ಬೆಂಗಳೂರು; ಅಕ್ರಮ ಹಣ ವರ್ಗಾವಣೆ ಪ್ರಕರಣ ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಅವರನ್ನು ರಾಜ್ಯಪಾಲರನ್ನಾಗಿಸುವ ಆಮಿಷ ಒಡ್ಡಿ ಹಣ ಪಡೆದ ಆರೋಪ ಪ್ರಕರಣವೂ ಸೇರಿದಂತೆ ವಿವಿಧ ರೀತಿಯ ವಂಚನೆ ಪ್ರಕರಣಗಳಲ್ಲಿ ಬಂಧನಕ್ಕೊಗಳಗಾಗಿರುವ ಯುವರಾಜ್ ಅಲಿಯಾಸ್ ಸ್ವಾಮಿ ಎಂಬಾತ ಒಟ್ಟು 18.32 ಕೋಟಿ ರು. ವಂಚನೆ ಮಾಡಿರುವುದು ಇದೀಗ ಬಹಿರಂಗವಾಗಿದೆ.
ಇಂದ್ರಕಲಾ ಅವರಿಗೆ ಆಗಿರುವ ವಂಚನೆಯೂ ಸೇರಿದಂತೆ ಒಟ್ಟು 5 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಲ್ಸನ್ ಗಾರ್ಡ್‌ನ್ ಠಾಣೆ ಪೊಲೀಸರು ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಈ ಎಲ್ಲಾ ವಿವರಗಳಿವೆ. ದೋಷಾರೋಪಣೆ ಪಟ್ಟಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಯುವರಾಜಸ್ವಾಮಿ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆ, ವಿಲ್ಸನ್ ಗಾರ್ಡನ್, ಸದಾಶಿವನಗರ, ಹೈಗ್ರೌಂಡ್ಸ್ ಠಾಣೆಯಲ್ಲಿ ಐಪಿಸಿ ವಿವಿಧ ಕಲಂಗಳಡಿಯಲ್ಲಿ ಮೊಕದ್ದಮೆ ದಾಖಲಾಗಿರುವುದು ತಿಳಿದು ಬಂದಿದೆ.
ಕೇಂದ್ರ ಸರ್ಕಾರದ ವತಿಯಿಂದ ರಾಜ್ಯಪಾಲರಾಗಿ ನೇಮಕ ಮಾಡಿಸುವುದಾಗಿ ಯುವರಾಜ್ ಅಲಿಯಾಸ್ ಸ್ವಾಮಿಯಿಂದ ವಿಲ್ಸನ್ ಗಾರ್ಡನ್ ನಿವಾಸಿಯಾಗಿರುವ ನಿವೃತ್ತ ನ್ಯಾಯಾಧೀಶೆ ಇಂದ್ರಕಲಾ, ಸುಧೀಂಧ್ರ ರೆಡ್ಡಿ, ರೋಹಿತ್ ಶ್ರೀನಿವಾಸನ್, ಗುರುರಾಜ್ ರವಿ, ಆನಂದಕುಮಾರ್ ಕೋಲಾ ಅವರು ಯುವರಾಜ ಸ್ವಾಮಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ಯಾರ್ಯಾರಿಗೆ ಎಷ್ಟೆಷ್ಟು ವಂಚನೆ?
ಸುದೀಂಧ್ರ ರೆಡ್ಡಿ ಎಂಬುವರಿಗೆ (ಸೈಬರ್ ಕ್ರೈಂ ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ 40/2020) 1 ಕೋಟಿ, ಇಂದ್ರಕಲಾ ಅವರಿಗೆ 8.27 ಕೋಟಿ, ರೋಹಿತ್ ಶ್ರೀನಿವಾಸನ್ 1.50 ಕೋಟಿ, ಗುರುರಾಜ್ ರವಿ ಎಂಬುವರಿಗೆ 6.50 ಕೋಟಿ ರು. ಆನಂದ್‌ಕುಮಾರ್ ಕೋಲಾ ಎಂಬುವರಿಗೆ 1.50 ಕೋಟಿ ರು. ವಂಚನೆ ಮಾಡಿರುವುದು ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.
ಈ ಎಲ್ಲಾ ಪ್ರಕರಣಗಳಲ್ಲಿ ಯುವರಾಜಸ್ವಾಮಿ ವಿರುದ್ಧ ಐಪಿಸಿ 120(ಬಿ), 406, 419, 420, 506, 504 ಮೊಕದ್ದಮೆ ದಾಖಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಯುವರಾಜ್ ಅಲಿಯಾಸ್ ಸ್ವಾಮಿಯ ವಂಚನೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ಬಹಿರಂಗವಾಗಿದ್ದನ್ನು ಸ್ಮರಿಸಬಹುದು.
ಯುವರಾಜ್ ಅಲಿಯಾಸ್ ಸ್ವಾಮಿ ವಂಚನೆಯ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಸಿಸಿಬಿ ಪೊಲೀಸರು ಇದೀಗ ಈ ಎಫ್ಐಆರ್ ಆಧಾರದಲ್ಲಿ ಹೇಳಿಕೆ ಪಡೆದುಕೊಂಡಿದ್ದಾರೆ. ಪೊಲೀಸ್ ಆಧಿಕಾರಿಯೊಬ್ಬರ ಮೂಲಕ ಯುವರಾಜ್ ನನಗೆ ಪರಿಚಯವಾಗಿದ್ದು, ಬಿಜೆಪಿ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಯುವರಾಜ್ ನನಗೆ ನಂಬಿಸಿದ್ದಾನೆ ಎಂದು ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಅವರು ಸಿಸಿಬಿಗೆ ಹೇಳಿಕೆ ನೀಡಿದ್ದರು.
ಇಂದ್ರಕಲಾ ಅವರಿಗೆ ವಂಚನೆ
ನಿವೃತ್ತ ಎಸ್ ಪಿ ಪಾಪಯ್ಯ ಎಂಬುವರ ಮೂಲಕ 2018ರಲ್ಲಿ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಅವರನ್ನು ಪರಿಚಯಿಸಿಕೊಂಡಿದ್ದ ಯುವರಾಜಸ್ವಾಮಿ ‘ನೀವು ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆ ಪಡೆಯುತ್ತೀರಾ,’ ಎಂದು ಭವಿಷ್ಯ ಹೇಳಿದ್ದ. ಆ ಮೂಲಕ ಅವರಲ್ಲಿ ಆಸೆ ಹುಟ್ಟಿಸಿದ್ದ ಯುವರಾಜಸ್ವಾಮಿ ಪಾರ್ಟಿ ಫಂಡ್‌ಗಾಗಿ ಹಣ ನೀಡಬೇಕು ಎಂದು ತಿಳಿಸಿ ಅವರಿಂದ ಹಂತ ಹಂತವಾಗಿ 3,77,50,002 ರು.ಗಳನ್ನು ಬ್ಯಾಂಕ್‌ನ ವಿವಿಧ ಖಾತೆಗಳ ಮೂಲಕ ಪಡೆದುಕೊಂಡಿದ್ದ. ಈ ಪೈಕಿ ಇಂದ್ರಕಲಾ ಅವರ ಸ್ನೇಹಿತರಾದ ಸುನೀತಾ ಅವರ ಖಾತೆಯಿಂದ 25,00,00 ರು.ಗಳನ್ನು ಪರಿಮಳ ಎಂಬುವರ ಖಾತೆಯಿಂದ 25,00,000 ರು.ಗಳನ್ನು ಯುವರಾಜಸ್ವಾಮಿ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂಬ ಮಾಹಿತಿ ದೋಷಾರೋಪಣೆ ಪಟ್ಟಿಯಲ್ಲಿದೆ.
ಅಲ್ಲದೆ ಇಂದ್ರಕಲಾ ಅವರ ಸ್ನೇಹಿತರು, ಹಿತೈಷಿಗಳು ಮತ್ತು ಸಹದ್ಯೋಗಿಗಳಿಂದ 4,50,00,000 ರು.ಗಳನ್ನು ನಗದು ರೂಪದಲ್ಲಿ ಪಡೆದಿದ್ದನಲ್ಲದೆ ಅವರ ಸ್ನೇಹಿತರಾಗಿದ್ದ ನಾಗರಬಾವಿಯ ವಿನಯ್ ಎಂಬುವರಿಂದಲೂ 30,00,000 ರು.ಗಳನ್ನು ಪಡೆದಿದ್ದ ಎಂಬುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.
ಸಿಲ್ಕ್ ಬೋರ್ಡ್ ಅಧ್ಯಕ್ಷನನ್ನಾಗಿಸುತ್ತೇನೆಂದು 1.5 ಕೋಟಿ ವಂಚನೆ
ಆನಂದ್‌ಕುಮಾರ್ ಕೋಲಾ ಎಂಬುವರನ್ನು ಕೇಂದ್ರದ ಸಿಲ್ಕ್ ಬೋರ್ಡ್ ಚೇರ್‌ಮನ್ ಮಾಡಿಸುವುದಾಗಿ ನಂಬಿಸಿದ್ದ ಯುವರಾಜಸ್ವಾಮಿ 2015ರಲ್ಲೇ 1.5 ಕೋಟಿ ರು.ಗಳನ್ನು ನಗದು ಮತ್ತು ಅಕೌಂಟ್ ಮೂಲಕ ಪಡೆದುಕೊಂಡಿದ್ದ ಎಂಬುದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 1.5 ಕೋಟಿ ಪಡೆದ ನಂತರ ಕೋಲಾ ಅವರಿಗೆ ಯಾವುದೇ ಹುದ್ದೆಯನ್ನು ಕೊಡಿಸಿರಲಿಲ್ಲ ಮತ್ತು ಹಣವನ್ನೂ ವಾಪಸ್ ನೀಡಿರಲಿಲ್ಲ ಎಂಬುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.
ಮೆಡಿಕಲ್ ಸೀಟ್ ಹೆಸರಿನಲ್ಲಿ 1.85 ಕೋಟಿ ಎತ್ತಿದ್ದ
2017ರಲ್ಲಿ ಟಿ ರೋಹಿತ್ ಅವರ ತಮ್ಮ ಪ್ರೀತಮ್‌ಗೆ ಎಂ ಎಸ್ ರಾಮಯ್ಯ ಕಾಲೇಜಿನಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ಹೇಳಿ 1.85 ಕೋಟಿ ಪಡೆದುಕೊಂಡಿದ್ದ ಯುವರಾಜಸ್ವಾಮಿ, ಅದರಲ್ಲಿ 75,00,000 ರು.ಗಳನ್ನು ಕಾಲೇಜಿಗೆ ಪಾವತಿಸಿ, ಉಳಿದ 1,05,00,000 ರು.ಗಳನ್ನು ಸ್ವಂತಕ್ಕೆ ಬಳಸಿಕೊಂಡಿದ್ದ ಎಂಬ ಮಾಹಿತಿ ದೋಷಾರೋಪಣೆ ಪಟ್ಟಿಯಲ್ಲಿದೆ.
ಅಲ್ಲದೆ 2018ರ ಕೊನೆಯಲ್ಲಿ ಮೈಸೂರು ನಿವಾಸಿ ಗುರುರಾಜ್ ರವಿ ಎಂಬುವರಿಗೆ ದೇವನಹಳ್ಳಿ ಏರ್‌ಪೋರ್ಟ್ ಬಳಿ ಜಮೀನು ಕೊಡಿಸುವುದಾಗಿ ಹೇಳಿ 6,50,00,000 ಪಡೆದುಕೊಂಡಿದ್ದ. 2 ವರ್ಷದ ನಂತರ ಅಂದರೆ 2020ರಲ್ಲಿ ಈ ಪ್ರಕರಣದಲ್ಲಿ ಯುವರಾಜಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿತ್ತು.
2020ರಲ್ಲಿ ನರಸಿಂಹಸ್ವಾಮಿ ಎಂಬುವರ ಮಗನಿಗೆ ಎಇಇ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 30 ಲಕ್ಷ ರು. ಕಿತ್ತಿದ್ದ. ಕಡೆಗೆ ಕೆಲಸವನ್ನು ಕೊಡಿಸದೆ ಹಣ ವಾಪಸ್ ಕೊಡದೇ ಇದ್ದುದ್ದರಿಂದ ಅನ್ನಪೂರ್ಣೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹುದ್ದೆಗೆ 1 ಕೋಟಿ
ಗೋವಿಂದರಾಜನಗರದ ಮಧುರಾಜ್ ಎಂಬುವರ ಮೂಲಕ ಸುಧೀಂಧ್ರ ರೆಡ್ಡಿ ಎಂಬುವರನ್ನು ಪರಿಚಯಿಸಿಕೊಂಡಿದ್ದ ಯುವರಾಜಸ್ವಾಮಿ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ಹೇಳಿ ಅವರಿಂದ ನಗದು ಹಾಗೂ ಬ್ಯಾಂಕ್ ಖಾತೆ ಮೂಲಕ 1 ಕೋಟಿ ಪಡೆದುಕೊಂಡಿದ್ದ. ಆದರೆ ಸುಧೀಂಧ್ರ ರೆಡ್ಡಿ ಅವರಿಗೆ ಯಾವುದೇ ಹುದ್ದೆ ಕೊಡಿಸಿರಲಿಲ್ಲ. ಹಣವನ್ನೂ ವಾಪಸ್ ನೀಡಿರಲಿಲ್ಲ.
ಯುವರಾಜ್ ಪ್ರಕರಣದಲ್ಲಿ ಮತ್ತೊಬ್ಬ ಮಂಗಳೂರು ಮೂಲದ ಮಾಜಿ ಪೊಲೀಸ್ ಅಧಿಕಾರಿ ಪಾಪಯ್ಯ ಅವರ ಹೆಸರು ಕೇಳಿಬಂದಿತ್ತು. ಉದ್ಯಮಿ ಸುಧೀಂಧ್ರ ರೆಡ್ಡಿಯವರಿಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಒಂದು ಕೋಟಿ ಹಣ ಪಡೆದು ವಂಚಿಸಿದ್ದ ವಂಚಕ ಯುವರಾಜ್ ಸ್ವಾಮಿಗೆ ಹೈಕೋರ್ಟ್ ಈಗಾಗಲೇ ಜಾಮೀನು ನಿರಾಕರಿಸಿದೆ.
ವಂಚನೆ ಪ್ರಕರಣದಲ್ಲಿ ಜಾಮೀನಿಗಾಗಿ ಆರೋಪಿ ಯುವರಾಜ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಕೆ.ನಟರಾಜನ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು. ಆರೋಪಿ ಯುವರಾಜ್ ಸ್ವಾಮಿ ಅಪರಾಧ ಮೇಲ್ನೋಟಕ್ಕೆ ಸಾಬೀತಾಗಿರುವುದು ಮಾತ್ರವಲ್ಲದೆ ವಂಚನೆ, ಜೀವ ಬೆದರಿಕೆ ಸೇರಿ ವಿವಿಧ ಪ್ರಕರಣಗಳ ವಿಚಾರಣೆ ನಗರದ ನಾನಾ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಸಮಯ ಜಾಮೀನು ನೀಡುವುದು ಉಚಿತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದಕ್ಕೆ ಮುನ್ನ ಯುವರಾಜ್ ಸ್ವಾಮಿ ಜಾಮೀನು ಅರ್ಜಿ ಫೆ.8ರಂದು ನಗರದ 67ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಲ್ಲಿ ವಜಾಗೊಂಡಿದ್ದನ್ನು ಸ್ಮರಿಸಬಹುದು.