ಕಳಪೆ ಕಾಮಗಾರಿ, ಕಳಪೆ ಗುಣಮಟ್ಟದ ಸಾಮಗ್ರಿಗಳ ಬಳಕೆ; ನಂದಿ ಸಕ್ಕರೆ ಕಾರ್ಖಾನೆಗೆ 123.56 ಕೋಟಿ ನಷ್ಟ

ಬೆಂಗಳೂರು; ಕಳಪೆ ಕಾಮಗಾರಿ ಮತ್ತು ಕಳಪೆ ಗುಣಮಟ್ಟದ ಸಾಮಗ್ರಿಗಳ ಬಳಕೆಯೇ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್‍‌ ಸ್ಫೋಟಕ್ಕೆ ಮತ್ತು ಯಂತ್ರೋಪಕರಣಗಳು ಜಖಂಗೊಳ್ಳಲು ಮೂಲ ಕಾರಣ. ಇದರಿಂದಾಗಿ ಕಾರ್ಖಾನೆಗೆ 123.56 ಕೋಟಿ ನಷ್ಟವುಂಟಾಗಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ ನಿರ್ದೇಶನಾಲಯ ಮತ್ತು ಎಸ್‌ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು ನೀಡಿರುವ ವರದಿಯು ಪತ್ತೆ ಹಚ್ಚಿದೆ.

 

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ 2024ರ ಜುಲೈನಲ್ಲಿ ಸಂಭವಿಸಿದ್ದ ಬಾಯ್ಲರ್‍‌ ಸ್ಪೋಟಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿ ಆಧರಿಸಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 64 ಅಡಿ ಶಾಸನಬದ್ಧ ವಿಚಾರಣೆ ನಡೆಸಲು ಸರ್ಕಾರವು ಆದೇಶ ಹೊರಡಿಸಿದೆ. ಆದೇಶವನ್ನು ಸಚಿವ ಶಿವಾನಂದ ಎಸ್ ಪಾಟೀಲ್‌ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ಅಲ್ಲದೇ ಇದೇ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಇನ್ನಿತರ ಅವ್ಯವಹಾರಗಳ ಕುರಿತೂ ತನಿಖೆ ನಡೆಸಬೇಕು ಎಂದು ಆದೇಶದಲ್ಲಿ ಸೂಚಿಸಿರುವುದು ಗೊತ್ತಾಗಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಹಂಗಾಮಿಗೆ ಕಬ್ಬು ನುರಿಸಲು ಕಾರ್ಖಾನೆಯ ಯಂತ್ರಗಳನ್ನು ಸಿದ್ಧತೆ ಮಾಡುವ ವೇಳೆ ಬಾಯ್ಲರ್‍‌ ಸ್ಪೋಟವಾಗಿದೆ. 2023ರ ಮಾರ್ಚ್‌ 4ನಲ್ಲೂ ಇದೇ ಸಕ್ಕರೆ ಕಾರ್ಖಾನೆಯ ಮತ್ತೊಂದು ಬಾಯ್ಲರ್‍‌ ಸ್ಫೋಟವಾಗಿ ಒಬ್ಬ ಕಾರ್ಮಿಕ ಸಾವಿಗೀಡಾಗಿದ್ದ. ನಾಲ್ಕು ಜನ ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದವು.

 

ಹಿಂದಿನ ಆಡಳಿತ ಮಂಡಳಿಯು ಕಳಪೆ ಗುಣಮಟ್ಟದ ಬಾಯ್ಲರ್‍‌ ಕೂರಿಸಿರುವುದೇ ಸ್ಫೋಟಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. 50 ಕೋಟಿ ವೆಚ್ಚದಲ್ಲಿ ಬಾಯ್ಲರ್‍‌ಗಳನ್ನು ನಿರ್ಮಾಣ ಮಾಡಿತ್ತು. ತಾಂತ್ರಿಕ ಅನುಭವ ಇಲ್ಲದ ಪುಣೆ ಮೂಲದ ಎಸ್‌ ಎಸ್‌ ಇಂಜಿನಿಯರಿಂಗ್‌ ಅವರಿಂದ ಮಾಡಿಸಿರುವುದೇ ಸ್ಪೋಟಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿತ್ತು.

 

ತನಿಖೆ ವ್ಯಾಪ್ತಿಯಲ್ಲೇನಿದೆ?

 

ವಿಸ್ತರಣೆ ಯೋಜನೆ ಬಾಯ್ಲರ್‍‌ ಖರೀದಿಯಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಐಎಸ್‌ಜಿಇಸಿ ಕಂಪನಿ ಬದಲಾಯಿಸಲಾಗಿತ್ತು. ಟೆಂಡರ್‍‌ನಲ್ಲಿ ಅರ್ಹತೆ ಇಲ್ಲದೇ ಇರುವ ಎಸ್‌ ಎಸ್‌ ಇಂಜಿನಿಯರ್‍‌ ಕಂಪನಿಗೆ ಟೆಂಡರ್‍‌ ನೀಡಲಾಗಿತ್ತು. ಬಾಯ್ಲರ್‍‌ ಅನುಷ್ಠಾನ ಆಡಿದ ಎಸ್‌ ಎಸ್‌ ಇಂಜಿನಿಯರ್ಸ್‌ಗೆ ಟೆಂಡರ್‍‌ ನೀಡಿ ಒಪ್ಪಂದ ಮಾಡಿಕೊಂಡ ನಂತರ 14 ತಿಂಗಳುಗಳಲ್ಲಿ ಯಂತ್ರೋಪಕರಣಗಳ ಸರಬರಾಜು ಮತ್ತು ಜೋಡಣೆ ಕೆಲಸವು 4 ವರ್ಷಗಳು ಕಳೆದರೂ ಪೂರ್ಣಗೊಳ್ಳದಿರುವ ಕುರಿತು ತನಿಖೆ ನಡೆಸಲು ಆದೇಶದಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.

 

ಬಾಯ್ಲರ್‍‌ಗಾಗಿ ಪೂರೈಕೆ ಮಾಡಿದ್ದ ಸ್ಟೀಲ್‌ ಮತ್ತು ಇತರೆ ಯಂತ್ರೋಪಕರಣಗಳ ಗುಣಮಟ್ಟ ಒಪ್ಪಂದದಲ್ಲಿರುವಂತೆ ಐಎಸ್‌ ಗುಣಮಟ್ಟದ ಪ್ರಕಾರ ಇದೆಯೇ ಇಲ್ಲವೇ ಎಂಬ ಕುರಿತು ಪರೀಕ್ಷಿಸಬೇಕು. ಆಡಳಿತ ಮಂಡಳಿಯ ಅನುಮತಿ ಇಲ್ಲದೆಯೇ ಹಲವು ಯಂತ್ರೋಪಕರಣಗಳ ಬದಲಾವಣೆ ಮಾಡಿ ಅದರ ಆರ್ಥಿಕ ಪರಿಣಾಮಗಳನ್ನು ಪರಿಗಣಿಸಸದೇ ಇರುವುದರ ಕುರಿತು ತನಿಖೆ ನಡೆಸಲು ನಿರ್ದೇಶಿಸಿದೆ.

 

ಒಪ್ಪಂದ ಉಲ್ಲಂಘನೆ ಮಾಡಿ ಬಾಯ್ಲರ್‍‌ ಪೂರೈಕೆದಾರರಿಗೆ ಮುಂಗಡವಾಗಿ ಹಣ ಪಾವತಿಸಲಾಗಿದೆ. ವಿಸ್ತರಣಾ ಯೋಜನೆಯ ಮಿಲ್‌ ಮತ್ತು ಬಾಯ್ಲಿಂಗ್‌ ಹೌಸ್‌ ಪೂರೈಕೆದಾರ ಉಲ್ಟ್ರಾ ಇಂಡಸ್ಟ್ರೀಸ್‌ ಒಪ್ಪಂದದ ಪ್ರಕಾರ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ 4 ವರ್ಷ ಪೂರ್ಣಗೊಂಡರೂ ಸಹ ಕಾಮಗಾರಿ ಪೂರ್ಣಗೊಳಿಸಿಲ್ಲ. ಈ ಕುರಿತು ವಿಚಾರಣೆ ನಡೆಸಬೇಕು ಎಂದು ಆದೇಶದಲ್ಲಿ ಸೂಚಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ಯಂತ್ರೋಪಕರಣ ಪೂರೈಕೆ ಮಾಡಿದ 10 ದಿನಗಳ ನಂತರ ಹಣ ಪಾವತಿಸಬೇಕಿತ್ತು. ಯಂತ್ರೋಪಕರಣಗಳ ಪೂರೈಕೆ ಮಾಡುವ ಮೊದಲೇ ಪ್ರೊಫಾರ್ಮ ಇನ್‌ವಾಯ್ಸ್‌ ಮೇಲೆ ಮುಂಗಡವಾಗಿ ಹಣ ಪಾವತಿಸಲಾಗಿತ್ತು. ಕಾರ್ಖಾನೆಯಿಂದ ಪಾವತಿಸಿದ್ದ 3.00 ಕೋಟಿ ಮೊತ್ತದ ಯಂತ್ರೋಪಕರಣಗಳ ಸರಬರಾಜು ಮತ್ತು ಜೋಡಣೆ ಕಾರ್ಯ ಇದುವರೆಗೂ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ 4.5 ಕೋಟಿ ರು.ಗಳ ಹೆಚ್ಚುವರಿ ಹಣವನ್ನು ಸರಬರಾಜುದಾರರಿಗೆ ಪಾವತಿಸಿತ್ತು.

 

ಕಾರ್ಖಾನೆಯ ಪ್ರಾರಂಭದ ನಂತರ ಬ್ಯಾಂಕ್‌ ಗ್ಯಾರಂಟಿ ಪಡೆಯಬೇಕಿತ್ತು. 9.15 ಕೋಟಿ ಮೊತ್ತವನ್ನು ಕಾರ್ಪೋರೇಟ್‌ ಗ್ಯಾರಂಟಿಯ ಮೇಲೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಪಾವತಿಸಿತ್ತು. ಹಾಗೂ ಪೂರೈಕೆದಾರರಿಂದ ಕಾರ್ಪೋರೇಟ್‌ ಗ್ಯಾರಂಟಿ ಅವಧಿಯ ಚೆಕ್‌ನ್ನು ಪಡೆದಿರಲಿಲ್ಲ.

 

ಈ ಎಲ್ಲಾ ಆರೋಪಗಳ ಕುರಿತು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 64 ಅಡಿ ವಿಚಾರಣೆ ನಡೆಸಬೇಕು ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಆದೇಶದಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts