ಆರ್‌ಟಿಐ ಕಾರ್ಯಕರ್ತನ ಕೊಲೆ; ಶಾಸಕ ಪುತ್ರನ ಹೆಸರು ಥಳಕು, ತುಟಿಬಿಚ್ಚದ ಕಾಂಗ್ರೆಸ್‌

ಬೆಂಗಳೂರು; ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ನಡೆದಿರುವ ಆರ್‌ಟಿಐ ಕಾರ್ಯಕರ್ತ ಟಿ ಶ್ರೀಧರ ಎಂಬುವರ ಕೊಲೆ ಪ್ರಕರಣದಲ್ಲಿ ಹೂವಿನಹಡಗಲಿ ಕಾಂಗ್ರೆಸ್‌ ಶಾಸಕ ಪಿ ಟಿ ಪರಮೇಶ್ವರನಾಯ್ಕ್ ಅವರ ಪುತ್ರ ಪಿ ಟಿ ಭರತ್‌ನಾಯ್ಕ್‌ ಅವರ ಹೆಸರು ಥಳಕು ಹಾಕಿಕೊಂಡಿದೆ. ಹತ್ಯೆಗೀಡಾಗುವ ಮೊದಲೇ ಭರತ್‌ನಾಯ್ಕ್‌ ಅವರಿಂದ ಜೀವ ಬೆದರಿಕೆ ಇತ್ತು ಎಂದು ಶ್ರೀಧರ್‌ ಪತ್ನಿ ದೂರಿನಲ್ಲಿ ಉಲ್ಲೇಖಿಸಿರುವುದು ಪ್ರಕರಣಕ್ಕೆ ಇನ್ನಷ್ಟು ಮಹತ್ವ ಬಂದಿದೆ.

ವಿನಾಯಕ ಬಾಳಿಗಾ ಪ್ರಕರಣವನ್ನಿಟ್ಟುಕೊಂಡು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಕಾಂಗ್ರೆಸ್‌ ಇದೀಗ ಹರಪನಹಳ್ಳಿಯ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀಧರ್‌ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಪುತ್ರನ ಹೆಸರು ಥಳಕು ಹಾಕಿಕೊಂಡಿರುವ ಕಾರಣ ಮುಜುಗರಕ್ಕೆ ಸಿಲುಕಿದಂತಾಗಿದೆ. ಹತ್ಯೆ ನಡೆದು 24 ಗಂಟೆಗಳಾದರೂ ಕಾಂಗ್ರೆಸ್‌ನ ಅಧ್ಯಕ್ಷ ಡಿ ಕೆ ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಯಾವೊಬ್ಬ ಕಾಂಗ್ರೆಸ್‌ ಮುಖಂಡರು ಈ ಪ್ರಕರಣದ ಕುರಿತು ತುಟಿ ಬಿಚ್ಚಿಲ್ಲ.

ದೂರಿನಲ್ಲಿದೆ ಭರತ್‌ನಾಯ್ಕ್‌ ಹೆಸರು

ಹತ್ಯೆಗೀಡಾಗಿರುವ ಮಾಹಿತಿ ಹಕ್ಕು ಕಾರ್ಯಕರ್ತ ಟಿ ಶ್ರೀಧರ್‌ ಎಂಬುವರು ಅವರು ಪಿ ಟಿ ಭರತ್‌ನಾಯ್ಕ್‌ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದರು. ಈ ವಿಚಾರದಲ್ಲಿ ಜೀವ ಬೆದರಿಕೆಯೂ ಇತ್ತು ಎಂದು ಶ್ರೀಧರ ಅವರ ಪತ್ನಿ ಹರಪನಹಳ್ಳಿ ಠಾಣಾಧಿಕಾರಿಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ಭರತ್‌ನಾಯ್ಕ್‌ ಅವರ ಹೆಸರಿಲ್ಲ. ಪ್ರಕರಣದಲ್ಲಿ ಭರತ್‌ನಾಯ್ಕ್‌ ಅವರ ಪಾತ್ರವಿದೆಯೇ ಅಥವಾ ಇಲ್ಲವೇ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ ವಾಗೀಶ್‌ ಸೇರಿ ಒಟ್ಟು ನಾಲ್ವರು ಶಂಕಿತರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಮನೆಯಲ್ಲೇ ಬೀಗ ಹಾಕಿ ಮಲಗಿದ್ದ ಶ್ರೀಧರ್‌

ಟಿ ಶ್ರೀಧರ ಹತ್ಯೆಗೀಡಾಗುವ ಮುನ್ನ  ಭಯದಿಂದ ಮನೆಯಲ್ಲಿಯೇ ಬೀಗ ಹಾಕಿಕೊಂಡು ಮಲಗಿದ್ದರು ಎಂಬ ಸಂಗತಿ ಅವರ ಪತ್ನಿ ಸಲ್ಲಿಸಿರುವ ದೂರಿನಿಂದ ಗೊತ್ತಾಗಿದೆ. ‘2021ರ ಜುಲೈ 13ರಂದು ಉಚ್ಚಂಗಿದುರ್ಗದಲ್ಲಿದ್ದಾಗ ತನ್ನ ಗಂಡ ಫೋನ್‌ ಮಾಡಿ ನಾನು ಪಿ ಟಿ ಪರಮೇಶ್ವರನಾಯ್ಕ್ ಅವರ ಮಗ ಭರತ್‌ ನಾಯ್ಕ್ ವಿರುದ್ಧ ಕೇಸು ಮಾಡಿದ್ದೆ. ಆ ವಿಚಾರವಾಗಿ ನನಗೆ ಜೀವ ಬೆದರಿಕೆ ಇದೆ ಮತ್ತು ಹೆಚ್‌ ಕೆ ಹಾಲೇಶ ಮತ್ತು ಅವರ ಮಗನ ಮೇಲೆ ನಾನು ಕೇಸ್‌ ಹಾಕಿದ್ದೇನೆ. ಆ ವಿಚಾರವಾಗಿ ಕೂಡ ಮತ್ತು ಹೊಲದ ವಿಷಯದ ಬಗ್ಗೆ ಕೇಸ್‌ ಹಾಕಿದ್ದರಿಂದ ಜೀವ ಬೆದರಿಕೆ ಇದೆ ಎಂದು ತಿಳಿಸಿದ್ದರು. ಆ ಕಾರಣಕ್ಕಾಗಿ 2021ರ ಜುಲೈ 14ರಂದು ಸಂಪೂರ್ಣವಾಗಿ ಮನೆಯಲ್ಲಿ ಬೀಗ ಹಾಕಿಕೊಂಡು ಮಲಗಿದ್ದರು,’ ಎಂದು ಆತನ ಪತ್ನಿ ದೂರಿನಲ್ಲಿ ವಿವರಿಸಿದ್ದಾರೆ.

ಹರಪನಹಳ್ಳಿ ಪಟ್ಟಣದ ಎಡಿಬಿ ಕಾಲೇಜ್ ಹತ್ತಿರದ ಹೋಟೆಲ್​ನ ಬಳಿ ಟೀ ಕುಡಿಯುತ್ತಿದ್ದ ವೇಳೆ ಅಪರಿಚಿತರು ಬಂದು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸುವ ಹೊತ್ತಿಗೆ ಶ್ರೀಧರ್‌ ಮೃತಪಟ್ಟಿದ್ದರು ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts