ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ; 2,494 ದೂರು ದಾಖಲು

ಬೆಂಗಳೂರು; ಸುಳ್ಳು ಜಾತಿ ಪ್ರಮಾಣ ಪತ್ರ, ಜಮೀನು ವ್ಯಾಜ್ಯ, ಪರಿಶಿಷ್ಟರ ಮೇಲಿನ ದೌರ್ಜನ್ಯ ಸೇರಿದಂತೆ ಇನ್ನಿತರ ವಲಯಗಳಲ್ಲಿನ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 2020-21ನೇ ಸಾಲಿನ ಜೂನ್‌ 2021ರ ಅಂತ್ಯಕ್ಕೆ ಒಟ್ಟಾರೆ 2,494 ದೂರುಗಳು ದಾಖಲಾಗಿವೆ.

ದೀನ ದಲಿತರ ಏಳ್ಗೆಗಾಗಿ ದುಡಿಯುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ ನಂತರ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ವಾರ್ಷಿಕ ವರದಿಯಲ್ಲಿನ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ. 2020-21ನೇ ಸಾಲಿನ ವಾರ್ಷಿಕ ವರದಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಹಿಂದುಳಿದ ವರ್ಗದ ಜನರ ಅದರಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ವಿಶೇಷ ಗಮನಹರಿಸಿ ಸಾಮಾಜಿಕ ನ್ಯಾಯ ಮತ್ತು ಇತರೆ ದೌರ್ಜನ್ಯಗಳಿಂದ ಪೂರ್ಣ ಮತ್ತು ನಿರ್ದಿಷ್ಟ ರಕ್ಷಣೆ ನೀಡಬೇಕು ಎಂದು ಸಂವಿಧಾನದ ಅನುಚ್ಛೇದ 46ರಲ್ಲಿ ಸ್ಪಷ್ಟವಾಗಿ ವಿವರಿಸಿದ್ದರೂ ರಾಜ್ಯದಲ್ಲಿ ಮಾತ್ರ ದೌರ್ಜನ್ಯ ಪ್ರಕರಣಗಳ ಸಂಬಂಧ ಸಲ್ಲಿಕೆಯಾಗುತ್ತಿರುವ ದೂರುಗಳ ಸಂಖ್ಯೆ ಹೆಚ್ಚಿದೆ.

ಅಲ್ಲದೆ ಸಮಾಜ ಕಲ್ಯಾಣ ಇಲಾಖೆಗಾಗಿ ಪಟ್ಟು ಹಿಡಿದು ಕಡೆಗೆ ಯಶಸ್ವಿಯೂ ಆಗಿದ್ದ ಬಿ ಶ್ರೀರಾಮುಲು ಮತ್ತು ಆಯೋಗದ ಅಧ್ಯಕ್ಷ ನೆಹರೂ ಓಲೆಕಾರ ಅವರ ಕಾರ್ಯವೈಖರಿಗೆ ಈ ವರದಿಯು ಕನ್ನಡಿ ಹಿಡಿದಂತಾಗಿದೆ.

ಕಾಯ್ದೆ ಸಂಬಂಧ ವ್ಯಾಪಕವಾಗಿ ಪ್ರಚಾರಗೊಳಿಸಿದ್ದರೂ ದೌರ್ಜನ್ಯ, ಭೂ ವಿವಾದ, ಅನಧಿಕೃತ ಸಾಗುವಳಿ, ಸೇವಾ ನಿಯಮಗಳ ಉಲ್ಲಂಘನೆ, ಮೀಸಲಾತಿ, ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿ ಕುರಿತು ರಾಜ್ಯದಾದ್ಯಂತ ಹಲವು ದೂರುಗಳು ಸಲ್ಲಿಕೆಯಾಗುತ್ತಲೇ ಇವೆ. ಆಯೋಗದ ಅಧಿನಿಯಮದ 2002ರ ಪ್ರಕರಣ 8 ಮತ್ತು ನಿಯಮ 10 ರ ಅನ್ವಯ ಅರ್ಜಿದಾರರಿಗೆ ಹಾಗೂ ಸಂಬಂಧಪಟ್ಟ ಪ್ರತಿವಾದಿಗಳಿಗೆ ಸಮನ್ಸ್‌ ಜಾರಿ ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಆಯೋಗದ ಕಾರ್ಯದರ್ಶಿ ಅವರು ವರದಿಯಲ್ಲಿ ವಿವರಿಸಿದ್ದಾರೆ.

2,494 ದೂರುಗಳು ದಾಖಲು

ಜಮೀನು, ದೌರ್ಜನ್ಯ, ಸೇವೆ, ಇತರೆ, ಶೇ.24.10, ಸುಳ್ಳು ಜಾತಿ ಪ್ರಮಾಣ ಪತ್ರ ಸಂಬಂಧ 2020-21ನೇ ಸಾಲಿನ ಜೂನ್‌ ಅಂತ್ಯಕ್ಕೆ 2,494 ದೂರುಗಳನ್ನು ಆಯೋಗವು ಸ್ವೀಕರಿಸಿದೆ. ಈ ಪೈಕಿ ಪರಿಶಿಷ್ಟ ಜಾತಿ ವರ್ಗದಲ್ಲಿ 2,222 ಮತ್ತು ಪರಿಶಿಷ್ಟ ಬುಡಕಟ್ಟು ವರ್ಗದಲ್ಲಿ 272 ದೂರುಗಳು ಸೇರಿರುವುದು ವಾರ್ಷಿಕ ವರದಿಯಿಂದ ತಿಳಿದು ಬಂದಿದೆ.

ಈ ಪೈಕಿ ಜಮೀನು ವ್ಯಾಜ್ಯ ಪ್ರಕರಣಗಳ ಸಂಖ್ಯೆ 654, ದೌರ್ಜನ್ಯ 774, ಸೇವೆ 459, ಇತರೆ 520, ಶೇ.24.10 ವರ್ಗದಲ್ಲಿ 60, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಪ್ರಕರಣಗಳ ಸಂಬಂಧ 27 ದೂರುಗಳು ಸಲ್ಲಿಕೆಯಾಗಿದೆ. ಜಮೀನು ವ್ಯಾಜ್ಯ, ಸುಳ್ಳು ಜಾತಿ, ದೌರ್ಜನ್ಯ, ಸೇವೆ, ಇತರೆ ಪ್ರಕರಣಗಳಲ್ಲಿ ದಾಖಲಾಗಿರುವ ದೂರುಗಳ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯವರಲ್ಲೇ ಹೆಚ್ಚಿರುವುದು ವರದಿಯಿಂದ ಗೊತ್ತಾಗಿದೆ.

ವಿಚಾರಣೆ ನಿರ್ದೇಶನಕ್ಕಾಗಿ ಕಾಯುತ್ತಿವೆ 1,474 ಕಡತಗಳು

ಜಮೀನು, ದೌರ್ಜನ್ಯ, ಸುಳ್ಳು ಜಾತಿ ಪ್ರಮಾಣ ಪತ್ರ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಸಲ್ಲಿಕೆಯಾಗಿರುವ ದೂರುಗಳ ವಿಚಾರಣೆಯಲ್ಲಿಯೂ ಆಯೋಗವು ತೆವಳುತ್ತಿದೆ. ಜೂನ್‌ 2021ರ ಅಂತ್ಯಕ್ಕೆ ಒಟ್ಟಾರೆ 1,474 ಪ್ರಕರಣಗಳು ವಿಚಾರಣೆಯ ನಿರ್ದೇಶನಕ್ಕಾಗಿ ಕಾಯುತ್ತಿವೆ. ವಿಚಾರಣಾ ಕಡತಗಳ ಪೈಕಿ 1,159 ಕಡತಗಳು ಮತ್ತು ನಿರ್ದೇಶನಕ್ಕಾಗಿ ಕಾಯ್ದಿರಿಸಿರುವ 244 ಕಡತಗಳು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುವುದು ವರದಿಯಿಂದ ತಿಳಿದು ಬಂದಿದೆ.

ಇನ್ನು, ದಾಖಲಾಗಿರುವ ದೂರುಗಳ ವಿಚಾರಣೆ ನಡೆಸಿರುವ ಆಯೋಗವು ಜೂನ್‌ 2021ರ ಅಂತ್ಯಕ್ಕೆ ಒಟ್ಟಾರೆ 826 ಪ್ರಕರಣಗಳನ್ನಷ್ಟೇ ಮುಕ್ತಾಯಗೊಳಿಸಿದೆ. ಇದರಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 148 ಪ್ರಕರಣಗಳಿದ್ದರೆ ದೌರ್ಜನ್ಯಕ್ಕೆ ಸಂಬಂಧಿಸಿದ 207, ಸೇವೆ 297, ಇತರೆ 163, ಶೇ.24.10 ರಲ್ಲಿ 7, ಸುಳ್ಳು ಜಾತಿ ಪ್ರಮಾಣ ಪತ್ರ ಸಂಬಂಧ 4 ಪ್ರಕರಣಗಳನ್ನಷ್ಟೇ ಆಯೋಗವು ಮುಕ್ತಾಯಗೊಳಿಸಿದೆ.

ರಾಜ್ಯದಲ್ಲಿ ಕಳೆದೊಂದು ವರ್ಷದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿವೆ. ಈ ಪೈಕಿ, ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ.

ಪರಿಶಿಷ್ಟ ಜಾತಿ, ಪಂಗಡ ಸಮುದಾಯ ಅಭಿವೃದ್ಧಿಗಾಗಿ ಅನುದಾನ, ನೆರವು, ಸಹಕಾರ ಮತ್ತು ಮೀಸಲಾತಿ ನೀತಿಗಳಿದ್ದರೂ ಪರಿಶಿಷ್ಟರ ಮೇಲೆ ದೌರ್ಜನ್ಯ ನಿಂತಿಲ್ಲ ಮತ್ತು ವಂಚನೆಯೂ ತಪ್ಪಿಲ್ಲ. ಈ ಸಮುದಾಯಗಳ ರಕ್ಷಣೆಗಾಗಿ ಇರುವ ಕಾನೂನು ಇದ್ದರೂ ಅದನ್ನು ಅನುಷ್ಠಾನ ಮಾಡುವ ಮನಸ್ಸುಗಳಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಕಾಯ್ದೆಗಳ ಅನುಷ್ಠಾನವು ಪರಿಣಾಮಕಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ ಸಿ ಎಸ್‌ ದ್ವಾರಕಾನಾಥ್‌.

ಕಳೆದ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೇ 670 ಪ್ರಕರಣಗಳು ದಾಖಲಾಗಿದ್ದವು. ವಿಜಯಪುರದಲ್ಲಿ ಅತಿ ಹೆಚ್ಚು, 70 ಪ್ರಕರಣಗಳು ದಾಖಲಾಗಿವೆ. ಚಿತ್ರದುರ್ಗ, ರಾಮನಗರ, ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ದೌರ್ಜನ್ಯಗಳು ನಡೆದಿಲ್ಲ. 2017 ಮತ್ತು 2018ರಲ್ಲಿ ಹೆಚ್ಚಿನ ಪ್ರಕರಣಗಳಿಗೆ ಸಾಕ್ಷಿಯಾಗಿದ್ದ ರಾಯಚೂರು, ಅತ್ಯಾಚಾರ ಪ್ರಕರಣಗಳಲ್ಲೂ ಸತತ ಎರಡು ವರ್ಷ ಮೊದಲ ಸ್ಥಾನದಲ್ಲಿತ್ತು. 2019ರಲ್ಲಿ ಕೊಪ್ಪಳ ಆ ಸ್ಥಾನಕ್ಕೇರಿದ್ದನ್ನು ಸ್ಮರಿಸಬಹುದು.

ದಲಿತ ಮಹಿಳೆಯರ ಮೇಲೆ ದೌರ್ಜನ್ಯ, ಕೃಷಿ ಕಾರ್ಮಿಕರ ವ್ಯಾಜ್ಯಗಳು, ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಾಗುತ್ತಿದೆಯೇ ವಿನಃ ಕಡಿಮೆಯಾಗುತ್ತಿಲ್ಲ. ಹೀಗಾಗಿ ಬದ್ಧತೆ ಮತ್ತು ಕಾಳಜಿ ಇರುವವರನ್ನು ಆಯೋಗಕ್ಕೆ ನೇಮಿಸಬೇಕು. ಇದು ಸಾಧ್ಯವಾದಾಗ ಮಾತ್ರ ಸ್ವಲ್ಪ ಮಟ್ಟದ ಬದಲಾವಣೆ ಸಾಧ್ಯ. ಇಲ್ಲದಿದ್ದಲ್ಲಿ ಇದೊಂದು ಕಣ್ಣೊರೆಸುವ ಯತ್ನವಷ್ಟೇ. ಎಸ್‌ಸಿಪಿ ಟಿಎಸ್‌ಪಿ ಅನುದಾನವಿದೆ, ಅದನ್ನು ಯಾವ ಉದ್ದೇಶಳಿಗೆ ಖರ್ಚು ಮಾಡಲಾಗುತ್ತಿದೆ, ದುರುಪಯೋಗವಾಗುತ್ತಿದ್ದರೂ ಕ್ರಮವೇಕಿಲ್ಲ, ಬಗರ್‌ ಹುಕುಂ ಬಗ್ಗೆ ಏನಾದರೂ ಕ್ರಮ ಕೈಗೊಂಡಿದೆಯೇ, ಭೂ ರಹಿತರ ಪಾಡನ್ನು ಯಾರು ಕೇಳುತ್ತಿದ್ದಾರೆ ಇಂತಹ ಹಲವು ಪ್ರಶ್ನೆಗಳು ಈಗಲೂ ನಮ್ಮ ಎದುರಿನಲ್ಲಿವೆ.

ಸಿ ಎಸ್‌ ದ್ವಾರಕಾನಾಥ್‌, ಮಾಜಿ ಅಧ್ಯಕ್ಷರು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ

ಸರ್ಕಾರ ಇತ್ತೀಚೆಗೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2015–2019ರ ಅವಧಿಯಲ್ಲಿ 35,091 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 6,461 ಪ್ರಕರಣಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. 3,198 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದು, 134 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.

ಎನ್‌ಸಿಆರ್‌ಬಿ ಮಾಹಿತಿಯ ಪ್ರಕಾರ, 2019 ರಲ್ಲಿ ಪರಿಶಿಷ್ಟ ಜಾತಿಗಳ ಮೇಲೆ ದೌರ್ಜನ್ಯ ನಡೆದಿದೆ ಎಂದು ಒಟ್ಟು 45,935 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಎಸ್‌ಸಿ / ಎಸ್‌ಟಿ (ದೌರ್ಜನ್ಯ ತಡೆ ಕಾಯ್ದೆ) ಯ ಅಡಿಯಲ್ಲಿ ಬರುವ ಎಲ್ಲಾ ಐಪಿಸಿ ಅಪರಾಧಗಳು ಕೂಡಾ ಸೇರಿದ್ದವು.

the fil favicon

SUPPORT THE FILE

Latest News

Related Posts