Bank Information

PARADARSHAK MEDIA FOUNDATION, Account Number: 40107584055, SBI,Mahalalakshmipuram branch IFSC Code : SBIN0017347 Bengaluru

ವಿಧಾನಪರಿಷತ್‌ನಲ್ಲಿ ಅಧಿಕಾರಶಾಹಿಯ ‘ಹೊರಗುತ್ತಿಗೆ’ ವ್ಯವಹಾರ; ಸಭಾಪತಿಗಳ ಗಮನಕ್ಕೂ ಬರುವುದಿಲ್ಲ!

ಬೆಂಗಳೂರು; ಚಿಂತಕರ ಚಾವಡಿ ಎಂದೇ ಕರಯಲ್ಪಡುವ ಕರ್ನಾಟಕ ವಿಧಾನಪರಿಷತ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಸಿಬ್ಬಂದಿ ನೇಮಕಾತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೇ ತಮಗೆ ಬೇಕಾದವರಿಗೆ ನೌಕರಿ ಕೊಡಿಸುತ್ತಿದ್ದಾರೆ. ಆರ್ಥಿಕ ಇಲಾಖೆ ಅನುಮತಿ ಇಲ್ಲದೆಯೇ ಹೆಚ್ಚುವರಿ ವೇತನ ಪಾವತಿಸುತ್ತಾರೆ. ಆದರೆ ಇದಾವುದೂ ಸಭಾಪತಿಗಳ ಗಮನಕ್ಕೆ ಬರುವುದೇ ಇಲ್ಲ.

ನಿಯಮಗಳ ಉಲ್ಲಂಘನೆ ಆಗುತ್ತಿದ್ದರೂ ಸಭಾಪತಿಗಳ ಗಮನಕ್ಕೂ ಬರದಂತೆ ನೋಡಿಕೊಳ್ಳುತ್ತಿರುವ ಪರಿಷತ್‌ನ ಅಧಿಕಾರಶಾಹಿ ಮನಸೋ ಇಚ್ಛೇ ದರ್ಬಾರು ನಡೆಸುತ್ತಿದೆ!

ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಾಗಿರುವ ಅಪರಾತಪರಾಗಳು ಮತ್ತು ಕನಿಷ್ಠ ವೇತನ ಕಾಯ್ದೆ ಉಲ್ಲಂಘಿಸಿ ಹೆಚ್ಚುವರಿ ವೇತನ ಪಾವತಿಸಿ ಪರಿಷತ್‌ ಬೊಕ್ಕಸಕ್ಕೆ 48 ಲಕ್ಷ ರು. ನಷ್ಟ ಸಂಭವಿಸಿರುವ ಪ್ರಕರಣವೇ ಉತ್ತಮ ನಿದರ್ಶನ.

ಪರಿಷತ್‌ ಸಚಿವಾಲಯದಲ್ಲಿ ಡೇಟಾ ಎಂಟ್ರಿ ಆಪರೇಟರ್‌ ಸೇರಿದಂತೆ ಇನ್ನಿತರೆ ಹುದ್ದೆಗಳನ್ನು ಕಿಯೋನಿಕ್ಸ್‌ನಿಂದ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ಒಡಂಬಡಿಕೆ ಮುಕ್ತಾಯಗೊಂಡಿದ್ದರೂ ಅದನ್ನು ನವೀಕರಿಸದೇ ತಮ್ಮ ಆಪ್ತೇಷ್ಠರನ್ನು ಮುಂದುವರೆಸಿ ಮತ್ತು ಅವರಿಗೆ ಹೆಚ್ಚುವರಿ ವೇತನ ಪಾವತಿಸುತ್ತಿದ್ದ ಸಂಗತಿ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಗಮನಕ್ಕೂ ಬಂದಿರಲಿಲ್ಲ. ಹೀಗೆಂದು ಖುದ್ದು ಹೊರಟ್ಟಿ ಅವರೇ ಪರಿಷತ್‌ನ ಮಾಜಿ ಸದಸ್ಯ ರಮೇಶ್‌ ಬಾಬು ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಡೇಟಾ ಎಂಟ್ರಿ ಆಪರೇಟರ್‌ಗಳ ಕರಾರು ಒಪ್ಪಂದವು 2021ರ ಫೆ.28ರಂದು ಮುಕ್ತಾಯವಾಗಿದ್ದು ಇದು ಹಿಂದಿನ ಸಭಾಪತಿಗಳ ಗಮನಕ್ಕಾಲೀ ನನ್ನ ಗಮನಕ್ಕಾಗಲೀ ಬಂದಿರುವುದಿಲ್ಲ,’ ಎಂದು ಹೊರಟ್ಟಿ ಅವರು ಪತ್ರದಲ್ಲಿ ಪ್ರಸ್ತಾಪಿಸಿರುವುದು ಅಧಿಕಾರಿಶಾಹಿಯ ದರ್ಬಾರಿಗೆ ಹಿಡಿದ ಕೈಗನ್ನಡಿಯಾಗಿದೆ.

ಒಡಂಬಡಿಕೆ ಪೂರ್ಣಗೊಂಡು 4 ತಿಂಗಳಾದರೂ ಡೇಟಾ ಆಪರೇಟರ್‌ಗಳನ್ನು ಹೆಚ್ಚುವರಿ ವೇತನದಲ್ಲಿಯೇ ಮುಂದುವರೆಸುವ ಮೂಲಕ ಅಧಿಕಾರಶಾಹಿ ಸ್ವಜನಪಕ್ಷಪಾತದಲ್ಲಿ ನಿರತವಾಗಿತ್ತು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸುವವರೆಗೂ ಸಭಾಪತಿಗಳ ಗಮನಕ್ಕೆ ಬಂದಿರಲಿಲ್ಲ.

ಪ್ರಕರಣದ ಹಿನ್ನೆಲೆ

ಜ್ಯೂನಿಯರ್‌ ಪ್ರೋಗ್ರಾಮರ್‌, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌, ಕಂಪ್ಯೂಟರ್‌ ಆಪರೇಟರ್ಸ್‌, ಡಿಟಿಪಿ ಆಪರೇಟರ್ಸ್‌ಗಳನ್ನು ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿರುವ ಪರಿಷತ್‌ ಸಚಿವಾಲಯವು ಕನಿಷ್ಠ ವೇತನ ಕಾಯ್ದೆಗಿಂತಲೂ ಹೆಚ್ಚುವರಿಯಾಗಿ ಕಳೆದ ಎರಡೂವರೆ ವರ್ಷಗಳಿಂದ 48,42,564 ರು.ಗಳನ್ನು ಪಾವತಿಸಲಾಗಿತ್ತು. ಈ ಸಂಬಂಧ ತಕರಾರು ತೆಗೆದಿದ್ದ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು 2021ರ ಏಪ್ರಿಲ್‌ 9ರಂದು ಪರಿಷತ್‌ ಸಚಿವಾಲಯದ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದರು.

ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗಳಿಗೆ ಸತೀಶ್‌ ಸಿ, ಶೃತಿ ಎಸ್‌, ಪ್ರತೀಕ್‌ ಶೆಟ್ಟಿ, ಸುಶಾಂತ್‌ ನಾಯಕ್‌, ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ ಸುಹಾಸ್‌ ಎಂ, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳಿಗೆ ಯೋಗೇಶ್ವರಿ ಬಿ, ಪುಷ್ಪಾ ಎಚ್‌ ಎಂ, ಯೋಗಿತಾ ಪಿ ಆರ್‌, ಜ್ಯೂನಿಯರ್‌ ಆಪರೇಟರ್‌ ಕನ್ಸಲ್ಟೆಂಟ್‌ ಹುದ್ದೆಗೆ ಎಂ ನಿಖಿಲ್‌ ಅವರನ್ನು ಕಿಯೋನಿಕ್ಸ್‌ ಮೂಲಕ ನೇಮಿಸಲಾಗಿತ್ತು.

‘ಆರ್ಥಿಕ ಇಲಾಖೆಯ ಅನುಮತಿ ಪಡೆಯದೇ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವ್ಯತಿರಿಕ್ತವಾಗಿ ಕಿಯೋನಿಕ್ಸ್‌ನಿಂದ ಕರಾರು ಒಪ್ಪಂದ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿರುವುದು ನಿಯಮಬಾಹಿರವಾಗಿರುತ್ತದೆ. ಆದ್ದರಿಂದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿದ್ದಂತೆ ಹುದ್ದೆಗಳ ವೇತನ ಶ್ರೇಣಿಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ನಿಗದಿಗೊಳಿಸಬೇಕು,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಪರಿಷತ್‌ನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು.

ಹೆಚ್ಚುವರಿ ಪಾವತಿಸಿದ್ದೆಷ್ಟು?

ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ ಕನಿಷ್ಠ ವೇತನ ಕಾಯ್ದೆಯಡಿ ಆರ್ಥಿಕ ಇಲಾಖೆಯು 22,800 ರು. ನಿಗದಿಪಡಿಸಿದೆ. ಆದರೆ ವಿಧಾನಪರಿಷತ್ತಿನ ಸಚಿವಾಲಯವು ನೀಡುತ್ತಿರುವುದು 42,065 ರು. . ಅಂದರೆ ಹೆಚ್ಚುವರಿಯಾಗಿ 19,265 ರು. ಪ್ರತಿ ತಿಂಗಳೂ ಪಾವತಿಯಾಗುತ್ತಿದೆ. ಕಳೆದ ಎರಡೂವರೆ ವರ್ಷಗಳಿಂದ ಹೆಚ್ಚುವರಿಯಾಗಿ ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ 5,58,685 ರು. ಪಾವತಿಯಾಗಿದೆ. ಅದರಂತೆ ಇಬ್ಬರು ಜ್ಯೂನಿಯರ್‌ ಪ್ರೋಗ್ರಾಮರ್‌ಗಳಿಗೆ ಒಟ್ಟು 11,17,370 ರು. ಹೆಚ್ಚುವರಿಯಾಗಿ ಪಾವತಿಯಾದಂತಾಗಿತ್ತು.

ಅದೇ ರೀತಿ ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗೆ 20,000 ರು. ಕನಿಷ್ಠ ವೇತನ ನಿಗದಿಪಡಿಸಿದ್ದರೆ ವಿಧಾನಪರಿಷತ್ತಿನ ಸಚಿವಾಲಯವು 38,266 ರು. ನೀಡುತ್ತಿದೆ. ಹೆಚ್ಚುವರಿ 18,266 ರು. ನಂತೆ ಹೆಚ್ಚುವರಿಯಾಗಿ 5,29,714 ರು. ಪಾವತಿಸಲಾಗಿದೆ. ಅದರಂತೆ ಮೂವರು ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳಿಗೆ ಒಟ್ಟು 15,89,142 ರು. ಪಾವತಿಸಲಾಗಿತ್ತು.

ಹಾಗೆಯೇ ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗೆ 13,284 ರು. ನೀಡಬೇಕಿದ್ದರೆ ವಿಧಾನಪರಿಷತ್ತಿನ ಸಚಿವಾಲಯವು 18,414.25 ರು.ಗಳನ್ನು ಹೆಚ್ಚುವರಿ ನೀಡಿ ಒಟ್ಟು 31,699 ರು. ನಂತೆ ಒಬ್ಬರಿಗೆ 5,34, 013 ರು ಪಾವತಿಯಾಗಿದೆ. ನೀಡುತ್ತಿದೆ. ಅದರಂತೆ ನಾಲ್ವರು ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಹೆಚ್ಚುವರಿಯಾಗಿ 21,36,052 ರು. ರು. ಪಾವತಿಸಿರುವುದು ಆರ್ಥಿಕ ಇಲಾಖೆ ಪತ್ರ ಬರೆದಿತ್ತು.

‘ವಿಧಾನ ಪರಿಷತ್‌ನ ಲೆಕ್ಕ ಶೀರ್ಷಿಕೆ (2011-02-103-2-01-034)ಯಂತೆ ಕರ್ನಾಟಕ ವಿಧಾನ ಪರಿಷತ್‌ನ ಸಚಿವಾಲಯದಲ್ಲಿ ಶೀಘ್ರಲಿಪಿಗಾರರ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಪಡೆದಿದ್ದು ವೇತನವನ್ನು 30,350 ರು.ಗಳಿಗೆ ನಿಗದಿಗೊಳಸಲಾಗಿದೆ. ಇದು ಕನಿಷ್ಠ ವೇತನ ಕಾಯ್ದೆ ಮೀರಿದ್ದರಿಂದ ಪರಿಷ್ಕರಿಸಿ 22,000 ರು.ಗಳಿಗೆ ನಿಗದಿಪಡಿಸಿ 2021-22ನೇ ಸಾಲಿನ ಅಯವ್ಯಯದಲ್ಲಿ ಅನುದಾನ ನಿಗದಿಪಡಿಸಲಾಗಿದೆ. ಆದ್ದರಿಂದ ಶೀಘ್ರಲಿಪಿಗಾರರ ವೇತನವನ್ನೂ ಮರು ನಿಗದಿಪಡಿಸಬೇಕು,’ ಎಂದು ಆರ್ಥಿಕ ಇಲಾಖೆಯು ಆಡಳಿತ ಇಲಾಖೆಗೆ ನಿರ್ದೇಶಿಸಿತ್ತು.

ಜ್ಯೂನಿಯರ್‌ ಪ್ರೋಗ್ರಾಮರ್‌, ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗಳ ಭರ್ತಿಗೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಶೇ.50ರಷ್ಟನ್ನು ಪದನ್ನೋತಿಯಿಂದ ಶೇ.50ರಷ್ಟು ನೇರ ನೇಮಕಾತಿಯಿಂದ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಎರಡೂ ಇಲ್ಲದ ಪಕ್ಷದಲ್ಲಿ ನಿಯೋಜನೆ ಮೇಲೆ ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಆರ್ಥಿಕ ಇಲಾಖೆಯ ಅನುಮತಿ ಪಡೆಯದೇ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವ್ಯತಿರಿಕ್ತವಾಗಿ ಕಿಯೋನಿಕ್ಸ್‌ನಿಂದ ಕರಾರು ಒಪ್ಪಂದ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ನಿಯಮಬಾಹಿರವಾಗಿ ಭರ್ತಿ ಮಾಡಿತ್ತು.

ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿದ್ದಂತೆ ಹುದ್ದೆಗಳ ವೇತನ ಶ್ರೇಣಿಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ಜ್ಯೂನಿಯರ್‌ ಪ್ರೋಗ್ರಾಮರ್‌ ಹುದ್ದೆಗೆ 22,800 ರು., ಜ್ಯೂನಿಯರ್‌ ಕನ್ಸೋಲ್‌ ಆಪರೇಟರ್‌ ಹುದ್ದೆಗೆ 20,000 ರು., ಮತ್ತು ಕನಿಷ್ಠ ವೇತನ ಕಾಯ್ದೆ ಪ್ರಕಾರ ಡೇಟಾ ಎಂಟ್ರಿ ಆಪರೇಟರ್‌, ಸ್ವಚ್ಛತಾ ಕಾರ್ಮಿಕರಾದ ಸಫಾಯಿ ಕರ್ಮಚಾರಿಗಳಿಗೆ ಆಯವ್ಯಯದಲ್ಲಿ ಅನುದಾನ ನಿಗದಿಪಡಿಸಲಾಗಿದೆ. ಈ ಹುದ್ದೆಗಳ ಭರ್ತಿಗೆ ಆಡಳಿತ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಕ್ರಮ ವಹಿಸಬೇಕು ಎಂದು ಆರ್ಥಿಕ ಇಲಾಖೆಯು ಸೂಚಿಸಿತ್ತು.

ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಪತ್ರ ಬರೆದು 1 ತಿಂಗಳಾದರೂ ಪರಿಷತ್‌ ಸಚಿವಾಲಯವು ಯಾವುದೇ ಕ್ರಮ ವಹಿಸಿಲ್ಲ. ಅಲ್ಲದೆ ಈ ಕುರಿತು ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಈವರೆವಿಗೂ ಮೌನ ಮುರಿದಿಲ್ಲ ಮತ್ತು ವೇತನದಲ್ಲಿ ಪಾವತಿಯಾಗಿರುವ ಹೆಚ್ಚುವರಿ ಮೊತ್ತವನ್ನು ವಸೂಲು ಮಾಡಿರಲಿಲ್ಲ.

Share:

Leave a Reply

Your email address will not be published.