ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡಲು ಬಿಜೆಪಿಯಲ್ಲಿ ಕ್ಷಣಗಣನೆ ನಡೆಯುತ್ತಿದ್ದರೆ ಮತ್ತೊಂದೆಡೆ, ಮುಖ್ಯಮಂತ್ರಿ ರೇಸ್‌ನಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ರುದ್ರಪ್ಪ ನಿರಾಣಿ ವಿರುದ್ಧ ಹೈಕಮಾಂಡ್‌ಗೆ ದೂರುಗಳ ಸರಮಾಲೆಯೇ ರವಾನೆಯಾಗುತ್ತಿವೆ ಎಂದು ತಿಳಿದು ಬಂದಿದೆ.
ಶಾಸಕ ಅರವಿಂದ ಬೆಲ್ಲದ ಮತ್ತು ಬಸನಗೌಡ ಪಾಟೀಲ ಯತ್ನಾಳ ಅವರು ಸದ್ಯದ ಸಂಕೀರ್ಣ ಸಂದರ್ಭದಲ್ಲಿ ಜಾಣತನದ ನಡೆ ಅನುಸರಿಸುತ್ತಿರುವ ಬೆನ್ನಲ್ಲೇ ನಿರಾಣಿ ವಿರುದ್ಧ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ ಸವದಿ ತಮ್ಮ ಪ್ರಬಲ ಅಸ್ತ್ರಗಳನ್ನು ತೂರಿ ಬಿಡುತ್ತಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ನಿರಾಣಿಯನ್ನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಮಾಡಬಾರದು ಎಂದು ಹೈಕಮಾಂಡ್‌ಗೆ ಮನವಿ ಮಾಡಿರುವುದಾಗಿ ಗೊತ್ತಾಗಿದೆ.
ಈ ಬೆಳವಣಿಗೆ ನಡುವೆಯೇ ಪಂಚಮಸಾಲಿ ಸಮಾಜದ ಹಿರಿಯರು ಹೈಕಮಾಂಡ್‌ಗೆ ಇದೇ ರೀತಿಯ ಮನವಿ ಸಲ್ಲಿಸಿರುವುದಾಗಿಯೂ ತಿಳಿದು ಬಂದಿದೆ. ಅಲ್ಲದೆ ಪಂಚಮಸಾಲಿ ಸಮುದಾಯದ ಗುಂಪೊಂದು ಯತ್ನಾಳ್ ಮತ್ತು ಅರವಿಂದ ಬೆಲ್ಲದ ಅವರ ಪರ ವಕಾಲತ್ತು ವಹಿಸುವ ಮೂಲಕ ನಿರಾಣಿ ಆಯ್ಕೆಯನ್ನು ಪ್ರಬಲವಾಗಿ ವಿರೋಧಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಅಮಿತ್ ಶಾ ಮತ್ತು ಅವರ ಮಗ ಜಯ ಶಾ ಹೆಸರನ್ನೂ ನಿರಾಣಿ ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪಂಚಮಸಾಲಿ ಗುಂಪೊಂದು ಹೈಕಮಾಂಡ್ ಗಮನಕ್ಕೆ ತಂದಿದೆ ಎಂದು ಕೆಲ ಮೂಲಗಳು ‘ದಿ ಫೈಲ್’ಗೆ ತಿಳಿಸಿವೆ.
ಪಂಚಮಸಾಲಿ ಸಮಾಜದ ಅಹವಾಲಿನ ಸಾರಾಂಶವೇನು?
* ಯತ್ನಾಳರು ಜನಪ್ರಿಯ ವ್ಯಕ್ತಿ. ಬೆಲ್ಲದ ಅತ್ಯಂತ ಬುದ್ಧಿವಂತರು. ಇವರಿಬ್ಬರ ಅವಶ್ಯಕತೆ ಸಮಾಜಕ್ಕೆ ಅಗತ್ಯವಿದೆ. ಒಂದು ವೇಳೆ ಅಧಿಕಾರ ಇವರಿಬ್ಬರಲ್ಲಿ ಯಾರಾದರೊಬ್ಬರ ಕೈತಪ್ಪಿ ನಿರಾಣಿ ಕೈಗೆ ಹೋದರೆ ಅದು ಬೆಲ್ಲದ ಮತ್ತು ಯತ್ನಾಳ ಪಾಲಿಗೆ ರಾಜಕೀಯವಾಗಿ ದಡ್ಡತನದ ನಡೆಯೇ ಆಗಬಲ್ಲುದು.
* ಸದ್ಯ ಯಡಿಯೂರಪ್ಪ ಹೊರ ಹೋಗುತ್ತಿರುವ ಮುಖ್ಯಮಂತ್ರಿ. ನಿರಾಣಿ ಒಳಬರುವ ವ್ಯಕ್ತಿಯಾಗಿ ಅಕಸ್ಮಾತ್ ಮುಖ್ಯಮಂತ್ರಿಯೇ ಆಗಿ ಬಿಟ್ಟರೆ ಅದು ಹದ್ದು ಒಡೆದು ಹಾವಿಗೆ ಹಾಕಿದಂತೆ ಆಗುತ್ತದೆ. ಯತ್ನಾಳ ಮತ್ತು ಬೆಲ್ಲದ ಅವರ ಭವಿಷ್ಯಕ್ಕೆ ಮುಂದಿನ 20-25 ವರ್ಷಗಳ ಕಾಲ ಶಾಶ್ವತವಾಗಿ ಚಪ್ಪಡಿ ಕಲ್ಲು ಎಳೆದಂತಾಗುತ್ತದೆ.
*ಯಾಕೆಂದರೆ ನಿರಾಣಿ “ವ್ಯವಹಾರಸ್ಥ”. ಎಲ್ಲರನ್ನೂ ವ್ಯವಸ್ಥಿತವಾಗಿ ಮುಗಿಸಿಬಿಡುತ್ತಾರೆ. ಇವತ್ತು ಜನರು ತುಂಬಾ ಕೆಟ್ಟು ಹೋಗಿದ್ದಾರೆ. ದುಡ್ಡು ಎಲ್ಲಿದೆಯೊ ಅಲ್ಲಿ ಹೋಗಿಬಿಡುತ್ತಾರೆ. ಆದ್ದರಿಂದ ಈಗ ಯತ್ನಾಳ ಮತ್ತು ಬೆಲ್ಲದ ಇಬ್ಬರೂ ಯೋಚಿಸಿ ಅತ್ಯಂತ ಜಾಣ್ಮೆಯ ಹೆಜ್ಜೆ ಇರಿಸಬೇಕಿದೆ.
* ಯತ್ನಾಳ ಮತ್ತು ಬೆಲ್ಲದ ಅವರ ನಡೆ ಸೆಲ್ಫ್ ಗೋಲ್ ಹೊಡೆದು ಕೊಂಡಂತೆ ಆಗಬಾರದು. ಆ ರೀತಿ ಆಗಿದ್ದೇ ಆದರೆ ಒಂದೂವರೆ ವರ್ಷದ ಯಡಿಯೂರಪ್ಪ ಅವರ ವಿರುದ್ಧದ ಸಂಘರ್ಷ ದೊಡ್ಡ ದುರಂತದಲ್ಲಿ ಅಂತ್ಯ ಕಾಣುತ್ತದೆ!
* ಪ್ರಭಾವಿ ವ್ಯಕ್ತಿಗಳ ಪರಿಚಯ ಇದೆ ಎಂದು ಹೇಳಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಯೊಬ್ಬರು ಸೇರಿದಂತೆ ಹಲವರಿಗೆ ಪಂಗನಾಮ ಹಾಕಿ ಕೋಟ್ಯಂತರ ರೂಪಾಯಿ ವಂಚಿಸಿ ಸದ್ಯ ಜೈಲಿನಲ್ಲಿರುವ ಯುವರಾಜ ಸ್ವಾಮಿ ಜೊತೆಗೆ ನಿರಾಣಿಯ ಬಾಂಧವ್ಯ ಅತ್ಯಂತ ಗಾಢವಾಗಿದೆ.
* ಯುವರಾಜ ಸ್ವಾಮಿ ಮತ್ತು ಮಹಿಳೆಯೊಬ್ಬರ ನಡುವಿನ ಸಂಭಾಷಣೆಯಲ್ಲಿ ಯುವರಾಜ, “ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಮನೆಗೆ ಬರುತ್ತಿದ್ದಾರೆ ಒಳ್ಳೆಯ ಸೀರೆ ಉಟ್ಟುಕೊ” ಎಂದು ಅಕೆಗೆ ಹೇಳಿದ್ದಾರೆ ಎನ್ನಲಾದ ಆಡಿಯೊ ತುಣುಕು ನಿರಾಣಿ ಮತ್ತು ಯುವರಾಜನ ಬಾಂಧವ್ಯ ಎಂತಹುದು ಎಂಬುದಕ್ಕೆ ಸಾಕ್ಷಿ.
* ಆ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ನಿರಾಣಿಯೇ ಎಂಬುದು ಈಗಾಗಲೇ ಸಾರ್ವಜನಿಕವಾಗಿ ಮನದಟ್ಟಾಗಿರುವ ವಿಚಾರ ಎಂದು ಪಂಚಮಸಾಲಿ ಸಮುದಾಯದ ಗುಂಪೊಂದು ತನ್ನ ಅಹವಾಲನ್ನು ಹೈಕಮಾಂಡ್ ಮುಂದಿಟ್ಟಿದೆ ಎಂದು ಹೇಳಲಾಗುತ್ತಿದೆ.
ಜಯ ಶಾ ಗೆ ಸಕ್ಕರೆ ಕಾರ್ಖಾನೆ ಬರೆದುಕೊಟ್ಟಿದ್ದಾರೆಯೇ?
* “ಇತ್ತೀಚೆಗಿನ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ತಾನು ಬಿಜೆಪಿಗೆ ₹ 500 ಕೋಟಿ ಕೊಟ್ಟಿದ್ದೇನೆ. ಕರ್ನಾಟಕದ ಮುಖ್ಯಮಂತ್ರಿ ಆಗಲು ಅಮಿತ್ ಶಾಗೆ ₹ 500 ಕೊಟ್ಟಿದ್ದೇನೆ” ಎಂದು ಹೇಳಿಕೊಂಡು ಅಡ್ಡಾಡುತ್ತಿರುವುದು ಪಕ್ಷಕ್ಕೆ ಆಗುತ್ತಿರುವ ದೊಡ್ಡ ಹಾನಿ.
* “ಅಮಿತ್ ಶಾ ಮಗ, ಜಯ ಶಾಗೆ ನನ್ನ ಒಡೆತನದ ಸಕ್ಕರೆ ಕಾರ್ಖಾನೆ ಬರೆದು ಕೊಟ್ಟಿದ್ದೇನೆ” ಎಂದು ಬಹಿರಂಗವಾಗಿ ಆಪ್ತ ಮತ್ತು ಸಾರ್ವಜನಿಕ ವಲಯದಲ್ಲಿ ಸಾರುತ್ತಾ ಪಕ್ಷ ಹಾಗೂ ಮೋದಿಯವರ ಹೆಸರಿಗೂ ಅಪಮಾನ ಮಾಡುತ್ತಿರುವುದು ಗಂಭೀರ ವಿಚಾರವನ್ನು ಪರಿಗಣಿಸಬೇಕು ಎಂದು ಆರೋಪಿಸಿರುವ ಪಂಚಮಸಾಲಿಯ ಗುಂಪೊಂದು ಹೈಕಮಾಂಡ್ ಗಮನಕ್ಕೆ ತಂದಿದೆ ಎಂದು ಹೇಳಲಾಗುತ್ತಿದೆ.
ಆರ್ ಎಸ್ ಎಸ್ ಸಿದ್ಧಾಂತಕ್ಕೆ ಎಳ್ಳು ನೀರು?
* ಒಂದು ವೇಳೆ ನಿರಾಣಿ ಮುಖ್ಯಮಂತ್ರಿ ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್) ಕಾರ್ಯಸೂಚಿ ಮತ್ತು ಹಿಂದುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಯಾಕೆಂದರೆ ಈಗಾಗಲೇ ಅವರು ಹಿಂದೂ ದೇವತೆಗಳ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿ ವಿವಾದ ಎಬ್ಬಿಸಿರುವ ನಿದರ್ಶನ ಕಣ್ಮುಂದಿದೆ ಎಂದು ಹಿಂದಿನ ಘಟನೆಯೊಂದನ್ನು ಪಂಚಮಸಾಲಿ ಸಮುದಾಯದ ಗುಂಪೊಂದು ಹೈಕಮಾಂಡ್‌ಗೆ ನೆನಪಿಸಿದೆ ಎಂದು ಹೇಳಲಾಗುತ್ತಿದೆ.
* ರಾಜ್ಯದ ಮಠಾಧೀಶರು ಮತ್ತು ಲಿಂಗಾಯತ-ವೀರಶೈವ ಸ್ವಾಮೀಜಿಗಳಿಗೆ ಹಣ ಹಂಚಿ ಅವರನ್ನು ರಸ್ತೆಗೆ ತಂದು ತನ್ನನ್ನೇ ದೊಡ್ಡ ನಾಯಕ ಎಂದು ಭವಿಷ್ಯದಲ್ಲಿ ಬಿಂಬಿಸಿಕೊಳ್ಳಬಲ್ಲರು.
* ಒಟ್ಟಾರೆಯಾಗಿ ಇಂತಹವರ ನಾಯಕತ್ವ ರಾಜ್ಯ ಮತ್ತು ಪಕ್ಷದ ಅಭಿವೃದ್ಧಿಗೆ ಖಂಡಿತಾ ಹಾನಿಕರವಾಗಬಲ್ಲದು ಎಂದು ಮನದಟ್ಟು ಮಾಡಿದ್ದಾರೆ ಎಂದು ಗೊತ್ತಾಗಿದೆ.