ಮೊಟ್ಟೆ; ಬಿಜೆಪಿ ಭ್ರಷ್ಟ ಸಚಿವರ ಪಟ್ಟಿಗೆ ಜೊಲ್ಲೆ, 6 ತಿಂಗಳವರೆಗೂ ಸುದ್ದಿ ಪ್ರಸಾರವಾಗಿರಲಿಲ್ಲವೇಕೆ?

ಬೆಂಗಳೂರು: ಅಪೌಷ್ಠಿಕತೆಯಿಂದ ಬಳಲುತ್ತಿರುವ ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿಯ ಅಂಗನವಾಡಿಗಳಿಗೆ ಮೊಟ್ಟೆ ಖರೀದಿ ಪ್ರಕ್ರಿಯೆಯಲ್ಲಿ ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂಬ ಗುರುತರ ಆರೋಪ ಎದುರಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಉಳಿದ ಸಚಿವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರ ಮೂಲಕ ಶಶಿಕಲಾ ಜೊಲ್ಲೆ ಅವರನ್ನು ಸಂಪರ್ಕಿಸಿದ್ದ ಕುಟುಕು ಕಾರ್ಯಾಚರಣೆ ತಂಡಕ್ಕೆ ಮೊಟ್ಟೆ ಖರೀದಿ ಸಂಬಂಧ ಪ್ರತಿ ತಿಂಗಳು 1 ಕೋಟಿ ರು. ಹಣಕ್ಕಾಗಿ ಬೇಡಿಕೆ ಇರಿಸಿದ್ದರು ಎಂದು ಖಾಸಗಿ ಸುದ್ದಿವಾಹಿನಿಯು ಸುದ್ದಿ ಪ್ರಸಾರ ಮಾಡಿತ್ತು.

2021ರ ಫೆಬ್ರುವರಿಯಲ್ಲಿ ಕುಟುಕು ಕಾರ್ಯಾಚರಣೆ ನಡೆಸಿತ್ತು ಎಂದು ಹೇಳಿಕೊಂಡಿರುವ ಖಾಸಗಿ ಸುದ್ದಿ ವಾಹಿನಿಯು 6 ತಿಂಗಳ ನಂತರ ಪ್ರಸಾರ ಮಾಡಿರುವುದು ಕೂಡ ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ. ಹೀಗಾಗಿ ಸುದ್ದಿವಾಹಿನಿಯ ವಿಶ್ವಾಸರ್ಹತೆ ಕುರಿತೂ ಪ್ರಶ್ನೆಗಳು ಎದ್ದಿವೆ. ಇದೇ ಅಂಶವನ್ನೇ ಸಚಿವೆ ಶಶಿಕಲಾ ಜೊಲ್ಲೆ ಅವರು ಮುಂದಿರಿಸಿಕೊಂಡು ಅವ್ಯವಹಾರದ ಸುದ್ದಿಯು ಸತ್ಯಕ್ಕೆ ದೂರವಾದದ್ದು ಯಾವುದೇ ಅವ್ಯವಹಾರ ಎಸಗಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಖಾಸಗಿ ವಾಹಿನಿ ಮೇಲೇಕೆ ಅನುಮಾನ?

ಕುಟುಕು ಕಾರ್ಯಾಚರಣೆ ಪ್ರಸಾರವಾದ ಒಂದು ದಿನದ ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶಶಿಕಲಾ ಜೊಲ್ಲೆ ಅವರು ಖಾಸಗಿ ವಾಹಿನಿ ಮೇಲೆ ಅನುಮಾನ ವ್ಯಕ್ತಪಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ‘ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಾಹಿತಿ ಪ್ರಕಾರ 2021 ರ ಫೆಬ್ರವರಿ ತಿಂಗಳಲ್ಲಿಯೇ ರಹಸ್ಯ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳುತ್ತಿದ್ದು, ರಹಸ್ಯ ಕಾರ್ಯಾಚರಣೆ ಮಾಡಿದವರು ಆರು ತಿಂಗಳಿನಿಂದ ಮಾಧ್ಯಮದವರ ಮುಂದೆ ಬಿಡುಗಡೆ ಮಾಡದೇ ಇಟ್ಟುಕೊಂಡಿರುವ ಉದ್ದೇಶದ ಬಗ್ಗೆ ಅನುಮಾನ ಮೂಡಿಸುತ್ತದೆ. ಇದರ ಹಿಂದೆ ವ್ಯವಸ್ಥಿತ ರಾಜಕೀಯ ಪಿತೂರಿ ಇರುವುದು ಎದ್ದು ಕಾಣಿಸುತ್ತದೆ,’ ಎಂದು ಅನುಮಾನಿಸಿದ್ದಾರೆ.

ಟೆಂಡರ್‌ ಕರೆದಿಲ್ಲವೇ?

ಖಾಸಗಿ ವಾಹಿನಿಯಯಲ್ಲಿ ಪ್ರಸಾರವಾಗಿರುವಂತೆ ಮೊಟ್ಟೆ ಖರೀದಿಗೆ ಯಾವುದೇ ಟೆಂಡರ್‌ ಕರೆದಿಲ್ಲ. ಅಲ್ಲದೆ ಟೆಂಡರ್‌ ನೀಡಲು ನಾನು ವೈಯಕ್ತಿಕವಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ ಎಂದು ಹೇಳಿಕೆ ನೀಡಿರುವ ಶಶಿಕಲಾ ಜೊಲ್ಲೆ ಅವರು ಬಿಜೆಪಿ ಶಾಸಕರಾದ ಪರಣ್ಣ ಮುನವಳ್ಳಿಯವರು ತಮ್ಮ ಸಂಬಂಧಿಕರು ಎಂದು ಕರೆದುಕೊಂಡು ಬಂದಾಗ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದೇನೆ. ಇದರಲ್ಲಿ ಯಾವುದೇ ಹಣಕಾಸಿನ ವ್ಯವಹಾರದ ಕುರಿತು ನಾನು ಮಾತನಾಡಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.

ಬೀರೇಶ್ವರ ಸೊಸೈಟಿಯಲ್ಲಿ ಎಣಿಸಿದ್ದ 25 ಲಕ್ಷದ ಕತೆ ಏನು?

ಮೊಟ್ಟೆ ಖರೀದಿ ಸಂಬಂಧ ಟೆಂಡರ್‌ ಗಿಟ್ಟಿಸಿಕೊಳ್ಳಲು ಕುಟುಕು ಕಾರ್ಯಾಚರಣೆ ನಡೆಸಿದ್ದ ತಂಡವು ತೆಗೆದುಕೊಂಡು ಹೋಗಿದ್ದ 25 ಲಕ್ಷ ರು. ಇದ್ದ ಬ್ಯಾಗ್‌ನ್ನು ಬೀರೇಶ್ವರ ಸೊಸೈಟಿಯ ಸಿಬ್ಬಂದಿ ಪಡೆದಿತ್ತು. ನಗದು ಕೌಂಟರ್‌ನಲ್ಲಿ 25 ಲಕ್ಷ ರು. ಗಳನ್ನು ಎಣಿಸಿದ್ದನ್ನೂ ಖಾಸಗಿ ಸುದ್ದಿ ವಾಹಿನಿಯು ಪ್ರಸಾರ ಮಾಡಿತ್ತು. ಸಚಿವೆ ಜೊಲ್ಲೆ ಅವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ 25 ಲಕ್ಷ ರು. ಕುರಿತು ಏನನ್ನೂ ಹೇಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬಿಜೆಪಿ ಸರ್ಕಾರ 2 ವರ್ಷ ಪೂರ್ಣಗೊಳಿಸುವುದರೊಳಗೆ ಅಬಕಾರಿ ಸಚಿವರಾಗಿದ್ದ ಎಚ್‌ ನಾಗೇಶ್‌ ಅವರು ವರ್ಗಾವಣೆಗಾಗಿ 1 ಕೋಟಿ ಲಂಚಕ್ಕಾಗಿ ಬೇಡಿಕೆ ಇರಿಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಹಾಲಿ ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು ಸಹ ಅಬಕಾರಿ ಅಧಿಕಾರಿಗಳಿಂದಲೇ ತಿಂಗಳಿಗೆ ಮಾಮೂಲು ವಸೂಲು ಮಾಡುತ್ತಿರುವ ಕುರಿತು ಆರೋಪಕ್ಕೆ ಗುರಿಯಾಗಿದ್ದರಲ್ಲದೆ ಈ ಸಂಬಂಧ ಅಧಿಕಾರಿಗಳಿಬ್ಬರ ಮಧ್ಯೆ ನಡೆದಿದ್ದ ಸಂಭಾಷಣೆಯ ಆಡಿಯೋ ಬಹಿರಂಗವಾಗಿತ್ತು.

ಅಲ್ಲದೆ ಇದಕ್ಕೂ ಮುನ್ನ ಕೃಷಿ ಸಚಿವ ಬಿ ಸಿ ಪಾಟೀಲ್‌ ಅವರು ಸಹ ಅಧಿಕಾರಿ ನೌಕರರಿಂದ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಗಾಗಿ ಹಣ ವಸೂಲಿಗಿಳಿದಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದರು. ಈ ಸಂಬಂಧ ಕೆಲ ಅಧಿಕಾರಿ ನೌಕರರೇ ರಾಜ್ಯಪಾಲರು, ಮುಖ್ಯಮಂತ್ರಿ, ವಿಪಕ್ಷ ನಾಯಕರಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

ಹಾಗೆಯೇ ಕಂದಾಯ ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಗಂಗಾಧರ್‌ ಎಂಬುವರು ಶೃಂಗೇರಿಯ ಉಪ ನೋಂದಣಾಧಿಕಾರಿ ಬಳಿ ಹಣಕ್ಕಾಗಿ ಬೇಡಿಕೆ ಇರಿಸಿದ್ದ ಅರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಎಸಿಬಿ ಪೊಲೀಸರು ಗಂಗಾಧರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts