ಈಜುಕೊಳ; ರೋಹಿಣಿ ಸಿಂಧೂರಿ ವಿರುದ್ಧ ಶಿಸ್ತು ಕ್ರಮಕ್ಕೆ ಕಾಗದಪತ್ರ ಸಮಿತಿ ಶಿಫಾರಸ್ಸು?

ಬೆಂಗಳೂರು; ಮೈಸೂರಿನ ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸ ಜಲಸನ್ನಿಧಿಯಲ್ಲಿ ನಿಯಮಬಾಹಿರವಾಗಿ ನಿರ್ಮಾಣಗೊಂಡಿದೆ ಎನ್ನಲಾಗಿರುವ ಈಜುಕೊಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಭೆಯ ಮುಂದಿಡಲಾದ ಕಾಗದಪತ್ರಗಳ ಸಮಿತಿಯು ತೀರ್ಮಾನಿಸಿದೆ!

ಶಾಸಕರ ಭವನದಲ್ಲಿ ಮಂಗಳವಾರ (ಜುಲೈ 27,2021) ನಡೆದಿದ್ದ ಕಾಗದ ಪತ್ರಗಳ ಸಮಿತಿ ಸಭೆಯು ನಿರ್ಮಿತಿ ಕೇಂದ್ರಗಳ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಜಲಸನ್ನಿಧಿಯಲ್ಲಿ ಈಜುಕೊಳ ನಿರ್ಮಾಣ ವಿಚಾರವು ಪ್ರಸ್ತಾಪವಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೆ ಇದೇ ಸಭೆಗೆ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಮತ್ತು ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಕೂಡ ಕೂಡ ಹಾಜರಾಗಿದ್ದರು. ಈ ಸಂಬಂಧ ವರದಿಯನ್ನು ಸಮಿತಿ ಮುಂದೆ ಮಂಡಿಸಲು ಬಗಾದಿ ಗೌತಮ್‌ ಅವರು ಮುಂದಾಗಿದ್ದಾರಾದರೂ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರು ಅವರನ್ನು ತಡೆದರು ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

ಜಲಸನ್ನಿಧಿಯಲ್ಲಿ ನಿರ್ಮಾಣವಾಗಿರುವ ಈಜುಕೊಳ ಪ್ರಕರಣವನ್ನು ನಿರ್ದಿಷ್ಟವಾಗಿ ಚರ್ಚೆಗೆ ಕೈಗೆತ್ತಿಕೊಂಡಿದ್ದ ಸಮಿತಿಯು ಈ ಸಂಬಂಧ ಜಿಲ್ಲಾಧಿಕಾರಿಯಿಂದ ವರದಿಯನ್ನು ಪಡೆದುಕೊಂಡಿದೆ ಎಂದು ಗೊತ್ತಾಗಿದೆ.

116 ಕೋಟಿ ಬಳಸದ ಸಿಂಧೂರಿ?

ಮೈಸೂರು ಜಿಲ್ಲೆಯ ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆಯಾಗಿದ್ದ ಒಟ್ಟು ಅನುದಾನದ ಪೈಕಿ 116 ಕೋಟಿ ರು.ಗಳನ್ನು ರೋಹಿಣಿ ಸಿಂಧೂರಿ ಅವರು ಬಳಸದೇ ಉಳಿಕೆ ಮಾಡಿದ್ದರು ಎಂಬ ಸಂಗತಿಯನ್ನು ಬಗಾದಿ ಗೌತಮ್‌ ಅವರು ನೀಡಿರುವ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿದು ಬಂದಿದೆ.

ಈಜುಕೊಳ ನಿರ್ಮಾಣ ಪ್ರಕರಣ ಹಿನ್ನೆಲೆ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಈಜುಕೊಳ ನಿರ್ಮಾಣ ಮಾಡಲಾಗಿತ್ತು. ಈಜುಕೊಳ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣ ಮಾಡಲಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಶಾಸಕ ಸಾ.ರಾ. ಮಹೇಶ್ ಮುಖ‍್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ದೂರು ನೀಡಿದ್ದರು.

ಈಜುಕೊಳ ನಿರ್ಮಾಣದಲ್ಲಿ 6 ತಪ್ಪುಗಳನ್ನು ನಡೆದಿರುವುದನ್ನು ಪ್ರಾದೇಶಿಕ ಆಯುಕ್ತರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದರು.

1. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ 32 ಲಕ್ಷ ರೂ ಗಳಿಗೆ ಅಂದಾಜುಪಟ್ಟಿಯನ್ನು ತಯಾರಿಸಿದ್ದು, ಅಂದಾಜುಪಟ್ಟಿ ಗೆ ತಾಂತ್ರಿಕ ವರ್ಗದವರಿಂದ ಅಥವಾ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಪಡೆದಿಲ್ಲ.

2. ಈಜುಕೊಳದ ನಿರ್ಮಾಣದ ಬಗ್ಗೆ ಯಾವುದೇ ಪೂರ್ವಭಾವಿ ಆಡಳಿತಾತ್ಮಕ ಮಂಜೂರಾತಿ ಪಡೆದಿಲ್ಲ. ಆಡಳಿತಾತ್ಮಕ ಮಂಜೂರಾತಿ ಇಲ್ಲದೆ ಈಜುಕೊಳ ನಿರ್ಮಾಣಗೊಂಡಿದೆ.

3. ಈಜುಕೊಳದ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಾದೇಶ ಇಲ್ಲ.

4. ಕಾಮಗಾರಿ ನಿರ್ವಹಿಸಿದವರ ಒಪ್ಪಂದ ಪತ್ರಗಳು ಇಲ್ಲ.

5. ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆದಿಲ್ಲ.

6. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣ ಮಾಡಿರುವುದು ಯಾವುದೇ ಸಾರ್ವಜನಿಕರಿಗೆ ಉಪಯೋಗಿಸಲು ಸಾಧ್ಯವಿಲ್ಲ.

ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣದ ಹಿಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದರು. ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿ ನಿರ್ಮಿಸಿದ್ದ ಈಜುಕೊಳ ಭಾರೀ ವಿವಾದ ಸೃಷ್ಟಿಸಿತ್ತು.

ನಿಯಮ ಉಲ್ಲಂಘನೆ ಮಾಡಿ ಅನುಮತಿ ಪಡೆಯದೇ ರೋಹಿಣಿ ಸಿಂಧೂರಿಯವರು ಸ್ವಹಿತಾಸಕ್ತಿಯಿಂದ ಈಜುಕೊಳ ನಿರ್ಮಿಸಿಕೊಂಡಿದ್ದರು ಎಂದು ಮೈಸೂರು ಪ್ರಾದೇಶಿಕ ಆಯುಕ್ತ ಜಿಸಿ ಪ್ರಕಾಶ್ ಸಲ್ಲಿಸಿದ್ದ ವರದಿಯಲ್ಲಿ ಹೇಳಲಾಗಿದೆ.

ಕರ್ನಾಟಕದ ಐಜಿಪಿ, ಮಹಿಳಾ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ಅವರು, ಜಿಲ್ಲೆಯಲ್ಲಿ ಕೊರೋನಾದಿಂದ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರೋಹಿಣಿ ಸಿಂಧೂರಿಯವರಿಗೆ ಈಜುಕೊಳ ನಿರ್ಮಿಸುವ ಅಗತ್ಯವಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ಈಜುಕೊಳ ನಿರ್ಮಾಣಕ್ಕೆ ನಿರ್ಮಿತಿ ಕೇಂದ್ರದ ತಾಂತ್ರಿಕ ವಿಭಾಗದ ಅನುಮತಿ ಇದೆ. ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಈ ಕಾಮಗಾರಿ ನಡೆದಿಲ್ಲ ಎಂದು ರೋಹಿಣಿ ಸಿಂಧೂರಿ ಸ್ಪಷ್ಟೀಕರಣ ನೀಡಿದ್ದರು. ಅದರ ಕುರಿತಾದ ಪತ್ರಿಕಾ ವರದಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದ ಡಿ. ರೂಪಾ, ರೋಹಿಣಿ ಅವರಿಗೆ ಹಲವು ಪ್ರಶ್ನೆಗಳನ್ನು ಇರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts