ಬೆಂಗಳೂರು; ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ತೀವ್ರ ಅಸ್ವಸ್ಥರಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಸಂಗೀತ ಲೋಕದ ವಿಶ್ವ ಶ್ರೇಷ್ಠ ಸರೋದ್ ವಾದಕ ಪದ್ಮಶ್ರೀ ಪಂಡಿತ್ ರಾಜೀವ್ ತಾರಾನಾಥ್ ಅವರ ವೈದ್ಯಕೀಯ ಚಿಕಿತ್ಸೆ ವೆಚ್ಚಕ್ಕೆ ಸಂಬಂಧಿಸಿದ ಕಡತವು ಸಚಿವಾಲಯದಲ್ಲಿ ತೆವಳುತ್ತಲೇ ಇದೆ.
ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರು ಹೇಳಿಕೆ ನೀಡಿದ್ದರು. ಆದರೆ ಇದುವರೆಗೂ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು ಭರಿಸಿಲ್ಲ ಎಂದು ಗೊತ್ತಾಗಿದೆ.
ರಾಜೀವ್ ತಾರಾನಾಥ್ ಅವರ ವೈದ್ಯಕೀಯ ಚಿಕಿತ್ಸೆ ವೆಚ್ಚಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು (ಡಿಕೆಸಿ-13014/3/2024 (1417668) ಸಂಖ್ಯೆಯ ಜುಲೈ 2024ರಲ್ಲಿ ಏಕ ಕಡತ ತೆರೆದಿತ್ತು. ಆದರೆ ಇದುವರೆಗೂ ಕಡತಕ್ಕೆ ಮುಕ್ತಿ ಸಿಕ್ಕಿಲ್ಲ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ಜಿಲ್ಲೆಯ ಸಹಾಯಕ ನಿರ್ದೇಶಕರು ರಾಜೀವ್ ತಾರಾನಾಥ್ ಅವರ ಆಪ್ತರಾದ ಕೃಷ್ಣಮುನವಳ್ಳಿ ಅವರಿಂದ ಮಾಹಿತಿ ಮತ್ತು ದಾಖಲಾತಿಗಳನ್ನು ಪಡೆದಿದ್ದರು. ಅಲ್ಲದೆ 27,06,908 ರು.ಗಳ ಬಿಲ್‌ಗಳನ್ನು ಸಲ್ಲಿಸಿದ್ದರು. ಈ ವೆಚ್ಚವನ್ನು ಸಿಜಿಹೆಚ್‌ಎಸ್ ದರಗಳ ಅನ್ವಯ ಅರ್ಹ ಮೊತ್ತವನ್ನು ಅವರ ವಾರಸುದಾರರಿಗೆ ಪಾವತಿಸಲು ಸರ್ಕಾರದ ಹಂತದಲ್ಲಿ ತೀರ್ಮಾನಿಸಬೇಕು ಎಂದು ಸರ್ಕಾರಕ್ಕೆ ಕಡತವನ್ನು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.
ಕಲಾವಿದರ ಮತ್ತು ಸಾಹಿತಿಗಳ ವೈದ್ಯಕೀಯ ಚಿಕಿತ್ಸೆ ವೆಚ್ಚ ಮರುಪಾವತಿಗಾಗಿ ವೈದ್ಯಕೀಯ ಗುರುತಿನ ಚೀಟಿ ಪಡೆಯುವುದು ಕಡ್ಡಾಯವಾಗಿದೆ. ವೈದ್ಯಕೀಯ ಗುರುತಿನ ಚೀಟಿ ಪಡೆಯಲು 1.00 ಲಕ್ಷ ರು. ಆದಾಯ ಮಿತಿ ಹೊಂದಿರಬೇಕು ಎಂಬ ನಿಯಮವಿದೆ. ಆದರೆ ಪಂಡಿತ್ ರಾಜೀವ್ ತಾರಾನಾಥ್ ಅವರು ಇಲಾಖೆಯಿಂದ ವೈದ್ಯಕೀಯ ಗುರುತಿನ ಚೀಟಿಯನ್ನು ಪಡೆದಿಲ್ಲ ಎಂದು ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳು ಕಡತದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಸಾಹಿತಿ ಮತ್ತು ಕಲಾವಿದರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಲು ಸರ್ಕಾರವು ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಇದರ ಪ್ರಕಾರ ವೈದ್ಯಕೀಯ ವೆಚ್ಚ ಮರುಪಾವತಿ ಪಡೆಯಲು ಸಾಹಿತಿ, ಕಲಾವಿದರು ವೈದ್ಯಕೀಯ ಗುರುತಿನ ಚೀಟಿ ಪಡೆದಿರಬೇಕು. ಸಾಹಿತಿ, ಕಲಾವಿದರ ವಾರ್ಷಿಕ ಆದಾಯ ಮಿತಿ 1.00 ಲಕ್ಷ ರು.ಗಳನ್ನು ಮೀರುವಂತಿಲ್ಲ. ಇದಕ್ಕೆ ಆದಾಯ ಪ್ರಮಾಣ ಸಲ್ಲಿಸಬೇಕು. ಸಾಹಿತಿ, ಕಲಾವಿದರು ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರಬೇಕು. ಅವರು ಪ್ರಶಸ್ತಿಗಳನ್ನು ಪಡೆದ ದಾಖಲಾತಿಗಳನ್ನು (ಸನ್ಮಾನದ ಭಾವಚಿತ್ರ, ಪ್ರಶಸ್ತಿ ಫಲಕದ ಭಾವಚಿತ್ರ, ಪ್ರಮಾಣಪತ್ರದ ಭಾವಚಿತ್ರ ) ಸಲ್ಲಿಸಬೇಕು.
ಅದೇ ರೀತಿ ಸಾಹಿತಿ ಮತ್ತು ಕಲಾವಿದರು ಚಿಕಿತ್ಸೆ ಪಡೆದಿರುವ ಆಸ್ಪತ್ರೆಯು ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರದ ಅಂಗೀಕೃತವಾದ ಖಾಸಗಿ ಆಗಿರಬೇಕು ಎಂದು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಕನ್ನಡ ಸಂಸ್ಕೃತಿ ಇಲಾಖೆಯು ಕಡತವನ್ನು ಜುಲೈನಲ್ಲಿ ತೆರೆದಿತ್ತು.
ಸದ್ಯ ಈ ಕಡತವು 2024ರ ಅಕ್ಟೋಬರ್ 19ರ ಅಂತ್ಯಕ್ಕೆ ಆರ್ಥಿಕ ಇಲಾಖೆಯಲ್ಲಿದೆ.
ರಾಜೀವ್ ತಾರಾನಾಥ್ ಅವರು ಮೈಸೂರಿನ ಕುವೆಂಪು ನಗರದಲ್ಲಿರುವ ಅವರ ನಿವಾಸದಲ್ಲಿ ಕುರ್ಚಿಯಿಂದ ಮೇಲೇಳುವಾಗ ಕುಸಿದು ಬಿದ್ದು ಎಡಗಾಲಿನ ತೊಡೆಯ ಮೂಳೆ ಮುರಿದಿತ್ತು. ಅಂದೇ ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಕೂಡಲೇ ಚಿಕಿತ್ಸೆ ಕೊಡಿಸಿದ್ದರು.
ಆಂದೋಲನ ವರದಿ ಫೇಕ್ ನ್ಯೂಸ್ ಪೋಸ್ಟರ್; ಮಾಹಿತಿಯೇ ಇಲ್ಲವೆಂದ ಇಲಾಖೆ, ಲಾಂಛನ ದುರ್ಬಳಕೆಯಾಗಿದ್ದರೂ ಮೌನ
ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿಯೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪ ಅವರು ಭೇಟಿ ಮಾಡಿ ಅರೋಗ್ಯ ವಿಚಾರಿಸಿದ್ದರು.
ಫೇಕ್ ನ್ಯೂಸ್ ಪೋಸ್ಟರ್; ಸಿಎಂ ಮಾಧ್ಯಮ ಸಲಹೆಗಾರ, ವಾರ್ತಾಧಿಕಾರಿ ಕಚೇರಿಯಲ್ಲಿಯೂ ಮಾಹಿತಿಯಿಲ್ಲ
ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಜೀವ್ ತಾರಾನಾಥ್ ಅವರು ನಿಧನರಾಗಿದ್ದರು.