಿಮಗೆ ಉಜ್ವಲ ಭವಿಷ್ಯವಿದೆ ನೀವು ಉನ್ನತ ಸ್ಥಾನಕ್ಕೆ ಹೋಗುತ್ತೀರಾ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆಯನ್ನು ಕೊಡಿಸುವ ಭರವಸೆಯನ್ನು ನಾನು ನೀಡುತ್ತೇನೆ ಎಂದು ತಿಳಿಸಿದ್ದ.

ರಾಜಕೀಯ ಪಕ್ಷಕ್ಕೆ ದೇಣಿಗೆ ಕೇಳಿದ್ದ

ಅಲ್ಲದೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆಯನ್ನು ಕೊಡಿಸುವ ಭರವಸೆಯನ್ನು ನಾನು ನೀಡುತ್ತೇನೆ ಎಂದು ತಿಳಿಸಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆಯನ್ನು ಕೊಡಿಸಲು ಕೇಂದ್ರದಲ್ಲಿರುವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಬೇಕು ಎಂದು ತಿಳಿಸಿದ್ದ. ಅದಕ್ಕೆ ಇಂದ್ರಕಲಾರವರು ಯುವರಾಜ್‌ನ ಮಾತನ್ನು ನಂಬಿ ದೇಣಿಗೆ ಕೊಡಲು ಒಪ್ಪಿ ಮತ್ತೊಂದು ದಿನ ಬರುವಂತೆ ತಿಳಿಸಿ ಕಳಿಸಿದ್ದರು ಎಂದು ಹೇಳಿಕೆಯಲ್ಲಿ ಪಾಪಯ್ಯ ವಿವರಿಸಿದ್ದಾರೆ.

ಇದಾದ ನಂತರ ಯುವರಾಜ್‌ ಅಲಿಯಾಸ್‌ ಸ್ವಾಮಿ 2018ರ ಜೂನ್‌ 25ರಂದು ಇಂದ್ರಕಲಾ ಕಡೆಯಿಂದ ಸುಮಾರು 2 ಕೋಟಿ ಹೆಚ್ಚು ಹಣವನ್ನು ದೆಹಲಿ ಮತ್ತು ಬೆಂಗಳೂಳರಿನ ನಾಗರಬಾವಿಯಲ್ಲಿರುವ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡ. ‘ಕೇಂದ್ರದಲ್ಲಿ ರಾಜಕೀಯ ಪಕ್ಷಕ್ಕೆ ದೇಣಿಗೆಯನ್ನು ನಗದು ರೂಪದಲ್ಲಿ ಕೊಡಬೇಕಾಗಿರುತ್ತದೆ. ನಾನು ನನ್ನ ಸ್ನೇಹಿತರ ಖಾತೆಗಳಿಗೆ ಜಮಾ ಮಾಡಿ ಅವರಿಂದ ನಗದಿಕರೀಸುತ್ತಿದ್ದೆ. ನಿಮ್ಮ ಖಾತೆಗೂ ಸಹ 35 ಲಕ್ಷ ರು.ಗಳನ್ನು ವರ್ಗಾವಣೆ ಮಾಡುತ್ತೇನೆ. ಆ ಹಣವನ್ನು ನನಗೆ ನಗದು ರೂಪದಲ್ಲಿ ನೀಡುವಂತೆ ತಿಳಿಸಿದಾಗ ನಾನು ಮೊದಲು ನಿರಾಕರಿಸಿದ್ದೆ,’ ಎಂದು ಹೇಳಿಕೆ ನೀಡಿರುವುದು ತಿಳಿದು ಬಂದಿದೆ.

ಇಂದ್ರಕಲಾರವರಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆ ಕೊಡಿಸಬೇಕಾದರೆ ಅವರಿಗೆ ನಾನು ದೇಣಿಗೆಯನ್ನು ನಗದು ರೂಪದಲ್ಲಿ ಕೊಡಬೇಕು. ತುರ್ತಾಗಿ 35 ಲಕ್ಷ ರು. ಗಳನ್ನು ನಗದು ರೂಪದಲ್ಲಿ ನೀಡುವಂತೆ ತಿಳಿಸಿದ್ದ. ಆಗ ನಾನು ತಿಪಟೂರಿನಲ್ಲಿರುವ ಎಸ್‌ಬಿಐ ಶಾಖೆಯ (ಖಾತೆ ಸಂಖ್ಯೆ 37059039833) ವಿವರವನ್ನು ನೀಡಿದ್ದೆ. ಯುವರಾಜ್‌ ಅಲಿಯಾಸ್‌ ಸ್ವಾಮಿ, ನಾಗರಬಾವಿಯಲ್ಲಿರುವ ಐಸಿಐಸಿಐ ಬ್ಯಾಂಕ್‌ ನ ಶಾಖೆಯಲ್ಲಿರುವ ತನ್ನ ಖಾತೆ ಸಂಖ್ಯೆ 369501500327ಯಿಂದ 2018 ಜೂನ್‌ 25ರಂದು 35 ಲಕ್ಷ ರು. ವರ್ಗಾವಣೆ ಮಾಡಿದ್ದ. ನಾನು ಈ ಹಣವನ್ನು 2018 ಜೂನ್‌ 28ರಂದು 15 ಲಕ್ಷ ರು.ಗಳನ್ನು ನನ್ನ ಬ್ಯಾಂಕ್‌ ಖಾತೆಯಿಂದ ಡ್ರಾ ಮಾಡಿಕೊಂಡು ಉಳಿದ ಹಣವನ್ನು ನನ್ನಸ್ನೇಹಿತರುಗಳಿಂದ ಕೈ ಸಾಲವಾಗಿ ಪಡೆದು ನಗದು ರೂಪದಲ್ಲಿ ಕೊಟ್ಟಿರುತ್ತೇನೆ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾನೆ.

ಇದಾದ ನಂತರ ಯುವರಾಜ್‌ ಅಲಿಯಾಸ್‌ ಸ್ವಾಮಿಯು ಇಂದ್ರಕಲಾರವರ ಮನೆಗೆ ಆಗಾಗ್ಗೆ ಹೋಗಿ ಕೇಂದ್ರ ಸರ್ಕಾರ ಮಟ್ಟದಲ್ಲಿ ಉನ್ನತ ಹುದ್ದೆಯನ್ನು ಕೊಡಿಸಲು ಮಾತುಕತೆ ಮಾಡುತ್ತಿದ್ದನಲ್ಲದೆ ಇನ್ನೂ ಹೆಚ್ಚಿನ ದೇಣಿಗೆಯನ್ನು ಕೇಳುತ್ತಿದ್ದಾರೆ ಎಂದು ಇಂದ್ರಕಲಾ ಅವರನ್ನು ಪುಸಲಾಯಿಸಿ ಅವರಿಂದ ಇನ್ನೂ ಹೆಚ್ಚಿನ ಹಣವನ್ನು ಆತನ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಹಲವಾರು ಬಾರಿ ಯುವರಾಜ್‌ ಅಲಿಯಾಸ್‌ ಸ್ವಾಮಿ ಈತನು ಇಂದ್ರಕಲಾರವರ ಮನೆಗೆ ಹೋಗಿ ಅವರು ಅವರ ಸಂಬಂಧಿಕರು ಮತ್ತು ಸ್ನೇಹಿತರುಗಳಿಂದ ಕೈ ಸಾಲವಾಗಿ ಪಡೆದು ನಗದು ರೂಪದಲ್ಲಿ ಇಂದ್ರಕಲಾ ಅವರು ಹಣ ಕೊಟ್ಟಿದ್ದರು ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಕರೆ ಸ್ವೀಕರಿಸದ ಯುವರಾಜಸ್ವಾಮಿ

ಇಂದ್ರಕಲಾರವರು ಸಾಲ ಪಡೆದುಕೊಂಡಿದ್ದ ಜನರು ಮನೆಯ ಬಳಿ ಬರಲು ಪ್ರಾರಂಭಿಸಿದಾಗ ಇಂದ್ರಕಲಾರವರು ನನ್ನನ್ನು ಕರೆಯಿಸಿದ್ದರು. ಯುವರಾಜ್‌ ಅಲಿಯಾಸ್‌ ಸ್ವಾಮಿ ತನ್ನಿಂದ ಮತ್ತು ತನ್ನ ಸ್ನೇಹಿತರು ಮತ್ತು ಸಂಬಂಧಿಕರುಗಳ ಖಾತೆಗಳ ಮೂಲಕ ಸುಮಾರು 3.77 ಕೋಟಿ ರು.ಗಳನ್ನು ವರ್ಗಾವಣೆ ಮಾಡಿಸಿಕೊಂಡಿರುವುದಾಗಿ ಹಾಗೂ ನಗದು ರೂಪದಲ್ಲಿ ಸುಮಾರು 4.5 ಕೋಟಿ ರು.ಗಳನ್ನು ಪಡೆದುಕೊಂಡು ಹೋಗಿದ್ದ. ಆದರೆ ಇನ್ನೂ ಯಾವುದೇ ಹುದ್ದೆಯನ್ನು ಕೊಡಿಸದೇ ಹಣವನ್ನು ವಾಪಸ್‌ ಕೊಡದೆ ಸತಾಯಿಸುತ್ತಿದ್ದ. ನಿಮಗೆ ಯುವರಾಜ್‌ ಅಲಿಯಾಸ್‌ ಸ್ವಾಮಿ ಪರಿಚಯವಿರುವುದರಿಂದ ಆತನಿಂದ ಹಣವನ್ನು ವಾಪಸ್‌ ಕೊಡಿಸಬೇಕು ಎಂದು ಇಂದ್ರಕಲಾ ಅವರು ನನಗೆ ತಿಳಿಸಿದರು. ನಾನು ಯುವರಾಜ್‌ ಸ್ವಾಮಿ ಈತನನ್ನು ಸಂಪರ್ಕಿಸಲು ಯತ್ನಿಸಿದಾಗ ನನ್ನ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ ಎಂದು ಹೇಳಿಕೆ ನೀಡಿರುವುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.

ಭೂ ಪರಿಹಾರದ ಹಣ ನೀಡಿದ್ದ ಪಾಪಯ್ಯ

ಆ ನಂತರ ಇಂದ್ರಕಲಾರವರು ತುರ್ತಾಗಿ ವಾಸುದೇವ್‌ ಮತ್ತು ಜಯದೇವ್‌ರಿಂದ ಸಾಲ ಪಡೆದುಕೊಂಡಿದ್ದರು. ಅವರು ಕೂಡ ಮನೆ ಹತ್ತಿರ ಬಂದು ಕೇಳುತ್ತಿದ್ದರು. ಈಗ ತನ್ನ ಬಳಿ ಅಷ್ಟು ಹಣವಿಲ್ಲ. ನಿಮ್ಮ ಬಳಿ ಇರುವ ಹಣ ಕೊಡಿ ನಾನು ವಾಪಸ್ಸು ಕೊಡುತ್ತೇನೆ ಎಂದು ನನಗೆ ತಿಳಿಸಿದ್ದರು. ಆಗ ನಾನು ಬ್ಯಾಂಕ್‌ನಲ್ಲಿ ಇಟ್ಟಿದ್ದ ಎಫ್‌ ಡಿ ಹಣ 7 ಲಕ್ಷ ರು.ಗಳನ್ನು ಡ್ರಾ ಮಾಡಿಕೊಂಡು ಮತ್ತು ನನ್ನ ಹೆಸರಿನಲ್ಲಿದ್ದ ತಿಪಟೂರು ತಾಲೂಕು ಹಿರೇಬಿದನೂರು ಗ್ರಾಮದಲ್ಲಿ ಭೂಮಿಯು ರಾಷ್ಟ್ರೀಯ ಹೆದ್ದಾರಿಗೆ ಸೇರಿಸಿಕೊಂಡಿದ್ದರಿಂದ ನನಗೆ ಪರಿಹಾರ ಧನದ ರೂಪದಲ್ಲಿ ಮಂಜೂರಾಗಿದ್ದ 6 ಲಕ್ಷ ರು.ಗಳ ಪೈಕಿ 5 ಲಕ್ಷ ರು.ಗಳನ್ನು ಡ್ರಾ ಮಾಡಿದ್ದೆ. ಅಲ್ಲದೆ ನನ್ನ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಅಡಮಾನ ಇಟ್ಟು 7 ಲಕ್ಷ ರು.ಗಳನ್ನು ಹಾಗೂ ಮನೆಯಲ್ಲಿ ಖರ್ಚಿಗಾಗಿ ಇಟ್ಟಿದ್ದ 2 ಲಕ್ಷ ರು ಗಳನ್ನು ಸೇರಿಸಿ ಒಟ್ಟು 21 ಲಕ್ಷ ರುಗಳನ್ನು ಇಂದ್ರಕಲಾ ಅವರು ತಿಳಿಸಿದಂತೆ ಜಯದೇವ್‌ ಎಂಬುವರಿಗೆ ನೀಡಿರುತ್ತೇನೆ ಎಂದು ವಿವರಿಸಿದ್ದಾನೆ.

ಪತ್ನಿ ಖಾತೆ ಮೂಲಕ ಹಣ ಜಮೆ

ಇದಲ್ಲದೆ ನನ್ನ ಪತ್ನಿ ಪೂರ್ಣಿಮಾ ಅವರು ಸಹ 1 ಲಕ್ಷ ರು.ಗಳನ್ನು ಅಕೌಂಟ್‌ ಮೂಲಕ ಇಂದ್ರಕಲಾ ಅವರ ಖಾತೆಗೆ ಜಮಾ ಮಾಡಿರುತ್ತಾರೆ. ತದನಂತರ ಇಂದ್ರಕಲಾ ಅವರು ವಾಸುದೇವ್‌ ಎಂಬುವರಿಗೆ 20 ಲಕ್ಷ ರು.ಗಳನ್ನು ನೀಡುವಂತೆ ತಿಳಿಸಿ 6 ಲಕ್ಷ ರು.ಗಳನ್ನು ನನಗೆ ನೀಡಿದ್ದರು. ಅಲ್ಲದೆ ಪಾಪಯ್ಯ ಅವರು ತಮ್ಮ ಸ್ನೇಹಿತರಿಂದ ಕೈಸಾಲ ಪಡೆದು 14 ಲಕ್ಷ ರು.ಗಳನ್ನು ಸೇರಿಸಿ ವಾಸುದೇವ್‌ ಎಂಬುವರಿಗೆ ನೀಡಿದ್ದರು ಎಂಬ ಮಾಹಿತಿ ಒದಗಿಸಿದ್ದಾರೆ.

the fil favicon

SUPPORT THE FILE

Latest News

Related Posts