ಬೆಂಗಳೂರು; ಬಿಜೆಪಿ ಸರ್ಕಾರದಲ್ಲೇ ಬೊಕ್ಕಸಕ್ಕೆ 1.43 ಲಕ್ಷ ಸಾವಿರ ಕೋಟಿ ರು.ನಷ್ಟವಾಗಿದೆ ಎಂದು ಕಳೆದ 4 ತಿಂಗಳ ಹಿಂದೆಯಷ್ಟೇ ‘ದಿ ಫೈಲ್’ ಮಾಡಿದ್ದ ವರದಿಯನ್ನು ಇದೀಗ ಪ್ರಜಾವಾಣಿಯೂ ವಿಸ್ತರಿಸಿದೆ. ಇದು ಸಹಭಾಗಿ ಪತ್ರಿಕೋದ್ಯಮವನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ.
ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ನೀಡಿದ್ದ ವರದಿ ಆಧರಿಸಿ ಕ್ರಮ ಕೈಗೊಳ್ಳುವ ಕುರಿತು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಎಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ನೇಮಿಸಿತ್ತು.
ಅಕ್ರಮ ಗಣಿಗಾರಿಕೆ ಮತ್ತು ಅಕ್ರಮವಾಗಿ ಅದಿರು ಸಾಗಾಣಿಕೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ಆಗಿದ್ದ ನಷ್ಟವನ್ನು ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಲೆಕ್ಕಾಚಾರ ಮಾಡಿದ್ದಕ್ಕಿಂತಲೂ ಸಂಪುಟ ಉಪ ಸಮಿತಿಯು ನಷ್ಟದ ಪ್ರಮಾಣವನ್ನು ವಿಸ್ತರಿಸಿತ್ತು.
ನಷ್ಟ ವಸೂಲಾತಿ ಈಗಾಗಲೇ ವಿಳಂಬವಾಗಿದ್ದು, ತಕ್ಷಣವೇ ವಸೂಲಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಎಚ್.ಕೆ.ಪಾಟೀಲ್ ಅವರು ಆದೇಶ ನೀಡಿ ಹಲವು ವರ್ಷಗಳು ಕಳೆದಿದ್ದರೂ ಗಣಿ, ಭೂ ವಿಜ್ಞಾನ ಇಲಾಖೆ ಕ್ರಮ ವಹಿಸಿಲ್ಲ ಎಂದು ‘ದಿ ಫೈಲ್’ ವಿಸ್ತೃತವಾಗಿ 2021ರ ಮಾರ್ಚ್ 31ರಂದು ವರದಿ ಪ್ರಕಟಿಸಿತ್ತು.
ಗಣಿಗಾರಿಕೆ; ಬಿಜೆಪಿ ಸರ್ಕಾರದಲ್ಲೇ ಬೊಕ್ಕಸಕ್ಕೆ 1.43 ಲಕ್ಷ ಸಾವಿರ ಕೋಟಿ ರು ನಷ್ಟ
ಸಂಪುಟ ಉಪ ಸಮಿತಿಯ ನಡವಳಿಗಳನ್ನಾಧರಿಸಿ 4 ತಿಂಗಳ ಹಿಂದೆ ‘ದಿ ಫೈಲ್’ ಪ್ರಕಟಿಸಿದ್ದ ವರದಿಯನ್ನು ಪ್ರಜಾವಾಣಿಯೂ ತನ್ನ ಮುಖಪುಟದಲ್ಲಿ ಪ್ರಕಟಿಸುವ ಮೂಲಕ ಎಚ್ ಕೆ ಪಾಟೀಲ ಅವರ ವರದಿಯನ್ನು ಮುನ್ನೆಲೆಗೆ ತಂದಂತಾಗಿದೆ. ಒಂದು ಸುದ್ದಿ ಮಾಧ್ಯಮ ಪ್ರಕಟಿಸಿದ ವರದಿಯನ್ನು ಮತ್ತೊಂದು ಮಾಧ್ಯಮ ಸಂಸ್ಥೆ ಮುನ್ನೆಡೆಸುವುದು ಅಥವಾ ವಿಸ್ತರಿಸುವುದು ಸರ್ಕಾರದ ಕಣ್ತೆರೆಸಲು ಕಾರಣವಾಗಬಹುದು. ಈ ನಿಟ್ಟಿನಲ್ಲಿ ‘ದಿ ಫೈಲ್’ ವರದಿಯನ್ನು ಪ್ರಜಾವಾಣಿಯೂ ವಿಸ್ತರಿಸಿರುವುದು ಸಹಭಾಗಿತ್ವ ಪತ್ರಿಕೋದ್ಯಮವನ್ನು ಮುನ್ನೆಡೆಸಿದೆ.
ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ನೀಡಿದ್ದ ವರದಿ ಆಧರಿಸಿ ಕ್ರಮ ಕೈಗೊಳ್ಳುವ ಸಂಬಂಧ ಸಚಿವ ಎಚ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಚಿವ ಸಂಪುಟ ಉಪ ಸಮಿತಿ ಇತ್ತೀಚೆಗೆ ನಡೆಸಿರುವ ಸಭೆಯಲ್ಲಿ ಈ ಆಘಾತಕಾರಿ ಅಂಶ ಬಯಲಾಗಿದೆ. 2015ರ ಅಕ್ಟೋಬರ್ 16ರಂದು ನಡೆಸಿದ ಸಭೆಯಲ್ಲಿ ಈ ಮಾಹಿತಿ ಕುರಿತು ಚರ್ಚೆಯಾಗಿತ್ತು.
ರಾಜ್ಯದಲ್ಲಿ 2006ರಿಂದ 2010ರ ಅವಧಿಯಲ್ಲಿ ಕರ್ನಾಟಕದ 10, ಗೋವಾ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ವಿವಿಧ ಬಂದರುಗಳ ಮೂಲಕ ಅಕ್ರಮವಾಗಿ 2.98 ಕೋಟಿ ಟನ್ ಅದಿರು ರಫ್ತಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 12,228 ಕೋಟಿ ರೂ.ನಷ್ಟವಾಗಿದೆ (ಟನ್ಗೆ 4,103 ರೂ.ಲೆಕ್ಕಚಾರದಲ್ಲಿ) ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸುಂಕ ಇಲಾಖೆ ನೀಡಿದ್ದ ಅಂಕಿ ಸಂಖ್ಯೆ ಆಧರಿಸಿ ಈ ಮೊತ್ತವನ್ನು ಅಂದಾಜಿಸಿದ್ದರು. ಇದು ಈ ಲೆಕ್ಕಾಚಾರಕ್ಕೆ ಮಾತ್ರ ಸೀಮಿತ ಎಂದು ಸಚಿವ ಸಂಪುಟ ಉಪ ಸಮಿತಿ ಅಭಿಪ್ರಾಯಿಸಿತ್ತು.
ಲೋಕಾ ಅಂದಾಜನ್ನು ಮೀರಿಸಿತು ರೈಲ್ವೆ ದಾಖಲೆಗಳು
ಆದರೆ, ಸಚಿವ ಸಂಪುಟ ಉಪ ಸಮಿತಿ ರೈಲ್ವೆ ಇಲಾಖೆ ದಾಖಲೆಗಳನ್ನು ಪಡೆದು ಚರ್ಚಿಸಿದ್ದು, 2006ರಿಂದ 2010ರ ಅವಧಿಯಲ್ಲಿ ಒಟ್ಟು 35 ಕೋಟಿ ಟನ್ ಅಕ್ರಮವಾಗಿ ಅದಿರು ಸಾಗಣೆಯಾಗಿದೆ ಎಂದು ಹೇಳಿದೆ. ಆದರಿಲ್ಲಿ ನಷ್ಟದ ಮೊತ್ತವನ್ನು ಉಪ ಸಮಿತಿ ಅಂದಾಜಿಸಿಲ್ಲ. ಲೋಕಾಯುಕ್ತರು ಮಾಡಿದ್ದ ಸರಾಸರಿ ಅಂದಾಜು 4,103 ರೂ.ಗಳನ್ನು 35 ಕೋಟಿ ಟನ್ಗೆ ಅಂದಾಜಿಸಿದಲ್ಲಿ ಬರೋಬ್ಬರಿ 1 ಲಕ್ಷ 43 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು’ದಿ ಫೈಲ್’ ಅಂದಾಜಿಸಿತ್ತು.
ಬಳ್ಳಾರಿಯಿಂದ ಹೊರಗಡೆ 6 ರೈಲ್ವೆ ನಿಲ್ದಾಣಗಳಿಂದ ಮತ್ತು 14 ರೈಲ್ವೆ ಸೈಡಿಂಗ್ಗಳಿಂದ 2006ರಿಂದ 2010ರವರೆಗೆ ಒಟ್ಟು 20 ಕೋಟಿ ಟನ್ ಅಕ್ರಮ ಅದಿರು ರಫ್ತಾಗಿದೆ. ರೈಲ್ವೆ ಹಾಗೂ ಇತರೆ ಮೂಲಗಳ ಮೂಲಕ ಸಾಗಣೆ ಮಾಡಿರುವ ಒಟ್ಟು 35 ಕೋಟಿ ಟನ್ ಅಕ್ರಮ ಅದಿರು ರಫ್ತಾಗಿದೆ. 2009ರ ಸೆಪ್ಟಂಬರ್ನಿಂದ ಜೂನ್ 2010ರವರೆಗೆ ಕೇವಲ 9 ತಿಂಗಳ ಅವಧಿಯಲ್ಲಿ 14 ಕೋಟಿ ಟನ್ ಕಬ್ಬಿಣದ ಅದಿರು ಪ್ರತಿನಿತ್ಯ 20 ಸಾವಿರ ಟ್ರಕ್ಗಳ ಮೂಲಕ ಸಾಗಣೆಯಾಗಿದೆ ಎಂದು ರೈಲ್ವೆ ಇಲಾಖೆ ದಾಖಲೆಗಳನ್ನಾಧರಿಸಿ ಸಚಿವ ಸಂಪುಟದ ಉಪ ಸಮಿತಿ ನಡೆಸಿದ್ದ ಸಭೆಯಲ್ಲಿ ಚರ್ಚೆಯಾಗಿತ್ತು. ಇವೆಲ್ಲವೂ ಕರ್ನಾಟಕಕ್ಕೆ ಆಘಾತಕಾರಿ ಘಟನೆಗಳು ಎಂದು ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಬಣ್ಣಿಸಿದ್ದರು.
ರೈಲ್ವೆಯ ವ್ಯಾಗನ್ಗಳು ಮತ್ತು ಟ್ರಕ್ಗಳ ಮೂಲಕ ರಾಜಕಾರಣಿಗಳು ತೋಳ್ಬಲದ ಮೂಲಕ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮವಾಗಿ ಅದಿರು ಸಾಗಣೆ ಆಗಿದೆ. ಸುಪ್ರೀಂ ಕೋರ್ಟ್ ನೇರ ಉಸ್ತುವಾರಿಯಲ್ಲಿ ಈ ಪ್ರಕರಣದ ಮೇಲ್ವಿಚಾರಣೆ ಆಗುತ್ತಿದೆ. ಸಾರ್ವಜನಿಕ ಆಸ್ತಿ ರಕ್ಷಣೆಯಂತಹ ಕ್ರಮಗಳಿಗೆ ಅಧಿಕಾರಿಗಳು ಮುಂದಾಗದಿರುವುದು ಆತಂಕ ಸೃಷ್ಟಿಸುತ್ತಿದೆ ಎಂದು ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರು ಹೇಳಿದ್ದರು.
ವಸೂಲಿಗೆ ಕ್ರಮ ಕೈಗೊಳ್ಳಿ
ಭಾರತ್ ಮೈನ್ಸ್ ಎಂಬ ಕಂಪನಿಯನ್ನು ಉದಾಹರಿಸಿರುವ ಎಚ್.ಕೆ.ಪಾಟೀಲ್ ಅವರು, 2009ರಿಂದ 2010ರ ಅವಧಿಯಲ್ಲಿ 2,11,422 ಮೆ.ಟನ್ ಅದಿರು ರಫ್ತು ಮಾಡಿದೆ. ಈ ಪ್ರಕರಣದಲ್ಲಿ ಅದಿರಿನ ರಫ್ತು ಪ್ರಮಾಣ ತಿಳಿದಿರುವ ಕಾರಣ ಇಂತಹ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಇದರ ಅಧಾರದ ಮೇಲೆ ವಸೂಲಾತಿಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ.
ರಾಷ್ಟ್ರದ ಸಂಪತ್ತು ಕೆಲವು ಬಲಾಢ್ಯ ವ್ಯಕ್ತಿಗಳ ಪಾಲಾಗಿದ್ದು, ಈ ನಷ್ಟವನ್ನು ವಸೂಲು ಮಾಡಲು ಹಾಗೂ ಸ್ಥಿರಾಸ್ತಿ-ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳದೇ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವೇ ಇಲ್ಲ. ಅಂತಹ ಹಣದಿಂದ ಗಳಿಸಿದ ಅಕ್ರಮ ಆಸ್ತಿಯನ್ನು ಮನಿ ಲ್ಯಾಂಡ್ರಿಂಗ್ ಕಾಯ್ದೆ ಅಥವಾ ಸೂಕ್ತ ಕಾಯ್ದೆ ಅಡಿಯಲ್ಲಿ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕಿದೆ ಎಂದು ಎಚ್.ಕೆ.ಪಾಟೀಲ್ ಅವರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅಕ್ರಮ ಗಣಿಗಾರಿಕೆಯಿಂದಾಗಿರುವ ನಷ್ಟ ವಸೂಲು ಮಾಡುವಲ್ಲಿ ಆಗುತ್ತಿರುವ ವಿಳಂಬವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾದೀತು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಎಚ್.ಕೆ.ಪಾಟೀಲ್ ಅವರು, ನಷ್ಟ ವಸೂಲು ಮಾಡುವ ಬಗ್ಗೆ ಲೋಕಾಯುಕ್ತ ಸಂಸ್ಥೆ ವರದಿಯಲ್ಲಿ ಶಿಫಾರಸ್ಸು ಮಾಡಿದ್ದರೂ ಕ್ರಮ ವಹಿಸುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ನಡೆದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು.