ಕೆಆರ್‌ಎಸ್‌ ಪ್ರಕರಣ; ಅಕ್ರಮ ಗಣಿಗಾರಿಕೆ ಪ್ರದೇಶಗಳ ಪರಿವೀಕ್ಷಣೆಗೆ ಸಿದ್ಧತೆ ನಡೆಸಿದ ಪಿಎಸಿ

ಬೆಂಗಳೂರು; ಕೆಆರ್‌ಎಸ್‌ ಜಲಾಶಯದ ಸುರಕ್ಷತೆ ಮತ್ತು ಅಕ್ರಮ ಗಣಿಗಾರಿಕೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ನಡುವೆ ನಡೆದಿದ್ದ ಆರೋಪ, ಪ್ರತ್ಯಾರೋಪಗಳು, ವಾಕ್ಸಮರ ತಣ್ಣಗಾಗುತ್ತಿದ್ದಂತೆ ಇತ್ತ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಮಂಡ್ಯ ಜಿಲ್ಲೆ ಸೇರಿ ಹಲವು ಜಿಲ್ಲೆಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಲು ಚಿಂತನೆ ನಡೆಸಿದೆ.

ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ವಿಜಯಪುರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಯೂ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬ ಕುರಿತು ಸಿಎಜಿ ನೀಡಿದ್ದ ವರದಿ ಆಧರಿಸಿ ರಾಮಲಿಂಗಾರೆಡ್ಡಿ ಅವರು ಅಧ್ಯಕ್ಷರಾಗಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಗಣಿ ಪ್ರದೇಶಗಳಿಗೆ ಭೇಟಿ ನೀಡಲು ಇದೇ 20ರಂದು ನಡೆಯಲಿರುವ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಿದೆ ಎಂದು ತಿಳಿದು ಬಂದಿದೆ.

ಕರ್ನಾಟಕದಲ್ಲಿ ಅಪ್ರಧಾನ ಖನಿಜಗಳ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ವ್ಯವಸ್ಥಿತ ಮತ್ತು ವೈಜ್ಞಾನಿಕ ಗಣಿಗಾರಿಕೆ, ಪರಿಸರ ಸಂರಕ್ಷಣೆ ಕುರಿತು ಸಿಎಜಿ ಕಾರ್ಯನಿರ್ವಹಣೆ ಕುರಿತು 2017-18ನೇ ಸಾಲಿಗೆ ಸಂಬಂಧಿಸಿದಂತೆ ನೀಡಿದ್ದ ಲೆಕ್ಕ ಪರಿಶೋಧನೆ ಆಧರಿಸಿ ಇಲಾಖೆಯು ಕೈಗೊಂಡಿರುವ ಕ್ರಮಗಳು, ಸುಧಾರಣೆ ಮತ್ತು ಬೊಕ್ಕಸಕ್ಕೆ ವರಮಾನ ಹೆಚ್ಚಳ ಆಗುತ್ತಿದೆಯೆ ಎಂಬ ಕುರಿತೂ ಇಲಾಖಾಧಿಕಾರಿಗಳ ಜತೆ ಸಮಾಲೋಚನೆ ನಡೆಸಲಿದೆ ಎಂದು ಗೊತ್ತಾಗಿದೆ.

52 ಗುತ್ತಿಗೆಗಳು ಮುಕ್ತಾಯಗೊಂಡಿದ್ದರೂ 29,800 ಚದರ ಮೀಟರ್‌ಗಳಲ್ಲಿ ಗಣಿಗಾರಿಕೆ ಮುಂದುವರೆಸಿದ್ದು, 33 ಪ್ರಕರಣಗಳಲ್ಲಿ 46,000 ಚದರ ಮೀಟರ್‌ ದಾಟಿ ಹೊರ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿರುವುದು, 109 ಕಾನೂನು ಬಾಹಿರ ಪ್ರದೇಶಗಳಲ್ಲಿ 1.00 ಲಕ್ಷ ಚದರ ಮೀಟರ್‌ಗಳಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಯಿಂದಾಗಿ 191.96 ಕೋಟಿ ವರಮಾನ ನಷ್ಟ ಸಂಭವಿಸಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು.

ಅಲ್ಲದೆ ಚಿಕ್ಕಬಳ್ಳಾಪುರ ತಾಲೂಕಿನ 11.45 ಲಕ್ಷ ಚದರ ಮೀಟರ್‌ ಪ್ರದೇಶದ 532 ಸ್ಥಳಗಳಲ್ಲಿ ಗಣಿಗಾರಿಕೆ ನಡೆಸಿ 11.12 ಕೋಟಿ ಮೆಟ್ರಿಕ್‌ ಟನ್‌ಗಳ ಖನಿಜವನ್ನು ಹೊರತೆಗೆಯಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿತ್ತು.

ಗಣಿಗಾರಿಕೆ ಗುತ್ತಿಗೆಗಳನ್ನು ಮೇಲ್ವಿಚಾರಣೆ ನಡೆಸಲು ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದಿರುವುದು, ಗಣಿ ಭೂ ವಿಜ್ಞಾನ ಇಲಾಖೆ, ಪರಿಸರ ಮಂತ್ರಾಲಯ, ಅರಣ್ಯಗಳು ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಾದೇಶಿಕ ಸಂಸ್ಥೆಗಳ ನಡುವೆ ಸಮನ್ವಯ ಕೊರತೆ, ಮೀಸಲು ವಲಯಗಳನ್ನು ಪತ್ತೆ ಹಚ್ಚದಿರುವುದು, ಮರಳು ಗುತ್ತಿಗೆ, ಖನಿಜಗಳ ಗಣಿ ಯೋಜನೆಯಲ್ಲಿ ನಿಗದಿಪಡಿಸಿರುವ ವಾರ್ಷಿಕ ಗುರಿಗೆ ಇಲಾಖೆಯು ಬದ್ಧತೆ ತೋರಿಸದಿರುವುದು, ಇಲಾಖೆಯ ಕಾರ್ಯನಿರ್ವಹಣಾ ಖಾತರಿ ಬಾಬ್ತು 7.68 ಕೋಟಿ ಸಂಗ್ರಹಿಸದಿರುವುದು ಮತ್ತು ಸ್ಫೋಟಗಳ ಅಧಿನಿಯಮದ ಪ್ರಕಾರ ಗುತ್ತಿಗೆದಾರರು ಸ್ಫೋಟಕಗಳ ಬಳಕೆಗೆ ಜಿಲ್ಲಾಧಿಕಾರಿಯವರ ಅನುಮತಿ ಪಡೆಯದಿರುವ ಪ್ರಕರಣಗಳ ಕುರಿತು ಸಿಎಜಿ ನೀಡಿರುವ ವರದಿ ಆಧರಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಚರ್ಚೆ ನಡೆಸಲಿದೆ ಎಂದು ತಿಳಿದು ಬಂದಿದೆ.

ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಅಂಬರೀಷ್ ಸಮರ ಸಾರಿರುವ ಬೆನ್ನಲ್ಲೇ ಭಾನುವಾರ ಶ್ರೀರಂಗಪಟ್ಟಣದಲ್ಲಿ ಅಕ್ರಮ ಗಣಿಗಾರಿಕೆ ಮೇಲೆ ತಹಶಿಲ್ದಾರ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಪಡೆದ ತಹಶಿಲ್ದಾರ್ ಅವರು ಇತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಕಲ್ಲು ಕ್ವಾರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

ಅಲ್ಲದೆ ಅಕ್ರಮವೆಂದು ಕಂಡುಬಂದ ಕೂಡಲೇ ಬೀಗ ಜಡಿಯಲಾಗಿತ್ತು. ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಹಶಿಲ್ದಾರ್ ಎಚ್ಚರಿಕೆ ನೀಡಿದ್ದರು. ಕೆಆರ್‌ಎಸ್‌ ಜಲಾಶಯದಲ್ಲಿ ಯಾವುದೇ ರೀತಿಯಾಗಿ ಬಿರುಕು ಕಂಡುಬಂದಿಲ್ಲ. ಈ ಕುರಿತು ಪರಿಶೀಲನೆ ನಡೆಸಿ ಸರ್ಕಾರಕ್ಕೆ ಸಮಗ್ರ ವರದಿ ನೀಡಲಾಗಿದೆ. ನಿಗಮದ ತಂತ್ರಜ್ಞರು ಪ್ರತಿನಿತ್ಯ ಜಲಾಶಯದ ಸುರಕ್ಷತೆ ಪರಿಶೀಲನೆ ನಡೆಸುತ್ತಾರೆ. ಜಲಾಶಯ ಭದ್ರವಾಗಿದ್ದು ಸಾರ್ವಜನಿರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts