ಡಿಸಿಎಂ ಹುದ್ದೆಗೆ ವರಿಷ್ಠರಿಂದ ಸಿಗದ ಖಚಿತ ಭರವಸೆ; ಶ್ರೀರಾಮುಲು, ಈಶ್ವರಪ್ಪ ಅಸಮಾಧಾನ!

ಬೆಂಗಳೂರು; ಬೆಂಗಳೂರು; ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಬಿ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ವರಿಷ್ಠರಿಂದ ಯಾವುದೇ ಭರವಸೆ ದೊರೆತಿಲ್ಲ. ಹೀಗಾಗಿ ಅಸಮಾಧಾನಿತರಾಗಿರುವ ಶ್ರೀರಾಮುಲು ಬಳ್ಳಾರಿಗೆ ತೆರಳಿದ್ದಾರೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಈ ಬೆಳವಣಿಗೆ ನಡುವೆಯೇ ಮತ್ತೊಬ್ಬ ಹಿರಿಯ ಮುಖಂಡ ಕೆ ಎಸ್‌ ಈಶ್ವರಪ್ಪ ಅವರು ಸಹ ಮೌನಕ್ಕೆ ಜಾರಿದ್ದಾರೆ. ಸಂಪುಟದಲ್ಲಿ ಸ್ಥಾನ ಸಿಗುವ ಬಗ್ಗೆ ಅವರಿಗೂ ಭರವಸೆ ಸಿಕ್ಕಿಲ್ಲ. ಹೀಗಾಗಿ ಅವರು ಸಹ ಅಸಮಾಧಾನಿತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸಂಪುಟ ವಿಸ್ತರಣೆ ಕಗ್ಗಂಟಾಗಿದೆ. ಇದರ ಬೆನ್ನಲ್ಲೇ ಶ್ರೀರಾಮುಲು ಯಾರ ಸಂಪರ್ಕಕ್ಕೂ ಸಿಗದಿರುವುದು ಮತ್ತು ಈಶ್ವರಪ್ಪ ಅಸಮಾಧಾನಿತರಾಗಿರುವುದು ರಾಜಕೀಯ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿವೆ.

ಬರಿಗೈಯಿಂದ ವಾಪಾಸಾದರೇ ಶ್ರೀರಾಮುಲು?

ಶ್ರೀರಾಮುಲು ದೆಹಲಿಗೂ ತೆರಳಿದ್ದರು. ವರಿಷ್ಠರನ್ನೂ ಭೇಟಿಯಾಗಿದ್ದರು. ವಾಲ್ಮೀಕಿ ಸಮಾಜವನ್ನು ಕಡೆಗಣಿಸಲಾಗಿದೆಯಲ್ಲದೆ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ ಎಂಬ ಅಸಮಾಧಾನವೂ ಸಮಾಜದಲ್ಲಿದೆ. ಹೀಗಾಗಿ ವಾಲ್ಮೀಕಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರಕಿಸಿಕೊಡಬೇಕು ಎಂದು ವರಿಷ್ಠರ ಬಳಿ ಅಳಲನ್ನು ತೋಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಆ ಸಂದರ್ಭದಲ್ಲಿ ವರಿಷ್ಠರಿಂದ ಶ್ರೀರಾಮುಲು ಅವರಿಗೆ ಯಾವುದೇ ಖಚಿತ ಭರವಸೆ ಸಿಗಲಿಲ್ಲ. ಹೀಗಾಗಿ ದೆಹಲಿಯಿಂದ ಬರಿಗೈಯಲ್ಲಿ ಮರಳಿದ್ದರು. ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ದೊರೆಯಬಹುದು ಎಂಬ ನಿರೀಕ್ಷೆ ಇತ್ತು.

ಆದರೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಹಲವು ಗಂಟೆಗಳಾದರೂ ವರಿಷ್ಠರಿಂದ ಯಾವುದೇ ಸುಳಿವು ಸಿಗದ ಕಾರಣ ಮುನಿಸಿಕೊಂಡು ಬಳ್ಳಾರಿಗೆ ದೌಡಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀರಾಮುಲು ಅವರ ಹೆಸರು ಅಂತಿಮಗೊಂಡಿದೆ. ಅಧಿಕೃತವಾಗಿ ಘೋಷಣೆಯಾಗುವವರೆಗೂ ಏನನ್ನೂ ಹೇಳಲಾಗದು ಎಂದು ಮತ್ತೊಂದು ಮೂಲಗಳು ಹೇಳುತ್ತಿವೆ.

ಆಪ್ತ ಸಹಾಯಕನ ಪ್ರಕರಣ ಮುಳುವಾಯಿತೇ?

ಕೆಲ ದಿನಗಳ ಹಿಂದೆಯೇ ಶ್ರೀರಾಮುಲು ಅವರ ಆಪ್ತ ಸಹಾಯಕ ರಾಜಪ್ಪ ಎಂಬಾತನ ಮೇಲೆ ಹಣ ವಸೂಲಿ ಮಾಡಿದ ಆರೋಪವನ್ನು ಖುದ್ದು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರೇ ಸಿಸಿಬಿಗೆ ಲಿಖಿತ ದೂರು ದಾಖಲಿಸಿದ್ದರು. ಈ ಬೆಳವಣಿಗೆಯಿಂದ ಶ್ರೀರಾಮುಲು ವಿಚಲಿತರಾಗಿದ್ದರು.

ಕಡೇ ಗಳಿಗೆಯಲ್ಲಿ ಶ್ರೀರಾಮುಲು ನೇರವಾಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪ್ರಕರಣವನ್ನು ಸುಖಾಂತ್ಯಗೊಳಿಸಲು ನಡೆಸಿದ ಯತ್ನದಲ್ಲಿ ಸಫಲರಾಗಿದ್ದರು. ಅಲ್ಲದೆ ಕೆಲವೇ ಗಂಟೆಗಳಲ್ಲಿ ರಾಜಪ್ಪ ಅವರನ್ನು ಸಿಸಿಬಿ ಪೊಲೀಸರು ಬಿಟ್ಟು ಕಳಿಸಿದ್ದರು. ಆದರೆ ಈ ಪ್ರಕರಣವು ದೆಹಲಿಯಲ್ಲಿರುವ ವರಿಷ್ಠರ ಗಮನಕ್ಕೂ ಹೋಗಿತ್ತು. ಈ ಕಾರಣದಿಂದಲೇ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಸ್ಥಾನ ಮಾತ್ರವಲ್ಲದೆ ಸಚಿವರನ್ನಾಗಿ ತೆಗೆದುಕೊಳ್ಳುವ ಬಗ್ಗೆಯೂ ಗೊಂದಲದಲ್ಲಿದ್ದಾರೆ ಎಂದು ಹೇಳಲಾಗಿದೆ.

ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಹೈಕಮಾಂಡ್‌ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಭ್ರಷ್ಟಾಚಾರದಂತಹ ಗಂಭೀರ ಆರೋಪವನ್ನು ಎದುರಿಸುತ್ತಿರುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೇ ಬೇಡವೇ ಎಂಬ ಬಗ್ಗೆಯೂ ಗಾಢವಾಗಿ ಆಲೋಚಿಸುತ್ತಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.

ಇದರ ಬೆನ್ನಲ್ಲೇ ಮತ್ತೊಬ್ಬ ಮುಖಂಡ ಕೆ ಎಸ್‌ ಈಶ್ವರಪ್ಪ ಅವರು ಕೂಡ ಅಸಮಾಧಾನಿತರಾಗಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಹುದ್ದೆಗೆ ತಮ್ಮ ಹೆಸರನ್ನೂ ಯಡಿಯೂರಪ್ಪ ಅವರು ಸೂಚಿಸಬಹುದಿತ್ತು. ಆದರೀಗ ನೂತನ ಸಂಪುಟದಲ್ಲಿ ತಮ್ಮ ಹೆಸರೂ ಇಲ್ಲ ಎಂದು ಖಚಿತಪಡಿಸಿಕೊಂಡು ಏಕಾಂತಕ್ಕೆ ಜಾರಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ..

the fil favicon

SUPPORT THE FILE

Latest News

Related Posts